ನೆನಪು | ರಾಜೀವ್ ತಾರಾನಾಥ್ ಮತ್ತು ಗೋಧ್ರಾ

Date:

Advertisements
ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್, ಹಿಂದೊಮ್ಮೆ ಗೋಧ್ರಾ ಘಟನೆ ಕುರಿತು ಮಾತನಾಡಿದ್ದರು. ಒಡಲಾಳದಲ್ಲಿ ಅವಿತಿದ್ದ ಅಣೆಕಟ್ಟು ಒಡೆದು ಒಮ್ಮೆಲೆ ನುಗ್ಗತೊಡಗಿದ ಆ ಮಾತುಗಳು ಇಲ್ಲಿವೆ…

ಈ ಕ್ಷಣದಲ್ಲಿ ಏನೇಳೋದು… ಕತ್ತು ಬಗ್ಗಿಸಿಕೊಂಡು ಅನ್ಯಮನಸ್ಕರಾದರು ಕನ್ನಡದ ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್, ಕತ್ತೆತ್ತದೆ ತಾವು ತೊಟ್ಟಿದ್ದ ಕುರ್ತಾವನ್ನು ತದೇಕಚಿತ್ತದಿಂದ ದೃಷ್ಟಿಸುತ್ತಾ, ಬಟ್ಟೆಯನ್ನು ಬೆರಳಿನಿಂದ ಮೃದುವಾಗಿ ಸ್ಪರ್ಶಿಸುತ್ತಾ, ‘ಇದನ್ನು ಯಾರು ಮಾಡಿದ್ದು ಗೊತ್ತಾ…’ ಎಂದು ಎದುರಿದ್ದವರಿಗೆ ಪ್ರಶ್ನೆ ಎಸೆದರು. ಉತ್ತರ ಬರದಿದ್ದಾಗ, ಮೌನ ಆವರಿಸಿದಾಗ… ಒಡಲಾಳದಲ್ಲಿ ಅವಿತಿದ್ದ ಅಣೆಕಟ್ಟು ಒಡೆದು ಒಮ್ಮೆಲೆ ನುಗ್ಗತೊಡಗಿತು.

ಉಸ್ ಎಂಬ ಉಸಿರಿನಿಂದ ಅದನ್ನೆಲ್ಲ ಸಾವರಿಸಿಕೊಂಡು, ಜೇಬಲ್ಲಿದ್ದ ಪುಟ್ಟ ಹಳದಿ ಕಲರ್‌ನ ಒಂದು ಪಾಂಪ್ಲೆಟ್ ತೆಗೆದು, ‘ಹಿಮ್ಮತ್, ಹಿಮ್ಮತ್ ಅಂತ ಇದಕ್ಕೆ ಹೆಸರಿಟ್ಟಿದಾರೆ, ಗೋಧ್ರಾ ಕೇಳಿದ್ದೀರಾ… ಮೋದಿ, ಗುಜರಾತ್… ಕ್ಷಮೆ ಕೇಳೋ ಅಭ್ಯಾಸ್ವೇ ಇಲ್ಲ ನಮ್ಗೆ, ಪಶ್ಚಾತ್ತಾಪವಂತೂ ಇಲ್ವೇ ಇಲ್ಲ ಬಿಡಿ. ಕೃಷ್ಣ ಹೇಳ್ಲಿಲ್ವೆ ಸುಳ್ಳು, ಶ್ರೀರಾಮ ಮಾಡಲಿಲ್ವೇ ಮೋಸ… ಅವರೆಲ್ಲ ದೇವರು, ಅವರ ಅಪರಾವತಾರವೇ ನಾವು. ವಿ ಆರ್ ಗ್ರೇಟ್, ಗ್ರೇಟ್ ಇಂಡಿಯನ್ಸ್, ಗ್ರೇಟ್ ಹಿಂದೂಸ್… ಕಳಂಕ ತಂದ್ಬಿಟ್ರು, ರಾಮ ಅಂತನ್ನೋಕೆ ಅಸಹ್ಯ ಆಗುತ್ತೆ, ಹೇಳಿದ ಬಾಯನ್ನು, ಹೇಳಿದಾಕ್ಷಣ ಹುಣಸೇಹಣ್ಣಾಕಿ ತೊಳಕೊಬೇಕೆನ್ನಿಸುತ್ತೆ…

‘ಟ್ರೈನ್‌ಗೆ ಬೆಂಕಿ ಹಚ್ಚೋದು, ಬಸುರಿಯನ್ನು ಎಳೆದಾಡೋದು, ಕತ್ತಿಯಿಂದ ಭ್ರೂಣನ ಎತ್ತಿಹಿಡಿದು ಕೇಕೆ ಹಾಕೋದು… ಜುಟ್ಟು ಹಿಡಿದು ಅತ್ತಿಂದಿತ್ತ ಎಳೆದಾಡಿ ಜೈ ಶ್ರೀರಾಮ್ ಅನ್ನು ಅಂತ ಬಲವಂತ ಮಾಡೋದು… ಛೇ, ಛೇ, ಛೇ ಏನಿದೆಲ್ಲ? ನಾಚಿಕೆಯಾಗಬೇಕು ನಮ್ಗೆ. ಅವರು ಮಾಡಿದ್ದಾದ್ರು ಏನು? ಅವರೂ ನಮ್ಮಂತೆ ಜನ ಅಲ್ವಾ?

Advertisements

‘ಕೈ, ಕಾಲು, ಕುಟುಂಬಗಳನ್ನು ಕಳೆದುಕೊಂಡು ಅನಾಥರಾಗಿರುವ ಅವರನ್ನೆಲ್ಲ ಮಹಾನ್ ಮೋದಿ ಒಂದಡೆ ಹಾಕಿದ್ದಾರೆ- ಬದುಕಲಾಗದ ಜಾಗಕ್ಕೆ. ಅವರು ಅಂತಹ ಸ್ಥಿತಿಯಲ್ಲೂ ತಾಳ್ಮೆ ಕಳಕೊಳ್ಳದೆ, ಎದೆಗುಂದದೆ ತಮ್ಮ ಕೈಯಿಂದಾನೆ ಈ ಬಟ್ಟೆ ತಯಾರಿಸಿ, ದೇಶದ ಅನೇಕ ಕಡೆಗೆ ಹೋಗಿ ಮಾರಾಟ ಮಾಡ್ತಿದಾರೆ. ಬಂದ ಅಲ್ಪಸ್ವಲ್ಪ ದುಡ್ಡಲ್ಲಿ ಕಳೆದುಹೋದ ಬದುಕನ್ನು ಕಟ್ಟಿಕೊಳ್ತಿದಾರೆ. ಮೊನ್ನೆ ಬೆಂಗಳೂರಿಗೂ ಬಂದಿದ್ರು… ಅಂಥವರನ್ನು ಯಾರು ಕರಸ್ತಾರೆ, ಅಂತಃಕರಣವುಳ್ಳ ಕ್ರಿಶ್ಚಿಯನ್ ಸಮುದಾಯದವರು ಯಾವುದೋ ಚರ್ಚ್‌ನಲ್ಲಿ ಜಾಗ ಮಾಡಿಕೊಟ್ಟಿದ್ರು, ನಾನು ಕೊನೆ ದಿನ ಹೋದೆ, ನಾಲ್ಕು ಮಾತ್ರ ಉಳಿದಿದ್ವು, ಒಂದು ನನ್ನಳತೆದಿತ್ತು, ತಗೊಂಡು ಎಷ್ಟು ಅಂದೆ, 750 ಅಂದ್ರು, ಜೇಬಿಗೆ ಕೈಹಾಕಿ 1500 ಕೊಟ್ಟು, ನೆಕ್ಟ್ಸ್ ಟೈಮ್ ಬಂದ್ರೆ ನನ್ಗೆ ಮೊದ್ಲೆ ಇನ್‌ಫರ್ಮ್ ಮಾಡಿ ಅಂದೆ. ಆಮೇಲೆ ಅದ್ಯಾಕೋ ತಡೆಯೋಕ್ಕಾಗ್ಲಿಲ್ಲ ಅವರ ಕಾಲಿಗೆ ಬಿದ್ದು, ನಮ್ಮ ಜನ ಮಾಡಿರೋ ಪಾಪದ ಕೆಲ್ಸಕ್ಕೆ ನಾನು ಕ್ಷಮೆ ಕೇಳ್ತೀನಿ ಅಂದೆ. ಮನಸ್ಸು ಹಗುರವಾಯಿತು…’

ಗೋಧ್ರಾ ಘಟನೆ ಭಾರತೀಯರ ಘನತೆಗೆ ಧಕ್ಕೆ ತರುವಂಥಾದ್ದು. ಮನುಷ್ಯರು ಮಾಡದಂಥಾದ್ದು. ಆದರೆ, ಇವತ್ತಿನ ಸಂದರ್ಭದಲ್ಲಿ ಎಷ್ಟು ಜನ ಹೀಗೆ ಯೋಚಿಸುತ್ತಾರೆ?

ಇದನ್ನು ಓದಿದ್ದೀರಾ?: ನೆನಪು । ರಾಜೀವ್ ತಾರಾನಾಥ್ ಕುರಿತು ರಹಮತ್ ತರೀಕೆರೆ ಬರೆಹ

ಈ ದೇಶದ ಜಾಯಮಾನವೇ ಅಂಥಾದ್ದು- ರಾಜೀವ್ ತಾರಾನಾಥ್‌ರಂತಹವರೂ ಇರುತ್ತಾರೆ. ಹೂ ಅರಳಿದಷ್ಟೇ ಸಹಜವಾಗಿ, ತಮ್ಮಿಂದಲೇ ಆದ ಅನಾಹುತವೆಂಬಂತೆ ಕೊರಗಿ ಕ್ಷಮೆ ಕೇಳುತ್ತಾರೆ. ಕೋಲ್ಕತಾದ ಉಸ್ತಾದ್ ಅಲಿ ಅಕ್ಬರ್ ಖಾನ್‌ರಿಂದ ಸರೋದ್‌ ಕಲಿತದ್ದು, ಸ್ವತಂತ್ರ ಹೋರಾಟದ ಗಾಂಧಿಯ ಪ್ರಭಾವಕ್ಕೊಳಗಾಗಿದ್ದು, ಕಾಸ್ಮೋ ಕಲ್ಚರ್‍‌ನ ಒಳಗೊಳಿಸಿಕೊಂಡಿದ್ದು, ಹೈದರಾಬಾದ್‌ನಲ್ಲಿ ಇಂಗ್ಲಿಷ್ ಟೀಚ್ ಮಾಡಿದ್ದು, 70ರ ದಶಕದ ಸಂವೇದನಾಶೀಲ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದು, ನವ್ಯ ಸಾಹಿತಿಗಳೊಂದಿಗೆ ಒಡನಾಡಿದ್ದು- ಎಲ್ಲವೂ ರಾಜೀವರ ಆ ಕ್ಷಣದ ಮಾತುಗಳಲ್ಲಿ ಮೈದುಂಬಿಕೊಂಡಿತ್ತು.

ಹನುಮಂತನಗರದ ಅಭಿನಯ ತರಂಗದ ವಿದ್ಯಾರ್ಥಿಗಳು ಶಾಂತಚಿತ್ತರಾಗಿ ರಾಜೀವರ ಮಾತುಗಳನ್ನು ಆಲಿಸುತ್ತಾ ಕೂತಿದ್ದರು. ಮತ್ತಷ್ಟು ಕೇಳಲು ಕಾತುರರಾಗಿದ್ದರು. ಆದರೆ ರಾಜೀವರು ಅಷ್ಟೇ ಅಂತ ಎದ್ದರು.

ಅಷ್ಟಕ್ಕೂ ರಾಜೀವರು ಬಂದದ್ದು ಎ.ಎಸ್.ಮೂರ್ತಿಗಳ ಕರೆಯ ಮೇರೆಗೆ, ಎ.ಎಂ.ಪ್ರಕಾಶ್ ನಿರ್ದೇಶನದ ‘ಸೂರ್ಯಕಾಂತಿ’ ಎಂಬ ದೃಶ್ಯಕಾವ್ಯವನ್ನು ನೋಡಲು. ಅವರ ಜೊತೆಗೂಡಿದವರು ನಿರ್ದೇಶಕ ಚೈತನ್ಯ, ಯುವ ಗೀತ ರಚನಕಾರ ಹೃದಯಶಿವ ಮತ್ತು ನಾನು.

‘ಸೂರ್ಯಕಾಂತಿ’ -ವಿಶ್ವವಿಖ್ಯಾತ ಕಲಾಕಾರ ವಿನ್ಸೆಂಟ್ ವ್ಯಾನ್‌ಗೋನ ವಿಕ್ಷಿಪ್ತ ಬದುಕನ್ನು ಕುರಿತ ಡಾಕ್ಯು ಡ್ರಾಮ. ಸ್ವತ ಕಲಾಕಾರರೂ ಆದ ರಾಜೀವ್ ತಾರಾನಾಥರು, ನಾಟಕ ನೋಡಿ ‘ಎಕ್ಸಲೆಂಟ್, ಚೆನ್ನಾಗಿ ಮಾಡಿದ್ದೀಯ’ ಅಂದು ತಮಗನ್ನಿಸಿದ ಕೆಲ ಬದಲಾವಣೆಗಳನ್ನು ಹೇಳುತ್ತ ಕಲೆಯೊಳಗೆ ಬಣ್ಣದಂತೆ ಬೆರೆತುಹೋದರು. ಅದೆಷ್ಟೋ ವರ್ಷಗಳ ಹಿಂದೆ ಕಲಾಮಂದಿರದಲ್ಲಿ ತಾವೇ ರಚಿಸಿದ ಪೇಂಟಿಂಗನ್ನು ನೆನಪಿಗೆ ತಂದುಕೊಂಡು, ಹೀಗೀಗೇ ಇತ್ತು ಎಂದು ಬಿಡಿಸಿಟ್ಟೇಬಿಟ್ಟರು.

ಬರಿ ಮಾತನಾಡುವವರಿಂದ ದೂರ ಇರುವ, ಮೌನವನ್ನು ಮೆಚ್ಚುವ, ಮಾನವೀಯತೆಗಾಗಿ ತುಡಿಯುವ ರಾಜೀವ್ ತಾರಾನಾಥ್- ಅಪರೂಪದ ಅಪ್ಪಟ ಮನುಷ್ಯ.

(2008ರಲ್ಲಿ ಬರೆದದ್ದು)

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

2 COMMENTS

  1. ರಾಜೀವ ತಾರಾನಾಥ್ ರ ಪುಟ್ಟ ಸಂದರ್ಶನ ವೊಂದನ್ನ ಸಂವೇದನಾಶೀಲ ಬರಹ ಮಾಡಿ ಅವರ ಅಗಲಿಕೆ ಸಂದರ್ಭದಲ್ಲಿ ನೆನಪನ್ನು ಹಸಿರಾಗಿಸಿದಿರಿ.ಧನ್ಯವಾದಗಳು.
    ಡಿ ಎಂ ನದಾಫ್ ಅಫಜಲಪುರ.

  2. ನಾಡಿನ ಜನರ ಮನಮನಗಳಲ್ಲಿ ಇಳಿದು ಹಸಿರಾಗಿರಬೇಕಾದ ರಾಜೀವರ ವ್ಯಕ್ತಿತ್ವ ಕುವೆಂಪು, ತೇಜಸ್ವಿ, ಲಂಕೇಶರಂತಹ ಕಲಾಕಾರರಂತೆ ಆವರಿಸದಿರುವುದು ನಮ್ಮೆಲ್ಲರ ದುರಂತ. ಅವರ ಅಗಲಿಕೆ ಅಮೂಲ್ಯವಾದ ನಮ್ಮದೇ ಆಸ್ತಿಯನ್ನು ನಮಗರಿವಿಲ್ಲದೇ ನಾವು ಕಳೆದುಕೊಂಡೆವಲ್ಲ ಎಂಬ ಕೊರಗು ಮನಸಿನಲ್ಲಿ ಸದಾ ಉಳಿಯುವಂತಾಗಿದೆ. ಜೀವನದಲ್ಲಿ ಒಮ್ಮೆಯೂ ಅವರೊಂದಿಗೆ ಒಡನಾಡಲಿಲ್ಲ, ಅವರ ಸರೋದ್ ಮಾಂತ್ರಿಕತೆ ಕಿವಿಗಳಲ್ಲಿ ಅನುರುಣಿಸಲಿಲ್ಲವಲ್ಲ ಎಂಬ ನೋವೂ ಉಳಿದಿದೆ.
    ನಮ್ಮ ಮನದೊಳಗೆ ಇಳಿದು ಆಡಿದ ಮಾತುಗಳಂತೆ ಈ ಲೇಖನ ಮುದನೀಡಿತು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X