ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಬಂಧನಕ್ಕೆ ವಿಶೇಷ ತನಿಖಾ ತಂಡ ಬಲೆ ಬೀಸಿದ್ದು, ಹುಡುಕಾಟಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿರುವುದಾಗಿ ವರದಿಯಾಗಿದೆ.
ಸಂತ್ರಸ್ತೆ ಅಪಹರಣ ನಡೆದ ದಿನದಿಂದಲೂ ಬಹುತೇಕ ಕಣ್ಮರೆಯಾಗಿದ್ದ ಭವಾನಿ, ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬಳಿಕ ಆಪ್ತರಿಗೂ ಸುಳಿವು ನೀಡದೆ ತಲೆಮರೆಸಿಕೊಂಡಿದ್ದಾರೆ. ಭವಾನಿ ರೇವಣ್ಣ ಬಂಧನಕ್ಕಾಗಿಯೇ ಎಸ್‌ಐಟಿ 4 ವಿಶೇಷ ತಂಡಗಳನ್ನು ರಚನೆ ಮಾಡಿದೆ.
ಮತ್ತೊಂದು ಕಡೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ವಶದಲ್ಲಿದ್ದು, ಅವರ ವಿಚಾರಣೆ ಕೂಡ ನಡೆಯುತ್ತಿದೆ.
ಎಚ್. ಡಿ. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದು ಆರೋಪವಾಗಿದೆ. ಈ ದೂರುದಾರ ಮಹಿಳೆಯನ್ನು ಅಪಹರಣ ಮಾಡಲಾಗಿತ್ತು. ಈ ಕುರಿತು ಕೆ.ಆರ್. ನಗರ ಠಾಣೆಯಲ್ಲಿ ಮಹಿಳೆಯ ಪುತ್ರ ಅಪಹರಣ ಪ್ರಕರಣ ದಾಖಲಿಸಿದ್ದರು.
ಕಳೆದ ಶನಿವಾರದಂದು ಎಸ್‌ಐಟಿಯು, “ಮಹಿಳಾ ಅಧಿಕಾರಿಗಳ ತಂಡ ತಮ್ಮ ವಿಚಾರಣೆಗೆ ನಿಮ್ಮ ಮನೆಗೆ ಆಗಮಿಸಲಿದೆ. ಹೊಳೆನರಸೀಪುರ ನಿವಾಸದಲ್ಲಿ ನೀವು ಹಾಜರಿರಬೇಕು” ಎಂದು ಭವಾನಿ ರೇವಣ್ಣಗೆ ನೋಟಿಸ್ ನೀಡಿತ್ತು. ಅದರಂತೆ, ಶನಿವಾರ ಬೆಳಗ್ಗೆ ಎಸ್‌ಐಟಿ ಅಧಿಕಾರಿಗಳು ನಿವಾಸಕ್ಕೆ ತೆರಳಿದ್ದರು. ಆದರೆ ಬೆಳಗ್ಗೆಯಿಂದ ಸಂಜೆಯ ತನಕ ಕಾದರೂ ಸಹ ಶನಿವಾರ ಹೊಳೆನರಸೀಪುರ ನಿವಾಸಕ್ಕೆ ಭವಾನಿ ರೇವಣ್ಣ ಬರಲಿಲ್ಲ.
ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಭವಾನಿ ರೇವಣ್ಣ ಅವರ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಭವಾನಿಯವರಿಗೆ ಬಂಧನ ಭೀತಿ ಎದುರಾಗಿದೆ. ಈ ಬೆಳವಣಿಗೆಯ ನಡುವೆಯೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಕಾರು ಚಾಲಕನನ್ನು ಎಸ್‌ಐಟಿ ತಂಡ ಶುಕ್ರವಾರ ಸಂಜೆ ಬಂಧಿಸಿತ್ತಾದರೂ, ಭವಾನಿ ರೇವಣ್ಣ ಎಲ್ಲಿದ್ದಾರೆಂಬ ಮಾಹಿತಿ ವಾಹನ ಚಾಲಕನಿಗೂ ಇಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಚುನಾವಣೋತ್ತರ ಸಮೀಕ್ಷೆ: ಎಕ್ಸಿಟ್ ಪೋಲ್‌ಗಳ ಸತ್ಯಾಸತ್ಯತೆ ಎಷ್ಟು? ಈದಿನ.ಕಾಮ್ ಸವಾಲು!
ಈ ಎಲ್ಲ ಬೆಳವಣಿಗೆಯ ನಡುವೆಯೇ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ ಅವರು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
