ಜೂನ್ 08 ರಿಂದ 11 ರ ವರೆಗೆ ಕಲಬುರಗಿ ಜಿಲ್ಲೆಗೆ (ಈಶಾನ್ಯ ಕರ್ನಾಟಕ ಭಾಗಕ್ಕೆ) ಭಾರತೀಯ ಹವಾಮಾನ ಇಲಾಖೆಯಿಂದ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಿಸಿರುವ ಕಾರಣ ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.
ಭಾರತೀಯ ವಾಯುಮಾನ ಇಲಾಖೆ ಜೂ.9 ರಿಂದ ಜೂ.11ರವರೆಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದಲ್ಲದೇ ಹವಾಮಾನದ ಪರಿಸ್ಥಿತಿಗೆ ಅನುಗುಣವಾಗಿ ಎಚ್ಚರಿಕೆಯಲ್ಲಿ ಬದಲಾವಣೆಯಾಗುತ್ತದೆ. ಹಾಗಾಗಿ, ರೈತರು ಹಾಗೂ ಸಾರ್ವಜನಿಕರು ಬದಲಾಗುತ್ತಿರುವ ಎಚ್ಚರಿಕೆಯನ್ನು ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಯಿಂದ ಹಾನಿಯಾಗುವ ಸಾಧ್ಯತೆಗಳು:
ಸ್ಥಳೀಯವಾಗಿ ಇಳಿಜಾರು ಪ್ರದೇಶಗಳಲ್ಲಿ ಹೆಚ್ಚು ನೀರು ತುಂಬಿಕೊಳ್ಳುವ, ಕೆಳ ಹಂತದ ರಸ್ತೆಗಳು ನೀರಿನಿಂದ ಮುಳುಗುವ ಸಾಧ್ಯತೆ ಇರುತ್ತದೆ, ರೈಲ್ವೆ, ರಸ್ತೆಯ ಕೆಳಸೇತುವೆ ಮುಳುಗಡೆಯಾಗಿ ರಸ್ತೆ ಬಂದಾಗುವ ಸಾಧ್ಯತೆ ಇರುತ್ತದೆ. ಅತೀ ಹೆಚ್ಚಿನ ಮಳೆ ಇರುವುದರಿಂದ ವಾಹನ ಸವಾರರಿಗೆ ರಸ್ತೆ ಕಾಣದೇ ಇರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಳೆಯಿಂದ ರಸ್ತೆಗಳು ನೀರಿನಿಂದ ತುಂಬಿಕೊಳ್ಳುವ ಕಾರಣ ಕಲಬುರಗಿ ನಗರ, ಪಟ್ಟಣ ಪ್ರದೇಶದಲ್ಲಿ ವಾಹನ ದಟ್ಟಣೆಯಾಗುವ ಸಾಧ್ಯತೆ ಇರುತ್ತದೆ. ಮಳೆ ನೀರಿನಿಂದ ರಸ್ತೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಅಪಾಯದಲ್ಲಿರುವ ಹಳೆ ಕಟ್ಟಡಗಳು ಕುಸಿಯುವ ಸಾಧ್ಯತೆಯಿರುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತ ಹಾಗೂ ಕೆಸರುಗದ್ದೆಯಾಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಳೆಯಿಂದ ನದಿಯ ಪ್ರವಾಹ ಅಗುವ ಸಾಧ್ಯತೆ ಇರುತ್ತದೆ. ಗುಡುಗು, ಮಿಂಚು ಸಹಿತ ಸಿಡಿಲು ಬೀಳುವ ಸಾಧ್ಯತೆ ಇರುತ್ತದೆ.
ಸಾರ್ವಜನಿಕರು ತೆಗೆದುಕೂಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು:
ವಾಹನ ಸವಾರರು ಅತೀ ಹೆಚ್ಚು ನೀರು ಬರುವ ಪ್ರದೇಶದ ಕಡೆಗೆ ಅಥವಾ ನದಿ ದಡಗಳಲ್ಲಿ ಸಂಚರಿಸಬಾರದು. ಸಂಚಾರಿ ನಿಯಮಗಳನ್ನು ಅನುಸರಿಸುವುದು. ಹೆಚ್ಚು ನೀರು ತುಂಬಿಕೊಳ್ಳುವ, ಕೆಳ ಹಂತದ ಹಾಗೂ ಇಳಿಜಾರು ಪ್ರದೇಶದಲ್ಲಿ ವಾಸಿಸುವವರು ಸುರಕ್ಷತೆ ಸ್ಥಳಗಳಿಗೆ ಸ್ಥಳಾಂತರಗೊಳ್ಳುವುದು. ಹಳೆಯ ಕಟ್ಟಡ ಅಥವಾ ಕಚ್ಚಾ ಮನೆಗಳಲ್ಲಿ ವಾಸಿಸಬಾರದು. ಸಿಡಿಲು ಬೀಳುವ ಸಂಭವವಿರುವುದರಿಂದ ದನಕರಗಳನ್ನು ಸುರಕ್ಷಿತ ಜಾಗಗಳಲ್ಲಿ ಇರಿಸುವುದು ಹಾಗೂ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಬಾರದು.
“ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದ ಹಾಗೆ ಮುನ್ನಚ್ಚರಕೆವಹಿಸುವುದು. ನಿರಂತರ ಹೆಚ್ಚಿನ ಮಳೆಯಿಂದ ಅಪಾಯದಲ್ಲಿರುವ ಹಳೆಯ ಮನೆ ಗೋಡೆಗಳು ಹಾಗೂ ಇತರೆ ಕಟ್ಟಡಗಳು ಕುಸಿಯುವ ಸಾಧ್ಯತೆ ಇರುತ್ತದೆ. ಆದುದರಿಂದ ಸಾರ್ವಜನಿಕರು ಸುರಕ್ಷತೆಯ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳುವುದು. ತೋಟಗಾರಿಕೆ ಬೆಳೆಗಳು ಹಾಗೂ ಇತರೆ ಬೆಳೆಗಳು ಹೆಚ್ಚಿನ ಮಳೆಯಿಂದ ನೀರು ನಿಂತು ಬೆಳೆ ಹಾಳಾಗುವ ಸಾಧ್ಯತೆ ಇರುತ್ತದೆ. ಬಸಿಗಾಲುವೆಗಳ ಮೂಲಕ ನೀರನ್ನು ಜಮೀನುಗಳಿಂದ ಹೊರಹಾಕಬೇಕು” ಎಂದು ಮನವಿ ಮಾಡಿದ್ದಾರೆ.