ಗುಜರಾತ್ ತನ್ನದೇ ಪಾಳೆಯಪಟ್ಟು ಎಂಬ ಬಿಜೆಪಿಯ ಭಾರೀ ದುರಹಂಕಾರಕ್ಕೆ ಪೆಟ್ಟು ನೀಡಿರುವಾಕೆ ಕಾಂಗ್ರೆಸ್ಸಿನ ಗೇಣಿಬೆನ್ ಠಾಕೂರ್ ಎಂಬ ಮಹಿಳೆ. ಚುನಾವಣೆಯ ವೆಚ್ಚವನ್ನು ಮತದಾರರೇ ವಂತಿಗೆಯ ಮೂಲಕ ಭರಿಸಿ ಗೆಲ್ಲಿಸಿರುವ ಅಪರೂಪದ ಉಮೇದುವಾರ್ತಿ ಈಕೆ.
ಕಾಂಗ್ರೆಸ್ ಪಕ್ಷ ಗೆದ್ದರೆ ಸಂಪತ್ತಿನ ಮರುಹಂಚಿಕೆ ಮಾಡುತ್ತದೆ. ನಿಮ್ಮ ಅರ್ಧಕ್ಕರ್ಧ ಆಸ್ತಿಪಾಸ್ತಿಯನ್ನು ಕಿತ್ತುಕೊಂಡು ಮುಸಲ್ಮಾನರಿಗೆ ಹಂಚುತ್ತದೆ ಎಂದು ನರೇಂದ್ರ ಮೋದಿಯವರು ಸುಳ್ಳು ಪ್ರಚಾರ ಮಾಡಿದ್ದು ತಮ್ಮದೇ ಗುಜರಾತಿನ ನೆಲ ಬನಸ್ಕಾಂತದಲ್ಲಿ. ನಿಮ್ಮ ಬಳಿ ಎರಡು ಎಮ್ಮೆಗಳಿದ್ದರೆ ಒಂದನ್ನು ಕಾಂಗ್ರೆಸ್ ಕಸಿದುಕೊಳ್ಳಲಿದೆ ಎಂದು ಹೆದರಿಸಿದ್ದರು. ಬನಸ್ಕಾಂತ ಲೋಕಸಭಾ ಕ್ಷೇತ್ರದ ಮತದಾರರು ಈ ಸುಳ್ಳನ್ನು ತಿರಸ್ಕರಿಸಿದ್ದಾರೆ. ಗುಜರಾತ್ ತನ್ನದೇ ಪಾಳೆಯಪಟ್ಟು ಎಂಬ ಬಿಜೆಪಿಯ ಭಾರೀ ದುರಹಂಕಾರಕ್ಕೆ ಪೆಟ್ಟು ನೀಡಿರುವಾಕೆ ಕಾಂಗ್ರೆಸ್ಸಿನ ಗೇಣಿಬೆನ್ ಠಾಕೂರ್ ಎಂಬ ಮಹಿಳೆ. ಬಿಜೆಪಿಯ ರೇಖಾ ಚೌಧರಿಯವರನ್ನು ಸೋಲಿಸಿದ್ದಾರೆ. ಲೋಕಸಭಾ ಚುನಾವಣೆಗಳಲ್ಲಿ ಸತತ ಮೂರನೆಯ ಬಾರಿಗೆ ಗುಜರಾತನ್ನು ಗುಡಿಸಿ ಹಾಕುವ ಬಿಜೆಪಿಯ ಹ್ಯಾಟ್ರಿಕ್ ಮಹದಾಸೆಗೆ ತಣ್ಣೀರು ಎರಚಿದ್ದಾರೆ. ಕಲ್ಲುಮುಳ್ಳುಗಳ ಕಷ್ಟದ ಹಾದಿ ಸವೆಸಿ ಜಯಿಸಿದ್ದಾರೆ.
ಚುನಾವಣೆಯ ವೆಚ್ಚವನ್ನು ಮತದಾರರೇ ವಂತಿಗೆಯ ಮೂಲಕ ಭರಿಸಿ ಗೆಲ್ಲಿಸಿರುವ ಅಪರೂಪದ ಉಮೇದುವಾರ್ತಿ ಈಕೆ. ಮತದಾರರಿಗೆ ಹಣ ನೀಡಿ ಚುನಾವಣೆ ಗೆಲ್ಲುವ ಈ ದಿನಗಳಲ್ಲಿ ವೋಟು ಮತ್ತು ನೋಟು ಎರಡರಲ್ಲೂ ಮತದಾರರ ಆಶೀರ್ವಾದ ಪಡೆದಾಕೆ. ಜಾತಿಬಲವನ್ನು ಆಧರಿಸದೆ ಜನಬಲವನ್ನು ಆಧರಿಸುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ಅನುಸರಿಸಬೇಕು. ಪಕ್ಷವಿರೋಧಿಗಳನ್ನು ಹೊರಹಾಕಬೇಕು, ಇಲ್ಲವೇ ಶಿಕ್ಷಿಸಲೇಬೇಕು ಎನ್ನುವಾಕೆ. ಹತ್ತು ವರ್ಷಗಳಿಂದ ರಾಜ್ಯದಲ್ಲಿ ಸೋಲನ್ನು ಮಾಲೆಯಾಗಿ ಧರಿಸಿರುವ ಕಾಂಗ್ರೆಸ್ಸಿಗೆ ಹೊಸ ಹುರುಪು ತುಂಬಿರುವಾಕೆ. ಗೇಣಿಬೆನ್ ಬಾಳ ಸಂಗಾತಿ ಶಂಕರಜಿ ಮಧ್ಯಮವರ್ಗದ ರೈತ.
ಚುನಾವಣಾ ವೆಚ್ಚಕ್ಕೆ ಪಕ್ಷದ ಬಳಿ ಹಣವಿರಲಿಲ್ಲ. ಸುಮಾರು 50 ಲಕ್ಷ ರುಪಾಯಿಗಳನ್ನು ಮತದಾರರಿಂದ ವಂತಿಗೆ ಎತ್ತಿ ಖರ್ಚು ಮಾಡಿದ್ದಾರೆ ಗೇಣಿಬೆನ್.
ಬಿಜೆಪಿಯ ಜೊತೆಗೆ ಈಕೆ ಎದುರಿಸಿ ಗೆದ್ದದ್ದು ಅಕ್ರಮ ಮದ್ಯ ತಯಾರಿಕೆಯ ಲಾಬಿಯನ್ನು. ಪೊಲೀಸರು ಮತ್ತು ಸಹಕಾರಿ ಸಂಘಸಂಸ್ಥೆಗಳ ಬೆಂಬಲವಿರುವ ಲಾಬಿಯಿದು. ಈ ಕಾರಣಕ್ಕಾಗಿ ಗೇಣೆಬೆನ್ ಗೆಲುವು ಮಹತ್ವದ್ದು ಎನ್ನುತ್ತಾರೆ ಹೋರಾಟಗಾರ ಮತ್ತು ಶಾಸಕ ಜಿಗ್ನೇಶ್ ಮೇವಾನಿ. ಬನಸ್ಕಾಂತಾ ಲೋಕಸಭಾ ಕ್ಷೇತ್ರದ ವಡಗಾಮ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ ಜಿಗ್ನೇಶ್. ಮೇವಾನಿಯವರನ್ನು ಸೋಲಿಸಲು ಎಲ್ಲ ಸಂಪನ್ಮೂಲಗಳು, ತಂತ್ರಗಳನ್ನು ಹೆಣೆದರೂ ವಿಫಲವಾಗಿತ್ತು ಬಿಜೆಪಿ.
ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವ ಕ್ಷತ್ರಿಯ ಕುಲದವರು. ಸಣ್ಣ ಹಿಡುವಳಿಗಳಲ್ಲಿ ಬೇಸಾಯ ಮಾಡುವವರು ಇಲ್ಲವೇ ಕೃಷಿ ಕೂಲಿಯನ್ನು ನೆಚ್ಚಿದ ಸಮುದಾಯವಿದು. ಇಂತಹ ಕೆಳಮಧ್ಯಮವರ್ಗದ ಕುಟುಂಬವೊಂದರ ಕುಡಿ ಗೇಣಿಬೆನ್. ಬೇರುಮಟ್ಟದ ಕಾರ್ಯಕರ್ತೆಯಾಗಿ ಕಾಂಗ್ರೆಸ್ ಸೇರಿದ್ದರು. 2012ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಐದು ವರ್ಷಗಳ ತರುವಾಯ ಪ್ರಭಾವಿ ಸಚಿವ ಶಂಕರಭಾಯಿ ಚೌಧರಿ ಅವರನ್ನು ಸೋಲಿಸಿದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೋಚನೀಯವಾಗಿ ಸೋತರೂ ಗೇಣಿಬೆನ್ ಗೆದ್ದಿದ್ದರು.
ಈಕೆಯ ಜನಪ್ರಿಯತೆ, ಹೋರಾಟದ ಮನೋಭಾವ ಮತ್ತು ಗೆಲುವಿನ ಛಲವನ್ನು ಗುರುತಿಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಬನಸ್ಕಾಂತಾ ಲೋಕಸಭೆ ಚುನಾವಣಾ ಕಣಕ್ಕೆ ಇಳಿಸಿತ್ತು. 2009ರಲ್ಲಿ ಕಾಂಗ್ರೆಸ್ ಪಾಲಾಗಿದ್ದ ಈ ಕ್ಷೇತ್ರ ಪುನಃ ಕೈತಪ್ಪಿ ಹೋಗಿತ್ತು. ಗೇಣಿಬೆನ್ ಗೆ ಜನಪ್ರಿಯತೆ, ಜಾತಿ ಬೆಂಬಲವಿದ್ದರೂ ಧನಬಲವಿರಲಿಲ್ಲ. ಅದರಲ್ಲೂ ಬಿಜೆಪಿಯ ಹಣಬಲ ಸಾಟಿಯಿಲ್ಲದ್ದಾಗಿತ್ತು. ಸಂಘಟನಾ ಬಲದಲ್ಲೂ ಬಿಜೆಪಿಗೆ ಎದುರಿಲ್ಲವಾಗಿತ್ತು. ಗ್ರಾಮೀಣ ಚಹರೆಯ ಬನಾಸ್ಕಾಂತ ಜಿಲ್ಲೆ ಪಶುಸಂಗೋಪನೆ ಮತ್ತು ಹೈನುಗಾರಿಕೆಗೆ ಹೆಸರಾದದ್ದು. ಯಶಸ್ವೀ ಅಮುಲ್ ಬ್ರ್ಯಾಂಡ್ ರೂಪಿಸಿರುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಸಂಘಗಳ ಒಕ್ಕೂಟದಲ್ಲಿ ಬನಾಸ್ ಡೇರಿಯದು ಬಹುದೊಡ್ಡ ವಹಿವಾಟು.
ಬನಾಸ್ ಸಹಕಾರಿ ಬ್ಯಾಂಕ್ ಮತ್ತು ಬನಾಸ್ ಡೇರಿಯ ಮೇಲಿನ ತನ್ನ ಬಿಗಿ ಹಿಡಿತವನ್ನು ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತ ಬಂದಿದೆ ಬಿಜೆಪಿ. ಬಿಜೆಪಿಯ ರೇಖಾ ಚೌಧರಿ ಹೆಸರಿಗೆ ಮಾತ್ರ ಬಿಜೆಪಿ ಪ್ರತಿಸ್ಪರ್ಧಿ. ಆಕೆಯ ಹಿಂದಿದ್ದ ದೊಡ್ಡ ಕುಳ ಶಂಕರ ಚೌಧರಿ. ಅಸಲಿಗೆ ಗೇಣಿಬೆನ್ ಸೆಣೆಸಬೇಕಿದ್ದುದು ಶಂಕರ ಚೌಧರಿಯವರ ಹಣಬಲ ತೋಳ್ಬಲಗಳನ್ನು. ಶಂಕರ ಚೌಧರಿ ಗುಜರಾತ್ ವಿಧಾನಸಭೆಯ ಸ್ಪೀಕರ್. 15 ಸಾವಿರ ಕೋಟಿ ರುಪಾಯಿಗಳ ವಾರ್ಷಿಕ ವಹಿವಾಟು ಹೊಂದಿದ ಬನಾಸ್ ಡೇರಿಯ ಮುಖ್ಯಸ್ಥ ಹಾಗೂ ಗುಜರಾತ್ ರಾಜ್ಯ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ. ಉತ್ತರ ಗುಜರಾತಿನ ಬನಾಸ್ಕಾಂತ, ಮೆಹಸಾಣ, ಹಾಗೂ ಸಾಬರ್ಕಾಂತ ಜಿಲ್ಲೆಗಳಲ್ಲಿ ಚೌಧರಿಗಳು ಪ್ರಬಲರು. ಇಲ್ಲಿನ ಡೇರಿಗಳ ಮೇಲೆ ಅವರದೇ ಸ್ವಾಮ್ಯ.
ಈ ಹಿನ್ನೆಲೆಯಲ್ಲಿ ಗೇಣಿಬೆನ್ ಅವರ ಗೆಲುವಿಗೆ ‘ದೈತ್ಯಸಂಹಾರಿ’ಯ ಗರಿ ಮೂಡಿದೆ. ಪ್ರಚಂಡ ಮಾತುಗಾರಿಕೆ ಗುಜರಾತಿನಲ್ಲಿ ಹೆಸರಾಗಿರುವ ಗೇಣಿಬೆನ್ ಹಲವು ವಿವಾದಗಳಿಗೆ ಕಾರಣರು ಕೂಡ. ಜಿಲ್ಲೆಯ ಅವಿವಾಹಿತ ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿದ 800 ಗ್ರಾಮಗಳ ಹಿರಿಯರ ನಿರ್ಧಾರವನ್ನು ಬೆಂಬಲಿಸಿದ್ದರು. ಅಂತರ್ಜಾತಿ ಮದುವೆಗಳ ನಿಷೇಧಕ್ಕೂ ದನಿಗೂಡಿಸಿದವರು. ಅಂತರ್ಜಾತಿ ಮದುವೆ ಮಾಡಿಕೊಂಡ ಜೋಡಿಯ ಪೋಷಕರಿಗೆ ದಂಡ ವಿಧಿಸಬೇಕೆಂದವರು.
