ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ

Date:

ಫಲಿತಾಂಶ ಹೊರಬಿದ್ದಿದೆ. ರಾಜಕೀಯ ಪಕ್ಷಗಳ, ಸುದ್ದಿ ಮಾಧ್ಯಮಗಳ, ರಾಜಕೀಯ ವಿಶ್ಲೇಷಕರ, ಪಂಡಿತರ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಪಕ್ಷಗಳ ನಡುವಿನ ಯುದ್ಧವಲ್ಲ, ಜವಾಬ್ದಾರಿಯುತ ಸರ್ಕಾರಕ್ಕಾಗಿ ನಡೆಯುವ ಸರಳ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ಇದನ್ನು ಸೋತವರು, ಗೆದ್ದವರು ಅರ್ಥ ಮಾಡಿಕೊಂಡು ಮಾನವೀಯವಾಗಿ ವರ್ತಿಸಬೇಕಾಗಿದೆ…

ದೇಶದ ದಿಕ್ಕು ಬದಲಿಸುವ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಾಜಕೀಯ ಪಕ್ಷಗಳ, ಸುದ್ದಿ ಮಾಧ್ಯಮಗಳ, ರಾಜಕೀಯ ವಿಶ್ಲೇಷಕರ, ಪಂಡಿತರ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಇಲ್ಲಿ ಗೆದ್ದಿರುವುದು ಮತದಾರ ಮಾತ್ರ.

ರಾಜಕೀಯ ಪಕ್ಷಗಳ ನೇತಾರರಿಗೆ ಈ ಫಲಿತಾಂಶ ಹಲವು ರೀತಿಯಲ್ಲಿ ಪಾಠ ಕಲಿಸಿದೆ. ಹತ್ತು ವರ್ಷ ದೇಶವನ್ನಾಳಿದ ಬಿಜೆಪಿ, ಮೋದಿ ಅಲೆಯೊಂದೇ ಸಾಕು ಎಂದು ಸಾರುತ್ತಿತ್ತು. ಚುನಾವಣಾ ಬಾಂಡ್ ಮೂಲಕ ಶೇಖರಿಸಿದ ಸಾವಿರಾರು ಕೋಟಿಗಳ ಕಾರ್ಪೊರೇಟ್ ಹಣವನ್ನು ನೀರಿನಂತೆ ಚೆಲ್ಲಿತ್ತು. ಸರ್ಕಾರಿ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಂಡು ‘ಅಬ್ ಕಿ ಬಾರ್ ಚಾರ್ ಸವ್ ಪಾರ್’ ಎಂದು ಗುಟುರು ಹಾಕಿತ್ತು. ಮೋದಿ, ನಾನೇ ಪರಮಾತ್ಮ ಎಂದಿದ್ದೂ ನಡೆದುಹೋಗಿತ್ತು. ಅವರ ಅಬ್ಬರ, ಆರ್ಭಟ, ಅಟಾಟೋಪವನ್ನು ಸುದ್ದಿಯನ್ನಾಗಿಸುವ ಮಾಧ್ಯಮಗಳು, ಮತ್ತೊಮ್ಮೆ ಮೋದಿ ಎಂದು ತುತ್ತೂರಿ ಊದುತ್ತಿದ್ದವು. ಅವರೆಲ್ಲರಿಗೂ ಜನ ತಕ್ಕ ಉತ್ತರ ನೀಡಿದ್ದಾರೆ.

ಅದೇ ರೀತಿ, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಧಾರಾಳವಾಗಿಯೇ ಹಣ ಖರ್ಚು ಮಾಡಿತ್ತು. ಕಾರ್ಯಕರ್ತರನ್ನು ಕಡೆಗಣಿಸಿ, ವಂಶ ಪಾರಂಪರ್ಯ ರಾಜಕಾರಣಕ್ಕೆ ಜೋತು ಬಿದ್ದಿತ್ತು. ಮಂತ್ರಿಗಳ ಮಕ್ಕಳನ್ನೇ ಅಭ್ಯರ್ಥಿಯನ್ನಾಗಿಸಿ 20 ಸ್ಥಾನಗಳನ್ನು ಗೆಲ್ಲುತ್ತೇವೆಂದು ಬೀಗುತ್ತಿತ್ತು. ಆದರೆ ಮತದಾರರು ವಂಶ ಪಾರಂಪರ್ಯ ರಾಜಕಾರಣಕ್ಕೂ ಮಣೆ ಹಾಕಿದ್ದಾರೆ, 9 ಸ್ಥಾನಕ್ಕಿಳಿಸಿ ಸೋಲಿನ ರುಚಿಯನ್ನೂ ಉಣಿಸಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಣೆ ಹೊತ್ತಿದ್ದ ಮೈಸೂರು ಕ್ಷೇತ್ರ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಉಸ್ತುವಾರಿಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ, ಅಧಿಕಾರದ ಮದಕ್ಕೆ ಮತದಾರರು ಮದ್ದು ಅರೆದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್‌ಗಷ್ಟೇ ಅಲ್ಲ, ರಾಜ್ಯ ಬಿಜೆಪಿಗೂ ಈ ಫಲಿತಾಂಶ ಪಾಠ ಕಲಿಸಿದೆ. ಕಳೆದ ಬಾರಿ 25 ಸ್ಥಾನಗಳ ಜೊತೆಗೆ ಪಕ್ಷೇತರ ಮತ್ತು ಜೆಡಿಎಸ್‌ನ ತಲಾ ಒಂದೊಂದು ಸ್ಥಾನ ಸೇರಿ 27 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದ ಬಿಜೆಪಿ, ಈ ಬಾರಿ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. 8 ಸ್ಥಾನಗಳನ್ನು ಕಳೆದುಕೊಂಡಿದೆ. ಸೋಲಿನ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ತಲೆಗೆ ಕಟ್ಟಲು ಆರೆಸೆಸ್ ಹವಣಿಸುತ್ತಿದೆ. ಆದರೆ, ಪುತ್ರ ರಾಘವೇಂದ್ರ ಮತ್ತು ಜಗದೀಶ್ ಶೆಟ್ಟರ್ ಗೆದ್ದು, ಈಶ್ವರಪ್ಪ ಸೋತಿರುವುದು, ಅಪ್ಪ-ಮಕ್ಕಳ ಕೈ ಮೇಲಾದಂತೆ ಕಾಣುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವೆ ನಿಜಕ್ಕೂ ಲಾಭವಾಗಿದ್ದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ. ಮಗ ಮತ್ತು ಅಳಿಯನನ್ನು ಗೆಲ್ಲಿಸಿಕೊಂಡಿದ್ದಾರೆ. ಡಿ.ಕೆ. ಸುರೇಶ್ ಎಂಬ ಬಲಿಷ್ಠ ಒಕ್ಕಲಿಗ ನಾಯಕನನ್ನು ಬಗ್ಗು ಬಡಿದಿದ್ದಾರೆ. ಹಾಗೆಯೇ ಟಿಕೆಟ್ ಕೊಡಿಸುವಲ್ಲಿ ‘ಅತ್ಯಾಸಕ್ತಿ’ ತೋರಿದ್ದ ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರವನ್ನು ಗೆಲ್ಲಿಸಿಕೊಂಡಿರುವುದು, ರಾಜಕೀಯವಾಗಿ ಲಾಭವೇ ಆಗಿದೆ. ಅತ್ಯಾಚಾರ ಆರೋಪಿ, ಮೊಮ್ಮಗ ಪ್ರಜ್ವಲ್ ಗೆದ್ದಿದ್ದರೆ, ಗೌಡರನ್ನು ಹಿಡಿಯುವವರೇ ಇರುತ್ತಿರಲಿಲ್ಲ. ಆದರೆ, ಜನರ ಅದುಮಿಟ್ಟ ಆಕ್ರೋಶ ಜ್ವಾಲಾಮುಖಿಯಾಗಿ ಹೊರಬಿದ್ದು ಗೌಡರ ಕುಟುಂಬಕ್ಕೆ ಸರಿಯಾದ ಪಾಠವನ್ನೇ ಕಲಿಸಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು

2023ರಲ್ಲಿ ಕರ್ನಾಟಕದ ಸಾರ್ವತ್ರಿಕ ಚುನಾವಣೆ ಎದುರಾದ ಗಳಿಗೆಯಲ್ಲಿ ಈದಿನ.ಕಾಂ ಎಂಬ ಜನರಿಂದಲೇ ಕಟ್ಟಲ್ಪಟ್ಟ ಪುಟ್ಟ ಸುದ್ದಿ ಸಂಸ್ಥೆ; ಕೇವಲ ಒಂದು ವರ್ಷ ಪ್ರಾಯದ ಸುದ್ದಿ ಸಂಸ್ಥೆ- ಚುನಾವಣಾಪೂರ್ವ ಸಮೀಕ್ಷೆಯಂತಹ ಬಹಳ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿತ್ತು. ಹಣಕಾಸಿನ ಬೆಂಬಲವಿಲ್ಲ, ಪತ್ರಿಕೋದ್ಯಮದಲ್ಲಿ ಪಳಗಿದ ಪತ್ರಕರ್ತರ ದಂಡೂ ಇಲ್ಲ. ಆದರೂ ಈದಿನ.ಕಾಂ ಈ ಸಮೀಕ್ಷೆಯ ಸವಾಲನ್ನು ಸ್ವೀಕರಿಸಿತ್ತು. ಕರ್ನಾಟಕದಾದ್ಯಂತ ಸುತ್ತಾಡಿ ಕರಾರುವಾಕ್ಕು ಫಲಿತಾಂಶ ನೀಡಿ, ನಂಬಿಕಾರ್ಹ ಸುದ್ದಿ ಸಂಸ್ಥೆ ಎನಿಸಿಕೊಂಡಿತ್ತು. ಜನರ ಹೃದಯದಲ್ಲಿ ಸ್ಥಾನ ಪಡೆದಿತ್ತು.

ಅದೇ ವಿಶ್ವಾಸದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ನಮ್ಮ ಈದಿನ.ಕಾಂ ಸರ್ವೇ ಕಾರ್ಯ ಕೈಗೆತ್ತಿಕೊಂಡಿತ್ತು. ಸುಮಾರು 42 ಸಾವಿರ ಸ್ಯಾಂಪಲ್ ಸರ್ವೇಯನ್ನು ಅಂತಿಮಗೊಳಿಸಲಾಗಿತ್ತು. ಇಡೀ ರಾಜ್ಯ ಸುತ್ತಾಡಿ, ಎಲ್ಲ ವರ್ಗದ ಜನರನ್ನು ಖುದ್ದು ಮಾತನಾಡಿಸಿ, ವೈಜ್ಞಾನಿಕ ವಿಧಾನ ಅಳವಡಿಸಿ ಸಮೀಕ್ಷೆ ಸಿದ್ಧಪಡಿಸಲಾಗಿತ್ತು. ಆ ಅಂಕಿ-ಅಂಶಗಳು ಹೇಳುವ ಸತ್ಯವನ್ನು ಜನರ ಮುಂದಿಡಲಾಗಿತ್ತು. ಆ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ 13ರಿಂದ 18 ಸ್ಥಾನಗಳನ್ನು ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 10ರಿಂದ 13 ಸ್ಥಾನಗಳನ್ನು ಗೆಲ್ಲುತ್ತದೆಂದು ಹೇಳಲಾಗಿತ್ತು. ನಮ್ಮ ಸಮೀಕ್ಷೆಯನ್ನು ತಲೆಕೆಳಗು ಮಾಡುವಂತೆ, ಪ್ರಿಪೋಲ್ ಮತ್ತು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಗೆಲ್ಲುವುದು 1ರಿಂದ 3 ಸ್ಥಾನ ಮಾತ್ರ ಎಂದಿದ್ದವು. ಆದರೆ ಅಂತಿಮವಾಗಿ ಕಾಂಗ್ರೆಸ್ 9, ಬಿಜೆಪಿ-ಜೆಡಿಎಸ್ 19 ಸ್ಥಾನಗಳನ್ನು ಗೆದ್ದಿದೆ. ಹಾಗಾಗಿ, ನಾವು ಹೇಳಿದ ಸಂಖ್ಯೆ ಸತ್ಯಕ್ಕೆ ಹತ್ತಿರವಾಗಿದ್ದರೂ, ಈ ಫಲಿತಾಂಶದಿಂದ ನಾವು ಕೂಡ ಪಾಠ ಕಲಿಯಬೇಕಾಗಿದೆ. ನಮ್ಮ ಸಮೀಕ್ಷೆಯಲ್ಲಿ ಆಗಿರಬಹುದಾದ ದೋಷವನ್ನು ತಿದ್ದಿಕೊಳ್ಳಲು, ಇದು ನಮಗೆ ಸಿಕ್ಕ ಅವಕಾಶವೆಂದು ನಾವು ಭಾವಿಸುತ್ತೇವೆ.

ಕಳೆದ ಮೂರು ತಿಂಗಳಿಂದ ದೇಶ ಚುನಾವಣೆ ಎಂಬ ಸುಗ್ಗಿಯ ಸಂಭ್ರಮದಲ್ಲಿತ್ತು. ಆ ಸಂಭ್ರಮದ ಸವಿ-ಸಾರ ಈಗ ಹೊರಬಿದ್ದಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಪಕ್ಷಗಳ ನಡುವಿನ ಯುದ್ಧವಲ್ಲ, ಆಡಳಿತಾತ್ಮಕ ವಿಚಾರಗಳಿಗಾಗಿ, ಜವಾಬ್ದಾರಿಯುತ ಸರ್ಕಾರಕ್ಕಾಗಿ ನಡೆಯುವ ಸರಳ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ಸೋತವರ ನಿರಾಸೆ, ನೋವನ್ನು ಗೆದ್ದವರು ಅರ್ಥ ಮಾಡಿಕೊಂಡು ಮಾನವೀಯವಾಗಿ ವರ್ತಿಸಬೇಕಾಗುತ್ತದೆ. ಅಧಿಕಾರಕ್ಕೆ ಏರುವವರು ಸಂಯಮ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸಬೇಕಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. You got ypur prediction of congress in Karantaka wrong in 2024. Instead of accepting your mistake you are writing about democracy. Learn from Axis My India Praddep Gupta.

    • ತಪ್ಪು ತಿದ್ದಿಕೊಳ್ಳಲು ನಮಗೂ ಕೂಡ ಅವಕಾಶ ಕೊಟ್ಟಿದೆ… ನಮ್ಮ ಸಮೀಕ್ಷೆಯೂ ತಪ್ಪಾಗಿದೆ ಎಂದೇ ಬರೆದಿರುವುದು, ಇರಲಿ. ನೀವು ನಮ್ಮ ವೆಬ್ ತಾಣಕ್ಕೆ ಭೇಟಿ ನೀಡಿ, ಪ್ರತಿಕ್ರಿಯಿಸಿರುವುದಕ್ಕೆ ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ...

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...