ತುಮಕೂರು | ಕ್ರೌರ್ಯದ ಆಚೆಗೂ ಮಾನವೀಯ ಬದುಕಿದೆ: ಡಿಜಿಪಿ ರವಿಕಾಂತೇಗೌಡ

Date:

Advertisements

ಕ್ರೌರ್ಯ, ಹಿಂಸೆ, ಅತ್ಯಾಚಾರ, ಅಸಮಾನತೆಯಂತಹ ಅಮಾನವೀಯ ನಡೆಗಳ ಆಚೆಗೂ ಒಂದು ಮಾನವೀಯ ಬದುಕಿದೆ ಎಂಬುದನ್ನು ತೋರಿಸಿಕೊಡಬೇಕು. ಇದು ಸಾಹಿತ್ಯ ಮತ್ತು ಸಂಗೀತದಿಂದ ಸಾಧ್ಯ ಎಂದು ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಡಾ ಬಿ ಆರ್ ರವಿಕಾಂತೇಗೌಡ ವ್ಯಾಖ್ಯಾನಿಸಿದರು.

ತುಮಕೂರು ನಗರದ ಕನ್ನಡ ಭವನದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಆಯೋಜಿಸಿದ್ದ ವೀಚಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಪ್ರಸ್ತುತ ದೈನಂದಿನ ಬದುಕನ್ನು ಗಮನಿಸುತ್ತಾ ಹೋದರೆ ಮನುಷ್ಯನ ರಕ್ತ ಚೆಲ್ಲಾಡುವುದು, ಅತ್ಯಾಚಾರ, ಅನಾಚಾರಗಳೇ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಇವೆನ್ನೆಲ್ಲಾ ನೋಡುತ್ತಾ ನಾವು ಭ್ರಮನಿರಸನಿಗಳಾಗುವುದು ಬೇಡ. ಇದರಾಚೆಗೂ ಒಂದು ಬದುಕಿದೆ ಎಂಬುದನ್ನು ನಾವು ಮನಗಾಣಬೇಕು. ಆ ಕೆಲಸವನ್ನು ಸಾಹಿತ್ಯ ಮತ್ತು ಸಂಗೀತ ವಲಯದಲ್ಲಿರುವವರು ಮಾಡಬೇಕು” ಎಂದು ಪ್ರತಿಪಾದಿಸಿದರು.

Advertisements

“ಸಾಹಿತ್ಯ ಚಟುವಟಿಕೆಗಳಲ್ಲಿ ನಿರತರಾಗಿರುವವರಿಗೆ ಕೆಲವೊಮ್ಮೆ ನಾವು ಬರೆಯುವುದೆಲ್ಲಾ ನಿರರ್ಥಕ ಎನ್ನಿಸುವುದುಂಟು. ಆದರೆ ಈ ಬದುಕು ಹೀಗೆಯೇ ಇರುವುದಿಲ್ಲ, ಅದು ಬದಲಾಗುತ್ತದೆ. ನಮ್ಮಿಂದ ಏನೂ ಪ್ರಯೋಜನವಿಲ್ಲ ಎಂದುಕೊಂಡರೆ ಯಾರೂ ಇಲ್ಲದಂತಾಗುತ್ತಾರೆ. ಕ್ರೌರ್ಯಗಳ ಆಚೆ ಇರುವ ಮಾನವೀಯ ಬದುಕನ್ನು ನಾವು ತೋರಿಸಿಕೊಡಬೇಕು. ಕ್ರೂರತೆಯಿಂದ ಮನುಷ್ಯತ್ವದೆಡೆಗೆ ಬದಲಾಯಿಸುವ ಪ್ರಯತ್ನ ಮಾಡಬೇಕು” ಎಂದರು.

“ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚು ಜನ ಸೇರುವುದಿಲ್ಲವೆಂದು ಹತಾಶರಾಗಬೇಕಾಗಿಲ್ಲ. ಏಕೆಂದರೆ, ಸಾಹಿತ್ಯ ಕ್ಷೇತ್ರ ಸಾರ್ವಜನಿಕ ಸಭೆಯಲ್ಲ. ಕೆಲವೇ ಆಸಕ್ತರು ಇದ್ದರೂ ಸಾಕು. ಅದು ನೂರಾರು ಜನರಿಗೆ ತಲುಪುತ್ತದೆ. ಜನ ಕಡಿಮೆ ಇದ್ದಾರೆಂದು ಯಾವತ್ತೂ ಮುಜುಗರಗೊಳ್ಳಬೇಡಿ” ಎಂದು ಸಾಹಿತಿಗಳಿಗೆ, ಬರಹಗಾರರಿಗೆ, ಸಾಹಿತ್ಯ ಸಂಘಟಕರಿಗೆ ರವಿಕಾಂತೇಗೌಡ ಅವರು ಕಿವಿಮಾತು ಹೇಳಿದರು.

“ಪ್ಯಾಲೆಸ್ತೇನ್, ಉಕ್ರೇನ್ ದೇಶಗಳ ಸ್ಥಿತಿಗತಿಗಳನ್ನು ಗಮನಿಸಿದರೆ ಅಲ್ಲಿ ಬದುಕಿಗಾಗಿ, ಕುಟುಂಬದ ಮಕ್ಕಳ ರಕ್ಷಣೆಗಾಗಿ ಹೇಗೆ ಹೋರಾಡುತ್ತಿದ್ದಾರೆ ಎಂಬುದರ ಅರಿವಾಗುತ್ತದೆ. ನಮ್ಮಲ್ಲಿ ಅಂತಹ ವಾತಾವರಣ ಏನೂ ಇಲ್ಲ. ಆದರೆ ಮನೋದೌರ್ಬಲ್ಯ, ಕ್ರೌರ್ಯ ಮನಸ್ಸುಗಳು ಹೆಚ್ಚುತ್ತಿವೆ. ಇದರಿಂದ ಮಾನವೀಯ ಗುಣಗಳು ಕಣ್ಮರೆಯಾಗುತ್ತಿವೆ. ಪರಸ್ಪರ ಪ್ರೀತಿಸುವ, ಒಬ್ಬರನ್ನೊಬ್ಬರು ಗೌರವಿಸುವ ಪ್ರಜ್ಞೆ ನಾಗರಿಕರಲ್ಲಿ ಮೂಡಿದಾಗ ಪೊಲೀಸರ ಕೆಲಸವೂ ಕಡಿಮೆಯಾಗುತ್ತದೆ. ದುರಂತವೆಂದರೆ, ನಾಗರಿಕ ಸಮಾಜದಲ್ಲಿ ಪೊಲೀಸರ ಕೆಲಸ ಹೆಚ್ಚಾಗುತ್ತಿದೆ. ಇದು ಆಗಬಾರದು. ಯಾವತ್ತೂ ಸಹ ಸಮಾಜದಲ್ಲಿ ಪೊಲೀಸರ ಪಾತ್ರ ಕಡಿಮೆ ಇರಬೇಕು” ಎಂದರು.

“ಮನುಷ್ಯನನ್ನು ಕೊಲ್ಲುವ ಯಂತ್ರಗಳು, ಶಸ್ತ್ರಾಸ್ತ್ರಗಳು, ತಂತ್ರಜ್ಞಾನ ಹೆಚ್ಚುತ್ತಿವೆ. ಇದಕ್ಕೆ ವಿರುದ್ಧವಾಗಿ ಮನುಷ್ಯತ್ವ ರೂಪಿಸುವ ಹೊಣೆಗಾರಿಕೆ ಕಡಿಮೆಯಾಗುತ್ತಿದೆ. ಸಾಹಿತ್ಯ ಕ್ಷೇತ್ರ ಈ ಪಾತ್ರವನ್ನು ವಹಿಸಬೇಕು. ಬರಹಗಳಿಂದಲೇ ಮನುಷ್ಯರನ್ನು ಬದಲಾಯಿಸುವ ವಾತಾವರಣ ನಿರ್ಮಾಣವಾಗಬೇಕು. ಸಾಹಿತ್ಯ ಕೃತಿಗಳನ್ನು ಪ್ರೋತ್ಸಾಹಿಸಬೇಕು” ಎಂದರು.

ಕವಿ ವೀಚಿ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, “ವೀಚಿ ಅವರು ಕವಿಯಾಗಿ ಒಬ್ಬ ವ್ಯಕ್ತಿಯಾಗಿರಲಿಲ್ಲ. ಸಾಮಾಜಿಕ ಬಡಿಗೋಲಿನ ಶಕ್ತಿಯಾಗಿದ್ದರು. ಇವರ ಜೊತೆ ಕಾರ್ಮಿಕ ಹೋರಾಟಗಾರ ಕೆ ಆರ್ ನಾಯಕ್ ಮತ್ತೋರ್ವ ಸಾಹಿತಿ ಪ್ರೊ ಹೆಚ್ ಜಿ ಸಣ್ಣಗುಡ್ಡಯ್ಯ ಜೊತೆಗಾರರಾಗಿದ್ದರು. ಇವರು ತುಮಕೂರಿನಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದರು” ಎಂದು ಬಣ್ಣಿಸಿದರು.

“ವೀಚಿ ಅವರು ರಾಜಕಾರಣಕ್ಕೆ ಬಂದರೂ ಕೂಡಾ ಯಾವ ಪಕ್ಷವನ್ನೂ ಸೇರಿರಲಿಲ್ಲ. ತಮ್ಮ ವ್ಯಕ್ತಿಗತ, ಸೈದ್ಧಾಂತಿಕ ಚೌಕಟ್ಟಿನಲ್ಲಿಯೇ ಬದುಕು ಮತ್ತು ಬರಹವನ್ನು ರೂಪಿಸಿಕೊಂಡು ಬಂದರು. ನನಗೆ ನನ್ನ ಕಾವ್ಯವೇ ಶಕ್ತಿ ಎನ್ನುತ್ತಿದ್ದರು. ಅಂತಹ ಹೋರಾಟಗಾರರು ಇಂದಿನ ಕಾಲಘಟ್ಟಕ್ಕೆ ಅನಿವಾರ್ಯ. ಇಂದಿನ ದುರಿತ ಕಾಲದೊಳಗೆ ವೀಚಿಯಂತಹವರ ಧ್ವನಿ ಇದ್ದಿದ್ದರೆ ವರ್ತಮಾನವೇ ಬೇರೆಯಾಗಿರುತ್ತಿತ್ತು. ಈಗಿನ ಸಾಮಾಜಿಕ ಸ್ಥಿತ್ಯಂತರ ಮತ್ತು ದುರಂತಗಳಿಗೆ ನಾವುಗಳೆಲ್ಲ ಹೊಣೆಗಾರರು” ಎಂದರು.

ಅಧ್ಯಕ್ಷತೆ ವಹಿಸಿದ್ದ ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಜಾಪ್ರಗತಿ ಸಂಪಾದಕ ಎಸ್ ನಾಗಣ್ಣ ಮಾತನಾಡಿ, “ಕಳೆದ 24 ವರ್ಷಗಳಿಂದ ವೀಚಿ ಸಾಹಿತ್ಯ ಪ್ರತಿಷ್ಠಾನದ ಮೂಲಕ ಹೊಸ ಹೊಸ ಸಾಹಿತಿಗಳನ್ನು ಗುರುತಿಸಿಕೊಂಡು ಬರಲಾಗುತ್ತಿದೆ. ನಾಡಿನ ಎಲ್ಲ ಕಡೆಗಳಿಂದ ಕೃತಿಗಳನ್ನು ಆಹ್ವಾನಿಸಿ ಪಾರದರ್ಶಕ ನೆಲೆಯಲ್ಲಿ ಆಯ್ಕೆ ಮಾಡಿಕೊಂಡು ಬರಲಾಗಿದೆ. ಅದರ ಜವಾಬ್ದಾರಿಯನ್ನು ಪ್ರೊ ಎಸ್ ಜಿ ಎಸ್ ಅವರಿಗೆ ನೀಡಲಾಗಿದ್ದು, ಅವರ ಸೂಚನೆಯಂತೆಯೇ ತೀರ್ಪುಗಾರರನ್ನು ಆಯ್ಕೆ ಮಾಡಿ ಆಯ್ಕೆ ಸಮಿತಿಯ ತೀರ್ಮಾನದಂತೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಾ ಬರಲಾಗಿದೆ” ಎಂದರು.

“ಸಾಹಿತ್ಯ ಕಾರ್ಯಕ್ರಮಗಳಿಗೆ ಸಾಹಿತಿಗಳೇ ಬರುವುದಕ್ಕಿಂತ ಇತರೆ ಕ್ಷೇತ್ರಗಳಲ್ಲಿರುವ ಸಾಹಿತ್ಯಾಸಕ್ತರು ಆಗಮಿಸಿದರೆ ಮತ್ತಷ್ಟು ಗೌರವ ಹೆಚ್ಚುತ್ತದೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಉನ್ನತ ಪೊಲೀಸ್ ಹುದ್ದೆಯಲ್ಲಿರುವ ರವಿಕಾಂತೇಗೌಡ ಅವರು ತಮ್ಮ ವೃತ್ತಿ ಶೈಲಿಯ ಪದ ಬಳಕೆಗಿಂತ ಸಾಹಿತ್ಯಾತ್ಮಕ ಪದಗಳಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಇಂತಹವರು ಈ ಕಾರ್ಯಕ್ರಮಗಳಿಗೂ ಭಾಗಿಯಾದಾಗ ಎಲ್ಲರ ಮನಸ್ಥಿತಿ ಅರಿಯಲು ಸಹಕಾರಿಯಾಗುತ್ತದೆ. ಹೃದಯವು ವಿಶಾಲವಾಗುತ್ತದೆ” ಎಂದರು.

ಪ್ರಶಸ್ತಿ ಪುರಸ್ಕೃತ ಕೃತಿ ಮತ್ತು ಕೃತಿಕಾರರನ್ನು ಕುರಿತು ತೀರ್ಪುಗಾರರಾದ ಡಾ.ಗೀತಾ ವಸಂತ, ಡಾ ಎಸ್ ಗಂಗಾಧರಯ್ಯ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಉತ್ತರ ಕರ್ನಾಟಕದ ಭಾಗದಲ್ಲಿ ಗಮಕ ಕಾವ್ಯವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು: ಡಾ ಎ ವಿ ಪ್ರಸನ್ನ

ವಿನೂತನ ಕಥನ ಕಾರಣ ಸಾಹಿತ್ಯ ವಿಮರ್ಶೆಗಾಗಿ ಡಾ ಬಿ ಜನಾರ್ಧನ ಭಟ್ ಅವರಿಗೆ, ಅರಸು ಕುರಂಗರಾಯ ಸಂಶೋಧನಾ ಕೃತಿಗೆ ಡಾ ರವಿಕುಮಾರ್ ನೀಹ ಅವರಿಗೆ, ಬುದ್ಧನ ಕಿವಿ ಕಥೆಗಳ ಕರ್ತೃ ದಯಾನಂದ ಅವರಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ಪಿ ಉಮಾದೇವಿ ಅವರಿಗೆ ಕನಕ ಕಾಯಕ ಪ್ರಶಸ್ತಿ, ಮರಿರಂಗಯ್ಯ ಬಿದಲೋಟಿ ಅವರಿಗೆ ಜಾನಪದ ಪ್ರಶಸ್ತಿ ನೀಡಿ ಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಲೇಖಕ ಡಾ ಹೆಚ್ ದಂಡಪ್ಪ ಭಾಗವಹಿಸಿದ್ದರು. ಎಂ ಎಚ್ ನಾಗರಾಜು ಸ್ವಾಗತಿಸಿದರು. ಡಾ ಎ ಒ ನರಸಿಂಹಮೂತಿ ಕಾರ್ಯಕ್ರಮ ನಿರೂಪಿಸಿ, ಬಿ.ಮರುಳಯ್ಯ ವಂದಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

 "ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಿಂದ ಸಾಕಷ್ಟು ಮಳೆಯಾಗುತ್ತಿದ್ದು, ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳ ಸಾರ್ವಜನಿಕರ...

ಬೀದರ್‌ | ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಚಿವದ್ವಯರ ಭೇಟಿ; ಪರಿಶೀಲನೆ

ಕಮಲನಗರ ಹಾಗೂ ಔರಾದ್‌ ತಾಲೂಕಿನಲ್ಲಿ ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಉಸ್ತುವಾರಿ...

ಹಾವೇರಿ | ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

"ಪರಿಶಿಷ್ಟ ವರ್ಗದ ಜನಾಂಗದ ಏಳಿಗಾಗಿ ಶ್ರಮಿಸಿದ ಅರ್ಹ ವ್ಯಕ್ತಿಗಳಿಗೆ ಶ್ರೀ ಮಹರ್ಷಿ...

ಉಡುಪಿ | ಶಾಸಕ ಯಶ್ಪಾಲ್ ಸುವರ್ಣರವರ ಮೇಲೆ ಕಠಿಣ ಸಾಂವಿಧಾನಿಕ ಕ್ರಮ ಜರುಗಿಸಿ – ಕೆ ಫಣಿರಾಜ್

ತಮ್ಮ ಶಾಸಕ ಸ್ಥಾನದ ಸಂವಿಧಾನಿಕ ಮರ್ಯಾದೆಯನ್ನು ಮೀರಿ ವರ್ತಿಸಿರುವ ಉಡುಪಿಯ ಶಾಸಕ...

Download Eedina App Android / iOS

X