ಲೋಕಸಭಾ ಚುನಾವಣೆ | ಅಖಾಡದಲ್ಲಿ ಮಹಿಳೆಯರು ಗೆದ್ದಿದ್ಯಾಕೆ? ಸೋತಿದ್ಯಾಕೆ?

Date:

Advertisements

ಕಳೆದ ಎರಡು ತಿಂಗಳಿನಿಂದ ದೇಶದಲ್ಲಿ ಲೋಕಸಭಾ ಚುನಾವಣೆಯ ಅಬ್ಬರ ಜೋರಾಗಿತ್ತು. ಸದ್ಯ ಈ ಅಬ್ಬರಕ್ಕೆ ನಿನ್ನೆ ತೆರೆಬಿದ್ದಿದೆ. ಕರ್ನಾಟಕದ 28 ಸಂಸತ್‌ ಸ್ಥಾನಗಳ ಪೈಕಿ ಕಾಂಗ್ರೆಸ್‌ 9, ಬಿಜೆಪಿ 17 ಹಾಗೂ ಜೆಡಿಎಸ್‌ 2 ಸ್ಥಾನಗಳನ್ನು ಗೆದ್ದು ಬೀಗಿದೆ. ‘ಅಬ್‌ ಕೀ ಬಾರ್ 400 ಪಾರ್’ ಎನ್ನುತ್ತಿದ್ದ ನರೇಂದ್ರ ಮೋದಿ ಅವರಿಗೆ ದೇಶದ ಜನ ಅಚ್ಚರಿಯ ಫಲಿತಾಂಶದಿಂದ ಆಘಾತ ನೀಡಿದ್ದಾರೆ. ಸದ್ಯ ಬಿಜೆಪಿಯ ಲೆಕ್ಕಾಚಾರವೆಲ್ಲ ಸಂಪೂರ್ಣ ತಲೆಕೆಳಗಾಗಿದೆ.

ಇನ್ನು ರಾಜ್ಯ ರಾಜಕೀಯದಲ್ಲಿ ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಿದ್ದ ಕೆಲ ಮಹಿಳೆಯರು ಗೆದ್ದು ಬೀಗಿದ್ದಾರೆ. ಪ್ರಬಲ ನಾಯಕರಿಗೆ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮೂವರು ಮಹಿಳೆಯರು ಗೆದ್ದು ಬೀಗಿದ್ದರೆ, ಐವರು ಮಹಿಳೆಯರು ಸೋಲುಂಡಿದ್ದಾರೆ.

ಗೆಲುವು ಕಂಡ ಮಹಿಳೆಯರು

ಪ್ರಿಯಾಂಕಾ ಜಾರಕಿಹೊಳಿ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮೊದಲೇ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಒಟ್ಟು 7,13,461 ಮತಗಳನ್ನು ಪಡೆದು ಎದುರಾಳಿ ಬಿಜೆಪಿ ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ ಅವರನ್ನ 90,834 ಮತಗಳ ಅಂತರದಿಂದ ಸೋಲಿಸಿದ್ದಾರೆ.

Advertisements

ಚಿಕ್ಕೋಡಿ ಕ್ಷೇತ್ರದಲ್ಲಿ ಪಕ್ಷ, ಜಾತಿಗಳು ಲೆಕ್ಕಕ್ಕಿಲ್ಲ. ಅಲ್ಲಿ, ವ್ಯಕ್ತಿಯ ಪ್ರಾಬಲ್ಯದ ಮೇಲೆ ಚುನಾವಣೆಗಳು ನಡೆಯುತ್ತವೆ. ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರು ಭಾರೀ ಹಿಡಿತ ಹೊಂದಿದ್ದಾರೆ. ಅವರ ಪ್ರಬಲ್ಯದ ಕಾರಣದಿಂದಲೇ 2014ರಲ್ಲಿ ಬಿಜೆಪಿಯ ರಮೇಶ್‌ ಕತ್ತಿ ವಿರುದ್ಧ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ಮೋದಿ ಅಲೆಯ ಕಾರಣದಿಂದಾಗಿ, ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ವಿರುದ್ಧ ಬಿಜೆಪಿಯಿಂದ ಅಣ್ಣಾಸಾಹೇಬ್ ಜೊಲ್ಲೆ ಸ್ಪರ್ಧಿಸಿ ಗೆದ್ದಿದ್ದರು. ಇದೀಗ, ಸತೀಶ್‌ ಜಾರಕಿಹೊಳಿ ಅವರು ತಮ್ಮ ಮಗಳನ್ನು ಕಣಕ್ಕಿಳಿಸಿ, ಕ್ಷೇತ್ರವನ್ನ ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡಿದೆ.

ರಾಜ್ಯ ಸರ್ಕಾರದಲ್ಲಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಅವರ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ, ತಮ್ಮ ಮಗಳಿಗೆ ಟಿಕೆಟ್‌ ಪಡೆದುಕೊಂಡು, ಗೆಲ್ಲಿಸಿಕೊಂಡಿದ್ದಾರೆ. ಇತ್ತ, ಈ ಬಾರಿಯೂ ರಮೇಶ್ ಕತ್ತಿಯವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ತಪ್ಪಿಸುವಲ್ಲಿ ಅಣ್ಣಾಸಾಹೇಬ್ ಜೊಲ್ಲೆಯವರು ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿಯೊಳಗಿನ ಲಾಭಿ, ಅಸಮಾಧಾನವೂ ಪ್ರಿಯಾಂಕಾ ಜಾರಕಿಹೊಳಿ ಅವರ ಗೆಲುವಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವ ಹೆಚ್ಚಿದೆ ಎಂಬುದು ಸಾಬೀತಾಗಿದೆ.

ಅಲ್ಲದೇ, ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವುದೇ ಕಷ್ಟ ಎನ್ನುತ್ತಿದ್ದವರಿಗೆ ಜಾತಿಗಿಂತ, ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವ ಸಂದೇಶವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನರು ಸಾರಿದ್ದಾರೆ.

ಪ್ರಭಾ ಮಲ್ಲಿಕಾರ್ಜುನ್
ಶಿವಮೊಗ್ಗ ಹೊರತುಪಡಿಸಿದರೆ, ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಮತ್ತೊಂದು ಲೋಕಸಭಾ ಕ್ಷೇತ್ರ ದಾವಣಗೆರೆ. ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಒಟ್ಟು 6,33,059 ಮತಗಳನ್ನು ಪಡೆದು ಪ್ರಭಾ ಮಲ್ಲಿಕಾರ್ಜುನ್ ಪಡೆದಿದ್ದಾರೆ. 26,094 ಮತಗಳ ಅಂತರದಿಂದ ಪ್ರಭಾ ಮಲ್ಲಿಕಾರ್ಜುನ್ ಗೆಲುವಿನ ನಗೆ ಬೀರಿದ್ದಾರೆ.

ತೀವ್ರ ಸ್ಪರ್ಧೆಯನ್ನು ಮೀರಿ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್ ಇಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಮಾವ ಮತ್ತು ಪತಿಯ ಬಲ ಹಾಗೂ ಕಾಂಗ್ರೆಸ್‌ ಗ್ಯಾರಂಟಿಗಳ ಫಲ ಪ್ರಭಾ ಅವರನ್ನು ಜಯದ ಗದ್ದುಗೆಗೆ ಏರಿಸಿದೆ.

ಬೀಗರಾದ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ ಮತ್ತು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿದ್ದ ಜಿ.ಬಿ. ವಿನಯ್‌ಕುಮಾರ್ ವಿರುದ್ಧ ಪ್ರಭಾ ಜಯಗಳಿಸಿದ್ದಾರೆ. ಇವರು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಲು ಅಣಿಯಾಗಿದ್ದಾರೆ.

ಶೋಭಾ ಕರಂದ್ಲಾಜೆ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದವರು ಶೋಭಾ ಕರಂದ್ಲಾಜೆ. ಒಟ್ಟು 9,86,046 ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ್ದಾರೆ. 2,59,476 ಮತಗಳ ಅಂತರದಿಂದ ಶೋಭಾ ಕರಂದ್ಲಾಜೆ ಗೆದ್ದಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಆದರೆ, ಶೋಭಾ ಕರಂದ್ಲಾಜೆ ಅವರು ಕೊಡಗು-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಗೆದ್ದು ಸಂಸದರಾಗಿದ್ದರು. ಆದರೆ, ಈ ಬಾರಿ ಅಲ್ಲಿಯ ಬಿಜೆಪಿ ಕಾರ್ಯಕರ್ಯರಿಂದಲೇ ಗೋ ಬ್ಯಾಕ್ ಎನಿಸಿಕೊಂಡು ಬೆಂಗಳೂರು ಉತ್ತರಕ್ಕೆ ಬಂದರು.

ಬಿಜೆಪಿ ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್ ಘೋಷಣೆ ಮಾಡಿದಾಗ ಇಲ್ಲಿಯ ಬಿಜೆಪಿ ಕಾರ್ಯಕರ್ಯರೂ ಕೂಡ ಬೇರೆ ಊರಿನ ಕಸ ನಮ್ಮಲ್ಲಿ ತಂದು ಹಾಕಬೇಡಿ ಎಂದು ಗೋಬ್ಯಾಕ್ ಘೋಷಣೆ ಕೂಗಿದ್ದರು.

ಗೋ ಬ್ಯಾಕ್ ಚಳವಳಿ ಎದುರಿಸಿ ಯಡಿಯೂರಪ್ಪ ಅವರ ಕೃಪಾಕಟಾಕ್ಷದಿಂದ ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಾಂಗ್ರೆಸ್‌ ಪ್ರೊ.ರಾಜೀವ್ ಗೌಡ ಅವರಿಗೆ ಟಿಕೆಟ್ ಘೋಷಿಸಿತ್ತು. ಆದರೆ, ರಾಜೀವ್ ಗೌಡ ಪೈಪೋಟಿ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ, ಗೋ ಬ್ಯಾಕ್ ಎನಿಸಿಕೊಂಡಿದ್ದ ಶೋಭಾ ಈ ಅಂತರದಲ್ಲಿ ಗೆಲ್ಲುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ.

ಸೋತ ಮಹಿಳೆಯರು

ಡಾ ಅಂಜಲಿ ನಿಂಬಾಳ್ಕರ್
ಖಾನಾಪುರ ಮಾಜಿ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರ ವಿರುದ್ಧ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಒಟ್ಟು 4,45,067 ಮತಗಳನ್ನು ಗಳಿಸಿ 3,37,428 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ್‌ ಹೆಗಡೆ ಅವರನ್ನು ಬದಿಗಿಟ್ಟು, ಈ ಬಾರಿ ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ದಶಕಗಳ ನಂತರ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸಿತ್ತು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರ ಬಹು ದೊಡ್ಡ ಸಮುದಾಯಗಳಲ್ಲಿ ಕ್ಷತ್ರಿಯ ಮರಾಠಾ ಸಮುದಾಯ ಕೂಡ ಒಂದಾಗಿದೆ. ಕಿತ್ತೂರು, ಖಾನಾಪುರ ಮಾತ್ರವಲ್ಲದೆ, ಹಳಿಯಾಳ, ಕಾರವಾರ ಮುಂತಾದ ತಾಲೂಕುಗಳಲ್ಲಿ ಕೂಡ ಈ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಂತೆಯೇ, ಈಗ ಕಾಂಗ್ರೆಸ್‌ ಘೋಷಿಸಿರುವ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ಕೂಡ ಇದೇ ಸಮುದಾಯಕ್ಕೆ ಸೇರಿದ್ದು, ಈ ಸಮುದಾಯದ ಜನರ ಮತಗಳೆಲ್ಲ ಅಂಜಲಿ ನಿಂಬಾಳ್ಕರ್‌ ಅವರಿಗೆ ಬೀಳಬಹುದು. ಇನ್ನೊಂದೆಡೆ ಲೋಕಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯ ಘೋಷಣೆಯ ಮೂಲಕ ಕ್ಷೇತ್ರದ ಬಹುದೊಡ್ಡ ಸಂಖ್ಯೆಯ ಮಹಿಳಾ ಮತದಾರರನ್ನು ಸೆಳೆಯುವುದಕ್ಕೆ ಕೂಡ ಕಾಂಗ್ರೆಸ್ ಯೋಜನೆ ರೂಪಿಸಿತ್ತು. ಆದರೆ, ಈಗ ಈ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ.

ಸಂಯುಕ್ತಾ ಪಾಟೀಲ್
ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಸ್ಪರ್ಧಿಸಿದರು. ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್‌ ಅವರಿಗೆ ಸಂಯುಕ್ತಾ ಪಾಟೀಲ್‌ ಪ್ರಬಲ ಪೈಪೋಟಿ ನೀಡಿದ್ದಾರೆ. ಒಟ್ಟು 6,02,640 ಮತಗಳನ್ನ ಸಂಯುಕ್ತಾ ಪಾಟೀಲ್ ಪಡೆದಿದ್ದಾರೆ. 68,399 ಮತಗಳ ಅಂತರದಿಂದ ಸಂಯುಕ್ತಾ ಪಾಟೀಲ್ ಸೋಲು ಅನುಭವಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಗಳೇ ಸ್ಪರ್ಧಿಸಿರುವುದು ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಐದನೇ ಬಾರಿ ಆಯ್ಕೆ ಬಯಸಿ ಬಿಜೆಪಿಯಿಂದ ಪಿಸಿ ಗದ್ದಿಗೌಡರ್‌ ಅವರು ಸ್ಪರ್ಧಿಸಿದ್ದರು.

ಇನ್ನೊಂದೆಡೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅಸಾಮಾಧಾನಕ್ಕೂ ಕಾರಣವಾಗಿತ್ತು. ವೀಣಾ ಕಾಶಪ್ಪನವರ ಬಣ ಟಿಕೆಟ್‌ ಕೈತಪ್ಪಿದ್ದಕ್ಕೆ ಬೇಸರ್ ವ್ಯಕ್ತಪಡಿಸಿತ್ತು.

ಈ ಸುದ್ದಿ ಓದಿದ್ದೀರಾ? ಕರ್ನಾಟಕ ಫಲಿತಾಂಶ | ಕಾಂಗ್ರೆಸ್‌ನ ಆರು ಸಚಿವರ ಮಕ್ಕಳಲ್ಲಿ ಮೂವರಿಗೆ ಗೆಲುವು

ಗಾಯತ್ರಿ ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಡಾ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಒಟ್ಟು 6,06,965 ಮತಗಳನ್ನ ಗಾಯತ್ರಿ ಸಿದ್ದೇಶ್ವರ ಪಡೆದಿದ್ದಾರೆ. 26,094 ಮತಗಳ ಅಂತರದಿಂದ ಗಾಯತ್ರಿ ಸಿದ್ದೇಶ್ವರ ಸೋಲು ಅನುಭವಿಸಿದ್ದಾರೆ.

ಸೌಮ್ಯಾ ರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಪ್ರಬಲ ಪೈಪೋಟಿ ನೀಡಿದ್ದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಸೌಮ್ಯ ರೆಡ್ಡಿ ಯವರು ಕೂಡ ತೇಜಸ್ವಿ ಸೂರ್ಯ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ.

ಗೀತಾ ಶಿವರಾಜಕುಮಾರ್

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರು ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು ವಿರುದ್ಧ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದಾರೆ.

ಪ್ರತಿಸ್ಪರ್ಧಿ ಗೀತಾ ಶಿವರಾಜಕುಮಾರ್ ಅವರನ್ನು 2,43,715 ಮತಗಳ ಅಂತರದಿಂದ ಸೋಲಿಸಿದ ರಾಘವೇಂದ್ರ ಸುಲಭ ಗೆಲುವು ದಾಖಲಿಸಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ಅವರು ಮಾಜಿ ಸಿಎಂ ಬಂಗಾರಪ್ಪ ಅವರ ಮಗಳು, ಸಚಿವ ಮಧು ಬಂಗಾರಪ್ಪನವರ ಸಹೋದರಿ, ಸ್ಟಾರ್ ನಟ ಶಿವರಾಜಕುಮಾರ್ ಪತ್ನಿ ಅದಾಗ್ಯೂ ಕೂಡ ಅವರು ಸೋತಿದ್ದಾರೆ. ಗೀತಾಗೆ ಟಿಕೆಟ್ ಕೊಡಿಸಲು ಮಧು ಬಂಗಾರಪ್ಪ ಲಾಭಿ ಮಾಡಿದ್ದರು. ಆದರೆ, ಶಿವಮೊಗ್ಗ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ, ಶಿವಮೊಗ್ಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಭದ್ರಕೋಟೆಯಾಗಿದೆ. ಆ ಭದ್ರಕೋಟೆ ಭೇಧಿಸುವಲ್ಲಿ ಬಂಗಾರಪ್ಪನ ಕುಟುಂಬ ವಿಫಲವಾಗಿದೆ. ಗೀತಾ ಸೋಲುಂಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

Download Eedina App Android / iOS

X