ನಾವೆಲ್ಲರೂ ಪರಿಸರ ಹಾಗೂ ಪ್ರಕೃತಿಯ ಒಂದು ಭಾಗವಾಗಿದ್ದೇವೆ. ಪರಿಸರ ಸಮತೋಲನದಲ್ಲಿ ಇದ್ದರೆ ಮಾನವ ಸಂಕುಲ ಆರೋಗ್ಯವಾಗಿರುತ್ತದೆ. ಕಾಲಕಾಲಕ್ಕೆ ಮಳೆ ಶುದ್ಧವಾದ ಗಾಳಿ, ನೀರು, ಉತ್ತಮ ಆರೋಗ್ಯ ನಮ್ಮದಾಗಿರುತ್ತದೆ. ಪರಿಸರವನ್ನು ನಾವು ಸಂರಕ್ಷಣೆ ಮಾಡಿದರೆ, ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಆನೌಪಚಾರಿಕ ಶಿಕ್ಷಣ ಸಂಸ್ಥೆ ಸಹ ನಿರ್ದೇಶಕ ಫಾದರ್ ಸುಮನ್ ಬಾಲು ತಿಳಿಸಿದರು.
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಸಂತ ಜೋಸೆಫ್ ಸಮುದಾಯ ಆರೋಗ್ಯ ಮತ್ತು ಬೆಂಬಲ ಕೇಂದ್ರದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಾನವನ ವೈಭವೀಕರಣ ಜೀವನ ಹಾಗೂ ದುರಾಸೆಗೆ ಕಾಡು ನಾಶ ಮಾಡುತ್ತಿದ್ದೇವೆ. ಅದರ ಪರಿಣಾಮವಾಗಿ ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ಪ್ರಕೃತಿಯಲ್ಲಿ ಉಚಿತವಾಗಿ ದೊರೆಯಬೇಕಾಗಿದ್ದ ಆಮ್ಲಜನಕವು ನಾವು ಖರೀದಿ ಮಾಡಿ ಪಡೆಯಬೇಕಾಯಿತು” ಎಂದರು.
“ಪರಿಸರ ವಿನಾಶದಿಂದ ಪ್ರಕೃತಿಯಲ್ಲಿ ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿ ಎದುರಿಸಬೇಕಾಗಿದೆ. ಆದ್ದರಿಂದ ನಾವು ಪರಿಸರ ಸಂರಕ್ಷಣೆ ಮಾಡಬೇಕು. ಪ್ರತಿ ಮನೆಯ ಸುತ್ತಮುತ್ತ ಕನಿಷ್ಟ 5 ರಿಂದ 10 ಮರಗಳನ್ನು ಬೆಳೆಸಬೇಕು. ಅವುಗಳನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ನಮ್ಮ ಮನೆಯಲ್ಲಿ ಯಾವುದೇ ಶುಭಕಾರ್ಯದಲ್ಲಿ ಸಸಿ ನೆಡುವ, ಸಸಿ ವಿತರಿಸುವ ಕಾರ್ಯಕ್ರಮಗಳು ನಡೆಯುವ ರೂಢಿಯಾಗಬೇಕು” ಎಂದು ಸಲಹೆ ನೀಡಿದರು.
“ನಮ್ಮಿಂದ ಶಾಲೆ ಆವರಣ, ದೇವಸ್ಥಾನ, ಮಸೀದಿ ಸುತ್ತಮುತ್ತ ಗಿಡ ನೆಡಬೇಕು. ಇದರಿಂದ ನಾವು ಬಿಸಿಲಿನ ತಾಪಮಾನದಿಂದ ಪಾರಾಗುತ್ತೇವೆ” ಎಂದು ತಿಳಿಸಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಟಿಯೊಲ್ ಮಚಾದೊ ಅಧ್ಯಕ್ಷತೆ ಭಾಷಣದಲ್ಲಿ ಮಾತನಾಡಿ, “ಗಿಡ ಮರ ಬೆಳೆಸುವುದರ ಜತೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು. ಪ್ಲಾಸ್ಟಿಕ್ ಚೀಲವನ್ನು ಬಳಕೆ ನಂತರ ಬಿಸಾಡುವ ಬದಲು ಮರುಬಳಕೆ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡಿ ಕಸದ ಬುಟ್ಟಿಗೆ ಹಾಗೂ ಕಸದ ತೊಟ್ಟಿಗೆ ಹಾಕುವುದರಿಂದ ಅವುಗಳನ್ನು ಪ್ರಾಣಿಗಳು ಸೇವಿಸುವುದರಿಂದ ಅವುಗಳ ಜೀವಕ್ಕೆ ಕುತ್ತು ಬರುವುದು. ಆದ್ದರಿಂದ ಇಂದು ನಾವು ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಮಾಡೋಣ” ಎಂದು ಸಂಕಲ್ಪ ಮಾಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ನೇಮಕಾತಿ ವಿಳಂಬ; ಆದೇಶಪ್ರತಿ, ಗೆಜೆಟ್‌ಗಾಗಿ ಅಭ್ಯರ್ಥಿಗಳ ಪಟ್ಟು
ಸಂತ ಜೋಸೆಪ್ ಸಮುದಾಯ ಆರೋಗ್ಯ ಮತ್ತು ಬೆಂಬಲ ಕೇಂದ್ರದ ಮುಖ್ಯಸ್ಥೆ ಸಿಸ್ಟರ್ ಶಾಂತಿ ಮೇರಿ, ಸಿಸ್ಟರ್ ಅಮಲಾ ರಾಣಿ, ರುಕ್ಮಿಣಿ ಕುಂಬಾರ, ಸುನೀತಾ ಮೋರೆ ಸೇರಿದಂತೆ 100ಕ್ಕೂ ಹೆಚ್ಚು ಸದಸ್ಯರು ಇದ್ದರು.
