ನರೇಂದ್ರ ಮೋದಿ ನಾಯಕತ್ವದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡನೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಇಂದು ಜೂನ್ 7 ರಂದು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಲಿತಾಂಶ ಪ್ರಕಟವಾಗಿ ಎನ್‌ಡಿಎ ಒಕ್ಕೂಟ 292 ಸ್ಥಾನಗಳನ್ನು ಗೆದ್ದ ನಂತರ ಒಕ್ಕೂಟದ ನಾಯಕರೊಂದಿಗೆ ದೆಹಲಿಯಲ್ಲಿ ಇಂದು ಸಭೆ ನಡೆಯುತ್ತಿದೆ.
ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಎಲ್ಲರ ಕಣ್ಣು ಜೆಡಿಯು, ಟಿಡಿಪಿ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೇಲೆದ್ದು, ಸರ್ಕಾರ ರಚನೆಯಲ್ಲಿ ಈ ನಾಯಕರು ಪ್ರಮುಖ ಪಾತ್ರ ವಹಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ
ಎನ್‌ಡಿಎ ಸಭೆಗೂ ತೆರಳುವ ಮುನ್ನ ಮಾತನಾಡಿದ್ದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು,” ನಾವು ಎನ್‌ಡಿಎ ಜೊತೆಗಿದ್ದು, ಒಕ್ಕೂಟದ ಸಭೆಗೆ ತೆರಳುತ್ತಿದ್ದೇನೆ. ಈ ಸಂದರ್ಭದಲ್ಲಿ ಏನಾದರೂ ಬೆಳವಣಿಗೆಗಳು ನಡೆದರೆ ನಾನು ನಿಮಗೆ ಮಾಹಿತಿ ನೀಡುತ್ತೇನೆ” ಎಂದಿದ್ದರು.
“ರಾಜಕೀಯದಲ್ಲಿ ಏರಿಳಿತಗಳು ಸಾಮಾನ್ಯ. ಇತಿಹಾಸದಲ್ಲಿ ಹಲವು ರಾಜಕೀಯ ನಾಯಕರು ಹಾಗೂ ಪಕ್ಷಗಳನ್ನು ತಿರಸ್ಕರಿಸಲಾಗಿದೆ. ಇದೊಂದು ಐತಿಹಾಸಿಕ ಚುನಾವಣೆ. ವಿದೇಶದಲ್ಲಿರುವ ಮತದಾರರು ಕೂಡ ತಮ್ಮ ಊರಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ” ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಮೂಲಗಳ ಪ್ರಕಾರ ಚಂದ್ರಬಾಬು ನಾಯ್ಡು ಇಂದು ನಡೆಯುವ ಉನ್ನತ ಮಟ್ಟದ ಎನ್‌ಡಿಎ ಸಭೆಯಲ್ಲಿ ನೂತನ ಸರ್ಕಾರದಲ್ಲಿ ಟಿಡಿಪಿ ಪಕ್ಷಕ್ಕೆ ಸ್ಪೀಕರ್ ಹುದ್ದೆ ಕೇಳುವ ಸಾಧ್ಯತೆಯಿದೆ.
ಆಂಧ್ರ ಪ್ರದೇಶದ 25 ಲೋಕಸಭಾ ಕ್ಷೇತ್ರದಲ್ಲಿ ಟಿಡಿಪಿ 16 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. 40 ಕ್ಷೇತ್ರಗಳ ಬಿಹಾರದಲ್ಲಿ ಜೆಡಿಯು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಜಯಿಸಿದ್ದು, ಬಹುಮತದ ಸಂಖ್ಯೆಯ ಕೊರತೆ ಎದುರಿಸುತ್ತಿದೆ. ಎನ್‌ಡಿಎ ಮಿತ್ರಪಕ್ಷಗಳು ಇತರ 52 ಸ್ಥಾನಗಳಲ್ಲಿ ಜಯಗಳಿಸಿವೆ.
ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುತ್ತಿದ್ದು, ಜೂ.8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
