ಸಚಿವ ಮಧು ಬಂಗಾರಪ್ಪ ಸಹೋದರಿ, ಸ್ಟಾರ್ ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ರಾಜಕಾರಣದಲ್ಲಿ ಪಳಗಬೇಕೆಂಬ ಅವರ ಕನಸು ಈ ಬಾರಿಯೂ ಕನಸಾಗಿಯೇ ಉಳಿದಿದೆ. ಬಹುಶಃ, ಅವರು ಮತ್ತೆ ರಾಜಕೀಯದತ್ತ ಸುಳಿಯುವ ಸಾಧ್ಯತೆಯೇ ಇಲ್ಲವಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ಧ ಸ್ಪರ್ಧೆ ಮಾಡಿದ್ದ ಗೀತಾ ಶಿವರಾಜಕುಮಾರ್ ಬರೋಬ್ಬರಿ 2,43,715 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಗೀತಾ ಶಿವರಾಜ್‌ಕುಮಾರ್ ಅವರು ಡಾ.ರಾಜಕುಮಾರ್ ಅವರ ಸೊಸೆ, ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಮಗಳು. ಎಸ್ ಬಂಗಾರಪ್ಪ ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿಗಳಲ್ಲಿ ಒಬ್ಬರು. ಬಡವರ ಬಂಧು, ಹಿಂದುಳಿದ ವರ್ಗಗಳ ನೇತಾರ, ಬಡಬಗ್ಗರ ಪಾಲಿನ ಆಶ್ರಯದಾತ ಎಂದು ಹೆಸರುವಾಸಿಯಾಗಿದ್ದವರು.
ಸದ್ಯ, ಗೀತಾ ಅವರಿಗೆ ಅಪ್ಪನ ಹೆಸರು, ಪತಿಯ ‘ಸ್ಟಾರ್ಡಂ’ ಬಿಟ್ಟರೆ, ರಾಜಕೀಯದಲ್ಲಿ ಹೆಸರು ಗಳಿಸಲು ಬೇರಾವುದೇ ದಾರಿ ಇಲ್ಲ. ತಮ್ಮ ಸಹೋದರ ಮಧು ಬಂಗಾರಪ್ಪ ಸಚಿವರಾಗಿದ್ದರೂ, ಸೊರಬದಿಂದಾಚೆಗೆ ಅವರ ಪ್ರಾಬಲ್ಯವಿಲ್ಲ. ಅಪ್ಪನ ಪ್ರಕರತೆಯೂ ಮಧು ಬಂಗಾರಪ್ಪ ಅವರಲ್ಲಿ ಬೆಳೆದುಬಂದಿಲ್ಲ. ಸೊರಬದಲ್ಲಿ ತಮ್ಮ ಅಣ್ಣ ಕುಮಾರ್ ಬಂಗಾರಪ್ಪ ವಿರುದ್ಧದ ಹೋರಾಟದಲ್ಲೇ ಮಧು ಬಂಗಾರಪ್ಪ ತಮ್ಮ ರಾಜಕೀಯ ನಡೆಸುತ್ತಿದ್ದಾರೆ.
ಹೀಗಾಗಿ, ಗೀತಾಗೆ ರಾಜಕೀಯವಾಗಿ ತಮ್ಮ ಬೆನ್ನಿಗೆ ಪ್ರಬಲ ನಾಯಕನಿಲ್ಲ. ಅದಾಗ್ಯೂ, ಅವರು ತಮ್ಮ ತಂದೆಯ ತವರು ಜಿಲ್ಲೆ ಎಂಬ ಏಕೈಕ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಭದ್ರಕೋಟೆಯಲ್ಲಿ ರಾಜಕೀಯ ನೆಲೆ ಕಾಣಲು ಯತ್ನಿಸುತ್ತಿದ್ದಾರೆ. ಆದರೆ, ಬಿಎಸ್‌ವೈ ಕೋಟೆಯನ್ನು ಬೇಧಿಸಿ, ಬೇರೂರುವ ಸಾಮರ್ಥ್ಯ ಗೀತಾಗಾಗಲೀ, ಮಧು ಬಂಗಾರಪ್ಪಗಾಗಲೀ ಇಲ್ಲ.
2014ರಲ್ಲಿಯೂ ಮಧು ಬಂಗಾರಪ್ಪ ಅವರ ಸಹಕಾರದಿಂದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮೊದಲ ಬಾರಿಗೆ ಗೀತಾ ಕಣಕ್ಕಿಳಿದಿದ್ದರು. ಆದರೆ, ಆರಂಭದಲ್ಲಿಯೇ ಅವರು ಮುಗ್ಗರಿಸಿದರು.
ಈ ಬಾರಿ, 2024ರ ಲೋಕಸಭಾ ಚುನಾವಣೆಯಲ್ಲಿ ಗೀತಾಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕೆಂದು ಮಧು ಬಂಗಾರಪ್ಪ ಭಾರೀ ಲಾಭಿ ಮಾಡಿದ್ದರು. ಅವರ ಒತ್ತಡ ಮತ್ತು ಶಿವರಾಜ್‌ಕುಮಾರ್ ಅವರ ಮನವಿಗೆ ಮಣಿದ ಕಾಂಗ್ರೆಸ್, ಗೀತಾಗೆ ಟಿಕೆಟ್ ನೀಡಿತು. ಆದರೆ, ಗೀತಾ ಮತ್ತೆ ಸೋಲುಂಡಿದ್ದಾರೆ.
ಗೀತಾ ಉತ್ತಮ ವಾಗ್ಮಿ ಅಲ್ಲ, ಜನರ ಸಂಪರ್ಕ ಹೆಚ್ಚಾಗಿ ಇಲ್ಲ, ಜನರ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ತಿಳುವಳಿಕೆ ಇಲ್ಲ, ಮಾತಿನ ಚತುರತೆ ಕಡಿಮೆ, ಓಡಾಡುವ ಶಕ್ತಿಯೂ ಕೂಡ ಇಲ್ಲ. ಅವರಿಗೆ ಬೆನ್ನುಲುಬಾಗಿ ನಿಂತಿರುವುದು ಪತಿ ಶಿವರಾಜ್‌ಕುಮಾರ್ ಹಾಗೂ ಸಹೋದರ ಮಧು ಬಂಗಾರಪ್ಪ. ಇವರಿಬ್ಬರ ಸಹಕಾರದಿಂದಲೇ ಗೀತಾ ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಮತದಾರರು ಗೀತಾ ಕೈಹಿಡಿಯಲು ಹಿಂದೇಟು ಹಾಕುತ್ತಿದ್ದಾರೆ.
ನಟ ಶಿವರಾಜ್‌ಕುಮಾರ್ ಗೀತಾ ಪರವಾಗಿ ಭಾರೀ ಪ್ರಚಾರ ನಡೆಸಿದ್ದರು. ಆದರೆ, ಅವರಿಗೂ ರಾಜಕೀಯ ಅನುಭವ ಇಲ್ಲ. ರಾಜ್ ಕುಟುಂಬದಲ್ಲಿಯೂ ಯಾರಿಗೂ ರಾಜಕೀಯ ಗೊತ್ತಿಲ್ಲ. ಸ್ವತಃ ರಾಜ್‌ಕುಮಾರ್ ಅವರೇ ರಾಜಕೀಯದಿಂದ ದೂರ ಉಳಿದಿದ್ದರು. ತಮ್ಮ ಬೀಗರಾದ ಎಸ್.ಬಂಗಾರಪ್ಪ ಪರವಾಗಿಯೂ ರಾಜ್‌ಕುಮಾರ್ ಎಂದೂ ಪ್ರಚಾರ ಮಾಡಿದವರಲ್ಲ. ಅವರು ರಾಜಕೀಯದಿಂದ ದೂರ ಇರುವುದಾಗಿಯೇ ಹೇಳುತ್ತಿದ್ದರು.
ಅವರಂತೆಯೇ, ಅವರ ಕುಟುಂಬದಿಂದ ಯಾರೋಬ್ಬರು ಇಲ್ಲಿಯವರೆಗೂ ರಾಜಕೀಯಕ್ಕೆ ಪ್ರವೇಶ ಮಾಡಿಲ್ಲ. ಸ್ವತಃ 2014ರಲ್ಲಿ ಗೀತಾ ಶಿವರಾಜ್‌ಕುಮಾರ್ ಚುನಾವಣೆಗೆ ನಿಂತಾಗ ಅವರ ಪರವಾಗಿ ರಾಜ್ ಕುಟುಂಬದ ಯಾವೊಬ್ಬರೂ ಪ್ರಚಾರಕ್ಕೆ ಬರಲಿಲ್ಲ. ತಮ್ಮ ಅತ್ತಿಗೆ ಪರವಾಗಿ ಪ್ರಚಾರಕ್ಕೆ ಹೋಗುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ‘ರಾಜಕಾರಣ ಎಲ್ಲ ನಮಗೆ ಆಗಿಬರೋಲ್ಲ’ ಎಂದು ನಟ ಪುನೀತ್ ರಾಜ್‌ಕುಮಾರ್ ಉತ್ತರಿಸಿದ್ದರು. ರಾಜ್ ಕುಟುಂಬದಲ್ಲಿ ಗೀತಾಗೆ ಶಿವರಾಜ್ ಕುಮಾರ್ ಮಾತ್ರವೇ ರಾಜಕೀಯವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ.
ಗೀತಾ ಮತ್ತು ಶಿವರಾಜ್ ಕುಮಾರ್ ದಂಪತಿ ರಾಜಕೀಯದಲ್ಲಿ ಅಷ್ಟಾಗಿ ಪಳಗಿಲ್ಲ. ಇನ್ನೊಬ್ಬರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಚುನಾವಣಾ ಕಣದಲ್ಲಿರುವ ಎದುರಾಳಿಗೆ ಎದುರು ಮಾತಾಡಿದವರಲ್ಲ, ತಿರುಗೇಟು ನೀಡಲೂ ಅವರಿಂದ ಸಾಧ್ಯವಾಗಲಿಲ್ಲ. ಸದ್ಯದ ರಾಜಕಾರಣದಲ್ಲಿ ಈ ದಂಪತಿಯ ಮುಗ್ದ ನಡೆ ಕೆಲಸ ಮಾಡುತ್ತಿಲ್ಲ. ಜನರು ಆ ಮುಗ್ದತೆಗೆ ಮತ ನೀಡುತ್ತಿಲ್ಲ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಅಖಾಡದಲ್ಲಿ ಮಹಿಳೆಯರು ಗೆದ್ದಿದ್ಯಾಕೆ? ಸೋತಿದ್ಯಾಕೆ?
ಈ ಚುನಾವಣೆಯಲ್ಲಿ ಗೀತಾ ಕಣಕ್ಕಿಳಿಯುವುದು ಖಾತ್ರಿಯಾದಾಗಲೇ ಅವರು ದುರ್ಬಲ ಅಭ್ಯರ್ಥಿ ಎಂಬ ಮಾತು ಕೇಳಿಬಂದಿತ್ತು. ಅದಾಗ್ಯೂ, ಅವರು 5,35,006 ಮತಗಳನ್ನು ಪಡೆದಿದ್ದಾರೆ. 2 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದಾರೆ. ಅವರು ಪಡೆದ ಮತಗಳು ಗೀತಾ ರಾಜಕೀಯದಲ್ಲಿ ಮಹತ್ವದ ಮತಗಳೇ. ಆದರೂ, ಅವರ ರಾಜಕೀಯ ಭವಿಷ್ಯ ಏನಾಗಲಿದೆ ಕಾದು ನೋಡಬೇಕಷ್ಟೇ…