ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ನಮ್ಮ ಪಕ್ಷವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ ಸೋಮವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯ ಠಾಕ್ರೆ, “ಅಧಿಕೃತ ಇವಿಎಂ ಯಂತ್ರದ ದುರ್ಬಳಕೆ ಮಾಡಿಕೊಂಡು ನಮ್ಮ ಶಿವಸೇನೆ ಅಭ್ಯರ್ಥಿ ಅಮೋಲ್ ಕೀರ್ತಿಕರ್ ಅವರ ಗೆಲುವನ್ನು ಹತ್ತಿಕ್ಕಲಾಗಿದೆ” ಎಂದು ಆರೋಪಿಸಿದ್ದಾರೆ.
“ಚುನಾವಣಾ ಪ್ರಕ್ರಿಯೆ ಮತ್ತು ಇವಿಎಂಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಚುನಾವಣಾ ಆಯೋಗವು ‘ಸಂಪೂರ್ಣ ರಾಜಿ’ ಆಯೋಗ ಎಂದು ನಾನು ಈಗಾಗಲೇ ಹೇಳಿದ್ದೇನೆ” ಎಂದರು.
“ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಬಿಜೆಪಿ 40 ಸ್ಥಾನಗಳನ್ನು ಕೂಡ ಗೆಲ್ಲುತ್ತಿರಲಿಲ್ಲ. 243 ಸ್ಥಾನಗಳನ್ನು ಅವರು ಚುನಾವಣಾ ಪ್ರಕ್ರಿಯೆಯಲ್ಲಿನ ದುರ್ವ್ಯವಹಾರದಿಂದ ಗೆದ್ದಿದ್ದಾರೆ” ಎಂದು ಆದಿತ್ಯ ಠಾಕ್ರೆ ದೂರಿದರು.
ಇದನ್ನು ಓದಿದ್ದೀರಾ? ಭಾರತಕ್ಕೆ ಬಂದು ಇವಿಎಂ ಹೇಗೆ ಹ್ಯಾಕ್ ಆಗುತ್ತೆ ತೋರಿಸಿ: ಮಸ್ಕ್‌ಗೆ ಚುನಾವಣಾ ಆಯೋಗ ಸವಾಲು
ಹಾಗೆಯೇ, “ಮತ ಎಣಿಕೆ ಕೇಂದ್ರದಲ್ಲಿ ನಡೆದಿರುವ ಅವ್ಯವಹಾರಗಳ ವಿರುದ್ಧ ಅರ್ಜಿ ಸಲ್ಲಿಸಲು ಯುಬಿಟಿಯ ಶಿವಸೇನೆ ಸಿದ್ಧತೆ ನಡೆಸಿದೆ” ಎಂದು ಹೇಳಿದರು.
We held a press conference today to speak on the fraudulent process of election counting, that denied us a rightfully won seat.
We will fight the biased process legally.Our fight for our democracy and constitution goes on, against all efforts to have unfair elections in our… pic.twitter.com/yfBtB5SW9a
— Aaditya Thackeray (@AUThackeray) June 17, 2024
ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಶಿವಸೇನೆ ಅಭ್ಯರ್ಥಿ ರವೀಂದ್ರ ವೈಕರ್ ಕೇವಲ 48 ಮತಗಳಿಂದ ಜಯಗಳಿಸಿದ್ದಾರೆ. ಜೂನ್ 4ರಂದು ಗೋರೆಗಾಂವ್‌ನ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ವೈಕರ್ ಅವರ ಸಂಬಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿಯಮಗಳ ಪ್ರಕಾರ, ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ದೋಷಪೂರಿತ ಇವಿಎಂಗಳ ಡೇಟಾ ಬಿಡುಗಡೆ ಮಾಡಿ: ಇಸಿಗೆ ಕಾಂಗ್ರೆಸ್ ಸಂಸದ ಆಗ್ರಹ
ಈ ನಡುವೆ ಮಹಾರಾಷ್ಟ್ರದ ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಲ್ಲಿ ಇವಿಎಂ ಹ್ಯಾಕಿಂಗ್ ಆರೋಪ ಮಾಡಲಾಗುತ್ತಿದ್ದು ರಾಜಕೀಯ ಗದ್ದಲ ಆರಂಭವಾಗಿದೆ.
ಮತ್ತೊಬ್ಬ ಯುಬಿಟಿ ಶಿವಸೇನೆ ನಾಯಕ, ವಕೀಲ ಅನಿಲ್ ಪರಬ್ ಕೂಡಾ ಇದೇ ಆರೋಪ ಮಾಡಿದ್ದು, ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತು.