ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿದ್ದು, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರೂ ಆಗಿದ್ದಾರೆ. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಸಚಿವರಾಗಿ ಮೋದಿ ಸಂಪುಟ ಸೇರಿದ್ದಾರೆ. ಮಂತ್ರಿಯಾಗಿ ಅಧಿಕಾರ ಪಡೆಯುತ್ತಿದ್ದಂತೆಯೇ, ಕನ್ನಡ ನಾಡಿನ ಅರಣ್ಯಕ್ಕೆ ಬೃಹತ್ ಕೊಡಲಿ ಹಾಕಲು ಮುಂದಾಗಿದ್ದಾರೆ.
ಮಂತ್ರಿಯಾದ ಕೂಡಲೇ ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಉಕ್ಕು ಗಣಿಗಾರಿಕೆ ನಡೆಸುವ ಕಡತಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ, ಆರು ವರ್ಷಗಳ ಹಿಂದೆ ತಾವೇ ಆಡಿದ್ದ ಮಾತನ್ನು ಮುರಿದು, ತಮ್ಮ ಎರಡು ನಾಲಿಗೆಯ ವರಸೆಯನ್ನು ತೋರಿಸಿದ್ದಾರೆ. ದಟ್ಟ ಅಡವಿಯನ್ನು ಬರಿದಾಗಿಸಿ, ಜೀವಸಂಕುಲವನ್ನು ಒಕ್ಕಲೆಬ್ಬಿಸಿ, ಧೂಳೆಬ್ಬಿಸಲು ತಮ್ಮ ಸಮ್ಮತಿ ನೀಡಿದ್ದಾರೆ.
ದೇವದಾರಿ ಪ್ರದೇಶದಲ್ಲಿ ಐತಿಹಾಸಿಕ ಕುಮಾರಸ್ವಾಮಿ ದೇವಾಲಯವಿದೆ. ಅಲ್ಲದೆ, ದಟ್ಟ ಅರಣ್ಯವನ್ನು ಹೊಂದಿದೆ. ಕುಮಾರಸ್ವಾಮಿ ದೇವಾಲಯದ ಸುತ್ತಲಿನ 2.5 ಎಕರೆ ಪ್ರದೇಶವನ್ನು ರಾಷ್ಟ್ರೀಯ ಸಂರಕ್ಷಿತ ಮತ್ತು ಪುರಾತನ ಸ್ಮಾರಕವಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇಲ್ಲಿ, ಗಣಿಗಾರಿಕೆ ನಡೆಸಬಾರದು ಎಂಬ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆಯ ವಿಚಾರ ಪ್ರಸ್ತಾಪವಾದಾಗಲೆಲ್ಲಾ ಸ್ಥಳೀಯರು, ಪರಿಸರವಾದಿಗಳು ಹಾಗೂ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ.
ಅಲ್ಲದೆ, 2018ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಆ ವರ್ಷದ (2018) ಫೆಬ್ರವರಿ 26ರಂದು ಸಂಡೂರಿಗೆ ಬಂದಿದ್ದ ಕುಮಾರಸ್ವಾಮಿ ಅವರನ್ನು ಹೋರಾಟಗಾರ ಎಸ್.ಆರ್ ಹಿರೇಮಠ್ ನೇತೃತ್ವದ ಜನಸಂಗ್ರಾಮ ಪರಿಷತ್ ಕಾರ್ಯಕರ್ತರು ಭೇಟಿ ಮಾಡಿ, ‘ದೇವದಾರಿ ಪ್ರದೇಶದ ಕುಮಾರಸ್ವಾಮಿ ದೇವಾಲಯದ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು’ ಎಂದು ಮನವಿ ಮಾಡಿದ್ದರು.
ಅವರ ಮನವಿ ಸ್ವೀಕರಿಸಿದ್ದ ಕುಮಾರಸ್ವಾಮಿ, ‘ದೇವಾಲಯದ ಸುತ್ತಲಿನ 2-3 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಎಂದಿಗೂ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿಷೇಧಿಸುತ್ತೇವೆ. ಸರ್ಕಾರದ ಮೇಲೂ ಒತ್ತಡ ಹಾಕುತ್ತೇವೆ’ ಎಂದು ಭರವಸೆ ನೀಡಿದ್ದರು.
ಆದರೆ, ಈಗ ಕೇಂದ್ರ ಸಚಿವರಾಗುತ್ತಿದ್ದಂತೆಯೇ, ಇದೇ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸಮ್ಮತಿ ನೀಡಿ ತಮ್ಮ ಮೊದಲ ಸಹಿ ಹಾಕಿದ್ದಾರೆ. ‘ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್’ಗೆ (ಕೆಐಒಸಿಎಲ್) ದೇವದಾರಿ ಪ್ರದೇಶದ 388 ಹೆಕ್ಟೇರ್ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಮಂಜೂರು ಮಾಡಿ, ಕಡತಕ್ಕೆ ಸಹಿ ಹಾಕಿದ್ದಾರೆ. ತಮ್ಮ ಮಾತನ್ನು ತಾವೆ ತಪ್ಪಿದ್ದಾರೆ. ಅಲ್ಲದೆ, ಈ ಕಡತಕ್ಕೆ ಸಹಿ ಹಾಕಿರುವುದು ತಮಗೆ ಸಂಸತ ತಂದಿದೆ ಎಂದೂ ಹೇಳಿಕೊಳ್ಳುವ ಮೂಲಕ ತಮ್ಮ ಅವಕಾಶವಾದಿತನವನ್ನು ಪ್ರದರ್ಶಿಸಿದ್ದಾರೆ. ರಾಜಕಾರಣಿಗಳು ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಅಂದಹಾಗೆ, ದೇವದಾರಿ ಪ್ರದೇಶದಲ್ಲಿ ಮುಂದಿನ 50 ವರ್ಷಗಳಲ್ಲಿ 3 ಲಕ್ಷ ಟನ್ ಕಬ್ಬಿಣದ ಅದಿರನ್ನು ತೆಗೆಯಲು ಕೆಐಒಸಿಎಲ್ ಯೋಜಿಸಿದೆ. ಅದಕ್ಕಾಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದಲೂ ಅನುಮೋದನೆ ಪಡೆದಿದೆ. ಇದೀಗ, ಕುಮಾರಸ್ವಾಮಿ ಕೂಡ ಗಣಿಗಾರಿಕೆ ಸಚಿವಾಲಯದಿಂದ ಸಮ್ಮತಿ ನೀಡಿದ್ದಾರೆ. ಒಂದು ವೇಳೆ, ಇಲ್ಲಿ ಗಣಿಗಾರಿಕೆ ಆರಂಭವಾದರೆ, ಬರೋಬ್ಬರಿ 99,330 ಮರಗಳ ಮಾರಣಹೋಮ ನಡೆಯಲಿದೆ. ಈ ಬಗ್ಗೆ ಗೊತ್ತಿದ್ದೂ ತುಂಗಾಭದ್ರಾ ತೀರವನ್ನು ಬರಿದಾಗಿಸಲು ಕುಮಾರಸ್ವಾಮಿ ಅನುಮತಿ ನೀಡಿದ್ದಾರೆ.
ಈ ಹಿಂದೆ, ಗಣಿ ಧಣಿಗಳಾಗಿದ್ದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಬಳ್ಳಾರಿಯನ್ನು ತಮ್ಮ ‘ರಿಪಬ್ಲಿಕ್’ ಅನ್ನಾಗಿ ಮಾಡಿಕೊಂಡು ದರ್ಬಾರು ನಡೆಸುತ್ತಿದ್ದರು. ಅವರ ದರ್ಬಾರನ್ನು 2013ರಲ್ಲಿ ಹತ್ತಿಕ್ಕಲಾಗಿತ್ತು. ಜನಾರ್ದನ ರೆಡ್ಡಿಗೆ ಈಗಲೂ ಬಳ್ಳಾರಿ ಪ್ರವೇಶಕ್ಕೆ ಅವಕಾಶವಿಲ್ಲ. ಆದರೆ, ಈಗ ಸಂಡೂರಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಮೂಲಕ ಅವರ ಕೋಟೆಯನ್ನು ಮರಳಿ ಕಟ್ಟಿಕೊಡಲು ಎಚ್.ಡಿ ಕುಮಾರಸ್ವಾಮಿಯೇ ಮುಂದಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರತೊಡಗಿವೆ.
ಈಗಾಗಲೇ, ಸ್ವಾಮಿಮಲೈ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಗಣಿ ಸ್ಪೋಟದಿಂದ ಅಲ್ಲಿನ ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನದ ಕಲ್ಲಿನ ಕಂಬಗಳು ಬಿರುಕು ಬಿಟ್ಟಿವೆ. ದೇವಾಲಯದ ಗೋಪುರ ವಾಲಿಕೊಂಡಿದೆ. ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲ ಕಲುಷಿತವಾಗಿದೆ. ವಾಯುಮಾಲಿನ್ಯ ಹೆಚ್ಚುತ್ತಿದೆ. ಸ್ವಾಮಿಮಲೈ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೋರಾಟಗಾರ ಎಸ್.ಆರ್ ಹಿರೇಮಠ್, ‘ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಹಾನಿಯಾದ ಕಾರಣಕ್ಕೆ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸದಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡಿತ್ತು. ಸಂಡೂರು ಕೂಡ ಜೀವವೈವಿಧ್ಯವುಳ್ಳ ಪ್ರದೇಶ. ಇಲ್ಲಿ ಗಣಿಗಾರಿಕೆ ನಡೆಸಲು ಕುಮಾರಸ್ವಾಮಿ ಕಡತಕ್ಕೆ ಸಹಿ ಹಾಕಿದ್ದಾರೆ. ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಈ ವರದಿ ಓದಿದ್ದೀರಾ?: ಯಡಿಯೂರಪ್ಪರನ್ನು ಎದುರಾಕಿಕೊಂಡ ಯಾರೂ ಉಳಿದಿಲ್ಲ- ಆಕೆಯೂ ಸತ್ತಳು; ಬಿಜೆಪಿ ಮುಖಂಡನ ಸ್ಪೋಟಕ ಹೇಳಿಕೆ
‘ಎಚ್.ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಿದ್ದಂತೆ, ತಾವು ಆರು ವರ್ಷಗಳ ಹಿಂದೆ ನೀಡಿದ್ದ ಭರವಸೆಯನ್ನು ಮರೆತಿದ್ದಾರೆ. ತಕ್ಷಣ ತಮ್ಮ ಜೀವಪರಿಸರ ವಿರೋಧಿ ನಿರ್ಧಾರವನ್ನು ಕೈಬಿಡಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಸದ್ಯಕ್ಕೆ, ದೇವದಾರಿಯಲ್ಲಿ ಗಣಿಗಾರಿಕೆ ನಡೆಸಲು ಕುಮಾರಸ್ವಾಮಿ ನೇತೃತ್ವದ ಕೈಗಾರಿಕೆ ಸಚಿವಾಲಯ ಸಮ್ಮತಿ ನೀಡಿದ್ದರೂ, ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಬೇಕಿದೆ. ಅಲ್ಲದೆ, ರಾಜ್ಯ ಸರ್ಕಾರ ಕೂಡ ಒಪ್ಪಿಗೆ ನೀಡಬೇಕಿದೆ. ಹಣಕಾಸು ಸಚಿವಾಲಯದಿಂದ ಅನುಮೋದನೆ ದೊರೆತರೂ, ರಾಜ್ಯ ಸರ್ಕಾರ ಒಪ್ಪಿಗೆ ನೀಡದು ಎಂಬುದನ್ನು ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಧ್ವನಿಸಿದೆ. ಒಂದು ವೇಳೆ, ರಾಜ್ಯ ಸರ್ಕಾರವೂ ಸಮ್ಮತಿ ನೀಡಿದಲ್ಲಿ, ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಕಾನೂನು ಹೋರಾಟಕ್ಕೆ ಕನ್ನಡಿಗರು ಸಿದ್ದವಾಗಬೇಕಿದೆ.