ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಸೋಮವಾರ ವಿಧಾನ ಪರಿಷತ್ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಚಿವರು ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿ, “ನಮಗೆ ಯಾರೂ ಯಾವ ಬೆದರಿಕೆಯೂ ಹಾಕಿಲ್ಲ. ಬಿಜೆಪಿ ಅವರು ಸಚಿವ ನಾಗೇಂದ್ರ ಅವರ ರಾಜೀನಾಮೆ ಒತ್ತಾಯಿಸುವುದು ಪ್ರತಿಪಕ್ಷದ ಕೆಲಸ. ಆದರೆ ಪ್ರಾಥಮಿಕ ವರದಿ ಪಡೆದು ನಂತರ ತೀರ್ಮಾನಿಸಲಾಗುವುದು” ಎಂದರು.
“ನಮ್ಮ ಅಭ್ಯರ್ಥಿಗಳು ಗೆಲ್ಲಲು 19 ರಿಂದ 20 ಮತಗಳು ಅಗತ್ಯವಿದ್ದು, ಬಿಜೆಪಿಯವರು, ಜೆಡಿಎಸ್ ಅವರು ಒಬ್ಬರಿಗೆ ನಾಮಪತ್ರಗಳ ಪರಿಶೀಲನೆಯ ನಂತರ ತಿಳಿಯಲಿದೆ. ಒಂದು ವೇಳೆ ಜಾಸ್ತಿಯಾದರೆ ಚುನಾವಣೆ ನಡೆಯಬೇಕು. ಚುನಾವಣೆ ನಡೆದರೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ” ಎಂದರು.
ಬೆಂಗಳೂರಿನಲ್ಲಿ ಉತ್ತಮ ಮಳೆ
“ಬೆಂಗಳೂರಿನಲ್ಲಿ ಒಳ್ಳೆ ಮಳೆಯಾಗಿದ್ದು, ಮಳೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಮಳೆ ಜಾಸ್ತಿಯಾದಾಗ ಸಮಸ್ಯೆಗಳು ಉಂಟಾಗಿವೆ. ಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದರು.
ಎಕ್ಸಿಟ್ ಪೋಲ್ ಸಂಪೂರ್ಣ ತಳ್ಳಿಹಾಕುತ್ತೇವೆ
ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿ, “ಈಗಾಗಲೇ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾವು ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ. ಈ ಸಮೀಕ್ಷೆಯನ್ನು ನಾವು ಸಂಪೂರ್ಣ ತಳ್ಳಿಹಾಕುತ್ತೇವೆ” ಎಂದು ತಿಳಿಸಿದರು.
