ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರವಿವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಜೋರು ಮಳೆಯಾಗಿದೆ. ಸಾಯಂಕಾಲವೂ ಕೂಡ ಮತ್ತೆ ಮಳೆಯಾವಾಗುವ ಸಾಧ್ಯತೆಯಿದೆ.
ಸದ್ಯ ನಗರದಲ್ಲಿ ತಂಪಾದ ವಾತಾವರಣ ತುಂಬಿದೆ. ಬೆಂಗಳೂರಿನ ಗೋವಿಂದರಾಜನಗರ, ಪ್ರಕಾಶನಗರ, ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ, ಲಾಲ್ಬಾಗ್, ಹೆಬ್ಬಾಳ, ಮಲ್ಲೇಶ್ವರಂ, ರಾಜಾಜಿನಗರ ಸದಾಶಿವನಗರ, ಶಿವಾಜಿನಗರ, ಮೆಜೆಸ್ಟಿಕ್, ಶಾಂತಿನಗರ, ವಿಧಾನಸೌಧ, ಹೆಬ್ಬಾಳ, ಯಲಹಂಕ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ.
ಮಧ್ಯಾಹ್ನ ಏಕಾಏಕಿ ಮಳೆಯಾದ ಹಿನ್ನೆಲೆ, ವಾಹನ ಸವಾರರು ಅಂಡರ್‌ಪಾಸ್, ಅಂಗಡಿ ಬದಿ, ಮರದ ಕೆಳಗಡೆ ಮಳೆಯಿಂದ ತಪ್ಪಿಸಿಕೊಳ್ಳಲು ಆಶ್ರಯ ಪಡೆದಿದ್ದಾರೆ. ಜತೆಗೆ, ಬೆಂಗಳೂರಿನಲ್ಲಿ ಇನ್ನು ಮೂರು ದಿನಗಳ ಕಾಲ ಮಳೆಯಾಗಲಿದ್ದು, ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಿದೆ.
ನಗರದಲ್ಲಿ ಸದ್ಯ ಗಾಳಿಯ ಜತೆಗೆ ಮಳೆ ಆರಂಭವಾಗಿದ್ದು, ಮಳೆಯಿಂದ ಮತ್ತೆ ಮರ ಗಿಡಗಳು ಬೀಳುವ ಆತಂಕವೂ ಎದುರಾಗಿದೆ. ಮಳೆಯಿಂದಾಗಿ ತಂಪಾದ ವಾತಾವರಣ ಆವರಿಸಿದ್ದು, ಜನರು ಟೀ-ಕಾಫಿ ಅಂಗಡಿಗಳ ಮುಂದೆ ಸೇರಲು ಶುರು ಮಾಡಿದ್ದಾರೆ. ಅಲ್ಲದೆ, ಮಿರ್ಚಿ ಬೊಂಡಾ ಹೀಗೆ ಕರಿದ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.
ಕಳೆದ ಭಾನುವಾರವೂ ಏಕಾಏಕಿ ಮಳೆ ಸುರಿದಿದೆ. ಈ ವೇಳೆ, ಹಲವಾರು ಮರಗಳು ನೆಲಕ್ಕೊರಗಿದ್ದವು. ಜತೆಗೆ, ಅನೇಕ ವಾಹನ ಹಾಗೂ ಮನೆಗಳು ಹಾನಿಗೊಳಗಾಗಿದ್ದವು. ರಸ್ತೆಗಳಲ್ಲಿ ನೀರು ನಿಂತು ತಗ್ಗು ಪ್ರದೇಶದ ಮನೆಗಳಿಗೆ ಪ್ರವಾಹದಂತೆ ಮಳೆ ನೀರು ಹರಿದಿತ್ತು. ಇದೀಗ, ನಗರದಲ್ಲಿ ಮಳೆ ಬಿತ್ತೆಂದರೆ, ಅವಾಂತರ ಸೃಷ್ಟಿಯಾಗಬಹುದು ಎಂಬ ಭಯದಲ್ಲಿ ನಗರದ ನಾಗರೀಕರು ಇದ್ದಾರೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸುಳಿಗಾಳಿ ಪರಿಣಾಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮೂರು ದಿನಗಳ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜೂ.11ರವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದೆ.
ಈ ಸುದ್ದಿ ಓದಿದ್ದೀರಾ? ನೀಟ್ ಪರೀಕ್ಷೆ ವಿವಾದ| ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗುತ್ತೇನೆ: ವಿದ್ಯಾರ್ಥಿಗಳಿಗೆ ರಾಹುಲ್ ಭರವಸೆ
ರಾಜ್ಯದಲ್ಲಿ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿಲಾಗಿದೆ. ಕರಾವಳಿ ತೀರದಲ್ಲಿ ಮೀನುಗಾರಿಕೆ ಮಾಡಲು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜೂನ್ 12ವರೆಗೆ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಗದಗ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.