ಹಜ್ ಯಾತ್ರೆ ಹೊರಡುವ ಸಂಭ್ರಮ ಮತ್ತು ಬಕ್ರೀದ್ ಹಬ್ಬದ ವಿಶೇಷ

Date:

Advertisements

ಈದುಲ್ ಅದ್ಹಾ ಅಥವಾ ಬಕ್ರೀದ್ ಹಬ್ಬ ಎಂದರೆ ಮುಖ್ಯವಾಗಿ ನಮಗೆ ಹಜ್ ಮತ್ತು ಮಾಂಸದೂಟದ ನೆನಪು ಬರುತ್ತದೆ. ಅಂದರೆ ಇತರ ಹಬ್ಬಕ್ಕೆ ಮಾಂಸ ಮಾಡುವುದಿಲ್ಲ ಎಂದಲ್ಲ ಈ ಹಬ್ಬ ಪ್ರವಾದಿ ಇಬ್ರಾಹಿಂ ಮತ್ತು ಅವರ ಮಗ ಇಸ್ಮಾಯಿಲ್‌ರ ತ್ಯಾಗದ ಸಂಕೇತವಾಗಿರುವುದರಿಂದ ಹಬ್ಬದ ಬಳಿಕದ ಮೂರು ದಿನದ ತಕ್ಬೀರ್ ಅಥವಾ ಅಯ್ಯಾಮುತ್ತಶ್ರೀಕ್‌ನ ಕೊನೇ ದಿನದವರೆಗೆ ಶ್ರೀಮಂತರು ಹೆಚ್ಚು ಕುರ್ಬಾನಿಗಳನ್ನು(ಪ್ರಾಣಿ ಬಲಿ) ಮಾಡುವರು. ಆದ್ದರಿಂದ ಸಾಕಷ್ಟು ಮಾಂಸದ ಕಟ್ಟು ನಮಗೆ ಸಿಗುತ್ತಿತ್ತು. ಆಗ ಅಪರೂಪಕ್ಕೆ ಮಾಂಸದ ರುಚಿ ನೋಡುವ ನಮಗೆ ಈ ಹಬ್ಬದ ಬಳಿಕ ವಾರಗಟ್ಟಲೆ ಮಾಂಸ ತಿನ್ನುವುದೇ ಒಂದು ಖುಷಿ.

ಹಜ್‌ನ ನೆನಪು ಹೆಚ್ಚು ಮೂಡುವುದು ಈ ಹಬ್ಬದ ಸಂದರ್ಭದಲ್ಲಿ. ನಿಜವಾಗಿಯೂ ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಹೋಗಿ ಹಜ್ ಮಾಡುವ ಕನಸು ಕಾಣದ ಮುಸ್ಲಿಂ ಬಹುಷಃ ಜಗತ್ತಿನಲ್ಲಿಯೇ ಅಲ್ಪ ಎನ್ನುವಷ್ಟು ಕಡಿಮೆ. ಸಾಯುವ ಮುಂಚೆ ಹಜ್ ಸಾಧ್ಯವಾಗದಿದ್ದರೆ ಕನಿಷ್ಠ ಉಮ್ರವಾದರೂ ನಿರ್ವಹಿಸಬೇಕು ಎಂಬ ಹಂಬಲ ಎಲ್ಲರಿಗೂ ಇದೆ. ಮೆಕ್ಕಾ, ಮದೀನಾ ಸಫರ್ ಹೋಗಬೇಕು ಹಜ್ ಮಾಡಬೇಕು ಮುಖ್ಯವಾಗಿ ಪ್ರವಾದಿಯವರ ಮಕ್ಬರ(ಗೋರಿ) ನೋಡಬೇಕು, ಝಂಝಂ ನೀರು ಇಚ್ಛೆಯಂತೆ ಕುಡಿಯಬೇಕು ಇತ್ಯಾದಿ ಕನಸುಗಳನ್ನು ಪಾಸ್ಪೋರ್ಟ್ ಮಾಡಲು ಹಣ ಇಲ್ಲದವರೂ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ನಿಯ್ಯತ್ ಮಾಡಿಡುತ್ತಾರೆ.

ಹಜ್ ಮತ್ತು ಉಮ್ರಾ ಒಂದೇ ಜಾಗದಲ್ಲಿ ನಿರ್ವಹಿಸುವ ಕರ್ಮವಾದರೂ ವಿಧಗಳು ಬೇರೆ. ಉಮ್ರಾ ಐಚ್ಛಿಕ ಕರ್ಮ ಮತ್ತು ಯಾವಾಗ ಬೇಕಾದರೂ ನಿರ್ವಹಿಸಬಹುದು. ಹಜ್ ಕಡ್ಡಾಯ ಕರ್ಮ ವರ್ಷದಲ್ಲಿ ಒಮ್ಮೆ ಮಾತ್ರ ಸಾಧ್ಯ ಅದು ಹಿಜರಿ ವರ್ಷದ ಕೊನೆಯ ದುಲ್ ಹಜ್ ತಿಂಗಳಲ್ಲಿ. ಆರೋಗ್ಯವಿರುವ, ಸ್ಥಿತಿವಂತನಾದ, ಪ್ರಯಾಣ ಸೌಕರ್ಯವಿರುವ ಮತ್ತು ಪ್ರೌಢ ಅವಸ್ಥೆಗೆ ತಲುಪಿದ ಎಲ್ಲ ಸ್ತ್ರೀ ಪುರುಷರಿಗೆ ಜೀವನದಲ್ಲಿ ಒಂದು ಬಾರಿ ಮಾತ್ರ ಇದು ಕಡ್ಡಾಯವಾಗಿದೆ. ಹಜ್ ಮಾಡಲು ಸಾಧ್ಯವಾಗದೆ ಊರಿನಲ್ಲಿ ಉಳಿದವರಿಗಾಗಿ ಅರಫಾದ ಐಚ್ಛಿಕ ಉಪವಾಸ ಮತ್ತು ಈದುಲ್ ಅದ್ಹಾ ಹಬ್ಬದ ಸಂಭ್ರಮವೂ ಇದೆ.

Advertisements

ಬಕ್ರೀದ್ ಹಬ್ಬದ ಸಂಭ್ರಮ ಮತ್ತು ಹಜ್ ಕರ್ಮದಲ್ಲಿ ಪ್ರವಾದಿ ಹ. ಇಬ್ರಾಹಿಂ ಅವರ ಮಗ ಇಸ್ಮಾಯಿಲ್ ಮತ್ತು ಪತ್ನಿ ಹಾಜರಾರವರ ತ್ಯಾಗ ಬಲಿದಾನದ ಸ್ಮರಣೆಯೇ ಮುಖ್ಯವಾಗಿದೆ. ಆದ್ದರಿಂದಲೇ ಹಜ್ ನಿರ್ವಹಿಸುವುದು ಮುಸ್ಲಿಮರಿಗೆ ಗೌರವಯುತವಾದ ಪುಣ್ಯ ಕರ್ಮವಾಗಿದೆ. ಪ್ರವಾದಿ ಮಹಮದ್(ಸ)ರು ಜೀವನದಲ್ಲಿ ಒಮ್ಮೆ ಮಾತ್ರ ಹಜ್ ನಿರ್ವಹಿಸಿದ್ದಾರೆ ಎನ್ನುವುದು ಚರಿತ್ರೆ.

ಇತ್ತೀಚಿನ ದಿನಗಳಲ್ಲಿ ಹಜ್ ಮತ್ತು ಉಮ್ರಾ ಹೋಗುವುದು ಸ್ಥಿತಿವಂತರಿಗೆ ಸುಲಭ ಮತ್ತು ಬಡವರಿಗೆ ದುಬಾರಿಯಾಗಿರುವ ಕಾರ್ಯ ಎಂದರೆ ತಪ್ಪಾಗಲಾರದು. ಉಳ್ಳವರಿಗೆ ಪ್ರತಿಷ್ಠೆಯ ಸಂಕೇತವಾಗಿದೆ. ಹಣ ಇದ್ದೂ ಹಜ್‌ಗೆ ಹೋಗದವರ ಬಗ್ಗೆ ಊರವರು ಅಸಮಾಧಾನ ಹೊರ ಹಾಕುವುದೂ ಉಂಟು. ಮಾತ್ರವಲ್ಲದೆ ಇದರ ಹಿಂದೆ ದೊಡ್ಡ ವ್ಯಾಪಾರದ ದಂದೆ ಸುಸೂತ್ರವಾಗಿ ನಡೆಯುತ್ತಿದೆ ಎಂಬ ಅಪವಾದ ಬೇರೆ ಇದೆ. ಹಜ್ ಮತ್ತು ಉಮ್ರಾ ಎಂಬ ಪವಿತ್ರ ಕರ್ಮ ಲಕ್ಕಿ ಡ್ರಾ, ಮಾಸಿಕ ಕಂತುಗಳು, ಕಮಿಷನ್, ಇತ್ಯಾದಿಗಳ ಮೂಲಕ ಟೂರಿಸ್ಟ್‌ ಕಂಪೆನಿಗಳು ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಡೋಂಗಿಯಿಂದಾಗಿ ಹಣ ಕಳೆದುಕೊಂಡು ಕೈ ಸುಟ್ಟುಕೊಂಡವರೂ ಇದ್ದಾರೆ. ಇದೆಲ್ಲವೂ ಅಂಧ ಭಕ್ತಿಯಿಂದಲೇ ನಡೆಯುತ್ತದೆ. ಸಂಕಷ್ಟ ಇಟ್ಟುಕೊಂಡು ತೀರ್ಥಯಾತ್ರೆ ಕೈಗೊಳ್ಳಬೇಕೆಂಬ ನಿಯಮವಿಲ್ಲ. ಆದ್ದರಿಂದ ಧರ್ಮ ನಮ್ಮ ಮೇಲೆ ಯಾವುದನ್ನೂ ಹೇರಲಿಲ್ಲ ಎಂಬುವುದನ್ನು ಮೊದಲು ತಿಳಿಯಬೇಕು.

ನಾವು ಸಣ್ಣವರಿರುವಾಗ ಊರಿನಲ್ಲಿ ಹಜ್ ಬಿಡಿ ಉಮ್ರಾ ಹೋಗುವುದು ಕೂಡಾ ಅಪರೂಪ. ಆಗ ಮೆಕ್ಕಾ ಮದೀನಾದ ಬಗ್ಗೆ ನಮಗೆ ಸರಿಯಾದ ಪರಿಚಯವಿರಲಿಲ್ಲವಾದರೂ ಕೆಲವು ಶ್ರೀಮಂತರ ಮನೆಗಳಲ್ಲಿ ತೂಗು ಹಾಕಿದ್ದ ಫೋಟೋಗಳು, ದೂರದರ್ಶನದ ವಾರ್ತೆಯಲ್ಲಿ ಬಕ್ರೀದ್ ದಿನ ತೋರಿಸುವ ವೀಡಿಯೋ, ದಿನ ಪತ್ರಿಕೆ, ಧಾರ್ಮಿಕ ಮುಖಪತ್ರಿಕೆಯ ವರದಿಗಳು, ಲೇಖನಗಳು ನೀಡುವ ಮಾಹಿತಿಗಳಿಂದಲೇ ನಮಗೆ ಹಜ್ ಮತ್ತು ಮೆಕ್ಕಾ ಮದೀನಾದ ಬಗ್ಗೆ ಇರುವ ಕನಿಷ್ಠ ತಿಳಿವಳಿಕೆ. ಈಗಿನ ಜನರೇಶನ್‌ನಂತೆ ಇಂಟರ್‌ನೆಟ್, ಸ್ಮಾರ್ಟ್ ಫೋನ್, ಡಿಜಿಟಲ್ ಟಿ.ವಿ, ಸೋಶಿಯಲ್ ಮೀಡಿಯಾ ವ್ಯಾಪಕವಾಗಿರಲಿಲ್ಲದ ಕಾಲ ಅದು. ಈಗ ಹಜ್ ಮಾಡುವ ದೃಶ್ಯ ಲೈವ್ ಸ್ಟ್ರೀಮಿಂಗ್ ಬೇರೆ ಲಭ್ಯವಿದೆ. ಈಗ ಹಜ್ ಹೋಗಲು ಜೀವಮಾನದಲ್ಲಿ ಸಾಧ್ಯವಿಲ್ದವರೂ ದೃಶ್ಯ ನೋಡಿ ಕಣ್ತುಂಬಿಸಿಕೊಂಡು ತೃಪ್ತರಾಗುತ್ತಾರೆ.

ಬಾಲ್ಯದಲ್ಲಿ ಮೆಕ್ಕಾ ಮದೀನಾದ ಬಗ್ಗೆ ನಮ್ಮ ಕಲ್ಪನೆ ಆಧ್ಯಾತ್ಮಿಕ ಮತ್ತು ಭಾವನಾತ್ಮಕವಾಗಿದ್ದವು. ಕಅಬ, ಹಜರುಲ್ ಅಸ್ವದ್, ಮಕಾಮೇ ಇಬ್ರಾಹೀಂ, ಝಂಝಂ ನೀರು, ಸಫಾ ಮರ್ವಾ, ಜಂರಾತ್ ಅರಫಾ ಮುಝ್ದಲಿಫಾ, ಮದೀನಾದಲ್ಲಿರುವ ಪ್ರವಾದಿಯವರ ಮಕ್ಬರ, ಬದ್ರ್ ರಣಭೂಮಿ, ಉಹುದ್ ಬೆಟ್ಟ, ಹಿರಾ ಗುಹೆ, ಇತ್ಯಾದಿ ಚಾರಿತ್ರಿಕ ಮಹತ್ವದ ಸ್ಥಳಗಳಿಗೆಲ್ಲಾ ನಾವು ನಮ್ಮ ಭಾವನೆಯಂತೆ ಸುಂದರ ರೂಪಕೊಟ್ಟಿದ್ದೆವು. ಅದಕ್ಕೆ ಪ್ರಮುಖ ಕಾರಣ ಮದ್ರಸದಲ್ಲಿ ಮುದರ್ರಿಸರು ಪಾಠದ ನಡುವೆ ನೀಡುವ ಚಾರಿತ್ರಿಕ ವಿವರಣೆ, ಜುಮಾ ಮಸೀದಿಯ ಸ್ವಾಲಾತ್ ವಾರ್ಷಿಕದ, ಉರೂಸ್ ಕಾರ್ಯಕ್ರಮದ, ಮತ್ತು ಕಥಾಪ್ರಸಗದಲ್ಲಿ ಕೇರಳದಿಂದ ಬಂದ ಪ್ರಖ್ಯಾತ ಉಸ್ತಾದರು ಭಾಷಣದಲ್ಲಿ ಮಾಡುವ ಆಲಂಕಾರಿಕ ವಿಶ್ಲೇಷಣೆ ನಮ್ಮಲ್ಲಿ ಪ್ರವಾದಿಯವರ ಪಾದ ಸ್ಪರ್ಶನೆಗೊಂಡ ಅರಬ್ ಪ್ರದೇಶದ ಮೇಲೆ ಹೆಚ್ಚು ಮುಹಬ್ಬತ್ ಉಂಟಾಗಲು ಕಾರಣವಾಗಿತ್ತು. ಆಗ ಗಲ್ಫ್ ಕಡೆ ಉದ್ಯೋಗ ಅರಸಿ ಹೋದವರೂ ಸ್ವಲ್ಪ ಮಾತ್ರ ಇದ್ದರು. ಅವರಲ್ಲಿ ಮೆಕ್ಕಾ ಮದೀನಾದ ಕಡೆ ಮುಖ ಮಾಡುವ ಅವಕಾಶ ವಂಚಿತರೇ ಹೆಚ್ಚು. ಆ ಕಾಲದಲ್ಲಿ ಹಜ್ ಯಾತ್ರೆ ಹೋಗುವುದೇ ಒಂದು ದೊಡ್ಡ ವಿಶೇಷ.

ಸುಮಾರು ವರ್ಷಗಳ ಹಿಂದೆ ನಮ್ಮ ಮಾವ (ಅಪ್ಪನ ಸಹೋದರಿಯ ಗಂಡ) ಅವರ ತಂದೆಯೊಂದಿಗೆ ಹಡಗಿನ ಮೂಲಕ ಹಜ್ ಯಾತ್ರೆಗೆ ಹೋಗಿದ್ದ ಚರಿತ್ರೆಯನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೆ. ಪತ್ನಿಯನ್ನು ಬಿಟ್ಟು ಹೋಗಿದ್ದ ಅವರು ಹಿಂದಿರುಗುವ ವೇಳೆ ಹಡಗು ಮುಳುಗಿದ ವದಂತಿ ಹಬ್ಬಿ ಕುಟುಂಬ ಶೋಕದಲ್ಲಿ ಮುಳುಗಿತ್ತಂತೆ. ಮತ್ತೆ ಹಲವು ದಿನಗಳ ಬಳಿಕ ಊರಿಗೆ ಮರಳಿದ್ದರಿಂದ ಎಲ್ಲರೂ ಸಮಾಧಾನಗೊಂಡಿದ್ದರು. ಈ ಸಾಹಸ ಯಾತ್ರೆ ನಾನು ಹುಟ್ಟುವ ಮುಂಚಿನ ಘಟನೆಯಾಗಿತ್ತು. ನಮ್ಮೂರಿನಲ್ಲಿಯೇ ಮೊದಲು ಹಜ್‌ಗೆ ಹೊರಟ ನನ್ನ ಅಜ್ಜಿಯ ತಂಗಿ ಮತ್ತು ಭಾವ (ನಾವು ಅವರನ್ನು ಚಿಕ್ಕಪ್ಪ ಚಿಕ್ಕಮ್ಮ ಎಂದು ಕರೆಯುವುದು)ನವರ ಯಾತ್ರೆಯ ಘಟನೆ ಮಾತ್ರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಊರಿಗೆ ಊರೇ ಸಂಭ್ರಮ ಪಡುವ ದಿನವಾಗಿತ್ತು ಅದು. ಮತ್ತೆ ಎಲ್ಲಿಯೂ ಆ ರೀತಿಯ ಸಡಗರ ನೋಡಿರಲಿಲ್ಲ. ಕಾಲದ ವೇಗಕ್ಕೆ ತಕ್ಕಂತೆ ಜನ ಬದಲಾದರು ಹಜ್ ಯಾತ್ರೆ ಹೊರಡುವ ಪರಿಪಾಠ ಕೂಡಾ ಸರಳವಾಯಿತು ಮತ್ತು ಸಂಕುಚಿತವಾಯಿತು.

ತೀರ್ಥಯಾತ್ರೆ ಕೈಗೊಳ್ಳುವ ಮೊದಲು ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಎಷ್ಟು ಶಿಷ್ಟಾಚಾರವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಗ್ರಾಮೀಣ ಮಟ್ಟದಲ್ಲಿ ನಡೆಯುವ ಇಂತಹ ಕಟ್ಟು ಪಾಡುಗಳಿಂದ ಕಲಿಯಬೇಕು. ಧಾರ್ಮಿಕನಾಗುವುದಕ್ಕಿಂತ ಮೊದಲು ಮನುಷ್ಯನಾಗಬೇಕು ಆಗ ಮಾತ್ರ ನಮ್ಮ ಕರ್ಮಗಳಿಗೆ ಪ್ರತಿಫಲ ಸಿಗುತ್ತದೆ ಮತ್ತು ಪ್ರಾರ್ಥನೆಗೆ ಉತ್ತರ ದೊರೆಯುತ್ತದೆ. ನನ್ನ ಚಿಕ್ಕಪ್ಪ- ಚಿಕ್ಕಮ್ಮ ಹಜ್ ಯಾತ್ರೆ ಹೊರಡುವ ದಿನಗಳು ನಿಗದಿಯಾದ ಮೇಲೆ ಬಂಧು ಮಿತ್ರಾದಿಗಳನ್ನು ಭೇಟಿಯಾಗಿ ಅವರೊಂದಿಗೆ ಖುಷಲೋಪರಿ ನಡೆಸಿ ಪರಸ್ಪರರ ನಡುವೆ ತಿಳಿದೊ ತಿಳಿಯದೆಯೊ ಸಂಭವಿಸಿದ ವೈಮನಸ್ಸನ್ನು ದೂರೀಖರಿಸುತ್ತಾ ಈರ್ವರೂ ಪ್ರತಿಯೊಬ್ಬರಿಂದಲೂ ಪ್ರಾರ್ಥನೆಗೆ ಬೇಡಿಕೆಯಿಟ್ಟು ಬೀಳ್ಕೊಡುವರು.

ಸುಖಕರವಾದ ಯಾತ್ರೆಗೆ ಅಭ್ಯರ್ಥಿಸುವಾಗ ಪ್ರತಿಯಾಗಿ ಮೆಕ್ಕಾದಲ್ಲಿ ವಿಶೇಷ ಪ್ರಾರ್ಥನೆಗೆ ಬೇಡಿಕೆ ಪಡೆಯುವುದು ಇದೆ. ಆ ಬಳಿಕ ಆರ್ಥಿಕ ವ್ಯವಹಾರ, ಸಾಲ, ಕೊಡುಕೊಳ್ಳುವಿಕೆಯ ಲೆಕ್ಕ ಚುಕ್ತಮಾಡಿ ವಹಿವಾಟಿನ ಜವಾಬ್ದಾರಿ ಹಿರಿ ಮಗನಿಗೆ ವಹಿಸಿ ವಹಿವಾಟುಗಳಿಂದ ಮುಕ್ತರಾದರು. ಯಾತ್ರೆ ಹೊರಡುವ ಮೂರ್ನಾಲ್ಕು ದಿನದ ಮೊದಲು ಊರವರನ್ನು ಕುಟುಂಬಸ್ಥರನ್ನು ಮತ್ತು ಮಿತ್ರಾದಿಗಳನ್ನು ಮನೆಗೆ ಆಮಂತ್ರಿಸಿ ಊಟ ಕೊಟ್ಟು ಲೆಕ್ಕಾಚಾರ ಚುಕ್ತ ಮಾಡಿ ವೈಮನಸ್ಸು ದೂರೀಖರಿಸಿರುವುದನ್ನು ಮತ್ತೊಮ್ಮೆ ಖಾತ್ರಿ ಪಡಿಸಿಕೊಂಡರು. ಅಂದಿನಿಂದ ಹೊರಡುವ ತಯಾರಿಗೆ ಸಿದ್ದರಾದರು.

ಕೋಡಿ ಬಳಿ ಇರುವ ಅವರ ತರವಾಡು ಮನೆಗೆ ನನ್ನ ಅಜ್ಜಿ ಅವರ ತಂಗಿಯ ಸಹಾಯಕ್ಕೆಂದು ಒಂದು ವಾರ ಮೊದಲೇ ಹೊರಟಿದ್ದರಿಂದ ನನ್ನನ್ನೂ ಜೊತೆ ಸೇರಿಸಿದ್ದರು. ನನ್ನಂತೆ ಸುಮಾರು ಮಕ್ಕಳೂ ಅಲ್ಲಿ ಸೇರಿದ್ದರಿಂದ ಹೊಸ ಟೀಮ್ ರೆಡಿಯಾಗಿ ನಮ್ಮದೇ ಕಾರ್ಬಾರು ಶುರುವಾಗಿ ಅವರ ಅಡಿಕೆ ತೋಟವನ್ನು ಲಗಾಡಿ ತೆಗೆದಿದ್ದೆವು. ಹಜ್‌ಗೆ ಹೊರಟಿದ್ದರಿಂದ ಈ ಅನಾಹುತ ಕಂಡ ಅವರು ತಾಳ್ಮೆ ಅದುಮಿ ಹಿಡಿದಿದ್ದರು. ಇಲ್ಲದಿದ್ದರೆ ಅವರ ಬೊಬ್ಬೆಗೆ ಅಡಿಕೆ ಗೋಣೆ ಮಕ್ಕಳ ತಲೆ ಮೇಲೆ ಬಿದ್ದು ಗತಿಯಾಗುತ್ತಿತ್ತು. ದಿನದಿಂದ ದಿನಕ್ಕೆ ಆ ಮನೆಯಲ್ಲಿ ಸೇರುವ ಬಂಧುಗಳ ಸಂಖ್ಯೆ ಹೆಚ್ಚಾಗತೊಡಗಿತು. ಅಜ್ಜಿಯ ಜೊತೆ ಕೊಠಡಿಯಲ್ಲಿ ಮಲಗುತ್ತಿದ್ದ ನಾನು ಮೂರನೇ ದಿನಕ್ಕೆ ಚಾವಡಿಗೆ ಬಂದು ತಲುಪಿದೆ.

ಹೊರಡುವ ಶುಭ ದಿನದಂದು ಯಾತ್ರಾರ್ಥಿಗಳ ಮನೆಯಲ್ಲಿ ಸಂಭ್ರಮದ ಜೊತೆ ಗೌಜಿ ಗದ್ದಲ ಮಕ್ಕಳ ಆಟ, ಯುವಕರ ಹರಟೆ, ಹಿರಿಯರ ರಾಶಿಗಟ್ಟಲೆ ಸಲಹೆಗಳು. ಉಸ್ತಾದರ ಉಪದೇಶಗಳು ಜೊತೆಗೆ ಮನೆಯಲ್ಲಿ ಸೇರಿದವರಿಗೆಲ್ಲಾ ಯಾತ್ರಾರ್ಥಿಗಳಿಗೆ ಏನಾದರೂ ಒಂದು ಸಹಾಯ ಮಾಡಿ ಪುಣ್ಯ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲ. ಯಾತ್ರಾರ್ಥಿಗಳು ಪುಣ್ಯವಂತರಾಗಿ ಬದಲಾಗಿದ್ದರು. ಕೈ ಮುತ್ತುವುದಕ್ಕೆ ಒಂದಿಷ್ಟು ಮಂದಿ, ಕೆಲವರಿಂದ ಆಲಿಂಗನ, ಅವರ ದೇಹ ಪೂರ್ತಿ ಸವರಲು ಇನ್ನು ಕೆಲವರು ಹೀಗೆ ಅವರಿಗೆ ನಾನಾ ರೀತಿಯಲ್ಲಿ ತೊಂದರೆ ನೀಡಲೆಂದೆ ಜನ ಸೇರುತ್ತಿದ್ದಾರೆಂದೆನಿಸುತ್ತಿತ್ತು.
ಹಜ್‌ಗೆ ಹೊರಡುವ ಗಳಿಗೆಯಲ್ಲಿ ಬೇಕಾದಷ್ಟು ಸದಕ ನೀಡುತ್ತಾರೆ ಎಂಬ ಮಾತುಗಳನ್ನು ಮೊದಲೇ ಕೇಳಿ ತಿಳಿದ ಸಾಕಷ್ಟು ಫಕೀರರು ಮನೆಯ ಗೇಟಿನ ಬಳಿ ಟಿಕಾಣಿ ಹೂಡಿದ್ದರು. ಮಕ್ಕಳಿಗೂ ಹದಿಯ(ಉಡುಗೊರೆ) ಕೊಡುತ್ತಾರೆ ಎಂದು ಅವರ ಸುತ್ತು ತಿರುಗುವ ಒಂದು ಪಟಲಾಯಂ ಬೇರೆ ಇತ್ತು. ನನ್ನದು ಅಡುಗೆ ಕೋಣೆಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಹೆಚ್ಚು ಇರುತ್ತಿದ್ದೆ. ಅಜ್ಜಿ ಹದಿಯ ಪಡೆಯಲು ಎದುರು ಕೋಣೆಗೆ ಓಡಿಸಿದರು. ನನ್ನ ಗ್ರಹಚಾರ ಅವರು ಆಗಲೇ ಅದನ್ನು ಕೊಟ್ಟು ಮುಗಿಸಿ ಉಳಿದದ್ದನ್ನು ಕಿಸೆಗೆ ಹಾಕಿದ್ದರು.

ಯಾತ್ರಾರ್ಥಿಗಳಿಗಾಗಿ ಅಂಬಾಸೆಡರ್ ಕಾರು ರೆಡಿಯಾಗಿ ಮನೆ ಮುಂದೆ ನಿಂತಿತ್ತು. ಮಂಗಳೂರು ವಿಮಾನ ನಿಲ್ದಾಣದವರೆಗೆ ಜೊತೆ ಹೋಗಲು ಜೀಪುಗಳ ಸಾಲು ಅದರ ಹಿಂದೆಯೇ ಇತ್ತು. ಕಾರು ಹೊರಟ ಬಳಿಕ ಜನ ತುಂಬಿದ ಜೀಪುಗಳಲ್ಲಿ ಮೆರವಣಿಗೆ ಹೋಗುವಂತೆ ಹೊರಟರು ತಕ್ಬೀರ್ ದ್ವನಿಗಳೊಂದಿಗೆ “ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್” ಎನ್ನುವುದನ್ನು ಒಂದು ರಾಶಿ ಜನ ಮನೆಯ ಜಗುಲಿಯಲ್ಲಿ ನಿಂತು ಈ ಪ್ರಹಸನ ನೋಡುತ್ತಿತ್ತು. ಎಲ್ಲರ ಕಣ್ಣಲ್ಲಿ ಆನಂದ ಬಾಷ್ಪ ಕಅಬಾದ ಮುಂದೆ ತಮ್ಮ ಕೋರಿಕೆಗಳಿಗೆ ಮೊರೆಯಿಡುವರೆಂಬ ಭರವಸೆ. ಅರಫಾದ ದಿನ, ಬಕ್ರೀದ್ ಹಬ್ಬದ ದಿನ ನಮಗೆ ಅವರ ನೆನಪು ಕಾಡುತ್ತಿತ್ತು. ಅವರ ಹಜ್ ಕಬೂಲ್ ಆಗಲು ಪ್ರಾರ್ಥಿಸುತಿದ್ದೆವು. ಈಗಿನಂತೆ ಲೈವ್ ಅಪ್ಡೇಟ್ ಇಲ್ಲವಾದ್ದರಿಂದ ಕೆಲವರು ಮನೆಗೆ ಬಂದು ಅವರ ವಿಶೇಷವನ್ನು ವಿಚಾರಿಸಿ ಹೋಗುತ್ತಿದ್ದರು.

ಹಜ್ ಮಾಡಿ ಮರಳಿ ಬಂದ ಮೇಲೆ ಈ ರೀತಿಯ ಗೌಜಿ ಇಲ್ಲದಿದ್ದರೂ ಜನರು ನಿತ್ಯ ಯಾತ್ರಾರ್ಥಿಗಳನ್ನು ಭೇಟಿಯಾಗಲು ಬರುತ್ತಿದ್ದರು. ಅಲ್ಲಿಯ ಅನುಭವಗಳನ್ನು ಕೂತು ಆಲಿಸುತ್ತಿದ್ದರು. ಯಾತ್ರಾನುಭವ ವಿಶ್ಲೇಷಣೆ ಮಾಡುವ ಅವರಿಗೂ ಕೇಳುವ ನಮಗೂ ಅದೊಂದು ರೀತಿಯ ಖುಷಿ. ಭೇಟಿಗೆ ಬಂದವರಿಗೆ ಝಂಝಂ ನೀರು ಮತ್ತು ಖರ್ಜೂರ ಮುಫ್ತಲ್ಲಿ ಸಿಗುತ್ತಿತ್ತು. ಭೇಟಿ ನೆಪದಲ್ಲಿ ಇದನ್ನು ಗಿಟ್ಟಿಸಲು ಬರುವವರ ಸಂಖ್ಯೆಯೇ ಹೆಚ್ಚು.

ಖರ್ಜೂರ ತಿಂದು ಮುಗಿಸಿದರೂ ಝಂಝಂ ಪವಿತ್ರ ನೀರನ್ನು ಮಾತ್ರ ಬಹಳ ಜಾಗ್ರತೆಯಿಂದ ಅಲೆಮಾರೆಯಲ್ಲಿ ಭದ್ರವಾಗಿರಿಸುತ್ತಿದ್ದರು. ಗುರುತರ ರೋಗ ಬಂದಾಗ ಇಲ್ಲದಿದ್ದರೆ ಅಂತಿಮ ಶ್ವಾಸ ಎಳೆಯುವ ಸಂದರ್ಭದಲ್ಲಿ ಮಾತ್ರ ಹೆಚ್ಚಾಗಿ ಬಳಸುತ್ತಿದ್ದರು. ವರ್ಷಗಳು ಕಳೆದರೂ ಈ ನೀರಿಗೆ ಕೇಡು ಬರುವುದಿಲ್ಲವೆಂಬ ನಂಬಿಕೆ ಈಗಲೂ ಇದೆ. ಝಂಝಂ ಹ. ಇಸ್ಮಾಯಿಲ್ ಅವರ ಪಾದ ಬಡಿತದಿಂದ ಚಿಮ್ಮಿದ ನೀರು. ಈ ನೀರು ಅಂತ್ಯ ದಿನದವರೆಗೆ ಆವಿಯಾಗುವುದಿಲ್ಲ ಎಂಬ ಪ್ರತೀತಿ ಇದೆ. ಅದೊಂದು ಪವಿತ್ರ ಜಲ.

ಹಜ್ ಮಾಡಿ ಮರಳಿ ಬಂದವರನ್ನು ಹೆಸರೆತ್ತಿ ಕರೆಯುವುದೇ ದೊಡ್ಡ ಅಗೌರವ “ಹಾಜಿ” ಅಥವಾ “ಹಾಜಿಯಾರ್” ಎಂದು ಅಬಿಸಂಭೋದಿಸಬೇಕು. ಅದು ಸ್ವಯಂ ಅರ್ಪಿತವಾದ ಸಂಕೇತವೇ ಹೊರತು ಇಸ್ಲಾಮ್ ಸೂಚಿಸಿದ ಅಪರನಾಮವಲ್ಲ. ಹಾಗೆ ಕರೆಯುವುದು ನಮ್ಮೂರಿನಲ್ಲಿ ವಾಡಿಕೆಯಾಗಿತ್ತು. ಈ ಹಾಜಿ ಎಂಬ ಪದ ಗಿಟ್ಟಿಸಿ ಊರಿನಲ್ಲಿ ಗೌರವ ಹೆಚ್ಚಿಸಿಕೊಳ್ಳಲು ಬೇಕಾಗಿಯೇ ಹಜ್ ಹೋಗುವವರೂ ಇದ್ದಾರೆ. ದಾಖಲೆ ಗಳ್ಳಿಯೂ ಹಾಜಿ ಎಂದು ಸೇರಿಸಿ ರುಸ್ತುಮ್ ತೋರಿಸಿದವರೂ ಇದ್ದಾರೆ.

ಹಾಜಿಗಳಿಗೆ ಊರಲ್ಲಿ ವಿಶೇಷ ಸ್ಥಾನ ಮೌಲಿದ್ ನೇರ್ಚೆ(ಹರಕೆ) , ರಾತೀಬು, ಸಲಾತ್ ವಾರ್ಷಿಕ, ಊರೂಸ್ ಸಂದರ್ಭದಲ್ಲಿ ಅವರಿಗೆ ವೇದಿಕೆಯಲ್ಲಿ ಸ್ಥಾನ. ಮದುವೆ, ತಲಾಕ್, ಆಸ್ತಿ ಪಾಲು ಹಾಗೂ ತಕರಾರುಗಳ ಪಂಚಾಯಿತಿಯಲ್ಲಿ ಅವರ ಮಾತಿಗೆ ಹೆಚ್ಚು ಗೌರವ. ಅಧಿಕ ಪ್ರಸಂಗ ಮಾತನಾಡಿದರೂ ಜನಸಾಮಾನ್ಯರು ಹಾಜಾರ್ ಎಂದು ಬಾಯಿ ಮುದುಡಿ ಕೂತುಗೊಳ್ಳುತ್ತಾರೆ. ಎದುರುತ್ತರ ನೀಡುತ್ತಿರಲಿಲ್ಲ.

“ಹಜ್ ಮಾಡಿದವರು ಈ ಕ್ಷಣ ಹುಟ್ಟಿದ ಮಗುವಿನಂತಾಗುತ್ತಾರೆ. ಅವರೊಳಗೆ ಅಣುಗಾತ್ರದಷ್ಟು ಪಾಪ ಬಾಕಿ ಇರುವುದಿಲ್ಲ ಎಲ್ಲವೂ ತೊಳೆದು ಹೋಗಿರುತ್ತದೆ” ಎಂದು ಪ್ರವಾದಿ (ಸ) ಹೇಳಿದ್ದರಿಂದಲೇ ಜನರು ಈ ರೀತಿಯ ಗೌರವ ನೀಡುತ್ತಿರುವುದು. ಅವರು ಪರಿಶುದ್ಧರು ಯಾವ ತಪ್ಪನ್ನೂ ವಂಚನೆಯನ್ನೂ ಮಾಡಲಾರರು ಎಂಬ ನಂಬಿಕೆ. ಆದ್ದರಿಂದಲೇ ಈ ಗೌರವ. ವಾಸ್ತವದಲ್ಲಿ ಹಿಂದಿನ ಕಾಲದ ಹಾಜಿಯಾರರು ಹಾಗೇ ಇದ್ದರು. ಆದರೆ ಈಗಿನ ಕಾಲದಲ್ಲಿ ಹಜ್‌ಗೆ ಹೋದವರೂ ಮತ್ತು ಹೋಗದವರ ನಡುವೆ ಯಾವ ವ್ಯತ್ಯಾಸ ಹುಡುಕಲು ಸಾಧ್ಯವಿಲ್ಲ. ತಮ್ಮ ಹಳೆಯ ಚಾಳಿ ಮುಂದುವರಿಸುವವರೂ ಇದ್ದಾರೆ. ಜೀವನ ಸುಧಾರಿಸಿಕೊಂಡವರೂ ಇದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬೊಮ್ಮನಕಟ್ಟೆ ವಾರ್ಡ್‌ ಸಮಸ್ಯೆಗಳ ಆಗರ; ಜನಪ್ರತಿನಿಧಿ, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ 

ಈಗ ಹಜ್‌ಗೆ ಹೊರಡುವ ಸಂಭ್ರಮ ಕೂಡಾ ಬಹಳ ಕಡಿಮೆ ಅಥವಾ ಇಲ್ಲಾ ಎಂದರೂ ತಪ್ಪಾಗಲಾರದು. ಹಜ್‌ಗೆ ಹೋದದ್ದು ಮರಳಿ ಬಂದದ್ದು ನೆರೆಯವನಿಗೆ ತಿಳಿಯದಷ್ಟು ಸಂಕುಚಿತವಾಗಿದೆ. ಹಜ್‌ಗೆ ಹೋರಡುವಾಗ ಊರಲ್ಲಿ ಇರುವಂತಹ ಸಂಪ್ರದಾಯದಗಳು ಇಸ್ಲಾಮಿನ ಚೌಕಟ್ಟಲ್ಲಿ ಇಲ್ಲ. ಹಜ್ ಸ್ಥಿತಿವಂತರ ಜವಾಬ್ದಾರಿ ನಮಾಝ್, ಉಪವಾಸ, ಝಕಾತ್ ನಂತಹ ಕರ್ಮ ಅದು ಸಾಹಸದ ಪ್ರದರ್ಶನವಲ್ಲ ಎಂಬ ವಾದ ಸರಿಯಾದರೂ. ನಿಜವಾಗಿಯೂ ಹಜ್‌ಗೆ ಹೋಗುವಾಗ ಇರುವ ಸಾಂಪ್ರದಾಯಿಕ ಸಂಭ್ರಮಗಳು ಪರಸ್ಪರ ಸಂಬಂಧಗಳನ್ನು ಜೋಡಿಸುತ್ತವೆ ಮತ್ತು ಗಟ್ಟಿಗೊಳಿಸುತ್ತದೆ. ಇಂತಹ ಅನೈತಿಕವಲ್ಲದ ಕಟ್ಟುಪಾಡುಗಳು ಉಳಿದರೆ ಸಂತೋಷ ಸಡಗರವನ್ನು ಹೆಚ್ಚಿಸುತ್ತದೆ ಮತ್ತು ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ.

ಬರಹ – ಅಶೀರುದ್ದೀನ್ ಆಲಿಯಾ ಸಾರ್ತಬೈಲ್

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X