ಛತ್ತೀಸ್ಗಢದಲ್ಲಿ ನಕ್ಸಲರ (ಮಾವೋವಾದಿಗಳ) ಹತ್ಯೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಛತ್ತೀಸ್ಗಢ ಗೃಹ ಸಚಿವ ವಿಜಯ್ ಶರ್ಮಾ, “ನಕ್ಸಲಿಸಂ ಅಂತ್ಯಗೊಳಿಸಲು ನಕ್ಸಲರನ್ನು ಕೊಲ್ಲುವುದು ಸರ್ಕಾರದ ಉದ್ದೇಶವಲ್ಲ” ಎಂದು ಹೇಳಿದರು.
ಇಂಡಿಯನ್ ಎಕ್ಸ್ಪ್ರೆಸ್ ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ್ ಶರ್ಮಾ, ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಾವೋವಾದಿಗಳ ಹತ್ಯೆ ಹೆಚ್ಚಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. “ಅಧಿಕಾರಿಗಳು ಒಂದೇ ಆದರೆ ಸರ್ಕಾರ ಮತ್ತು ನಿರ್ಣಯ ಬದಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಏನೂ ಬದಲಾಗಿಲ್ಲ, ಕೇವಲ ಮೋದಿಯವರ ಸರ್ಕಾರ ಮತ್ತು ಅಮಿತ್ ಶಾ ಅವರ ನಿರ್ಣಯ ಬದಲಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಛತ್ತೀಸ್ಘಡ | ಇಬ್ಬರು ಮಹಿಳೆಯರು ಸೇರಿದಂತೆ ಪೊಲೀಸರಿಗೆ ಶರಣಾದ 33 ನಕ್ಸಲರು
“ನಕ್ಸಲಿಸಂ ಅಂತ್ಯಗೊಳಿಸಲು ನಕ್ಸಲರನ್ನು ಕೊಲ್ಲುವುದು ಸರ್ಕಾರದ ಉದ್ದೇಶವಲ್ಲ. ಶರಣಾದ ನಕ್ಸಲರ ಪುನರ್ವಸತಿ, ಅವರಿಗೆ ಎಲ್ಲಾ ಸರ್ಕಾರಿ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳುವುದು, ಉತ್ತಮ ಶರಣಾಗತಿ ನೀತಿ, ನಕ್ಸಲಿಸಂನ ಸಂತ್ರಸ್ತರಿಗೆ ವಿಶೇಷ ಪರಿಹಾರ ಕ್ರಮಗಳು ಮತ್ತು ಹೊಸ ಜನರು ನಕ್ಸಲರು ಆಗದಂತೆ ನೋಡಿಕೊಳ್ಳುವುದು ನಮ್ಮ ದೊಡ್ಡ ಕಾರ್ಯತಂತ್ರದ ಒಂದು ಸಣ್ಣ ಭಾಗವಾಗಿದೆ. ಇದೆಲ್ಲವೂ ನಕ್ಸಲಿಸಂ ಅಂತ್ಯಗೊಳಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಸಮರ್ಥಿಸಿಕೊಂಡರು.
“ಮೊದಲ ಎರಡು ಪ್ರಮುಖ ಎನ್ಕೌಂಟರ್ಗಳಲ್ಲಿ, ಮಾವೋವಾದಿಗಳು ತಮ್ಮ ಸದಸ್ಯರ ಹತ್ಯೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮೂರನೇ ಎನ್ಕೌಂಟರ್ನಲ್ಲಿ ಅವರು ಆರೋಪ ಮಾಡಿದ್ದಾರೆ. ನಾವು ಎನ್ಕೌಂಟರ್ನಲ್ಲಿ ಹತರಾದ ಮಾವೋವಾದಿಗಳ ಕ್ರಿಮಿನಲ್ ದಾಖಲೆಯನ್ನು ಹೊರತೆಗೆದಿದ್ದೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಛತ್ತೀಸ್ಗಢ | ನಕ್ಸಲ್-ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ: ಏಳು ಮಂದಿ ನಕ್ಸಲರು ಬಲಿ
ಛತ್ತೀಸ್ಗಢದಲ್ಲಿ ಕಂಕೇರ್, ಕೊಂಡಗಾಂವ್, ನಾರಾಯಣಪುರ, ಬಸ್ತಾರ್, ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾ ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ ಈ ವರ್ಷದ ಆರು ತಿಂಗಳಲ್ಲೇ ಎನ್ಕೌಂಟರ್ ನಡೆಸಿ 131 ನಕ್ಸಲರನ್ನು ಕೊಲ್ಲಲಾಗಿದೆ.
#WATCH | Raipur: Chhattisgarh CM Vishnu Deo Sai meets the jawans injured during an encounter with Naxals in the Narayanpur district.
STF constable Nitesh Ekka was martyred in the encounter. pic.twitter.com/Ewmzj5Qs7a
— ANI MP/CG/Rajasthan (@ANI_MP_CG_RJ) June 16, 2024
ಇತ್ತೀಚೆಗೆ ಛತ್ತೀಸ್ಗಢದ ಅಬುಜ್ಮದ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಎಂಟು ನಕ್ಸಲರ ಹತ್ಯೆ ಮಾಡಲಾಗಿದೆ. ಈ ಎನ್ಕೌಂಟರ್ನಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಕೂಡಾ ಸಾವನ್ನಪ್ಪಿದ್ದಾರೆ. ಮೇ 23ರಂದು ನಾರಾಯಣಪುರ-ಬಿಜಾಪುರ ಗಡಿಯಲ್ಲಿ ಏಳು ನಕ್ಸಲರನ್ನು ಕೊಲ್ಲಲಾಗಿದೆ.
ಮೇ 10ರಂದು ಬಿಜಾಪುರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಕನಿಷ್ಠ 12 ನಕ್ಸಲೀಯರು ಸಾವನ್ನಪ್ಪಿದ್ದರು. ಏಪ್ರಿಲ್ 30ರಂದು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ 10 ನಕ್ಸಲರ ಹತ್ಯೆ ಮಾಡಲಾಗಿದೆ.