ಈ ದಿನ ಸಂಪಾದಕೀಯ | ಬಿಜೆಪಿ ಬಿಗಿಮುಷ್ಟಿಯಲ್ಲಿ ಬಲಿಷ್ಠ ಖಾತೆಗಳು; ತೆಪ್ಪಗಿರುವವೇ ಮಿತ್ರಪಕ್ಷಗಳು?

Date:

ಮೋದಿಯವರ ಬಿಜೆಪಿಗೆ ಸರಳ ಬಹುಮತದ ಜನಾದೇಶ ಕೂಡ ಸಿಕ್ಕಿಲ್ಲ. ಅವರು ಸರ್ಕಾರ ರಚಿಸಿ ಪ್ರಧಾನಿಯಾಗಿ ಮುಂದುವರೆದಿದ್ದರೆ ಅದು ಮಿತ್ರ ಪಕ್ಷಗಳ ಬೆಂಬಲದಿಂದಲೇ ವಿನಾ ಸ್ವತಂತ್ರ ಬಲದಿಂದ ಅಲ್ಲ. ಆದರೂ ಎರಡು ಅವಧಿಗಳಲ್ಲಿ ಬಿಂಬಿಸಿದ ತಮ್ಮ ಅಧಿಪತ್ಯದ ಮೊಹರನ್ನೇ ಮೋದಿಯವರು ಈ ಮಂತ್ರಿಮಂಡಲದ ಮೇಲೆ ಢಾಳಾಗಿ ಒತ್ತಿದ್ದಾರೆ.

ಪ್ರಧಾನಮಂತ್ರಿ ಮೋದಿಯವರ ಮೂರನೆಯ ಅವಧಿಯ ಮಂತ್ರಿಮಂಡಲ ಅವರ ಈವರೆಗಿನ ಎರಡು ಅವಧಿಗಳ ಏಕಚಕ್ರಾಧಿಪತ್ಯ ಧೋರಣೆಯನ್ನೇ ಬಿಂಬಿಸಿದೆ. ಬಹುಮುಖ್ಯ ಖಾತೆಗಳನ್ನು ಬಿಜೆಪಿ ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿಲ್ಲ. ರಕ್ಷಣೆ, ಗೃಹ, ಹಣಕಾಸು ಹಾಗೂ ವಿದೇಶಾಂಗ ವ್ಯವಹಾರಗಳ ಮೇಲೆ ಬಿಜೆಪಿಯ ಬಿಗಿಮುಷ್ಟಿ ಸಡಿಲಾಗಿಲ್ಲ. ಅಷ್ಟೇ ಅಲ್ಲ, ಈ ಖಾತೆಗಳನ್ನು ಈ ಹಿಂದೆ ಯಾರು ನಿರ್ವಹಿಸುತ್ತಿದ್ದರೂ ಅವರ ಕೈಗಳಿಗೇ ಇರಿಸಲಾಗಿದೆ.

ಕ್ರೈಸ್ತರಿಗೆ ಈ ಹಿಂದೆ ಮೋದಿಯವರ ಮೊದಲ ಅವಧಿಯ ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯ ನೀಡಲಾಗಿತ್ತು. ಕೇರಳದ ಕೆ.ಜೆ.ಅಲ್ಫೋನ್ಸ್ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಿಯಾಗಿದ್ದರು. ನಂತರ ಮತ್ತೆ ಇದೀಗ ಮುಂದುವರೆಸಲಾಗಿದೆ. ಮುಸ್ಲಿಮರನ್ನು ದಟ್ಟವಾಗಿ ದ್ವೇಷಿಸುವ ಬಿಜೆಪಿ ಆರೆಸ್ಸೆಸ್ ರಾಜಕಾರಣ ಅಂತ್ಯಗೊಳ್ಳುವುದಿರಲಿ, ತೆಳುವಾಗುವ ದೂರದ ಸೂಚನೆ ಕೂಡ ಇಲ್ಲ.

ಮೋದಿಯವರ ಬಿಜೆಪಿಗೆ ಸರಳ ಬಹುಮತದ ಜನಾದೇಶ ಕೂಡ ಸಿಕ್ಕಿಲ್ಲ. ಅವರು ಸರ್ಕಾರ ರಚಿಸಿ ಪ್ರಧಾನಿಯಾಗಿ ಮುಂದುವರೆದಿದ್ದರೆ ಅದು ಮಿತ್ರ ಪಕ್ಷಗಳ ಬೆಂಬಲದಿಂದಲೇ ವಿನಾ ಸ್ವತಂತ್ರ ಬಲದಿಂದ ಅಲ್ಲ. ಅವರ ಸರ್ಕಾರ ಈಗ ಎನ್.ಡಿ.ಎ. ಸರ್ಕಾರವೇ ವಿನಾ ಬಿಜೆಪಿಯದಲ್ಲ. ಆದರೂ ಎರಡು ಅವಧಿಗಳಲ್ಲಿ ಬಿಂಬಿಸಿದ ತಮ್ಮ ಅಧಿಪತ್ಯದ ಮೊಹರನ್ನೇ ಮೋದಿಯವರು ಈ ಮಂತ್ರಿಮಂಡಲದ ಮೇಲೆ ಢಾಳಾಗಿ ಒತ್ತಿದ್ದಾರೆ. ಹಾಲಿ ಸರ್ಕಾರ ಈ ಹಿಂದಿನ ಎರಡು ಸರ್ಕಾರಗಳ ಮುಂದುವರಿಕೆ. ಆಕ್ರಮಣಕಾರಿ ಹಿಂದುತ್ವವೇ ಕೇಂದ್ರಬಿಂದು. ನೀತಿ ನಿರ್ಧಾರಗಳಲ್ಲಿ, ಧ್ಯೇಯ ಧೋರಣೆಗಳಲ್ಲಿ ಬದಲಾವಣೆಯೇನೂ ಇಲ್ಲ ಎಂಬ ಸಂದೇಶವಿದು. ಈ ಸಂದೇಶವನ್ನು ಮಿತ್ರಪಕ್ಷಗಳೂ ಒಪ್ಪಿಕೊಂಡಂತೆ ತೋರಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಬೇಕೆಂಬುದು ಸಂಯುಕ್ತ ಜನತಾದಳ ಮತ್ತು ತೆಲುಗುದೇಶಂ ಪಾರ್ಟಿಯ ಹಳೆಯ ಬೇಡಿಕೆ. ತಳ್ಳಿ ಹಾಕಿದ್ದ ಈ ಬೇಡಿಕೆಯನ್ನು ಈಡೇರಿಸುವ ವಚನ ಕೊಟ್ಟು, ತಮ್ಮ ಸ್ವಚ್ಛಂದವನ್ನು ಖರೀದಿಸಿದಂತಿದೆ ಮೋದಿಯವರು. ಮುಂದಿನ ವರ್ಷ ಬಿಹಾರದ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಬಿಜೆಪಿಯನ್ನು ತಿರಸ್ಕರಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಇದೇ ವರ್ಷ ಜರುಗಲಿವೆ. ಅರೆಮನಸ್ಸಿನ ಬೆಂಬಲ ನೀಡಿರುವ ಹರಿಯಾಣವೂ ಈ ವರ್ಷ ಹೊಸ ವಿಧಾನಸಭೆಯನ್ನು ಆರಿಸಬೇಕಿದೆ. ಫಲಿತಾಂಶಗಳು ಬಿಜೆಪಿಯ ವಿರುದ್ಧ ತಿರುಗಿದರೆ ದೇಶದ ರಾಜಕೀಯ ಚಿತ್ರಣ ಮತ್ತಷ್ಟು ಬದಲಾದೀತು. ಆಗ ನೋಡಿಕೊಂಡರಾಯಿತು, ಈಗ ತಮ್ಮ ರಾಜಕಾರಣ ಗಟ್ಟಿ ಮಾಡಲು ಬೇಕಾದ್ದನ್ನು ಗಿಟ್ಟಿಸಿಕೊಳ್ಳೋಣ ಎಂದು ನಿತೀಶ್ ಮತ್ತು ಚಂದ್ರಬಾಬು ಸಮಯ ಕಾಯುತ್ತಿದ್ದಂತಿದೆ.

ಮಿತ್ರಪಕ್ಷಗಳನ್ನು ಒಡೆದಾಳುವುದು ಮೋದಿ-ಶಾ ಬಿಜೆಪಿಯ ಹಳೆಯ ಚಾಳಿ. ರಾಜಕಾರಣದಲ್ಲಿ ಬಹುಕಾಲ ಪಳಗಿರುವ ನಿತೀಶ್ ಮತ್ತು ಚಂದ್ರಬಾಬು ಈ ವಿಷಯದಲ್ಲಿ ಬಿಜೆಪಿಯನ್ನು ನಂಬಲಾರರು, ಬಿಡಲೂ ಆರರು. ಸಮ್ಮಿಶ್ರ ಸರ್ಕಾರದಲ್ಲಿ ಲೋಕಸಭೆಯ ಸ್ಪೀಕರ್ ಸ್ಥಾನದ್ದು ಬಹುಮುಖ್ಯ ಪಾತ್ರ. ಬಿಜೆಪಿಯು ತಮ್ಮ ಪಕ್ಷವನ್ನು ಒಡೆಯದಂತೆ ಕಾಯ್ದುಕೊಳ್ಳಲು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಚಂದ್ರಬಾಬು. ಮೋದಿಯವರೊಂದಿಗೆ ಚೌಕಾಶಿ ಸಾಮರ್ಥ್ಯವಿರುವ ನಾಯ್ಡು ಲೋಕಸಭೆ ಸ್ಪೀಕರ್ ಸ್ಥಾನವನ್ನು ಗಿಟ್ಟಿಸಿಕೊಳ್ಳುವರೇ, ಮೋದಿಯವರು ಈ ‘ಅಂಕುಶ’ವನ್ನು ಬಿಟ್ಟುಕೊಡುವರೇ ಎಂಬುದು ಕಾದು ನೋಡಬೇಕಿರುವ ಕುತೂಹಲಕರ ಅಂಶ.

ಮುಖ್ಯಮಂತ್ರಿ ಸ್ಥಾನ ಬೇಕೆಂದು ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಜೊತೆ ಕೈ ಜೋಡಿಸಿದ ಮಹಾರಾಷ್ಟ್ರದ ಶಿವಸೇನೆಯನ್ನು ಹೋಳು ಮಾಡಿತು. ಎನ್.ಸಿ.ಪಿ.ಯ ಅಜಿತ್ ಪವಾರ್ ಅವರನ್ನು ಸೆಳೆದುಕೊಂಡು ಸರ್ಕಾರ ರಚಿಸಿತು.

ಇದೀಗ ಬೆಂಬಲ ನೀಡಿ ಮೋದಿಯವರ ಮೂರನೆಯ ಅಧಿಕಾರ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ನಿತೀಶ್ ಮತ್ತು ನಾಯ್ಡು ಕೂಡ ಬಿಜೆಪಿಯ ಪ್ರತೀಕಾರದ ನಂಜನ್ನು ಉಂಡವರೇ. ತಾನು ಕೂಸುಮರಿಯಾಗಿ ಏರಿದ ಪ್ರಾದೇಶಿಕ ಪಕ್ಷಗಳ ನಡು ಮುರಿದು, ತಾನೇ ದೊಡ್ಡಣ್ಣನಾಗಿ ಮೆರೆಯುವ ಪ್ರವೃತ್ತಿ ಬಿಜೆಪಿಯದು. ಒಡಿಶಾದ ಬಿಜೆಡಿ ಈ ಮಾತಿಗೆ ತೀರಾ ಇತ್ತೀಚಿನ ಉದಾಹರಣೆ. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ ಬಿಜೆಪಿಯ ಕೂಸುಮರಿಯನ್ನು ಹೊತ್ತು ಸಲಹಿತ್ತು. ಲೋಕಸಭೆಯಲ್ಲಿ ಅಚಲ ಬೆಂಬಲ ನೀಡಿತ್ತು. ಒಡಿಶಾದಲ್ಲಿ ಬೆಳೆಸಿ ಬಲಿಸಿತ್ತು. ಲೋಕಸಭೆ ಮತ್ತು ಒಡಿಶಾ ವಿಧಾನಸಭೆ ಚುನಾವಣೆಗಳಲ್ಲಿ ಚುನಾವಣಾ ಒಡಂಬಡಿಕೆ ಮಾಡಿಕೊಳ್ಳಲು ನವೀನ್ ಪಟ್ನಾಯಕ್ ಪಕ್ಷ ಒಪ್ಪಲಿಲ್ಲ. ಆದರೆ ತೀರಾ ತಡವಾಗಿ ಹೋಗಿತ್ತು.

ಕರ್ನಾಟಕದಲ್ಲಿ ನೆಲೆಯೇ ಇಲ್ಲದಿದ್ದ ಬಿಜೆಪಿ ರಾಮಕೃಷ್ಣ ಹೆಗಡೆಯವರ ಅಲ್ಪಮತದ ಸರ್ಕಾರವನ್ನು ಬೆಂಬಲಿಸಿ ಬೆನ್ನೇರಿತ್ತು. ಆನಂತರ ತಮ್ಮ ಬೆಂಬಲ ನೆಲೆಯಾಗಿದ್ದ ಲಿಂಗಾಯತ ಬಲದ ಉತ್ತರಕರ್ನಾಟಕ ಸೀಮೆಯನ್ನು ಬಿಜೆಪಿಯ ಜೋಳಿಗೆಗೆ ಹಾಕಿದರು. ರಾಜ್ಯದ ಅರ್ಧಕ್ಕೂ ಹೆಚ್ಚಿನ ಜನತಾದಳವನ್ನು ಅರಗಿಸಿಕೊಂಡು ಬೇರಿಳಿಸಿತು ಬಿಜೆಪಿ.

ದೇವೇಗೌಡರ ಜಾತ್ಯತೀತ ಜನತಾದಳದ ಕಾರಣ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸರಳ ಬಹುಮತ ದಕ್ಕಲೇ ಇಲ್ಲ. ಗೌಡರ ಮಗ ಕುಮಾರಸ್ವಾಮಿಯವರು ಬಿಜೆಪಿ ಸ್ನೇಹ ಬೆಳೆಸಿ ಸರ್ಕಾರ ರಚಿಸಿದರು. ಅಧಿಕಾರ ಹಸ್ತಾಂತರ ಮಾಡಲೊಲ್ಲದೆ ಬಿಜೆಪಿ ಮತ್ತು ಯಡಿಯೂರಪ್ಪನವರ ಕುರಿತು ಜನಮನದಲ್ಲಿ ಸಹಾನುಭೂತಿಗೆ ಕಾರಣರಾದರು. ವೀರೇಂದ್ರ ಪಾಟೀಲ್ ಮತ್ತು ಹೆಗಡೆಯವರ ನಂತರ ಲಿಂಗಾಯತ ನಾಯಕನಾಗಿ ಹೊರಹೊಮ್ಮುವ ಅವಕಾಶವನ್ನು ಯಡಿಯೂರಪ್ಪನವರಿಗೆ ಕಲ್ಪಿಸಿಕೊಟ್ಟರು.

ಒಂದೊಮ್ಮೆ ಕುಮಾರಸ್ವಾಮಿ ಅವರನ್ನು ದೂರಿದ್ದ ದೇವೇಗೌಡರೇ ಇದೀಗ ಬಿಜೆಪಿ ಗೆಳೆತನ ಬೆಳೆಸಿದರು. ಮೋದಿಯವರನ್ನು ಜನ್ಮ ಜನ್ಮಾಂತರದ ಸಂಬಂಧಿ ಎಂದು ಕರೆದು ಕೃತಾರ್ಥರಾದರು. ಜಾತ್ಯತೀತ ಜನತಾದಳ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಬೇರಿಗೆ ನೀರು ಗೊಬ್ಬರ ನೀಡಿದೆ. ಚುನಾವಣಾ ಮೈತ್ರಿಯ ಪ್ರಕಾರ ತನ್ನ ಮತಗಳನ್ನು ಬಿಜೆಪಿಗೆ ವರ್ಗಾಯಿಸಿದೆ. ಆದರೆ ಮುಂದೊಂದು ದಿನ ಮೈತ್ರಿ ಮುರಿದಾಗ ಬಿಜೆಪಿಗೆ ವರ್ಗಾವಣೆ ಆಗಿರುವ ತನ್ನ ನೂರಕ್ಕೆ ನೂರೂ ಮತಗಳು ವಾಪಸು ಬರುತ್ತವೆಂದು ದಳ ನಿರೀಕ್ಷಿಸುವಂತಿಲ್ಲ. ಕಾಲೂರಿ ನಡೆಯಲು ಓಡಲು ಸಾಧ್ಯವಾದ ನಂತರ ಬಿಜೆಪಿಗೆ ಊರುಗೋಲುಗಳ ಮರ್ಜಿ ಯಾಕೆ ಬಿಜೆಪಿಗೆ?

ಮೋದಿ ಮಂತ್ರಿಮಂಡಲದಲ್ಲಿ ರಾಜ್ಯಕ್ಕೆ ಸಿಕ್ಕಿರುವ ಪ್ರಾತಿನಿಧ್ಯದಲ್ಲಿ ಬಿಜೆಪಿಯ ದೂರಗಾಮಿ ತಂತ್ರಗಾರಿಕೆ ಪ್ರತಿಬಿಂಬಿಸಿದೆ. ಈಗಾಗಲೇ ಬಿಜೆಪಿಯ ಕೈವಶ ಆಗಿರುವ ಲಿಂಗಾಯತ ಸಮುದಾಯಕ್ಕೆ ‘ಸುಣ್ಣ’ ಸಿಕ್ಕರೆ, ಹೊಸ ಗೆಳೆಯ ಜಾತ್ಯತೀತ ದಳಕ್ಕೆ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಬೆಣ್ಣೆ ಉಣಿಸಲಾಗಿದೆ. ಒಕ್ಕಲಿಗ ಸೀಮೆಯ ಕೋಟೆಗೆ ಲಗ್ಗೆ ಹಾಕುವ ನಿಚ್ಚಳ ಪ್ರಯತ್ನವಿದು.

ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು ಪ್ರತಿಪಕ್ಷಗಳ ವಿರುದ್ಧ ತನ್ನ ಬಲಿಷ್ಠ ಹತಾರುಗಳನ್ನಾಗಿ ಮಾಡಿಕೊಂಡಿತ್ತು ಮೋದಿ ಸರ್ಕಾರ. ಈ ದುರುಪಯೋಗದ ಮುಂದುವರಿಕೆಯನ್ನು ನಿತೀಶ್ ಮತ್ತು ಬಾಬು ಪ್ರತಿಭಟಿಸುವರೇ ಅಥವಾ ತಮ್ಮ ಬೇಳೆ ಬೇಯಿಸಿಕೊಳ್ಳಲು ತೆಪ್ಪಗಿರುವರೇ ಎಂಬುದನ್ನು ಕಾಲವೇ ಹೇಳಬೇಕಿದೆ.
ಸಮ್ಮಿಶ್ರ ಸರ್ಕಾರಗಳು ನಾಯಿ ತಲೆಯ ಮೇಲಿನ ಬುತ್ತಿಯಂತೆ ಅಸ್ಥಿರ ಎಂಬ ಕಟುಸತ್ಯ ಮೋದಿಯವರಿಗೆ ಮನವರಿಕೆಯಾದರೆ ಮುಂಬರುವ ದಿನಗಳಲ್ಲಿ ದ್ವೇಷ ರಾಜಕಾರಣದ ಅಲೆಗಳ ಅಬ್ಬರ ಅಷ್ಟಿಷ್ಟಾದರೂ ಅಡಗಲಿದೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ನಾಯಿ ಬಾಲ ಡೊಂಕು ಎಂಬ ಒಂದು ಗಾದೆ ಇದೆ. ಅದೇ ರೀತಿ ಮೋದಿ-ಷಾ ಜೋಡಿಯ ಸರ್ವಾಧಿಕಾರ ಪ್ರವೃತ್ತಿಯೂ ಅವರ ಡಿಎನ್ಎಯಲ್ಲೇ ಅಡಕವಾಗಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಮೋದಿ-ಷಾ ಜೋಡಿಯ ಸರ್ವಾಧಿಕಾರ ಪ್ರವೃತ್ತಿ ಸಂಪೂರ್ಣ ಬಹುಮತ ಪಡೆಯದ ಈಗಿನ ಸ್ಥಿತಿಯಲ್ಲಿಯೂ ಮುಂದುವರಿದಿದೆ ಎಂಬುದು ಮಂತ್ರಿಮಂಡಲದ ರಚನೆಯ ಸ್ವರೂಪ ಹಾಗೂ ಖಾತೆ ಹಂಚಿಕೆ ನೋಡುವಾಗ ಸ್ಪಷ್ಟವಾಗಿ ಗೊತ್ತಾಗುತ್ತದೆ. ಮೋದಿ-ಷಾ ಜೋಡಿಯ ಸರ್ವಾಧಿಕಾರಿ ಪ್ರವೃತ್ತಿಯ ಮುಂದುವರಿಕೆಗೆ ಪ್ರಧಾನ ಕಾರಣ ಇವರ ಬೆನ್ನಿಗೆ ನಿಂತಿರುವ ಕೆಲವು ಗುಜರಾತಿ ಉದ್ಯಮಿಗಳ ಅಪಾರ ಹಣದ ಬೆಂಬಲ. ಈ ಉದ್ಯಮಿಗಳ ಕೂಟ ಷೇರು ಮಾರುಕಟ್ಟೆಯಲ್ಲಿ ಆಟ ಆಡಿ ಅಪಾರ ಪ್ರಮಾಣದ ಹಣವನ್ನು ಮತಗಟ್ಟೆ ಸಮೀಕ್ಷೆಗಳ ಸಮಯದಲ್ಲಿ ಗಳಿಸಿದೆ ಎಂಬ ವದಂತಿ ಇದೆ. ಈ ರೀತಿಯಲ್ಲಿ ಗಳಿಸಿದ ಅಪಾರ ಹಣವನ್ನು ತಮಗೆ ಬೇಕಾದ ಸರ್ಕಾರವನ್ನು ರಚಿಸಲು ಹಾಗೂ ಉಳಿಸಲು ಈ ಉದ್ಯಮಿಗಳು ಬಳಸುತ್ತಾರೆ. ಮೋದಿ-ಷಾ ಜೋಡಿಯು ಅಪಾರ ಆತ್ಮವಿಶ್ವಾಸದಿಂದ ಮೊದಲಿನ ಸ್ವರೂಪದ ಪ್ರಧಾನ ಖಾತೆಗಳ ಹಂಚಿಕೆ ಮಾಡಲು ಇವರ ಬೆನ್ನಿಗೆ ನಿಂತಿರುವ ಉದ್ಯಮಿಗಳ ಹಣಬಲವೇ ಕಾರಣ ಎಂದು ಕಾಣುತ್ತದೆ. ಶೀಘ್ರದಲ್ಲಿಯೇ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ಘಟಕ ಪಕ್ಷಗಳಿಂದ ಸಂಸದರನ್ನು ಸೆಳೆದು ಆಪರೇಷನ್ ಕಮಲ ಮಾಡುವ ಯೋಜನೆ ಇದೆ ಎಂಬ ಬಗ್ಗೆ ಅಂಧಭಕ್ತರು ವಿಶ್ವಾಸ ಹೊಂದಿದ್ದಾರೆ ಎಂಬ ವದಂತಿ ಇದೆ. ಮುಖ್ಯವಾಗಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಂಸದರನ್ನು ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಕೂಟದಿಂದ ಸಂಸದರನ್ನು ಸೆಳೆದು ಬಹುಮತ ಪಡೆಯುವ ಯೋಜನೆ ಇದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಮುಂಬರುವ ದಿನಗಳಲ್ಲಿ ಇಂಥ ಬೆಳವಣಿಗೆ ನಡೆಯುವ ಸಂಭವ ತಳ್ಳಿಹಾಕುವಂತಿಲ್ಲ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ...

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...