ಮಹಿಳಾ ಸಮಾನತೆ ನಿಜವಾದ ಅರ್ಥದಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ಮೊದಲು ಶಾಸನಸಭೆಗಳಲ್ಲಿ ಸಮಾನತೆ ಸಾಧ್ಯವಾಗಬೇಕು. ಅಧಿಕಾರ ಸ್ಥಾನಗಳಿಂದ ಮಹಿಳೆಯರನ್ನು ದೂರವಿಟ್ಟು ಮಹಿಳೆಯರ ಹಿತಾಸಕ್ತಿಯ ಬಗ್ಗೆ ಮಾತನಾಡುವ ಕಪಟ ರಾಜಕಾರಣದಿಂದ ರಾಜಕೀಯ ಪಕ್ಷಗಳು ಇನ್ನಾದರೂ ಹೊರಬರಬೇಕು. ಮಹಿಳೆಯರನ್ನು ಹೊರಗಿಟ್ಟು ನಡೆಸುವ ರಾಜಕಾರಣವು ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸುವಂತಹದ್ದಲ್ಲ. ಸಮಾನತೆ ಎನ್ನುವುದಕ್ಕೆ ಅರ್ಥವೂ ಇಲ್ಲ.
ಈ ಬಾರಿಯ ಲೋಕಸಭಾ ಚುನಾವಣಾ ಭಾಷಣಗಳಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರತ್ತ ಮುಖ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ಅನ್ಯಾಯಕ್ಕೆ ಒಳಗಾದ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ದನಿ ಎತ್ತಲು ರಾಜಕೀಯ ವೇದಿಕೆ ಕಲ್ಪಿಸಿಕೊಡಲಾಗುವುದು. ರಾಜಕೀಯಕ್ಕೆ ಬನ್ನಿ, ಅಧಿಕಾರಕ್ಕೇರಿ, ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಿ’ ಎಂದರು ಕರೆ ಕೊಟ್ಟರು.
ಇವತ್ತಿನ ಸಂದರ್ಭದಲ್ಲಿ ಒಂದು ಪಕ್ಷದ ಅಧಿನಾಯಕಿಯ ಸ್ಥಾನದಲ್ಲಿ ನಿಂತು ಆಡಬೇಕಾದ ಅನಿವಾರ್ಯವಾದ ಮಾತು. ಇದು, ಮಹಿಳಾ ಸಮುದಾಯಕ್ಕೆ ಬಹಳ ದೊಡ್ಡ ಧೈರ್ಯ ತುಂಬುವ ಮಾತು. ಮಹಿಳಾ ಸಮುದಾಯದೊಳಗೆ ಸಂಚಲನ ಉಂಟುಮಾಡುವ ಮಾತು. ದೇಶದ ರಾಜಕಾರಣಕ್ಕೆ ಬದಲಾವಣೆ ತರುವ ನಿಟ್ಟಿನಲ್ಲಿ ಭರವಸೆ ಮೂಡಿಸುವ ಮಾತು.
ಆದರೆ ದೇಶದ ಜನಸಂಖ್ಯೆಯಲ್ಲಿ ಶೇ. 50ರಷ್ಟಿರುವ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಕೇವಲ ಶೇ. ಐದು ಅಥವಾ ಆರು ಎನ್ನುವ ವಾಸ್ತವ ಸ್ಥಿತಿ, ದಿಗ್ಭ್ರಮೆ ಮೂಡಿಸುತ್ತದೆ. ಪ್ರಿಯಾಂಕಾ ಗಾಂಧಿಯವರ ಮಾತಿಗೂ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಎತ್ತಿ ತೋರಿಸುತ್ತದೆ. ಪುರುಷಪ್ರಧಾನ ವ್ಯವಸ್ಥೆಯಿಂದಾಗಿ ಮಹಿಳೆಯರನ್ನು ಮತಬ್ಯಾಂಕ್ ರೂಪದಲ್ಲಷ್ಟೇ ನೋಡಲಾಗಿದೆ ಎನ್ನುವ ಸತ್ಯವನ್ನು ಸಾರಿ ಹೇಳುತ್ತದೆ. ಸಮಾಜದ ಅರ್ಧ ಭಾಗದಷ್ಟಿರುವ ಮಹಿಳೆಯರಿಗೆ ಚುನಾವಣಾ ರಾಜಕಾರಣದಲ್ಲಿ ನ್ಯಾಯ ದೊರೆಯುತ್ತಿಲ್ಲ ಎನ್ನುವ ಕಟುವಾಸ್ತವವು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ರಾಜಕಾರಣದಲ್ಲಿನ ವಿರೋಧಾಭಾಸದಂತೆ, ಬರಿ ಬೊಗಳೆಯಂತೆ ಗೋಚರಿಸುತ್ತದೆ.
ಇದಕ್ಕೆ ಜ್ವಲಂತ ಉದಾಹರಣೆಯಾಗಿ, ಜೂ. 13ಕ್ಕೆ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯನ್ನು ನೋಡಬಹುದಾಗಿದೆ. 11 ಸ್ಥಾನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿಗೆ 7 ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಅವಕಾಶವಿದೆ. ಧನಬಲ, ಜಾತಿಬಲ ಹಾಗೂ ಕುಟುಂಬದ ಹೆಸರಿಲ್ಲದೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲವೆನ್ನುವ ಕಾರಣಗಳನ್ನು ನೀಡಿ ಅಧಿಕಾರ ಕೇಂದ್ರಗಳಿಂದ ಮಹಿಳೆಯರನ್ನು ಮಾರು ದೂರವಿಡುವ ದುಷ್ಟತನ ನಡೆದುಕೊಂಡೇ ಬಂದಿದೆ. ಆದರೆ, ಸುಲಭವಾಗಿ ಗೆಲ್ಲುವ ಪರಿಷತ್ ಚುನಾವಣೆಗಳಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಇದನ್ನು ಓದಿದ್ದೀರಾ?: ‘ಗೋದಿ ಮೀಡಿಯಾ’ಗಳನ್ನು ಹಿಂದಿಕ್ಕಿದ ಯೂಟ್ಯೂಬ್ ಚಾನೆಲ್‌ಗಳ ಹೊಸ ಸಂಚಲನ
ಕಾಂಗ್ರೆಸ್ ಪಕ್ಷ ಗೆಲ್ಲಬಹುದಾದ ಏಳು ಸ್ಥಾನಗಳಿಗೆ ಪಕ್ಷಕ್ಕಾಗಿ ದುಡಿದ ಸುಮಾರು 200 ಮಂದಿ ಆಕಾಂಕ್ಷಿಗಳಿದ್ದರು. ಅದರಲ್ಲಿ 30 ಮಹಿಳೆಯರು ಶಾಸಕಿಯರಾಗಲು ಅರ್ಹತೆ, ಯೋಗ್ಯತೆ ಹೊಂದಿದ್ದರು. ಕೊನೆಪಕ್ಷ ಮೂರು ಮಂದಿಗಾದರೂ ಅವಕಾಶ ಸಿಗುತ್ತದೆಂದು ಭಾವಿಸಿದ್ದರು. ಅಂತಿಮ ಪಟ್ಟಿಯಲ್ಲಿ ರಾಣಿ ಸತೀಶ್, ಪುಷ್ಪಾ ಅಮರನಾಥ್, ಜಿ. ಪದ್ಮಾವತಿ ಮತ್ತು ಕವಿತಾ ರೆಡ್ಡಿಯವರ ಹೆಸರಿದ್ದುದನ್ನು ಕಾಂಗ್ರೆಸ್ಸಿಗರೇ ಹೇಳುತ್ತಿದ್ದರು. ಆದರೆ, ಪಟ್ಟಿ ಅಂತಿಮ ಹಂತಕ್ಕೆ ಬಂದಾಗ ಏಳಕ್ಕೆ ಏಳು ಸ್ಥಾನಗಳು ಪುರುಷರೇ ಪಡೆದುಕೊಂಡಂತೆ ಕಾಣುತ್ತಿದೆ.
ರಾಜಕಾರಣದಲ್ಲಿ ಲಿಂಗಸಮಾನತೆಯ ಆದರ್ಶದ ಮಾತುಗಳು ಕಾರ್ಯರೂಪಕ್ಕೆ ಬರಬೇಕಾದರೆ, ಪಕ್ಷಗಳ ಟಕೆಟ್ ಹಂಚಿಕೆಯ ಹಂತದಲ್ಲೇ ಪ್ರಾತಿನಿಧ್ಯ ಸಾಧ್ಯವಾಗಬೇಕು. ಅದರಲ್ಲೂ ಹೈಕಮಾಂಡ್ ಹಂತದಲ್ಲಿ, ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಟ್ಟದಲ್ಲಿ ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿಗಳೆಂಬ ಮಹಿಳೆಯರೇ ಪ್ರಧಾನವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ, ಮಹಿಳಾ ಮೀಸಲಾತಿ ಕಾಯ್ದೆಗೆ ಕಾಯದೆ ಸ್ವಯಂ ಪ್ರೇರಣೆಯಿಂದ ಪ್ರಾತಿನಿಧ್ಯ ನೀಡಲು ಮುಂದಾಗಬೇಕಿತ್ತು. ಅಂಥದೊಂದು ದಿಟ್ಟತನವನ್ನು ಕಾಂಗ್ರೆಸ್ ಪಕ್ಷ ಪ್ರದರ್ಶಿಸಬೇಕಾಗಿತ್ತು. ಆದರೆ, ಅಲ್ಲೂ ಮಹಿಳೆಯರಿಗೆ ಅನ್ಯಾಯವೇ ಕಾದಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ, ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದು, ಬಲಿಷ್ಠ ಬಿಜೆಪಿಯನ್ನು ಮಣಿಸಿ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಕಾಂಗ್ರೆಸ್ ಪಾಳೆಯದಲ್ಲಿತ್ತು. ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ನಾಯಕರು ನಗಣ್ಯರಾಗಿದ್ದರು. ಆದರೆ ಕರ್ನಾಟಕದ ಜನತೆ ಬಿಜೆಪಿಯ ವಿರುದ್ಧವಿದ್ದು, ಕಾಂಗ್ರೆಸ್ ಪರ ಮತ ಚಲಾಯಿಸಿದರು. ಅದರಲ್ಲಿ ಮಹಿಳಾ ಮತದಾರರ ಪಾತ್ರ ಹಿರಿದಾಗಿತ್ತು. ಮಹಿಳೆಯರು ಮನಸ್ಸು ಮಾಡದೇ ಇದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇರುತ್ತಿರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯವಾಗಿತ್ತು.
ವಸ್ತುಸ್ಥಿತಿ ಹೀಗಿರುವಾಗ, ಕಾಂಗ್ರೆಸ್ ಯಾರ ಪರವಾಗಿರಬೇಕು? ರಾಜಕೀಯ ಪಕ್ಷಗಳು ಯಾವ ನಿಲುವು ತಾಳಬೇಕು? ಸ್ವಾತಂತ್ರ್ಯಾನಂತರದ ಈ 75 ವರ್ಷಗಳಲ್ಲಿ ಕರ್ನಾಟಕದ ಶಾಸನಸಭೆಯಲ್ಲಿ ಕೇವಲ 35 ಜನ ಮಹಿಳೆಯರು ಮಾತ್ರ ಮಂತ್ರಿಗಳಾಗಿದ್ದಾರೆಂದರೆ, ಇದು ಏನನ್ನು ಸೂಚಿಸುತ್ತದೆ?
ಮಹಿಳಾ ಸಮಾನತೆ ನಿಜವಾದ ಅರ್ಥದಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ಮೊದಲು ಶಾಸನಸಭೆಗಳಲ್ಲಿ ಸಮಾನತೆ ಸಾಧ್ಯವಾಗಬೇಕು. ಅಧಿಕಾರ ಸ್ಥಾನಗಳಿಂದ ಮಹಿಳೆಯರನ್ನು ದೂರವಿಟ್ಟು ಮಹಿಳೆಯರ ಹಿತಾಸಕ್ತಿಯ ಬಗ್ಗೆ ಮಾತನಾಡುವ ಕಪಟ ರಾಜಕಾರಣದಿಂದ ರಾಜಕೀಯ ಪಕ್ಷಗಳು ಇನ್ನಾದರೂ ಹೊರಬರಬೇಕು. ಮಹಿಳೆಯರನ್ನು ಹೊರಗಿಟ್ಟು ನಡೆಸುವ ರಾಜಕಾರಣವು ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸುವಂತಹದ್ದಲ್ಲ. ಅಧಿಕಾರದ ಸ್ಥಾನಗಳಲ್ಲಿ ಮಹಿಳೆಯರು ಇಲ್ಲದೆ ಹೋದರೆ ಸಮಾನತೆ ಎನ್ನುವುದಕ್ಕೆ ಅರ್ಥವೂ ಇಲ್ಲ.
