ಲೋಕಸಭೆ ಚುನಾವಣೆಯಲ್ಲಿ ದೋಷ ಕಂಡುಬಂದಿರುವ ಇವಿಎಂಗಳ ಡೇಟಾವನ್ನು ಬಿಡುಗಡೆ ಮಾಡುವಂತೆ ಜೋರ್ಹತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಇವಿಎಂಗಳನ್ನು ಹ್ಯಾಕ್ ಮಾಡಲಾಗುವ ಬಗ್ಗೆ ಮತ್ತು ಇವಿಎಂಗಳ ದೋಷಗಳ ಬಗ್ಗೆ ಲೋಕಸಭೆ ಚುನಾವಣೆಗೂ ಮುನ್ನವೇ ಹಲವಾರು ವಿಪಕ್ಷ ನಾಯಕರುಗಳು ಪ್ರಶ್ನೆ ಎತ್ತಿದ್ದರು. ಆದರೆ ಇತ್ತೀಚೆಗೆ ಟೆಸ್ಲಾ ಮುಖ್ಯಸ್ಥ, ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿದೆ ಎಂದು ಎಕ್ಸ್ ಪೋಸ್ಟ್ ಮಾಡಿದ ಬಳಿಕ ಇವಿಎಂ ದೋಷಗಳ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ್ದ ಎಕ್ಸ್ (ಟ್ವಿಟ್ಟರ್) ಮಾಲೀಕ ಎಲಾನ್ ಮಸ್ಕ್, “ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ನಿಲ್ಲಿಸಬೇಕು. ಇವಿಎಂ ಮಾನವರು ಅಥವಾ ಎಐನಿಂದ ಹ್ಯಾಕ್ ಆಗುವ ಅಪಾಯ ಕಡಿಮೆಯಾಗಿದ್ದರೂ ಕೂಡಾ ಅಪಾಯ ಇನ್ನೂ ಹೆಚ್ಚಾಗಿದೆ” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಭಾರತಕ್ಕೆ ಬಂದು ಇವಿಎಂ ಹೇಗೆ ಹ್ಯಾಕ್ ಆಗುತ್ತೆ ತೋರಿಸಿ: ಮಸ್ಕ್‌ಗೆ ಚುನಾವಣಾ ಆಯೋಗ ಸವಾಲು
ಅದಾದ ಬಳಿಕ “ಇದು ಅಸಂಬದ್ಧ ಊಹಾಪೋಹ ಮತ್ತು ಭಾರತೀಯ ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಕೆಡಿಸುವ ಪ್ರಯತ್ನವಾಗಿದೆ” ಎಂದು ಚುನಾವಣಾ ಆಯೋಗ ಆರೋಪಿಸಿದೆ.
“ನಾವು ನಿಮಗೆ ಸವಾಲು ಹಾಕುತ್ತೇವೆ, ಎಲಾನ್ ಮಸ್ಕ್ ಅವರೆ ಭಾರತಕ್ಕೆ ಬಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮಹಾನ್ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ಹ್ಯಾಕಿಂಗ್ ಹೇಗೆ ಆಗುತ್ತದೆ ಎಂದು ತೋರಿಸಿ” ಎಂದು ಚುನಾವಣಾ ಆಯೋಗ ಸವಾಲೆಸೆದಿದೆ.
Before treating the Electronic Voting Machines as infallible, the Election Commission of India should put out data on how many Electronic Voting Machines were found faulty throughout the elections.
How many machines showed the wrong time, date, votes registered ?
How many…
— Gaurav Gogoi (@GauravGogoiAsm) June 17, 2024
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸೋಮವಾರ ಎಕ್ಸ್ ಪೋಸ್ಟ್ ಮಾಡಿರುವ ಸಂಸದ ಗೌರವ್ ಗೊಗೊಯ್, “ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ತಪ್ಪಾಗಲಾರದು ಎಂದು ಪರಿಗಣಿಸುವ ಮೊದಲು ಭಾರತದ ಚುನಾವಣಾ ಆಯೋಗವು ಚುನಾವಣೆಯ ಉದ್ದಕ್ಕೂ ಎಷ್ಟು ಎಲೆಕ್ಟ್ರಾನಿಕ್ ಮತಯಂತ್ರಗಳು ದೋಷಪೂರಿತವಾಗಿವೆ ಎಂಬ ಮಾಹಿತಿಯನ್ನು ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಹ್ಯಾಕ್ ಆಗುವ ಸಾಧ್ಯತೆ; ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದ ಎಲಾನ್ ಮಸ್ಕ್
“ಎಷ್ಟು ಯಂತ್ರಗಳು ತಪ್ಪಾದ ಸಮಯ, ದಿನಾಂಕ, ಮತಗಳನ್ನು ನೋಂದಾಯಿಸಿವೆ ಎಂದು ತೋರಿಸಿವೆ? ಎಷ್ಟು ಇವಿಎಂಗಳ ಘಟಕಗಳನ್ನು ಅಂದರೆ ಎಣಿಕೆ ಘಟಕ, ಮತಯಂತ್ರ ಬದಲಾಯಿಸಲಾಗಿದೆ? ಅಣಕು ಮತದಾನದ ಸಮಯದಲ್ಲಿ ಎಷ್ಟು ಇವಿಎಂಗಳು ದೋಷಪೂರಿತವಾಗಿವೆ” ಎಂದು ಗೌರವ್ ಗೊಗೊಯ್ ಪ್ರಶ್ನಿಸಿದ್ದಾರೆ.
“ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ, ಈ ಯಂತ್ರಗಳು ತಪ್ಪಾದ ಫಲಿತಾಂಶಗಳನ್ನು ತೋರಿಸಿವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಚುನಾವಣಾ ಆಯೋಗವು ಮೇಲ್ಕಂಡ ದತ್ತಾಂಶವನ್ನು ಹೊರತರುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸಾರ್ವಜನಿಕರಿಗೆ ತಿಳಿದುಕೊಳ್ಳುವ ಹಕ್ಕಿದೆ” ಎಂದು ಹೇಳಿದ್ದಾರೆ.
ಇವಿಎಂ ಗೆ ಸಂಬಂಧಪಟ್ಟಂತೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಕೆಲವು ಮತದಾನ ಕೇಂದ್ರಗಳಲ್ಲಿ ಮತಯಂತ್ರ ಕೈ ಕೊಟ್ಟಿದ್ದು ತಕ್ಷಣವೇ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇದರರ್ಥ ಮತಯಂತ್ರಗಳು ವಿಶ್ವಾಸಾರ್ಹವಲ್ಲ ; ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಲ್ಲವೆ ?
ಅಂತೂ – ಇಂತೂ ಚುನಾವಣೆ ಮುಗಿಯಿತು. ಫಲಿತಾಂಶ ಘೋಷಣೆಯಾಯಿತು. ಸರ್ವಾಧಿಕಾರಿ ಮತ್ತೆ ಅಧಿಕಾರಕ್ಕೇರಿದರು.
ಪ್ರತಿ ಪಕ್ಷಗಳು ಸಹಜವಾಗಿಯೇ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿತು. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ತನಿಖೆಗಾಗಿ ಆಗ್ರಹಿಸಿತು. ಆಯೋಗ , ದೂರುಗಳೇ ನಿರಾಧಾರ ಎನ್ನುತ್ತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿತು.
ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕಾದ ಸಿಬಿಐ , ಇಡಿ , ಇಸಿ , ಐಟಿ ಎಲ್ಲವೂ ಸರ್ಕಾರದ ಆದೇಶದಂತೆಯೇ ಕಾರ್ಯ ನಿರ್ವಹಿಸುತ್ತಿದ್ದು , ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸುವ ಧೈರ್ಯವನ್ನು ಎಂದು ಇಲಾಖೆಯ ಮುಖ್ಯಸ್ಥರು ತೋರಿಸುತ್ತಾರೋ , ಎಂದು ಸರ್ಕಾರದ ಕಪಿ ಮುಷ್ಟಿಯಿಂದ ಈ ಎಲ್ಲಾ ಸಂಸ್ಥೆಗಳು ಹೊರಬರುವುದೋ ಅದುವರೆಗೂ ಜನರನ್ನು ಕಾಡುತ್ತಿರುವ ಇಂತಹ ಅನೇಕ ಪ್ರಶ್ನೆಗಳು – ಸಂಶಯಗಳು ನಿವಾರಣೆಯಾಗಲಾರದು !