ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕಟ್ಟಾ ಬೆಂಬಲಿಗ ಎಂದೇ ಒಡಿಶಾದಲ್ಲಿ ಪರಿಚಿತರಾಗಿದ್ದ ವಿ ಕೆ ಪಾಂಡಿಯನ್ ಅವರು ತಮ್ಮ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ. ಒಡಿಶಾದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಡಿ ಸೋಲು ಕಂಡ ನಂತರ ಪಾಂಡಿಯನ್ ಈ ನಿರ್ಧಾರ ಕೈಗೊಂಡಿದ್ದಾರೆ.
“ಈಗ ನಾನು ಪ್ರಜ್ಞಾಪೂರ್ವಕವಾಗಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಸಲು ನಿರ್ಧರಿಸಿದ್ದೇನೆ. ನನ್ನ ಈ ಹಾದಿಯಲ್ಲಿ ಯಾರಿಗಾದರೂ ನೋವು ಮಾಡಿದ್ದರೆ ನನ್ನನ್ನು ಕ್ಷಮಿಸಿ. ನನ್ನ ಪ್ರಚಾರದ ನಿರೂಪಣೆ ತಪ್ಪಾಗಿ ಬಿಜೆಡಿ ಪಕ್ಷ ಸೋಲು ಕಂಡಿದ್ದರೆ ನನ್ನನ್ನು ಕ್ಷಮಿಸಿ” ಎಂದು ವಿಡಿಯೋ ಸಂದೇಶದಲ್ಲಿ ವಿ ಕೆ ಪಂಡಿಯನ್ ತಿಳಿಸಿದ್ದಾರೆ.
ಬಿಜು ಜನತಾದಳ ಹಾಗೂ ಒಡಿಶಾದ 5ಟಿ ಯೋಜನೆಯ ಅಧ್ಯಕ್ಷರಾದ ವಿ ಕೆ ಪಾಂಡಿಯನ್,” ನಾನು ಒಂದು ಸಣ್ಣ ಹಳ್ಳಿಯ ಅತೀ ವಿನಮ್ರ ಕುಟುಂಬದಿಂದ ಬಂದಿದ್ದೇನೆ. ಚಿಕ್ಕಂದಿನಿಂದಲೂ ನನ್ನ ಕನಸು ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡುವುದಾಗಿತ್ತು. ಜಗನ್ನಾಥ ದೇವನಿಂದ ಇದು ಸಾಧ್ಯವಾಯಿತು. ನಾನು ಒಡಿಶಾ ಮಣ್ಣಿಗೆ ಕಾಲಿಟ್ಟಾಗ ಇಲ್ಲಿನ ಜನ ಅಪಾರ ಪ್ರೀತಿ ಹಾಗೂ ಗೌರವದಿಂದ ನನ್ನನ್ನು ಬರಮಾಡಿಕೊಂಡರು. ಜನರಿಗಾಗಿ ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ” ಎಂದು ಸಂದೇಶದಲ್ಲಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ
ಇದೇ ಸಂದರ್ಭದಲ್ಲಿ ನವೀನ್ ಪಟ್ನಾಯಕ್ ಬಗ್ಗೆ ಮಾತನಾಡಿರುವ ಪಾಂಡಿಯನ್, ನನ್ನ ಜೀವನದುದ್ದಕ್ಕೂ ಅವರಿಂದ ಅನುಭವ ಹಾಗೂ ಪಾಠಗಳನ್ನು ಕಲಿತ್ತಿದ್ದೇನೆ. ಅವರ ಅನುಗ್ರಹ, ನಾಯಕತ್ವ, ನೈತಿಕತೆ ಒಳಗೊಂಡಂತೆ ಒಡಿಶಾದ ಜನರಿಗೆ ಸದಾ ತೋರುತ್ತಿರುವ ಪ್ರೀತಿ ಎಲ್ಲವೂ ನನಗೆ ಸ್ಪೂರ್ತಿಯಾಗಿದೆ. ಅವರ ನಿರೀಕ್ಷೆಯಂತೆ ನಾನು ಕೈಗೊಂಡ ಕೆಲಸಗಳು ಒಡಿಶಾ ಹಲವು ಕ್ಷೇತ್ರಗಳು ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಒಡಿಶಾದ ವಿಧಾನಸಭಾ ಚುನಾವಣೆಯಲ್ಲಿ 147 ಕ್ಷೇತ್ರಗಳ ಪೈಕಿ ಬಿಜೆಪಿ 78 ಸ್ಥಾನಗಳಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದರೆ, ಆಡಳಿತರೂಢ ಬಿಜೆಡಿ 51 ಸ್ಥಾನ ಗಳಿಸಲಷ್ಟೆ ಸಾಧ್ಯವಾಗಿತ್ತು.
ತಮಿಳುನಾಡು ಮೂಲದವರಾದ ವಿ ಕೆ ಪಾಂಡಿಯನ್ ಐಎಎಸ್ ಅಧಿಕಾರಿಯಾಗಿ 1991ರಲ್ಲಿ ಒಡಿಶಾಗೆ ನಿಯೋಜನೆಗೊಂಡಿದ್ದರು.
