ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಬೆಂಗಳೂರಿನಲ್ಲಿಯೂ ಕೂಡ ಭಾರೀ ಮಳೆಯಾಗುತ್ತಿದೆ.
ನಗರದ ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ರಿಚ್‌ಮಂಡ್ ಟೌನ್ ಸೇರಿದಂತೆ ಅನೇಕ ಕಡೆಗಳಲ್ಲಿ ಗುರುವಾರ ತಡರಾತ್ರಿವರೆಗೂ ಸಾಧಾರಣ ಮಳೆಯಾಗಿದೆ. ಶುಕ್ರವಾರ ಬೆಳಿಗ್ಗೆ ಸಮಯವೂ ನಗರದ ಹಲವೆಡೆ ತುಂತುರು ಮಳೆಯಾಗಿದೆ. ರಾಜ್ಯದ ಹಲವೆಡೆ ಗುಡುಗು ಸಿಡಿಲಿನ ಜತೆಗೆ ಮಳೆ ಆರಂಭವಾಗಿದೆ.
ರಾಜ್ಯದಲ್ಲಿಯೂ ಕೂಡ ಮಳೆಯ ಅಬ್ಬರ ಜೋರಾಗಿದ್ದು, ಹಾಸನ ಜಿಲ್ಲೆಯಲ್ಲಿ ಸಿಡಿಲಿನಿಂದ ಮೂವರು ಮೃತಪಟ್ಟಿದ್ದರು. ಬಾಗಲಕೋಟೆಯ ಕುಳಗೇರಿ ಕ್ರಾಸ್‌ನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ವಸ್ತುಗಳೆಲ್ಲ ನೀರಿನಲ್ಲಿ ತೇಲಿ ಹೋಗಿವೆ. ಜನರು ರಾತ್ರಿಯೆಲ್ಲಾ ಜಾಗರಣೆ ಮಾಡಿ ಪರದಾಡಿದ್ದಾರೆ.
ಅಲ್ಲದೇ, ಯಲ್ಲಮ್ಮ ದೇವಿಯ ಗುಡ್ಡದಲ್ಲಿ ಗುಡುಗು, ಮಿಂಚು ಸಮೇತ ಜೋರು ಮಳೆಯ ಆಗಮನವಾಗಿದೆ. ಇದರಿಂದ ದೇವಸ್ಥಾನದ ಒಳಕ್ಕೆ ಮಳೆ ನೀರು ಜಲಪಾತದ ನೀರಿನಂತೆ ಭೋರ್ಗರೆದಿದೆ. ದೇವಸ್ಥಾನ ತಗ್ಗು ಪ್ರದೇಶದಲ್ಲಿ ಇರುವುದರಿಂದ ಗುಡ್ಡದ ಮೇಲೆ ಬಿದ್ದ ಮಳೆ ನೀರು ಸರಾಗವಾಗಿ ದೇವಸ್ಥಾನಕ್ಕೆ ನುಗ್ಗಿತು. ಇದರಿಂದ ದೇವಾಲಯ ನೀರಿನಿಂದ ಸಂಪೂರ್ಣ ಜಲಾವೃತವಾಗಿತ್ತು. ದೇವಸ್ಥಾನಕ್ಕೆ ಏಕಾಏಕಿ ಮಳೆನೀರು ನುಗ್ಗಿದ ಕಾರಣ ಭಕ್ತಾದಿಗಳು ಪರದಾಡುವಂತಾಯಿತು. ಅಲ್ಲದೇ, ರಾಮದುರ್ಗದ ಮಾಗನೂರಿನಲ್ಲಿ ಮಳೆಯಿಂದಾಗಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಸಂತ್ರಸ್ತೆ ಅಪಹರಣ ಪ್ರಕರಣ | ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು
ಕೋಲಾರದ ಮಾಲೂರು ತಾಲೂಕಿನ ಹುಣಸಿನ ಕೋಟೆಯಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮತ್ತೊಂದೆಡೆ, ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಚಾಮರಾಜನಗರದ ಅಂಡಿಪಾಳ್ಯ ಬಳಿ ಜಡೆತಡಿ ಹಳ್ಳ ಉಕ್ಕಿ ಹರಿದಿದೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಬೆಂಗಳೂರಿನಲ್ಲಿ ಗುರುವಾರ ರಾತ್ರಿಯೂ ಕೂಡ ಮಳೆಯಾಗಿದೆ. ಜೂನ್ 7ರಂದು ಬೆಳಗ್ಗೆ ಕೂಡ ಜಿಟಿ ಜಿಟಿ ಮಳೆ ಇದೆ. ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಹಲವೆಡೆ ಇಂದು ಭಾರೀ ಮಳೆಯಾಗುವ ನಿರೀಕ್ಷೆ ಇದ್ದು ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.