ಶಾಲಾ ಪಠ್ಯಕ್ರಮದಲ್ಲಿ ಕೇಸರೀಕರಣದ ಆರೋಪಗಳನ್ನು ತಳ್ಳಿಹಾಕಿರುವ ಎನ್‌ಸಿಇಆರ್‌ಟಿ ನಿರ್ದೇಶಕರಾದ ದಿನೇಶ್ ಪ್ರಸಾದ್ ಸಕ್ಲಾನಿ, ಗುಜರಾತ್ ಗಲಭೆಗಳು ಹಾಗೂ ಬಾಬ್ರಿ ಮಸೀದಿ ಧ್ವಂಸದ ವಿಷಯಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಮಾರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಠ್ಯಗಳಲ್ಲಿ ಇಂತಹ ವಿಷಯಗಳಿಂದ ಗಲಭೆಗಳು ಹಾಗೂ ಖಿನ್ನತೆಗೊಳಗಾದ ನಾಗರಿಕರನ್ನು ಸೃಷ್ಟಿಸಬಹುದು. ಆದ ಕಾರಣದಿಂದ ಗಲಭೆ ಹಾಗೂ ನೋವುಗಳು ಪಠ್ಯಗಳ ಭಾಗವಾಗಬಾರದು ಎಂದು ಹೇಳಿದ್ದಾರೆ.
ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಗುಜರಾತ್ ಗಲಭೆ ಅಥವಾ ಬಾಬ್ರಿ ಧ್ವಂಸದ ವಿಷಯಗಳ ಬಗ್ಗೆ ಮಾತನಾಡಿದ ದಿನೇಶ್ ಪ್ರಸಾದ್, “ನಾವು ಏಕೆ ಶಾಲಾ ಪಠ್ಯಪುಸ್ತಕಗಳಲ್ಲಿ ಗಲಭೆಗಳನ್ನು ಬೋಧಿಸಬೇಕು? ನಾವು ಸಕಾರಾತ್ಮಕ ನಾಗರಿಕರನ್ನು ಸೃಷ್ಟಿಸಬೇಕೆ ವಿನಾ ಹಿಂಸಾತ್ಮಕ ಅಥವಾ ಖಿನ್ನತೆಗೊಳಪಡಿಸುವ ನಾಗರಿಕರನ್ನು ಸೃಷ್ಟಿಸುವುದಿಲ್ಲ” ಎಂದು ಹೇಳಿದರು.
“ನಮ್ಮ ವಿದ್ಯಾರ್ಥಿಗಳನ್ನು ಆಕ್ರಮಣಕಾರಿ, ಸಮಾಜದಲ್ಲಿ ದ್ವೇಷ ಸೃಷ್ಟಿಸುವ ಅಥವಾ ದ್ವೇಷದ ಸಂತ್ರಸ್ತರನ್ನಾಗುವ ರೀತಿಯಲ್ಲಿ ನಾವು ಏಕೆ ಮಕ್ಕಳಿಗೆ ಬೋಧಿಸುತ್ತೇವೆ?ಇದು ವಿದ್ಯಾಭ್ಯಾಸದ ಉದ್ದೇಶವೆ? ಗಲಭೆಗಳ ಬಗ್ಗೆ ಎಳೆಯ ಮಕ್ಕಳಲ್ಲಿ ನಾವೇಕೆ ಬೋಧಿಸಬೇಕು, ಅವರು ಬೆಳೆಯುತ್ತಾ ಇವುಗಳ ಬಗ್ಗೆ ಕಲಿಯುತ್ತಾರೆ. ಮತ್ಯೇಕೆ ಪಠ್ಯಗಳಲ್ಲಿ ಬೋಧಿಸಬೇಕು. ಬೆಳೆಯುತ್ತ ಸಮಾಜದಲ್ಲಿ ಏನೇನು ಉಂಟಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಗಲಭೆ ಹಾಗೂ ನೋವಿಗೆ ಸಂಬಂಧಿಸಿದ ವಿಷಯಗಳು ಇಲ್ಲಿ ಅಪ್ರಸ್ತುತ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು
ನೂತನವಾಗಿ ಪರಿಷ್ಕೃತವಾದ ಪುಸ್ತಕಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದಿನೇಶ್ ಪ್ರಸಾದ್ ಈ ಹೇಳಿಕೆ ನೀಡಿದ್ದಾರೆ. 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿ ಪರಿಷ್ಕೃತಗೊಳಿಸಲಾಗಿದ್ದು, ಬಾಬ್ರಿ ಮಸೀಸಿ ಧ್ವಂಸವನ್ನು ಉಲ್ಲೇಖಿಸಲಾಗಿಲ್ಲ. ಆದರೆ ಮೂರು ಗೊಮ್ಮಟ ರಚನೆಯ ಬಗ್ಗೆ ತಿಳಿಸಲಾಗಿದೆ. ಅಯೋಧ್ಯೆ ವಿಭಾಗವನ್ನು 4ರಿಂದ 2 ಪುಟಗಳಿಗೆ ಕತ್ತರಿ ಹಾಕಲಾಗಿದೆ ಹಾಗೂ ಹಿಂದಿನ ಆವೃತ್ತಿಗಳ ವಿವರಗಳನ್ನು ಬಿಡಲಾಗಿದೆ.
ಪರಿಷ್ಕೃತ ಕತ್ತರಿ ಹಾಕಿರುವ ವಿಷಯಗಳಲ್ಲಿ ಗುಜರಾತ್‌ನಿಂದ ಸೋಮನಾಥ್‌ವರೆಗೆ ಬಿಜೆಪಿಯ ರಥಯಾತ್ರೆ,ಕರಸೇವಕರ ಪಾತ್ರ, ಬಾಬ್ರಿ ಮಸೀದಿ ಧ್ವಂಸದ ನಂತರ ಉಂಟಾದ ಗಲಭೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹಾಗೂ ಅಯೋಧ್ಯೆಯ ಘಟನೆಗಳ ಬಗ್ಗೆ ಬಿಜೆಪಿ ವಿಷಾದದ ವಿಷಯಗಳು ಸೇರಿವೆ. ಮೊಘಲರ ಸಾಧನೆಗಳನ್ನು ಅಳಿಸಲಾಗಿದೆ. ಸೇರಿಸಲಾದ ಹೊಸ ಭಾಗಗಳಲ್ಲಿ ನೂತನ ಸಂಸತ್ತಿನ ನಿರ್ಮಾಣ ವಿಷಯವಿದೆ.
“ಭಾರತೀಯ ಜ್ಞಾನ ಪದ್ಧತಿಯನ್ನು ಸೇರಿಸಿದರೆ ಅದು ಕೇಸರಿಕರಣ ಹೇಗಾಗುತ್ತದೆ? ದೆಹಲಿಯ ಮೆಹ್ರೌಲಿನಲ್ಲಿನ ಸ್ಥಾವರ ಹಾಗೂ ಅದರ ನಿರ್ಮಾತೃಗಳ ಬಗ್ಗೆ ಬೊಧಿಸಿದರೆ ಕೇಸರೀಕರಣ ಹೇಗಾಗುತ್ತದೆ” ಎಂದು ದಿನೆಶ್ ಪ್ರಸಾದ್ ಪ್ರಶ್ನಿಸಿದರು.
ಹೆಚ್‌ಎನ್‌ಬಿ ಗರ್‌ವಾಲ್ ವಿವಿಯ ಪುರಾತನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ದಿನೇಶ್ ಪ್ರಸಾದ್ ಅವರನ್ನು 2022ರಲ್ಲಿ ಎನ್‌ಸಿಇಆರ್‌ಟಿ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇವರು ಅಧಿಕಾರ ಸ್ವೀಕರಿಸಿದ ನಂತರ ಪಠ್ಯಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ ಎಂಬ ಆರೋಪವಿದೆ.
