ಈ ದಿನ ಸಂಪಾದಕೀಯ | ಬಿಎಸ್‌ವೈ ಪೋಕ್ಸೊ ಪ್ರಕರಣ; ತನಿಖೆಯೇ ನಡೆಯದೇ ಬಿಜೆಪಿ ನಾಯಕರು ʼಬಿʼ ರಿಪೋರ್ಟ್‌ ಬಯಸಿದ್ದು ಸರಿಯೇ?

Date:

ಯಡಿಯೂರಪ್ಪನವರ ಮೇಲಿನ ಆರೋಪ ನಿಜವೇ, ಸುಳ್ಳೇ ಎಂದು ತೀರ್ಮಾನ ಮಾಡಲು ಕೋರ್ಟ್‌ ಇದೆ. ಅಲ್ಲಿಯೇ ಆರೋಪಮುಕ್ತರಾಗಿ ಬರಲಿ. ಅಲ್ಲಿಯವರೆಗೂ ಬಿಜೆಪಿ ನಾಯಕರು ಬೆದರಿಕೆ ಹಾಕೋದು, ಪ್ರಕರಣವನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡೋದನ್ನು ನಿಲ್ಲಿಸಲಿ.


ಬಿಜೆಪಿಯ
ಹಿರಿಯ ಮುಖಂಡ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಮಾರ್ಚ್‌ನಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣದ ಸಂಬಂಧ ಗುರುವಾರ ಕೋರ್ಟ್‌ ಬಂಧನ ವಾರಂಟ್‌ ಹೊರಡಿಸುತ್ತಲೇ ಬಿಜೆಪಿ ನಾಯಕರು, “ಇದು ರಾಜಕೀಯ ಪ್ರೇರಿತ. ನಾವು ಈ ಪ್ರಕರಣದಲ್ಲಿ ‘ಬಿ’ ರಿಪೋರ್ಟ್‌ ಹಾಕುತ್ತಾರೆ ಎಂದು ನಿರೀಕ್ಷಿಸಿದ್ದೆವು” ಎಂದು ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಬೇಜವಾಬ್ದಾರಿಯ ಹೇಳಿಕೆ. ಬಿ ರಿಪೋರ್ಟ್‌ ಅಂದ್ರೇನು? ಅದನ್ನು ಯಾವಾಗ ಹಾಕುತ್ತಾರೆ ಎಂಬ ಅರಿವು ಬಿಜೆಪಿಯವರಿಗೆ ಇದ್ದಂತಿಲ್ಲ.

“ಯಡಿಯೂರಪ್ಪ ಅವರನ್ನು ಕೆಣಕಿದರೆ ಕಾಂಗ್ರೆಸ್‌ ನಿರ್ನಾಮವಾಗಲಿದೆ” ಎಂದು ಬಿಜೆಪಿ ಬೆದರಿಕೆ ಹಾಕಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕಾಗಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಇದರಲ್ಲಿ ಕಾಂಗ್ರೆಸ್‌ ಷಡ್ಯಂತ್ರ ಏನಿದೆ? ರಾಜಕಾರಣಿ ಅಪರಾಧ ಮಾಡಿದರೆ ಶಿಕ್ಷೆ ಕೊಡುವುದು ಬೇಡವೇ? ಆರೋಪ ಬಂದಾಗ ತನಿಖೆಯನ್ನೇ ನಡೆಸದೇ ಬಿಟ್ಟುಬಿಡಬೇಕೇ? ಬಿಜೆಪಿಯವರಿಗೆ ಆ ಹಿಂದು ಹೆಣ್ಣುಮಗುವಿನ ರಕ್ಷಣೆಯ ಹೊಣೆ ಇಲ್ಲವೇ?

ತಮ್ಮ ಪಕ್ಷದವರ ಮೇಲೆ ಯಾವುದೇ ದೂರು ದಾಖಲಾದರೂ ಅದು ರಾಜಕೀಯ ಷಡ್ಯಂತ್ರ ಎಂದು ಬಡಬಡಾಯಿಸುವ ಬಿಜೆಪಿಗರಿಗೆ, ತಾವು ಅಧಿಕಾರದಲ್ಲಿದ್ದಾಗ ವಿಪಕ್ಷದ ನಾಯಕರ ಮೇಲೆ ದಾಖಲಾದ ಪ್ರಕರಣಗಳೆಲ್ಲ ರಾಜಕೀಯ ಷಡ್ಯಂತ್ರವೇ ಎಂದು ಕೇಳಬೇಕಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ ಹತ್ತು ವರ್ಷಗಳಲ್ಲಿ ಅದೆಷ್ಟು ವಿದ್ಯಾರ್ಥಿಗಳು, ಜೀವಪರ ಹೋರಾಟಗಾರರನ್ನು ಜೈಲಿನಲ್ಲಿಟ್ಟಿದೆ ಎಂಬ ಅರಿವು ಇದೆಯೇ? ಇಬ್ಬರು ಮುಖ್ಯಮಂತ್ರಿಗಳನ್ನು ಚುನಾವಣೆಯ ಹೊಸ್ತಿಲಲ್ಲಿ ಜೈಲಿಗಟ್ಟಿದ್ದ ಮೋದಿ ಅವರಿಗಿಂಥ ದೊಡ್ಡ ದ್ವೇಷ ರಾಜಕಾರಣಿ ಈ ದೇಶದಲ್ಲಿ ಬೇರೆ ಯಾರಿದ್ದಾರೆ!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಒಂದಿಲ್ಲೊಂದು ಷಡ್ಯಂತ್ರ ರೂಪಿಸುವಲ್ಲಿ ತಲ್ಲೀನರಾಗಿದ್ದಾರೆ. ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ದ ರಾಹುಲ್‌ ಗಾಂಧಿಯವರನ್ನು ಕೋರ್ಟ್ ಮೆಟ್ಟಿಲು ಹತ್ತಿಸಿದ್ದಕ್ಕಾಗಿ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮಾನಸಿಕ ಅಸ್ವಸ್ಥೆ ನೀಡಿದ್ದ ದೂರನ್ನು ಆಧರಿಸಿ ರೈತ ನಾಯಕ ಬಿ.ಎಸ್‌ ಯಡಿಯೂರಪ್ಪ ಅವರನ್ನು ಬಂಧಿಸಲು ಹವಣಿಸುತ್ತಿದೆ” ಎಂದಿದೆ ಬಿಜೆಪಿ. ವಾಸ್ತವವಾಗಿ ಇಡೀ ಪ್ರಕರಣವನ್ನು ರಾಜಕೀಯ ಪ್ರೇರಿತ ಎಂದು ಬಿಂಬಿಸಲು ಬಿಜೆಪಿ ಹೊರಟಿದೆ. ದೂರುದಾರೆ ಮಾನಸಿಕ ಅಸ್ವಸ್ಥೆ ಎಂದು ಹೇಳುವ ಬಿಜೆಪಿ ನಾಯಕರು, ಅಪ್ರಾಪ್ತ ಬಾಲಕಿಯ ಅಂಗಾಂಗ ಮುಟ್ಟಿದ ಯಡಿಯೂರಪ್ಪನವರ ಮನಸ್ಥಿತಿಯ ಬಗ್ಗೆ ಏನು ಹೇಳುತ್ತಾರೆ?

ದೂರುದಾರೆ ಮಾಡಿಕೊಂಡ ವಿಡಿಯೊದಲ್ಲಿ ಯಡಿಯೂರಪ್ಪನವರು, “ನಾನು ಏನಾದರೂ ಆಗಿದೆಯಾ ಎಂದು ಪರೀಕ್ಷೆ ಮಾಡಿದೆ ಎಂದು ಹೇಳಿರುವುದು, ಹಣ ಕೊಡುತ್ತೇನೆ” ಎಂದಿರುವುದು ದಾಖಲಾಗಿದೆ. ಈ ಬಗ್ಗೆ ಬಿಜೆಪಿ ನಾಯಕರ ಸಮರ್ಥನೆ ಏನು? ಮೊದಲೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ, ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಸಹಾಯ ಕೇಳಲು ಈ ದೊಡ್ಡ ಮನುಷ್ಯರ ಬಳಿ ಹೋದರೆ ಅವರೂ ಅದೇ ಕಿರುಕುಳ ಮುಂದುವರಿಸಿದ್ದಾರೆ ಎಂದರೆ ಅದ್ಯಾವ ಮನಸ್ಥಿತಿ ಇರಬಹುದು?

ಪೋಕ್ಸೊ ಅಡಿ ದೂರು ದಾಖಲಾಗಲು ಪುರಾವೆಗಳು ಬೇಕು. ಸುಮ್ಮನೆ ದಾಖಲಿಸಲಾಗಲ್ಲ. ಪುರಾವೆ ಆಧಾರದಲ್ಲಿಯೇ ದೂರು ದಾಖಲಾಗಿದೆ. ಕಾಯ್ದೆ ಪ್ರಕಾರ ಪೋಕ್ಸೊ ಅಡಿ ದೂರು ದಾಖಲಾದ ತಕ್ಷಣ ಆರೋಪಿಯನ್ನು ಬಂಧಿಸಬೇಕು. ಆದರೆ ಇಲ್ಲಿ ಈಗಾಗಲೇ ತನಿಖಾಧಿಕಾರಿಗಳು ಲೋಪ ಎಸಗಿದ್ದಾರೆ. ಸಂತ್ರಸ್ತ ಬಾಲಕಿಯ ತಾಯಿಯ ದಿಢೀರ್‌ ಸಾವಾಗಿದೆ. ಈಗ ಬಾಲಕಿಯ ಸಹೋದರ ಈ ಪ್ರಕರಣವನ್ನು ಮುಂದಕ್ಕೊಯ್ಯಬೇಕಿದೆ.

ಸಂತ್ರಸ್ತ ಬಾಲಕಿಯ ಸಹೋದರ ಆರೋಪಿಯ ಬಂಧನ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪ್ರಕಾರ ಬಂಧನ ವಾರಂಟ್‌ ಜಾರಿಯಾಗಿದೆ. ಆದರೆ ಆ ವೇಳೆಗಾಗಲೇ ಯಡಿಯೂರಪ್ಪ ಅವರು ಸಂಪರ್ಕಕ್ಕೆ ಸಿಗದೇ ತಲೆ ಮರೆಸಿಕೊಂಡಿದ್ದಾರೆ. ಬಲಾಢ್ಯರು, ಹಣಬಲ, ಅಧಿಕಾರ ಬಲ ಇರೋರು ತಕ್ಷಣ ಕಾನೂನಿಗೆ ತಲೆಬಾಗಲ್ಲ. ತಪ್ಪಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಾರೆ. ಈ ಪ್ರಕರಣದಲ್ಲೂ ಅದೇ ಆಗಿದೆ. ಯಡಿಯೂರಪ್ಪ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಒಂದು ಅರ್ಜಿ ಸಲ್ಲಿಸಿದರೆ, ನಿರೀಕ್ಷಣಾ ಜಾಮೀನು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳು ಕೃಷ್ಣದೀಕ್ಷಿತ್‌ ಪೀಠದ ಮುಂದೆ ಇಂದು ಬಂದಿವೆ. ಯಡಿಯೂರಪ್ಪ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಜೂ. 17ರಂದು ವಿಚಾರಣೆಗೆ ಹಾಜರಾಗಲು ಆದೇಶಿಸಿದೆ.

ಪೋಕ್ಸೊದಂತಹ ಮಕ್ಕಳ ಹಕ್ಕುಗಳ ರಕ್ಷಣೆಗಿರುವ ಏಕೈಕ ಬಲಿಷ್ಠ ಕಾಯ್ದೆಯನ್ನೂ ಪಾಲಿಸದ ಸರ್ಕಾರ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಯಡಿಯೂರಪ್ಪ ಅವರ ಮೇಲಿನ ಪ್ರಕರಣ ಮಾರ್ಚ್‌ನಲ್ಲಿ ದಾಖಲಾಗಿದೆ. ಸರ್ಕಾರ ಸಿಐಡಿಗೆ ನೀಡಿತ್ತು. ಸಿಐಡಿ ಅಧಿಕಾರಿಗಳು ತಾವಾಗಿಯೇ ಕರ್ತವ್ಯ ಲೋಪ ಎಸಗಿದರಾ ಅಥವಾ ಸರ್ಕಾರವೇ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನು ಬಂಧಿಸಿದರೆ ಅದು ತಮ್ಮ ಮತಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಧಾನ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತೇ ಎಂಬ ಅನುಮಾನ ಬರುತ್ತದೆ.

ಅತ್ತ ಸರ್ಕಾರ, ತನಿಖಾಧಿಕಾರಿಗಳು ಮೂರು ತಿಂಗಳು ಯಾಕೆ ಸುಮ್ಮನಿದ್ದರು ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ. ಎರಡು ದಿನಗಳ ಹಿಂದೆ ಹೋರಾಟಗಾರರು ಮಹಿಳೆಯರ ಕೊಲೆ , ಲೈಂಗಿಕ ದೌರ್ಜನ್ಯದ ವಿರುದ್ಧ ಹಕ್ಕೊತ್ತಾಯ ಸಭೆ ನಡೆಸಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ರಚನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯವನ್ನು ಬೆಟ್ಟು ಮಾಡಿ ತೋರಿಸಿದ್ದಾರೆ. ಇತ್ತ ಬಿಜೆಪಿ ನಾಯಕರು ತಮ್ಮ ನಾಯಕರ ಮೇಲೆ, ಕಾರ್ಯಕರ್ತರ ಮೇಲೆ ಯಾವುದೇ ಪ್ರಕರಣ ದಾಖಲಾದರೂ ಅದು ರಾಜಕೀಯ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ.

ಹಾಗಿದ್ದರೆ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಪಾರು ಮಾಡುವ ಬಗೆ ಹೇಗೆ? ಯಡಿಯೂರಪ್ಪನವರ ಮೇಲಿನ ಆರೋಪ ನಿಜವೇ, ಸುಳ್ಳೇ ಎಂದು ತೀರ್ಮಾನ ಮಾಡಲು ಕೋರ್ಟ್‌ ಇದೆ. ಅಲ್ಲಿಯೇ ಆರೋಪಮುಕ್ತರಾಗಿ ಬರಲಿ. ಅಲ್ಲಿಯವರೆಗೂ ಬಿಜೆಪಿ ನಾಯಕರು ಬೆದರಿಕೆ ಹಾಕೋದು, ಪ್ರಕರಣವನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡೋದನ್ನು ನಿಲ್ಲಿಸಲಿ. ಮೋದಿ ಅವರ ಬೇಟಿ ಬಚಾವೋ ಘೋಷಣೆಗೆ ಸಾಥ್‌ ನೀಡಲಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...

ಈ ದಿನ ಸಂಪಾದಕೀಯ | ವರ್ಷದಿಂದ ನಡೆಯುತ್ತಲೇ ಇರುವ ಅಂಬಾನಿ ಮದುವೆಯೂ, ಪೌಷ್ಟಿಕ ಆಹಾರ ಸಿಗದ 67 ಲಕ್ಷ ಶಿಶುಗಳೂ…

ಆಹಾರ ಕ್ಷೇತ್ರ ಕಾರ್ಪೊರೇಟ್‌ ಕುಳಗಳ ಕೈವಶವಾದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ...