ಬಿಜೆಪಿ ಸ್ವಂತ ಬಲದಲ್ಲಿ ಬಹುಮತ ಗಳಿಸಲು ವಿಫಲವಾಗಿರುವುದರಿಂದ, ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ತನ್ನ ಸಂಖ್ಯೆಯನ್ನು ಹೆಚ್ಚಿಸಿ, ಬಹುಮತ ಸಾಬೀತು ಮಾಡಲು ಯತ್ನಿಸುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಎನ್. ಚಂದ್ರಬಾಬು ನಾಯ್ಡು ಅವರನ್ನು ಇಂಡಿಯಾ ಕೂಟಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಎರಡೂ ಪಕ್ಷಗಳು ಈಗ ಸರ್ಕಾರ ರಚನೆಯಲ್ಲಿ ಸಂಭಾವ್ಯ ಕಿಂಗ್‌ಮೇಕರ್‌ಗಳಾಗಿವೆ. ಮೂಲಗಳ ಪ್ರಕಾರ, ಈ ಎರಡೂ ಪಕ್ಷಗಳು ‘ಇಂಡಿಯಾ’ಗೆ ಬೆಂಬಲ ನೀಡಿದರೆ, ನಿತೀಶ್‌ಗೆ ಉಪಪ್ರಧಾನಿ ಹುದ್ದೆ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಭರವಸೆ ನೀಡಲಾಗಿದೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಮಂಗಳವಾರ ಟ್ವೀಟ್ ಮಾಡಿದರೆ, ಎನ್‌ಸಿಪಿ ನಾಯಕ ಶರದ್ ಪವಾರ್ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕಾಂಗ್ರೆಸ್ ಮತ್ತು ಇತರ ಇಂಡಿಯಾ ಬ್ಲಾಕ್ ನಾಯಕರು ಕುಮಾರ್ ಮತ್ತು ನಾಯ್ಡು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ನಿತೀಶ್ ಅವರ ಜೆಡಿಯು 15 ಸ್ಥಾನಗಳನ್ನು ಮತ್ತು ನಾಯ್ಡು ಅವರ ಟಿಡಿಪಿ 12 ಸ್ಥಾನಗಳನ್ನು ಗೆದ್ದಿದೆ. ಈ ಇಬ್ಬರೂ ನಾಯಕರು ಮೈತ್ರಿ ಬದಲಿಸುವಲ್ಲಿ ಕುಖ್ಯಾತಿ ಗಳಿಸಿದ್ದಾರೆ. ಈ ಹಿಂದೆ, ಎರಡೂ ಪಕ್ಷಗಳು ಎನ್‌ಡಿಎ ತೊರೆದಿದ್ದವು. ಆದರೆ, 2024ರ ಲೋಕಸಭಾ ಚುನಾವಣೆಗೆ ಮುಂಚೆ ಎನ್‌ಡಿಎಗೆ ಮರಳಿವೆ. ಆದಾಗ್ಯೂ, ಜೆಡಿಯು ಮತ್ತು ಟಿಡಿಪಿ ಎರಡೂ ಪಕ್ಷದ ವಕ್ತಾರರು ‘ಇಂಡಿಯಾ’ಗೆ ಬಂಬಲ ನೀಡುವ ಯಾವುದೇ ಚಿಂತನೆ ಇಲ್ಲವೆಂದು ಹೇಳಿದ್ದಾರೆ. ಅದಾಗ್ಯೂ, ಎರಡೂ ಪಕ್ಷಗಳ ನಾಯಕರು ನಾಳೆ ದೆಹಲಿಗೆ ತೆರಳಲಿದ್ದಾರೆ.
ಸಮ್ಮಿಶ್ರಕ್ಕೆ ಬೆಂಬಲ ನೀಡಿದರೆ ನಿತೀಶ್‌ಗೆ ಉಪಪ್ರಧಾನಿ ಹುದ್ದೆಯ ಭರವಸೆಯನ್ನು ‘ಇಂಡಿಯಾ’ ಕೂಟ ನೀಡಿದೆ. ನಾಯ್ಡು ಅವರಿಗೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವುದಾಗಿಯೂ ಹೇಳಿದೆ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ಬೇಕೆಂಬುದು ಟಿಡಿಪಿಯ ಬಹುಕಾಲದ ಬೇಡಿಕೆ. ಹೀಗಾಗಿ, ಅದೇ ಭರವಸೆಯನ್ನೇ ‘ಇಂಡಿಯಾ’ ಟಿಡಿಪಿ ಮುಂದೆ ಇಟ್ಟಿದೆ.
“ನಾವು ಹಿಂದೆ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಇಬ್ಬರೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು. ಬಿಜೆಪಿ ಪ್ರತಿನಿಧಿಸುವ ಸೇಡಿನ ರಾಜಕಾರಣದ ಬಗ್ಗೆ ಅವರು ಅಸಮ್ಮತಿ ಹೊಂದಿದ್ದಾರೆ. ಮೋದಿ ಅವರು ಹೊರಹೋಗುವ ಹಾದಿಯಲ್ಲಿದ್ದಾರೆ. ಕೇಂದ್ರದ ಬದಲಾವಣೆಯಲ್ಲಿ ಉಭಯ ನಾಯಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬ ಭರವಸೆ ನಮಗಿದೆ” ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮನೋಜ್ ಕುಮಾರ್ ಝಾ ಹೇಳಿದ್ದಾರೆ.
“ನಾನು ನಿತೀಶ್ ಕುಮಾರ್ ಅಥವಾ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಮಾಡುತ್ತಿಲ್ಲ. ಅವರ ಮನೋಧರ್ಮದ ಬಗ್ಗೆ ನನಗಿರುವ ತಿಳುವಳಿಕೆಯನ್ನು ಗಮನಿಸಿದರೆ, ನಾನು ನನ್ನ ಭರವಸೆಯನ್ನು ವ್ಯಕ್ತಪಡಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಮೈತ್ರಿ ಪಕ್ಷಗಳು ಮತ್ತು ಮೈತ್ರಿಗೆ ಸೇರುವ ಹೊಸ ಪಾಲುದಾರರೊಂದಿಗೆ ಬುಧವಾರ ಮಾತುಕತೆ ನಡೆಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.