ಅಮರಾವತಿ ಆಂಧ್ರ ಪ್ರದೇಶದ ರಾಜಧಾನಿಯಾಗಿರಲಿದೆ ಎಂದು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ದಿನದಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮರಾವತಿ ಆಂಧ್ರ ಪ್ರದೇಶದ ಏಕೈಕ ರಾಜಧಾನಿಯಾಗಿರಲಿದ್ದು, ಹಾಗೆಯೇ ಪೊಲಾವರಂ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ವಿಶಾಖಾಪಟ್ಟಣಂಅನ್ನು ಆರ್ಥಿಕ ರಾಜಧಾನಿ ಹಾಗೂ ವಿಶೇಷ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
“ಅಮರಾವತಿ ನಮ್ಮ ರಾಜಧಾನಿಯಾಗಿರಲಿದೆ. ನಾವು ರಚನಾತ್ಮಕ ರಾಜಕೀಯವನ್ನು ಆರಂಭಿಸುತ್ತೇವೆ ವಿನಾ ರಾಜಕೀಯ ಪಿತೂರಿಯನ್ನಲ್ಲ. ವಿಶಾಖಾಪಟ್ಟಣ ರಾಜ್ಯದ ವಾಣಿಜ್ಯ ರಾಜಧಾನಿಯಾಗಿರಲಿದೆ. ಮೂರು ರಾಜಧಾನಿ ಮಾಡುತ್ತೇವೆ ಎಂದು ಇಂತಹ ವಂಚಕ ಚಟುವಟಿಕೆಗಳ ಮೂಲಕ ನಾವು ಜನರ ಜೊತೆ ಆಟವಾಡುವುದಿಲ್ಲ.ವಿಶಾಖಾಪಟ್ಟಣಂಗೆ ಜನರು ಸಂಪೂರ್ಣ ತೀರ್ಪು ನೀಡಲಾಗಿದೆ. ನಮಗೆ ಜನಾದೇಶವನ್ನು ನೀಡಿದ ರಾಯಲಸೀಮೆಯನ್ನು ಅಭಿವೃದ್ಧಿಪಡಿಸುತ್ತೇವೆ” ಎಂದು ಚಂದ್ರಬಾಬು ನಾಯ್ಡು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ವಿಜಯವಾಡದಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಎನ್‌ಡಿಎ ಒಕ್ಕೂಟದ ಸದನದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ನಂತರ ಚಂದ್ರಬಾಬು ನಾಯ್ಡು ಈ ಘೋಷಣೆ ಮಾಡಿದರು.
2019ರಲ್ಲಿ ಆಂಧ್ರ ಪ್ರದೇಶದಲ್ಲಿ ವಿಜಯಗಳಿಸಿದ್ದ ವೈ ಎಸ್ ಜಗನ್‌ಮೋಹನ್ ರೆಡ್ಡಿ ರಾಜ್ಯದ ಅಭಿವೃದ್ಧಿಯನ್ನು ವಿಕೇಂದ್ರಿಕರಣಗೊಳಿಸಲು ವಿಶಾಖಾಪಟ್ಟಣಂಅನ್ನು ಆಡಳಿತಾತ್ಮಕ ರಾಜಧಾನಿಯನ್ನಾಗಿ ಮಾಡುವುದಾಗಿ ಹೇಳಿದ್ದರು. ಹಾಗೆಯೇ ಅಮರಾವತಿ ಶಾಸಕಾಂಗ ರಾಜಧಾನಿ, ಕರ್ನೂಲ್‌ಅನ್ನು ನ್ಯಾಯಾಂಗದ ರಾಜಧಾನಿಯನ್ನಾಗಿ ಮಾಡುವುದಾಗಿ ಹೇಳಿದ್ದರು.
ಜನಸೇನಾ ಪಕ್ಷದ ಮುಖ್ಯಸ್ಥ ಕೆ ಪವನ್ ಕಲ್ಯಾಣ್ ಎನ್‌ಡಿಎ ನಾಯಕನಾಗಿ ನಾಯ್ಡು ಹೆಸರನ್ನು ಪ್ರಸ್ತಾಪಿಸಿ, ಇತ್ತೀಚಿಗಷ್ಟೆ ನೂತನ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷೆ ಡಿ ಪುರಂದೇಶ್ವರಿ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.
2024ರ ಆಂಧ್ರ ವಿದಾನಸಭೆ ಚುನಾವಣೆಯಲ್ಲಿ ಒಟ್ಟು 175 ಸದಸ್ಯರ ಪೈಕಿ ಟಿಡಿಪಿ 135 ಸ್ಥಾನ ಗಳಿಸಿದರೆ, ಮಿತ್ರ ಪಕ್ಷ ಜನಸೇನಾ 21, ವೈಎಸ್‌ಆರ್‌ಪಿ 11 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿತ್ತು.
