ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಇಂದು ವಿಧಾನ ಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಜಾಥಾಗೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಕ್ತದಾನಿಗಳೊಂದಿಗೆ ಹೆಜ್ಜೆ ಹಾಕಿದರು.
ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 14ನೇ ರಂದು ಜಗತ್ತಿನಾದ್ಯಂತ 2004 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವರಕ್ತದಾನಿಗಳ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಜಾಥಾ ಮೂಲಕ ಆಚರಿಸಿ, ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ರಕ್ತವನ್ನು ಸಕಾಲದಲ್ಲಿ ಪೂರೈಕೆ ಮಾಡುವ ಮುಖಾಂತರ ಜೀವಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಗೌರವಿಸಿ ಇತರರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಇಂದು ಆರೋಗ್ಯ ಇಲಾಖೆ ಹಾಗೂ KSAPS ಸಂಸ್ಥೆಯಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಮಾನವನ ರಕ್ತದ ಪ್ರತಿಯೊಂದು ಹನಿಯೂ ಅಮೃತಕ್ಕೆ ಸಮಾನ. ರಕ್ತದಾನ ಮಾಡುವ ನಮ್ಮ ಒಂದು ಜವಾಬ್ದಾರಿಯುತ ನಡೆ ಮತ್ತೊಬ್ಬರ ಬಾಳಿನಲ್ಲಿ ಅತೀದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಇಂದು ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ರಕ್ತದಾನ ಕುರಿತು ಜಾಗೃತಿ ಮೂಡಿಸಲು ಹೈಕೋರ್ಟ್ ನ ಮುಂಭಾಗದಿಂದ ಕಂಠೀರಬವ ಕ್ರೀಡಾಂಗಣದವರೆಗೆ ವಾಕಾಥಾನ್… pic.twitter.com/jMdgiD1Mwg
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 14, 2024
“20 ವರ್ಷಗಳ ರಕ್ತದಾನದ ಸಂಭ್ರಮಾಚರಣೆ ಸಂದರ್ಭದಲ್ಲಿ ಧನ್ಯವಾದ ರಕ್ತದಾನಿಗಳೇ, “Your Gift of Life is Priceless” ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ರಕ್ತದಾನಿಗಳ ದಿನಾಚರಣೆಯನ್ನ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, “ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ. ರಕ್ತದಾನ ಮಾಡುವ ಮೂಲಕವು ಒಬ್ಬರ ಜೀವ ಉಳಿಸಬಹುದು. ರಕ್ತದಾನ ಮಾಡುವ ಮೂಲಕ ಹಲವರ ಜೀವನದಲ್ಲಿ ಬದಲಾವಣೆ ತರಬಹುದು” ಎಂದು ಹೇಳಿದರು.
“ದೇಶದಲ್ಲಿ ರಕ್ತಕ್ಕಿರುವ ಬೇಡಿಕೆಯನ್ನ ಗಮನದಲ್ಲಿಟ್ಟುಕೊಂಡು ರಕ್ತದಾನಕ್ಕೆ ನಾವೆಲ್ಲರೂ ಮುಂದಾಗಬೇಕಿದೆ. ಹೆಚ್ಚು ರಕ್ತದಾನದ ಅಗತ್ಯತೆ ಇದೆ” ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ? ಪೋಕ್ಸೋ ಪ್ರಕರಣ | ಬಿಎಸ್‌ವೈ ಬಂಧಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ
ರಕ್ತದಾನದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವತ್ತ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಅವರು ಹಮ್ಮಿಕೊಂಡಿದ್ದ ಈ ರೀತಿಯ ಜಾಥಾ ಕಾರ್ಯಕ್ರಮಗಳು ಉತ್ತಮವಾದವು ಎಂದರು. ಜಾಥಾದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂ ಸೇವಕರು ರಕ್ತದಾನ ಮಾಡುವ ಕುರಿತು ಪ್ರತಿಜ್ಞೆ ಸ್ವೀಕರಿದರು.
