ಛಗನ್ ಭುಜಬಲ್ ಮಹಾರಾಷ್ಟ್ರ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ವ್ಯಕ್ತಿ. ಅಜಿತ್ ಪವಾರ್ ಬಣದ ಎನ್‌ಸಿಪಿ ನಾಯಕ ಕೂಡ. ಚುನಾವಣೆ ಮುಗಿದ ಮೇಲೆ ಮತ್ತು ಫಲಿತಾಂಶಕ್ಕೆ ಒಂದು ದಿನ ಮುಂಚೆ ಭುಜಬಲ್ ನೀಡಿದ ಹೇಳಿಕೆ ಗಮನಾರ್ಹ. “ಈ ಬಾರಿ ಬಿಜೆಪಿಗೆ ನಾಲ್ಕು ನೂರು ಸೀಟು (ಚಾರ್ ಸೌ ಪಾರ್) ಬರುತ್ತದೆ ಎಂದು ಪ್ರಚಾರ ಮಾಡಿದ್ದೇ ನಮಗೆ ಮುಳುವಾಗಿದೆ. ಮಹಾರಾಷ್ಟ್ರದಲ್ಲಿ ನಮಗೆ ಹಿನ್ನಡೆಯಾಗಲಿದೆ. ಬಿಜೆಪಿ ನಾಲ್ಕು ನೂರು ಸೀಟು ಗೆದ್ದರೆ ಸಂವಿಧಾನ ಬದಲಿಸುತ್ತಾರೆ, ಪ್ರಜಾತಂತ್ರ ಅಳಿಯುತ್ತದೆ ಎಂದು ದಲಿತರು ಭಾವಿಸಿದರು. ನಾವು ಅವರ ಮನವೊಲಿಸಲು ಪ್ರಚಾರದ ವೇಳೆ ಸಾಕಷ್ಟು ಪ್ರಯತ್ನಿಸಿದೆವು. ‘ಚಾರ್ ಸೌ ಪಾರ್’ ಅನ್ನಬಾರದಿತ್ತು” ಎಂದಿದ್ದರು ಭುಜಬಲ್.
ಬಿಜೆಪಿಯ ಹಿಡನ್ ಅಜೆಂಡಾವೇ ಸಂವಿಧಾನ ಬದಲಾವಣೆಯೆಂದು ಭಾವಿಸಲು ಮತ್ತು ಇದುವೇ ಬಿಜೆಪಿಯ ಮುಕ್ತ ಅಜೆಂಡಾ ಎಂದು ತಿಳಿಯುವುದಕ್ಕೆ ಕಾರಣವಾಗಿದ್ದು ಸ್ವತಃ ಬಿಜೆಪಿಗರು. ಸಂವಿಧಾನ ಬದಲಾವಣೆಗಾಗಿ ಮೋದಿಗೆ 400 ಸೀಟು ಕೊಡಿ ಎಂದು ಕರ್ನಾಟಕದ ಬಿಜೆಪಿ ಮುಖಂಡ ಅನಂತಕುಮಾರ್ ಹೆಗಡೆಯೇ ಸ್ಪಷ್ಟವಾಗಿ ಹೇಳಿದ್ದರು. ಇದೇ ರೀತಿಯ ಮಾತುಗಳನ್ನು ದೇಶದ ವಿವಿಧ ಭಾಗದಲ್ಲಿನ ಬಿಜೆಪಿ ಅಭ್ಯರ್ಥಿಗಳು ಆಡಿದರು. ಭುಜಬಲ್ ಆತಂಕ ನಿಜವಾಯಿತು. ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 30ರಲ್ಲಿ ಇಂಡಿಯಾ ಮೈತ್ರಿಕೂಟ ಗೆದ್ದು ಬೀಗಿದೆ. ತೀವ್ರ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನಾವಿಸ್ ರಾಜೀನಾಮೆ ನೀಡಿರುವ ಪ್ರಸಂಗವೂ ನಡೆದಿದೆ.
ಹಿಂಸಾತ್ಮಕ ಚುನಾವಣೆಗೆ ಸಾಕ್ಷಿಯಾದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 2% ಮತಗಳನ್ನು ಹೆಚ್ಚಿಸಿಕೊಂಡು ಕಳೆದ ಲೋಕಸಭಾ ಚುನಾವಣೆಗಿಂತ 7 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ. ಈಗ ಟಿಎಂಸಿಯ ಬಲ 29. ಉತ್ತರ ಪ್ರದೇಶವಂತೂ ಬಹುದೊಡ್ಡ ಸಂದೇಶವನ್ನೇ ನೀಡಿದೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಫಾರ್ಮೂಲಾವನ್ನು ಬಳಸಿದ ಎಸ್‌ಪಿ-ಕಾಂಗ್ರೆಸ್ ಪೀನಿಕ್ಸ್ ನಂತೆ ಪುಟಿದೆದ್ದಿವೆ. 80ರಲ್ಲಿ 43 ಕ್ಷೇತ್ರಗಳನ್ನು ಇಂಡಿಯಾ ಬಣ ಗೆದ್ದಿರುವುದು ಸಾಮಾನ್ಯ ಸಾಧನೆಯಂತೂ ಅಲ್ಲ.
‘ಚಾರ್ ಸೌ ಪಾರ್’ ಎಂಬುದು ವಾಸ್ತವದಲ್ಲಿ ಅತಿ ಉತ್ಸಾಹದ ಹೇಳಿಕೆಯೇನೂ ಆಗಿರಲಿಲ್ಲ. ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ಚುನಾವಣಾ ಕಣದ ನೈಜ ಸಮಸ್ಯೆಗಳು ಬದಿಗೆ ಸರಿಸಲು ಸೃಷ್ಟಿಸಿದ ರಾಜಕೀಯ ಘೋಷಣೆಯಾಗಿತ್ತು. ವಾಜಪೇಯಿಯವರು ಪ್ರಧಾನಿ ಹುದ್ದೆಯನ್ನು ಮರು ಏರುವ ಕನಸಿನಲ್ಲಿ ‘ಇಂಡಿಯಾ ಶೈನಿಂಗ್’ ಎಂಬ ಕಲ್ಪಿತ ಪ್ರಚಾರವನ್ನು ಮಾಡಿದ್ದಂತೆಯೇ ‘ಚಾರ್ ಸೌ ಪಾರ್’ ಕೂಡ ಇತ್ತು. ಆದರೆ ಮೋದಿಯ ಸರ್ವಾಧಿಕಾರಿ ಧೋರಣೆಗಳು ಹೆಚ್ಚಾಗುತ್ತವೆ ಎಂಬುದನ್ನು ಚಾರ್ ಸೌ ಪಾರ್ ಘೋಷಣೆ ರವಾನಿಸಿತ್ತು.
ದುರ್ಯೋಧನನ ತೊಡೆ ಮುರಿದ ಭೀಮಗದೆ ಮತದಾರರ ತೋರುಬೆರಳು. ಗರ್ವಪಡುತ್ತಿದ್ದ ಮೋದಿ ನೇತೃತ್ವದ ಬಿಜೆಪಿಯನ್ನು ದೊಡ್ಡ ಪಕ್ಷವಾಗಿ ಗೆಲ್ಲಿಸಿದರೂ, ಮಿತ್ರಪಕ್ಷಗಳ ಹಂಗಿನಲ್ಲಿ ಒದ್ದಾಡಬೇಕಾದ ರೀತಿ ಫಲಿತಾಂಶವನ್ನು ದೇಶದ ಜನ ನೀಡಿದ್ದಾರೆ. ನಿರೀಕ್ಷೆಯಂತೆ ಕರ್ನಾಟಕ, ಬಿಹಾರದಲ್ಲಿ ಇಂಡಿಯಾ ಬಣ ಹೆಚ್ಚು ಸೀಟುಗಳನ್ನು ಗೆದ್ದಿದ್ದರೆ ಮೋದಿಗೆ ಅಧಿಕಾರದ ಅವಕಾಶವೂ ದೊರಕುತ್ತಿರಲಿಲ್ಲ.ಪ್ರಚಂಡ ಬಹುಮತ ನೀಡಿದ ಯೂಪಿ ಜನತೆ ಈ ಬಾರಿ ಎನ್.ಡಿ.ಎ.ಗೆ ತಕ್ಕ ಪಾಠ ಕಲಿಸಿದ್ದಾರೆ. ರಾಮಮಂದಿರದ ಯಾವುದೇ ಎಫೆಕ್ಟ್ ಯೂಪಿಯಲ್ಲಿ ಆಗದಿರುವುದು ಈ ಸಲದ ಚುನಾವಣೆಯ ಬಹುದೊಡ್ಡ ಸಂದೇಶ.
ಮೋದಿ ಮಾಡಿದ ವಿಷಕಾರಿ ಭಾಷಣಗಳು, ಏಕಚಕ್ರಾಧಿಪತ್ಯದ ಅಹಂಕಾರ ಎಲ್ಲವಕ್ಕೂ ಉತ್ತರ ಸಿಕ್ಕಿದೆ. ಚಾರ್ ಸೌ ಪಾರ್ ಎಂಬುದು ಈಗ ಟೀಕೆಯ ವಸ್ತುವಾಗಿದೆ. ಈವರೆಗೆ ಯಾರ ಹಂಗೂ ಇಲ್ಲದೆ ಮೆರೆದ ಮೋದಿಗೆ ಇತರರನ್ನು ಸಂಭಾಳಿಸುವುದು ತಿಳಿದಿದೆಯೊ ಇಲ್ಲವೋ ಸದ್ಯಕ್ಕೆ ಅರ್ಥವಾಗಲ್ಲ. ಜೆಡಿಯು ನಾಯಕ ನಿತೀಶ್ ಯಾವಾಗ ಬೇಕಾದರೂ ಉಲ್ಟಾ ಹೊಡೆಯುವ ಆಸಾಮಿ. ಟಿಡಿಪಿಯ ಚಂದ್ರಬಾಬು ನಾಯ್ಡು ಕೂಡ ಇದಕ್ಕೆ ಹೊರತಲ್ಲ. ಅಧಿಕಾರ ಕಳೆದುಕೊಳ್ಳುವ ತೂಗುಗತ್ತಿಯನ್ನು ಮೋದಿಯ ತಲೆಯ ಮೇಲೆ ಕಟ್ಟಿರುವುದು ಸ್ವತಃ ಮೋದಿಯೇ ಹೊರತು, ಯಾವ ಹೊರಗಿನವರೂ ಅಲ್ಲ. ಅಧಿಕಾರ ಎಂದಿಗೂ ಅಸ್ಥಿರವೆಂದು ತಿಳಿದಿದ್ದರೆ ಗರ್ವಭಂಗದ ಭಯವೂ ಬರುತ್ತಿರಲಿಲ್ಲ.
ಕೊನೆಯ ಮಾತು: ಈ ಬಾರಿ ಅಸಲಿಯಾಗಿ ಚುನಾವಣೆ ನಡೆದದ್ದು ಮಹಾರಾಷ್ಟ್ರ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಎಂದು ರಾಜಕೀಯ ವಿಶ್ಲೇಷಕರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದರು. ಇದಕ್ಕೆ ಕರ್ನಾಟಕದ ಕಾಂಗ್ರೆಸ್ ಮತ್ತು ಬಿಹಾರದ ಆರ್.ಜೆ.ಡಿ ನಾಯಕರು ಕಿವಿಯಾಗಿ, ಚುನಾವಣಾ ತಂತ್ರಗಾರಿಕೆಗಳನ್ನು ರೂಪಿಸಿದ್ದರೆ, ಬಿಜೆಪಿಗೆ 240 ಬರುವುದಿರಲಿ, ಎನ್.ಡಿ.ಎ ಬಣಕ್ಕೆ ಮ್ಯಾಜಿಕ್ ನಂಬರ್ ಕೂಡ ಸಿಗುತ್ತಿರಲಿಲ್ಲ ಎಂಬುದು ವಾಸ್ತವ. ಚಾರ್ ಸೌ ಪಾರ್ ಎಂಬ ಅಧಿಕಾರದ ಧಿಮಾಕು ಫಲಿತಾಂಶದ ಮೂಲಕ ಕೊನೆಯಾಗಿದೆ. ಹೊಸ ಸರ್ಕಾರ ಹೀಗೆ ಅಸ್ಥಿರವಾಗಿರಲಿ ಎಂದು ಬಯಸೋಣ. ಅಸ್ಥಿರತೆ ಇದ್ದಾಗ ಮಾತ್ರ ಅಧಿಕಾರವಂತರು ಭಯದಲ್ಲಿರುತ್ತಾರೆ, ಒಂದಿಷ್ಟಾದರೂ ಜನಪರ ಕೆಲಸ ಮಾಡುತ್ತಾರೆ ಅಲ್ಲವೇ?
– ವೈ.ಬಿ