ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು,ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮೂರನೇ ಬಾರಿ ಅಧಿಕಾರ ಹಿಡಿದರೆ, ಸಿಕ್ಕಿಂನಲ್ಲಿ ಆಡಳಿತರೂಢ ಪ್ರಾದೇಶಿಕ ಪಕ್ಷವಾದ ಸಿಕ್ಕಿಂ ಕ್ರಾಂತಿಕಾರಿ ಪಕ್ಷ(ಎಸ್‌ಕೆಎಂ) ಎರಡನೇ ಬಾರಿ ಗೆಲುವು ಸಾಧಿಸಿದೆ.
ಒಟ್ಟು 60 ಕ್ಷೇತ್ರಗಳ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 8 ಪಕ್ಷೇತರರು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ.
ಅರುಣಾಚಲದ ಪಕ್ಷೇತರರ ಪೈಕಿ ಎನ್‌ಪಿಇಪಿ 5 , ಪಿಪಿಎ ಪಕ್ಷ ಎರಡು ಕ್ಷೇತ್ರಗಳಲ್ಲಿ ಹಾಗೂ ರಾಷ್ಟ್ರೀಯ ಪಕ್ಷ ಎನ್‌ಸಿಪಿ 4 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಪಕ್ಷೇತರರು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಸಿಕ್ಕಿಂನ ಒಟ್ಟು 32 ಸ್ಥಾನಗಳ ಪೈಕಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್‌ಕೆಎಂ) ಪಕ್ಷ 31 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಭಾರಿ ವಿಜಯದೊಂದಿಗೆ ಎರಡನೇ ಬಾರಿ ಅಧಿಕಾರ ಹಿಡಿಯಲಿದೆ. ಉಳಿದ ಮತ್ತೊಂದು ಸ್ಥಾನದಲ್ಲಿ ಸಿಕ್ಕಿಂ ಡೆಮಾಕ್ರಾಟಿಕ್ ಪ್ರಂಟ್ (ಎಸ್‌ಡಿಎಫ್) ಜಯಗಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರ ಸ್ಥಾನಗಳಿಂದ ಮಹಿಳೆಯರನ್ನು ಹೊರಗಿಟ್ಟು ಸಮಾನತೆ ಬಗ್ಗೆ ಮಾತನಾಡುವುದಕ್ಕೆ ಅರ್ಥವಿದೆಯೇ?
ಬೈಚುಂಗ್ ಭುಟಿಯಾ ಸೋಲು
ಎಸ್‌ಡಿಎಫ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಹಾಲಿ ಮುಖ್ಯಮಂತ್ರಿ ಬಿಜೆಪಿ ನಾಯಕ ಪೆಮಾ ಖಂಡು ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಹಾಗೆಯೇ ಸಿಕ್ಕಿಂನಲ್ಲಿ ಹಾಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಎರಡನೇ ಬಾರಿ ಮುಖ್ಯಮಂತ್ರಿಯಾಗಲಿದ್ದಾರೆ. ಪ್ರೇಮ್ ಸಿಂಗ್ ತಮಾಂಗ್ ತಾವು ಕಣಕ್ಕಿಳಿದಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ್ದಾರೆ.
ಭಾರತೀಯ ಫುಟ್‌ಬಾಲ್ ಮಾಜಿ ಆಟಗಾರ ಬೈಚುಂಗ್ ಭುಟಿಯಾ ತಾವು ಸ್ಪರ್ಧಿಸಿದ್ದ ಭರ್ಪುಂಗ್ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಎಸ್‌ಕೆಎಂ ಅಭ್ಯರ್ಥಿ ರಿಕ್‌ಸಲ್ ದೋರ್ಜೆ ಭುಟಿಯಾ ವಿರುದ್ಧ ಪರಾಭವಗೊಂಡಿದ್ದಾರೆ. ಬೈಚುಂಗ್ ಭುಟಿಯಾ ಫುಟ್‌ಬಾಲ್‌ನಲ್ಲಿ ಹೆಸರು ಗಳಿಸಿದರೂ ರಾಜಕೀಯ ಕ್ಷೇತ್ರ ಮಾತ್ರ ಅವರಿಗೆ ಒಲಿದಿಲ್ಲ. ಕಳೆದ 10 ವರ್ಷಗಳಲ್ಲಿ 6 ಬಾರಿ ಸೋತಿದ್ದಾರೆ.
ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂನಲ್ಲಿ ಏಪ್ರಿಲ್ 19 ರಂದು ಮತದಾನ ನಡೆದಿತ್ತು. ಸಿಕ್ಕಿಂನಲ್ಲಿ ಶೇ. 79.88 ಮತದಾನವಾಗಿದ್ದರೆ, ಅರುಣಾಚಲ ಪ್ರದೇಶದಲ್ಲಿ ಶೇ. 82.95 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.
