ಕೇಂದ್ರ ಸರ್ಕಾರವು ಮುಂದಿನ ಬಜೆಟ್‌ನಲ್ಲಿ ಕೆಲವು ವರ್ಗದ ಜನರಿಗೆ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸುತ್ತಿದೆ. ದೇಶದಲ್ಲಿ ಬಳಕೆ ಪ್ರಮಾಣ (consumption) ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ ಎಂದು ಎರಡು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿದೆ. ಪ್ರಸ್ತುತ ಮಿತ್ರ ಪಕ್ಷಗಳ ಸಹಾಯದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ರಚಿಸಲಾಗಿದೆ. ನೂತನ ಸರ್ಕಾರವು ಜುಲೈನಲ್ಲಿ ಬಜೆಟ್ ಘೋಷಣೆ ಮಾಡುವ ನಿರೀಕ್ಷೆಯಿದೆ.
ಚುನಾವಣೋತ್ತರ ಸಮೀಕ್ಷೆಯಲ್ಲಿ ಮತದಾರರು ಹಣದುಬ್ಬರ, ನಿರುದ್ಯೋಗ ಮತ್ತು ಆದಾಯ ಕಡಿಮೆಯಾಗುತ್ತಿರುವ ಬಗ್ಗೆ ಚಿಂತಿತರಾಗಿದ್ದಾರೆ ಎಂದು ತಿಳಿದುಬಂದಿದೆ. 2023-24ರಲ್ಲಿ ಭಾರತದ ಆರ್ಥಿಕತೆಯು ಶೇಕಡ 8.2ರಷ್ಟು ಬೆಳವಣಿಗೆಯನ್ನು ಕಂಡಿದ್ದರೂ ಕೂಡಾ ಬಳಕೆ ಪ್ರಮಾಣವು ಹೆಚ್ಚು ಬೆಳವಣಿಗೆ ಕಂಡಿಲ್ಲ. ಚುನಾವಣೆಯಲ್ಲಿ ತಮ್ಮ ಸಂಖ್ಯಾಬಲ ಕಳೆದುಕೊಂಡಿರುವ ಬಿಜೆಪಿ ಮಧ್ಯಮ ವರ್ಗದೆಡೆ ಗಮನ ಹರಿಸಲು ಮುಂದಾಗಿದೆ.
ಇದನ್ನು ಓದಿದ್ದೀರಾ? ಲೆಕ್ಕಪತ್ರವಿಲ್ಲದ 524 ಕೋಟಿ ರೂ. ವಹಿವಾಟು ಆರೋಪ; ಕಾಂಗ್ರೆಸ್‌ಗೆ ಮತ್ತೆ ಆದಾಯ ತೆರಿಗೆ ನೋಟಿಸ್!
ಮಿತ್ರ ಪಕ್ಷಗಳ ಬೆಂಬಲ ಪಡೆದು ಎನ್‌ಡಿಎ ಸರ್ಕಾರವನ್ನು ರಚಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಧ್ಯಮ ವರ್ಗದ ಉಳಿತಾಯವನ್ನು ಹೆಚ್ಚಿಸಲು ಮತ್ತು ಅವರ ಜೀವನ ಗುಣಮಟ್ಟ ಸುಧಾರಿಸಲು ನಮ್ಮ ಆಡಳಿತ ಗಮನಹರಿಸಲಿದೆ ಎಂದು ಹೇಳಿದ್ದರು.
ಇನ್ನು ಮುಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ವೈಯಕ್ತಿಕ ತೆರಿಗೆಯಲ್ಲಿನ ಕಡಿತ ಮಾಡಬಹುದು. ಇದರಿಂದಾಗಿ ಬಳಕೆ ಪ್ರಮಾಣ ಹೆಚ್ಚಿಸುವ ಮತ್ತು ಮಧ್ಯಮ ವರ್ಗದ ಉಳಿತಾಯ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ. ಆದರೆ ಮನಿಕಟ್ರೋಲ್ ಈ ಬಗ್ಗೆ ಹಣಕಾಸು ಸಚಿವಾಲಯಕ್ಕೆ ಇಮೇಲ್ ಮಾಡಿದ್ದು ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ವಾರ್ಷಿಕವಾಗಿ 15 ಲಕ್ಷ ರೂಪಾಯಿ ($17,960.42) ಗಳಿಸುವ ಆದಾಯ ತೆರಿಗೆ ಪಾವತಿದಾರರಿಗೆ ಕೆಲವು ತೆರಿಗೆ ವಿನಾಯಿತಿಗಳನ್ನು ನೀಡುವ ಸಾಧ್ಯತೆಯಿದೆ. 2020ರಲ್ಲಿ ಪರಿಚಯಿಸಲಾದ ತೆರಿಗೆ ಯೋಜನೆಯಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಆದಾಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿ ವಜಾ
ಸದ್ಯ 15 ಲಕ್ಷ ವಾರ್ಷಿಕ ಆದಾಯ ಹೊಂದಿರುವವರಿಗೆ ಶೇಕಡ 5-20ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ 15 ಲಕ್ಷ ರೂಪಾಯಿಗಿಂತ ಅಧಿಕ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ ವೈಯಕ್ತಿಕ ಆದಾಯವು 3 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿಗೆ ಐದು ಪಟ್ಟು ಹೆಚ್ಚಾದಾಗ ತೆರಿಗೆ ದರವು ಆರು ಪಟ್ಟು ಹೆಚ್ಚಾಗುತ್ತದೆ.