ಈ ವರ್ಷದ ನೀಟ್ ಯುಜಿ ಪ್ರವೇಶ ಪರೀಕ್ಷೆಯಲ್ಲಿ 1563 ಅಭ್ಯರ್ಥಿಗಳು ಪಡೆದುಕೊಂಡಿದ್ದ ಗ್ರೇಸ್ ಅಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಟಿಎ) ರದ್ದುಪಡಿಸಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಇಂದು ತಿಳಿಸಿದೆ.
ಪರೀಕ್ಷೆ ಆರಂಭಿಸಲು ವಿಳಂಬವಾದ ಕಾರಣ ಅದಕ್ಕೆ ಪ್ರತಿಯಾಗಿ ನಿರ್ದಿಷ್ಟ ಕೇಂದ್ರಗಳ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗಿತ್ತು. ಇಂತಹ ಕೇಂದ್ರಗಳಲ್ಲಿ ಗ್ರೇಸ್ ಅಂಕವನ್ನು ರದ್ದುಗೊಳಿಸಲಾಗಿದ್ದು, ಅವರಿಗೆ ಮರು ಪರೀಕ್ಷೆ ತೆಗೆದುಕೊಳ್ಳುವ ಆಯ್ಕೆ ನೀಡಲಾಗಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜೂನ್ 23ರಂದು ಮರು ಪರೀಕ್ಷೆಯನ್ನು ಎನ್‌ಟಿಎ ಕೈಗೊಳ್ಳುವ ಸಂಭವವಿರುವ ಸಲ್ಲಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತು. ಇದರ ಫಲಿತಾಂಶವನ್ನು ಜೂನ್ 30 ರಂದು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ ಮರುಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಪರಿಹಾರದ ಅಂಕಗಳನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಮರು ಪರೀಕ್ಷೆ ಹಾಗೂ ಫಲಿತಾಂಶವು ಜುಲೈ 6ರಂದು ನಡೆಯುವ ಕೌನ್ಸಲಿಂಗ್‌ಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ರಜಾದಿನದ ನ್ಯಾಯಾಧೀಶರಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ಗ್ರೇಸ್ ಅಂಕಗಳಿಗೆ ಸಂಬಂಧಿಸಿದ ಅರ್ಜಿಯನ್ನು ವಿಲೇವಾರಿ ಮಾಡಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ಬಿಗಿಮುಷ್ಟಿಯಲ್ಲಿ ಬಲಿಷ್ಠ ಖಾತೆಗಳು; ತೆಪ್ಪಗಿರುವವೇ ಮಿತ್ರಪಕ್ಷಗಳು?
ಪ್ರಶ್ನೆಪತ್ರಿಕೆ ಸೋರಿಕೆ, ಇತರೆ ಆರೋಪಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಎನ್‌ಟಿಎಗೆ ನಿರ್ದೇಶಿಸಿದೆ. ಇದಕ್ಕೂ ಮೊದಲು 10 ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 8 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಸುಪ್ರೀಂ ಕೋರ್ಟ್ ಫಿಸಿಕ್ಸ್ ವಲ್ಲಾ ಸಂಸ್ಥೆಯ ಸಿಇಒ ಸಲ್ಲಿಸಿದ್ದ ಅರ್ಜಿಯು ಒಳಗೊಂಡಂತೆ ಮೂರು ಅರ್ಜಿಗಳ ವಿಚಾರಣೆ ನಡೆಸಿದ್ದು, ಇವುಗಳು ನೀಟ್ – ಯುಜಿ 2024ರ ಎಂಬಿಬಿಎಸ್, ಬಿಡಿಎಸ್ ಹಾಗೂ ಇತರ ಕೋರ್ಸುಗಳ ಪ್ರವೇಶದ ವಿವಾದಕ್ಕೆ ಸಂಬಂಧಿಸಿರುವುದಾಗಿದೆ.
ಈ ನಡುವೆ ಎನ್‌ಟಿಎ ಈಗಾಗಲೇ ನೀಟ್ 2024ರ ಪರೀಕ್ಷೆಗೆ ಹಾಜರಾಗಿರುವ 1600 ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ವಿಮರ್ಶಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.
1536 ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡಿ ರ್ಯಾಂಕ್ ಬರಲು ಕಾರಣವಾದ ಎನ್‌ಟಿಎ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೇ 5 ರಂದು ನಡೆದ ಹಮ್ಮಿಕೊಳ್ಳಲಾಗಿದ್ದ ನೀಟ್ ಪರೀಕ್ಷೆಯಲ್ಲಿ ದೇಶಾದ್ಯಂತ 571 ಕೇಂದ್ರಗಳಲ್ಲಿ 24 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಎನ್‌ಟಿಎ ಇತಿಹಾಸದಲ್ಲಿಯೆ ಮೊದಲ ಬಾರಿಗೆ 67ಕ್ಕೂ ಹೆಚ್ಚು ವಿದ್ಯಾರ್ಥಿಗಳು 720 ಕ್ಕೆ 720 ಅಂಕ ಪಡೆದುಕೊಂಡಿದ್ದರು. ಈ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹರಿಯಾಣದ ಫರಿದಾಬಾದ್ ಪರೀಕ್ಷಾ ಕೇಂದ್ರದಲ್ಲಿ ಬರೆದ ವಿದ್ಯಾರ್ಥಿಗಳಾಗಿದ್ದರು.
