ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ರಾಮ್ ವಿಲಾಸ್) ಐದು ಸ್ಥಾನಗಳಲ್ಲಿ ಸ್ಪರ್ಧಿಸಿ, ಐದರಲ್ಲೂ ಗೆಲುವು ಸಾಧಿಸಿದೆ. ಎಲ್‌ಜೆಪಿಯ ಐವರು ಸಂಸದರಲ್ಲಿ ಒಬ್ಬರಾದ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರು ಮೋದಿ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ ಎಂದು ವರದಿಯಾಗಿದೆ.
ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿ ಅವರು ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನವೇ ಪಾಸ್ವಾನ್ ಅವರಿಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಂದ ಕರೆ ಬಂದಿದ್ದು, ಪ್ರಧಾನಿ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಸ್ವಾನ್ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ, ಮೊದಲ ಮತ್ತು ಎರಡನೇ ಅವಧಿಯ ಮೋದಿ ಸರ್ಕಾರಗಳಲ್ಲಿ ಚಿರಾಗ್ ಪಾಸ್ವಾನ್ ಅವರಿಗೆ ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಆದರೆ, ಅವರು ತಮ್ಮ ತಂದೆ, ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಮಂತ್ರಿಗಿರಿಯನ್ನು ಬಿಟ್ಟುಕೊಟ್ಟಿದ್ದರು. ಆದರೆ, 2020ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರು ಕೊನೆಯುಸಿರೆಳೆದರು.
ರಾಮ್ ವಿಲಾಸ್ ಅವರ ಸಾವಿನ ಬಳಿಕ ಕುಟುಂಬದೊಳಗೆ ಕಲಹ ಉಂಟಾಗಿತ್ತು. ಚಿರಾಗ್ ಪಾಸ್ವಾನ್ ಮತ್ತು ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ಇಬ್ಬರ ನಡುವಿನ ವೈಮನಸ್ಸಿನಿಂದ ಪಕ್ಷವು ಇಬ್ಬಾಗವಾಯಿತು. ಬಿಜೆಪಿ ಪಶುಪತಿ ಅವರ ಪರವಾಗಿ ನಿಂತರೂ, ಚಿರಾಗ್ ಅವರು ಎನ್‌ಡಿಎಗೆ ತಮ್ಮ ಬೆಂಬಲವನ್ನು ಮುಂದುವರೆಸಿದ್ದರು. ಅಲ್ಲದೆ, ತಮ್ಮ ಬಣವನ್ನು ಬಲಗೊಳಿಸಲು, ಜನಸಂಪರ್ಕ ಸಾಧಿಸಲು ‘ಬಿಹಾರ್ ಫಸ್ಟ್, ಬಿಹಾರಿ ಫಸ್ಟ್’ ಅಭಿಯಾನ ಪ್ರಾರಂಭಿಸಿದ್ದರು.
2024ರ ಲೋಕಸಭಾ ಚುನಾವಣೆಗೂ ಮುನ್ನ, ಜಾತಿ ಲೆಕ್ಕಾಚಾರದಲ್ಲಿ ಬಿಹಾರದಲ್ಲಿ ಹೆಚ್ಚು ಮತಗಳನ್ನು ಸೆಳೆಯಲು ಚಿರಾಗ್ ಬಣ ಪ್ರಬಲವಾಗಿ ಎಂದು ಭಾವಿಸಿದ ಬಿಜೆಪಿ, ಚಿರಾಗ್ ಜೊತೆಗೂ ಸೀಟು ಹಂಚಿಕೆ ಮಾಡಿಕೊಂಡು, ಹೋರಾಟ ನಡೆಸಿತು. ಈಗ, ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲು ಸಾಧ್ಯವಾಗ ಹಿನ್ನೆಲೆ, ಚಿರಾಗ್ ಅವರಂತಹ ಸಣಣ ಮಿತ್ರಪಕ್ಷಗಳು ಸರ್ಕಾರ ರಚಿಸಲು ಬಿಜೆಪಿಗೆ ಬಲ ನೀಡಿವೆ.
ಹೀಗಾಗಿ, ಮೋದಿ ನೇತೃತ್ವದ ಹೊಸ ಸರ್ಕಾರದಲ್ಲಿ ಚಿರಾಗ್ ಪಾಸ್ವಾನ್ ಅವರಿಗೆ ಮಂತ್ರಿಗಿರಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ.