ರೇವ್ ಪಾರ್ಟಿ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿರುವ ತೆಲುಗು ನಟಿ ಹೇಮಾ ಅವರನ್ನು ಇಂದು (ಜೂನ್ 3) ಸಿಸಿಬಿ ಪೊಲೀಸರು ಬಂಧಿಸಿದ್ದರು.
ಆನೇಕಲ್ನ 4ನೇ ಹೆಚ್ಚುವರಿ ಸಿವಿಲ್ ಜೆಎಂಎಫ್ಸಿ ನ್ಯಾಯಾಲಯದ ಜಡ್ಜ್ ಸಲ್ಮಾ ಎ.ಎಸ್. ಎದುರು ಹೇಮಾರನ್ನು ಹಾಜರುಪಡಿಸಲಾಗಿತ್ತು. ನಟಿಗೆ ಜೂನ್ 14ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಬಂದು ಎಲೆಕ್ಟ್ರಾನಿಕ್ ಸಿಟಿಯ ಜೆ.ಆರ್. ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ಮಾಡಿದ ಆರೋಪ ಹೇಮಾ ಅವರ ಮೇಲಿದೆ. ಈ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದಾರೆ.
#Update– Bengaluru Drug party- Tollywood actor Hema has been sent to jail for 14 days.
Hema tested positive for drugs, she has been arrested by the Central Crime Branch of Bengaluru in the rave party case. Cops raided the dusk-to-dawn party on May 19 which 103 people had… pic.twitter.com/E34nwahbF2
— NewsMeter (@NewsMeter_In) June 3, 2024
ಹೇಮಾ ಅವರು ಪಾರ್ಟಿ ನಡೆದ ಸ್ಥಳದಲ್ಲಿ ಇದ್ದರು ಎಂಬುದನ್ನು ಬೆಂಗಳೂರು ಪೊಲೀಸರು ಖಚಿತ ಪಡಿಸಿದ್ದಾರೆ. ಆದರೆ ತಾನು ಅಲ್ಲಿ ಇರಲೇ ಇಲ್ಲ ಎಂದು ಹೇಮಾ ವಾದಿಸುತ್ತಲೇ ಬರುತ್ತಿದ್ದಾರೆ. ಇಂದು ಕೂಡ ಅವರು ಅದೇ ಮಾತನ್ನು ಹೇಳಿದ್ದಾರೆ. ಮಾಧ್ಯಮಗಳ ಎದುರು ಕೂಗಾಡಿದ್ದಾರೆ.
ಇತ್ತೀಚೆಗೆ ಜೆ.ಆರ್. ಫಾರ್ಮ್ಹೌಸ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಹೇಮಾ ಸಿಕ್ಕಿಬಿದ್ದಿದ್ದರು. ಆ ಸುದ್ದಿ ಹೊರಬೀಳುತ್ತಿದ್ದಂತೆಯೇ ಅದೇ ಫಾರ್ಮ್ಹೌಸ್ನ ಆವರಣದಿಂದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ತಾವು ಹೈದರಾಬಾದ್ನಲ್ಲಿ ಇರುವುದಾಗಿ ಬಿಂಬಿಸಲು ಹೇಮಾ ಪ್ರಯತ್ನಿಸಿದ್ದರು.
ಬೆಂಗಳೂರಲ್ಲಿ ಹೇಮಾ ಅವರನ್ನು ಬಂಧಿಸಿದ ಬಳಿಕ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅವರ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ರಕ್ತ, ಮೂತ್ರ, ಕೂದಲು, ಉಗುರಿನ ಸ್ಯಾಂಪಲ್ ಪಡೆಯಲಾಗಿದೆ. ಫಾರ್ಮ್ಹೌಸ್ ಮೇಲೆ ದಾಳಿ ನಡೆದ ದಿನವೂ ಹೇಮಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಅವರು ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಬಳಿಕ ವಿಚಾರಣೆಗೆ ಹಾಜರಾಗುವಂತೆ ಅವರಿಗೆ 2 ಬಾರಿ ನೋಟಿಸ್ ನೀಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಹೇಮಾಗೆ ಸಿಸಿಬಿ ನೋಟಿಸ್ ನೀಡಿದ್ದರಿಂದ ಅದರಂತೆ ಇಂದು ಬುರ್ಖಾ ಧರಿಸಿದ್ದ ಬಂದಿದ್ದ ಹೇಮಾ, ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನಲೆಯಲ್ಲಿ ನಟಿಯನ್ನು ಬಂಧಿಸಿದ್ದಾರೆ.
ಮಾಧ್ಯಮಗಳ ಮೇಲೆ ಕೂಗಾಡಿದ ನಟಿ
ಬಂಧನದ ಬಳಿಕ ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆತರಲಾಗಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಆಸ್ಪತ್ರೆಯಿಂದ ಹೊರಬರುವಾಗ ಮಾಧ್ಯಮಗಳ ಕ್ಯಾಮೆರಾ ನೋಡಿದ ನಟಿ, ಮಾಧ್ಯಮಗಳ ವಿರುದ್ಧ ಕೂಗಾಡಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳು ಬಾಯಿ ಮುಚ್ಚಿಸಲು ಯತ್ನಿಸಿದರಾದರೂ, ಅವರು ಸುಮ್ಮನಾಗಲಿಲ್ಲ.
“ನಿಮ್ಮ ಸುದ್ದಿಯೆಲ್ಲ ತಪ್ಪು. ನನ್ನನ್ನು ಈಗಷ್ಟೇ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಈಗ ನನ್ನ ಕೂದಲು, ಉಗುರು, ಮೂತ್ರ, ರಕ್ತದ ಮಾದರಿ ತೆಗೆದುಕೊಂಡಿದ್ದಾರೆ. ಅದರಲ್ಲಿ ಪಾಸಿಟಿವ್ ಬರತ್ತೋ, ನೆಗೆಟಿವ್ ಬರತ್ತೋ ಅನ್ನೋದೆಲ್ಲ ಆಮೇಲೆ. ಅರ್ಥ ಆಯ್ತಾ? ನೀವು ತೋರಿಸುತ್ತಿರುವ ಸುದ್ದಿಯೆಲ್ಲ ಸುಳ್ಳು. ಇದು ನೀವು ಮಾಡುವ ಕೆಲಸ’ ಎಂದು ಮಾಧ್ಯಮಗಳ ಎದುರು ನಟಿ ಹೇಮಾ ತೆಲುಗಿನಲ್ಲೇ ಕೂಗಾಡಿದ್ದಾರೆ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
