ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ್ ಪ್ರಸನ್ನ (40) ಮೃತಪಟ್ಟಿದ್ದಾರೆ.
ಕಳೆದ 10 ವರ್ಷಗಳಿಂದ ವಿಜಯಕುಮಾರ್ ಅವರು ಕುವೈತ್‌ನಲ್ಲಿಯೇ ನೆಲೆಸಿದ್ದರು. ಅಲ್ಲಿ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಗ್ರಾಮಕ್ಕೆ ಬಂದು ಹೋಗಿದ್ದರು. ಅವರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರಿದ್ದಾರೆ.
ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ಎರಡನೇ ಮಹಡಿಯಲ್ಲಿ ವಿಜಯಕುಮಾರ್ ಮಲಗಿದ್ದರು. ಹೀಗಾಗಿ, ಬೆಂಕಿಯ ಕೆನ್ನಾಲಿಗೆ ಚಾಚಿದ್ದರಿಂದ ಸಾವಿಗೀಡಾದರು. ಮೊದಲ ಮಹಡಿಯಲ್ಲಿದ್ದ ಆಳಂದ ತಾಲ್ಲೂಕಿನ ಜಿಡಗಾ ಗ್ರಾಮದ ಇಬ್ಬರು ಅಲ್ಲಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಜೀವ ಉಳಿಸಿಕೊಂಡ ಇವರು ಗ್ರಾಮಸ್ಥರಿಗೆ ಕರೆಮಾಡಿ ವಿಷಯ ತಿಳಿಸಿದರು. ವಿಜಯಕುಮಾರ್ ಪಾರ್ಥಿವ ಶರೀರ ಶುಕ್ರವಾರ ಕೇರಳದ ಕೊಚ್ಚಿಗೆ ಬರಲಿದ್ದು, ಅಲ್ಲಿಂದ ಶವವನ್ನು ಜಿಲ್ಲೆಗೆ ತರಲು ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?
ಕೊಚ್ಚಿಯಿಂದ ಹೈದರಾಬಾದ್‌ಗೆ ವಿಮಾನದ ಮೂಲಕ ಹಾಗೂ ಅಲ್ಲಿಂದ ಆಂಬುಲೆನ್ಸ್ ಮೂಲಕ ಆಳಂದದ ಸರಸಂಬಾಕ್ಕೆ ತರಲಾಗುವುದು. ಇದಕ್ಕಾಗಿ ಆಳಂದ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಸಿಪಿಐ ಕೊಚ್ಚಿಗೆ ತೆರಳಲಿದ್ದಾರೆ ಎಂದು ಪ್ರಿಯಾಂಕ್ ತಿಳಿಸಿದ್ದಾರೆ.
ಕುವೈತ್‌ನ ಮಂಗಾಫ್ ಪ್ರದೇಶದಲ್ಲಿ ವಲಸೆ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ವಿನಾಶಕಾರಿ ಬೆಂಕಿ ದುರ್ಘಟನೆಯಲ್ಲಿ ಸಾವನ್ನಪ್ಪಿದ 49 ಜನರಲ್ಲಿ 45 ಭಾರತೀಯರು ಸೇರಿದ್ದಾರೆ . ಭಾರತೀಯ ವಾಯುಪಡೆಯ ವಿಮಾನವು ಮೃತರ ದೇಹಗಳನ್ನು ಅವರ ಅಂತಿಮ ಸಂಸ್ಕಾರಕ್ಕಾಗಿ ಭಾರತಕ್ಕೆ ತರಲಿದೆ.
ಭಾರತೀಯರಲ್ಲಿ, 23 ಕೇರಳದಿಂದ, ಏಳು ತಮಿಳುನಾಡಿನಿಂದ, ತಲಾ ಇಬ್ಬರು ಆಂಧ್ರಪ್ರದೇಶ ಮತ್ತು ಒಡಿಶಾದಿಂದ ಮತ್ತು ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ತಲಾ ಒಬ್ಬರು ಸೇರಿದ್ದಾರೆ.
ಸಂತ್ರಸ್ತರಲ್ಲಿ ಕೆಲವರು ಇತ್ತೀಚೆಗೆ ಕುವೈತ್‌ಗೆ ಕೆಲಸದ ನಿಮಿತ್ತ ತೆರಳಿದ್ದರೆ, ದಶಕಗಳಿಂದ ದೇಶದಲ್ಲಿ ನೆಲೆಸಿರುವ ಹಲವರು ಇದ್ದಾರೆ.
ಸಂತ್ರಸ್ತರಲ್ಲಿ ಹೆಚ್ಚಿನವರು ಕುವೈತ್‌ನಲ್ಲಿ ದೇಶದ ಅತಿದೊಡ್ಡ ನಿರ್ಮಾಣ ಸಂಸ್ಥೆಯಾದ ಎನ್‌ಬಿಟಿಸಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಂಡ ಕಟ್ಟಡವೂ ಎನ್‌ಬಿಟಿಸಿಗೆ ಸೇರಿದ್ದಾಗಿದೆ.
