ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಹಾಗೆಯೇ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತರನ್ನು ವಿಶ್ವ (22) ಮತ್ತು ಸೂರ್ಯ (18) ಎಂದು ಗುರುತಿಸಲಾಗಿದ್ದು, ಇಬ್ಬರೂ ಬೆಂಗಳೂರಿನ ಬೊಮ್ಮಸಂದ್ರದವರಾಗಿದ್ದಾರೆ.
ವಿಶ್ವ ಡಿಪ್ಲೊಮಾ ಕೋರ್ಸ್ ಓದುತ್ತಿದ್ದರೆ, ಆತನ ಸ್ನೇಹಿತ ಸೂರ್ಯ ಬೆಂಗಳೂರಿನಲ್ಲಿ ಎರಡನೇ ವರ್ಷದ ಪ್ರಿ-ಯೂನಿವರ್ಸಿಟಿ ವಿದ್ಯಾರ್ಥಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ | 28 ದಿನಗಳಲ್ಲಿ 74,915 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ
ಇಬ್ಬರು ವಿದ್ಯಾರ್ಥಿಗಳು ಮೈಸೂರಿನಿಂದ ಹಿಂತಿರುಗುತ್ತಿದ್ದ ಕಾರನ್ನು ಸುಹಾಸ್ ಚಲಾಯಿಸುತ್ತಿದ್ದ. ಶುಕ್ರವಾರ ರಾತ್ರಿ ಇಲ್ಲಿನ ರಾಮನಗರದ ಕೆಂಪೈನದೊಡ್ಡಿ ಗ್ರಾಮದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ.
ಸೂರ್ಯ ಮತ್ತು ವಿಶ್ವ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು ಅಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ತೀವ್ರ ಗಾಯಗೊಂಡಿರುವ ಕಾರು ಚಾಲಕ ಸುಹಾಸ್ ಅಪಾಯದಿಂದ ಪಾರಾಗಿದ್ದಾನೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಭಾರತೀಯ ದಂಡ ಸಂಹಿತೆಯ ಸೆಕ್ಷನ್ 297 (ಸಾರ್ವಜನಿಕ ಮಾರ್ಗದಲ್ಲಿ ಅತಿರೇಕವಾಗಿ ಚಾಲನೆ ಮಾಡುವುದು ಅಥವಾ ಸವಾರಿ ಮಾಡುವುದು) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವು ಸಂಭವಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ” ಎಂದು ಹೇಳಿದರು.