ಮಣಿಪುರದಲ್ಲಿ ಒಂದು ವರ್ಷದಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಪರಿಶೀಲಿಸಲಿದ್ದಾರೆ.
ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಇತರ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ, ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈಶಾನ್ಯ ರಾಜ್ಯದ ಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
2023ರ ಮೇ 3ರಂದು ನಡೆದ ಬುಡಕಟ್ಟು ಐಕಮತ್ಯದ ಮೆರವಣಿಗೆಯ ನಂತರ ಮಣಿಪುರದಲ್ಲಿ ಮೈತಿ ಮತ್ತು ಕುಕು ಜನಾಂಗದ ನಡುವೆ ಜನಾಂಗೀಯ ಹಿಂಸಾಚಾರ ಆರಂಭವಾಗಿದೆ. ಈವರೆಗೆ ಸುಮಾರು 220ಕ್ಕೂ ಹೆಚ್ಚು ಜನರು ಮತ್ತು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ವರ್ಷ ಕಳೆದರೂ ಶಾಂತಿಯಿಲ್ಲ, ಈಶಾನ್ಯ ರಾಜ್ಯಕ್ಕೆ ಆದ್ಯತೆ ನೀಡಿ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್
ಮಣಿಪುರದ ಜನಸಂಖ್ಯೆಯ ಸುಮಾರು ಶೇಕಡ 53ರಷ್ಟು ಇರುವ ಮೈತಿಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಶೇಕಡ 40ರಷ್ಟಿರುವ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದ ಜನರು ಬೆಟ್ಟ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಇಲ್ಲಿ ಹಿಂಸಾಚಾರ ಆರಂಭವಾಗಿ ಒಂದು ವರ್ಷ ಕಳೆದರೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಒಂದು ಬಾರಿಯೂ ಮಣಿಪುರಕ್ಕೆ ಭೇಟಿ ನೀಡದಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿಯ ದುರಾಡಳಿತಕ್ಕೆ ಉತ್ತರ ಕೊಟ್ಟಂತೆ ಹೊರಬಿದ್ದಿರುವ ಮಣಿಪುರ ಫಲಿತಾಂಶ!
ಇನ್ನು ಇತ್ತೀಚೆಗೆ ಜೂನ್ 10ರಂದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಒಂದು ವರ್ಷದಿಂದ ಮಣಿಪುರದಿಂದ ಶಾಂತಿಯಿಲ್ಲದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸರ್ಕಾರವು ಕಲಹ ಪೀಡಿತ ಈಶಾನ್ಯ ರಾಜ್ಯದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು ಎಂದು ಹೇಳಿದರು.
ನಾಗಪುರದಲ್ಲಿ ಆರ್‌ಎಸ್‌ಎಸ್ ಪ್ರಶಿಕ್ಷಣಾರ್ಥಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, “ಕಳೆದ ಒಂದು ವರ್ಷದಿಂದ ಮಣಿಪುರ ಶಾಂತಿಗಾಗಿ ಕಾಯುತ್ತಿದೆ. ಮಣಿಪುರದಲ್ಲಿ 10 ವರ್ಷಗಳ ಹಿಂದೆ ಶಾಂತಿ ನೆಲೆಸಿತ್ತು. ಅಲ್ಲಿಗೆ ಬಂದೂಕು ಸಂಸ್ಕೃತಿ ಮುಗಿದಂತೆ ಭಾಸವಾಯಿತು. ಆದರೆ ರಾಜ್ಯವು ಇದ್ದಕ್ಕಿದ್ದಂತೆ ಹಿಂಸಾಚಾರ ಮತ್ತೆ ಆರಂಭವಾಗಿದೆ” ಎಂದು ಹೇಳಿದ್ದಾರೆ.