2024ರ ಲೋಕಸಭಾ ಚುನಾವಣೆ ಮತಎಣಿಕೆ ನಡೆಯುತ್ತಿದ್ದು, ಬಹುತೇಕ ಫಲಿತಾಂಶ ಹೊರಗೆ ಬಿದ್ದಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ ಸೋಲುಂಡಿದ್ದಾರೆ. ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ತನ್ನ ಅಣ್ಣ ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಡಿ.ಕೆ ಸುರೇಶ್ ಸೋಲಿದ್ದು, ಅವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಚನ್ನಪಟ್ಟಣಕ್ಕೆ ಕಾಲಿಡುವ ಸಾಧ್ಯತೆಗಳಿವೆ.
ಸದ್ಯ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕುಮಾರಸ್ವಾಮಿ, ಮಂಡ್ಯದಲ್ಲಿ ಗೆದ್ದು ಸಂಸತ್ ಪ್ರವೇಶಿಸುತ್ತಿದ್ದಾರೆ. ಹೀಗಾಗಿ, ಚನ್ನಪಟ್ಟಣ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಿದೆ. ಅವರ ರಾಜೀನಾಮೆಯಿಂದ ಕ್ಷೇತ್ರ ತೆರವಾಗಲಿದೆ.
ಇತ್ತ, ಹಾಲಿ ಸಂಸದ ಡಿ.ಕೆ.ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ವಿರುದ್ಧ ಸೋಲುಂಡಿದ್ದಾರೆ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗುವ ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ ಸುರೇಶ್ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರವನ್ನು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟು ಚನ್ನಪ್ಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಅವರ ವಿರುದ್ಧ 96,592 ಮತಗಳನ್ನು ಪಡೆದು ಗೆದ್ದಿದ್ದರು.
ಈ ಸುದ್ದಿ ಓದಿದ್ದೀರಾ? ಮಹಾ ಸರ್ಕಾರ ಬೀಳಿಸಿದ್ದ ಬಿಜೆಪಿಗೆ ಮುಖಭಂಗ; ‘ಇಂಡಿಯಾ’ ಒಕ್ಕೂಟಕ್ಕೆ ಭಾರೀ ಮುನ್ನಡೆ