ಜ್ಞಾನ ದೇಗಲವಿದು ಕೈ ಮುಗಿದು ಒಳಗೆ ಬಾ ಎಂದು ಸರ್ಕಾರಿ ಶಾಲೆಯ ಬಾಗಿಲಿನಲ್ಲಿ ಬರೆದಿರುತ್ತಾರೆ. ಆದರೆ ಸೋರುತಿಹುದು ಶಾಲೆಯ ಮಾಳಿಗೆ, ಎಚ್ಚರಿಕೆಯಿಂದ ಪಾಠ ಕೇಳು, ಎನ್ನುವಂತಾಗಿದೆ ಈ ಶಾಲೆಯ ಸ್ಥಿತಿ. ಈ ಶಾಲೆ ಹತ್ತು ವರ್ಷ ಕಳೆದರೆ ಬರೋಬ್ಬರಿ ಒಂದು ಶತಮಾನವನ್ನು ದಾಟಿದಂತಾಗುತ್ತದೆ. ಬರೋಬ್ಬರಿ 90 ವರ್ಷಗಳ ಕಾಲ ಇಲ್ಲಿನ ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡಿರುವ ಶಾಲೆ ಇಂದು ಭಾಗಶಃ ಬಿದ್ದ ಸ್ಥಿತಿಯಲ್ಲಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರದ ಶಾಲೆ ಅಲ್ಲಲ್ಲಿ ಸೋರಿ, ಪಾಳು ಬಿದ್ದಂತಾಗಿದೆ. ಇನ್ನುಳಿದಂತೆ ತಾಲೂಕಿನಲ್ಲೂ ಅನೇಕ ಶಾಲೆಗಳು ದುರಸ್ತಿಯಲ್ಲಿವೆ. ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಯಾವಾಗ ಗೋಡೆಗಳು, ಛಾವಣಿಗಳು ಉದುರಿ ಮಕ್ಕಳ ಮೈ ಮೇಲೆ ಬೀಳುತ್ತವೋ ಎಂಬ ಆತಂಕದಲ್ಲಿ ಪಾಠ ಕೇಳಬೇಕಾದ ದುಃಸ್ಥಿತಿ ಇಲ್ಲಿನ ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಎದುರಾಗಿದೆ. ಇಲ್ಲಿನ ಗ್ರಾಮಸ್ಥರು ಸಾಕಷ್ಟು ಬಾರಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರೂ ಈವರೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಶಾಲೆಗಳೂ ಆರಂಭವಾಗಿ ಮೂರು ವಾರಗಳು ಕಳೆಯುತ್ತಾ ಬಂದಿದೆ. ಮಳೆಗಾಲ ಕೂಡ ಭರ್ಜರಿಯಾಗಿ ಆರಂಭವಾಗಿದ್ದು ಈ ಶಾಲೆಗೆ ಮಾತ್ರ ಪಜೀತಿ ತಂದಿಟ್ಟಿದೆ. ಜಿಟಿಜಿಟಿ ಮಳೆ ಏನಾದರೂ ಬಂತು ಎಂದರೆ ಇಲ್ಲಿನ ಶಾಲೆಯಲ್ಲಿ ಮೇಲ್ಛಾವಣಿ ಬಿದ್ದಿರುವುದು ಕಾಣಬಹುದಾಗಿದ್ದು, ಇದರಿಂದ ಮಳೆ ನೀರು ಕೊಠಡಿಯಲ್ಲಿ ಸೋರಿ ಶಿಕ್ಷಕರು ಪಾಠ ಮಾಡಲು, ಮಕ್ಕಳು ಪಾಠ ಕೇಳಲು ಪರಿತಪಿಸುವಂತಾಗಿದೆ.
ಭರಮಸಮುದ್ರ ಗ್ರಾಮದ ನಿವಾಸಿಗಳಾದ ಕುಮಾರ್, ಅಜಯ್ ಅವರು ಮಾತನಾಡಿ, “ಭರಮಸಮುದ್ರ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗಳು ಮಳೆ-ಗಾಳಿಗೆ ಭಾಗಶಃ ಬಿದ್ದು ಹೋಗಿದ್ದು, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಕ್ಷರಶಃ ತೊಂದರೆಯಾಗುತ್ತಿದೆ. ನಮ್ಮೂರಿನ ಶಾಲೆಯ ದುರಸ್ತಿ ಕಾರ್ಯ ಮಾಡಿಸಿ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಸಕ ಬಿ ದೇವೇಂದ್ರಪ್ಪ ಅವರು ಅನುವು ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
“ತಾಲೂಕಿನಲ್ಲಿ ಅನೇಕ ಶಾಲೆಗಳು 1934ರಲ್ಲಿ ನಿರ್ಮಾಣವಾಗಿದ್ದು, ಈ ಶಾಲೆ 90 ವರ್ಷಕ್ಕೂ ಹೆಚ್ಚು ವರ್ಷದ ಆಯುಷ್ಯ ಕಳೆದಿದೆ. ಕಟ್ಟಡ ತುಂಬಾ ಶಿಥಿಲಾವ್ಯಸ್ಥೆ ತಲುಪಿದೆ. ಯಾವಾಗ ಬೇಕಾದರೂ ಬೀಳಬಹುದೆಂಬ ಶಿಕ್ಷಕರು ಮತ್ತು ವಿದ್ಯಾರ್ಥಿ ಪೋಷಕರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಗ್ರಾಮಸ್ಥರು, ಶಿಕ್ಷಕರು ಇಲಾಖೆಗೆ ಗ್ರಾ ಪಂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಗಳ ಮೂಲಕ ಗಮನಕ್ಕೆ ತರಲಾಗಿದ್ದು, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
ಭರಮಸಮುದ್ರದ ರೈತ ಹೋರಾಟಗಾರ ಕುಮಾರ್ ಮಾತನಾಡಿ, “ಭರಮಸಮುದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 120ಕ್ಕೂ ಹೆಚ್ಚು ಮಕ್ಕಳು 1 ರಿಂದ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ 90 ವರ್ಷಗಳ ಹಳೆ ಕಟ್ಟಡದಲ್ಲಿಯೇ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈಗಾಗಲೇ ಅಲ್ಲಲ್ಲಿ ಕಟ್ಟಡದ ಛಾವಣಿ ಕುಸಿಯುತ್ತಿದೆ. ಇಂದೋ ನಾಳೆಯೋ ಬೀಳುವ ಸ್ಥಿತಿ ಬಂದೊದಗಿದ್ದರೂ, ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗುತ್ತಿಲ್ಲ. ಕಟ್ಟಡ ಕೊರತೆಯಿಂದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಮುಖ ಮಾಡುವ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ಈ ದಿನ.ಕಾಮ್‌ನೊಂದಿಗೆ ಪ್ರತಿಕ್ರಿಯಿಸಿ, “ವರ್ಷಕ್ಕೊಮ್ಮೆ ನಡೆಯುವ ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಕಟ್ಟಡದಲ್ಲಿರುವ ಧೂಳು, ಹಕ್ಕಿಗಳ ಗೂಡುಗಳು, ಜೇಡರ ಬಲೆಗಳನ್ನು ಸ್ವಚ್ಛ ಮಾಡಿ, ಶಾಲೆಯನ್ನು ಶುಚಿಗೊಳಿಸಿ ತಳಿರು ತೋರಣ ಕಟ್ಟಿ ಸಂಭ್ರಮಿಸಲಾಗುತ್ತದೆ. ತರಗತಿಗಳು ಪ್ರಾರಂಭವಾದ ಬಳಿಕ ಕಟ್ಟಡದಲ್ಲಿ ಕಟ್ಟಿಕೊಳ್ಳುವ ಜೇಡರ ಬಲೆಗಳನ್ನು ದಿನ ನಿತ್ಯ ತೆರವುಗೊಳಿಸಲಾಗುತ್ತದೆ. ಶಿಕ್ಷಕರಿಗೆ ಶಿಥಿಲವಾದ ಗೋಡೆಗಳು ಯಾವಾಗ ಕಳಚುತ್ತವೆಯೋ ಎಂಬ ಭಯ ಕಾಡುತ್ತಿದ್ದು, ಶಾಲೆಯ 1934ರಲ್ಲಿ ನಿರ್ಮಾಣವಾಗಿದೆ. 90 ವರ್ಷಕ್ಕೂ ಹೆಚ್ಚು ವರ್ಷ ಆಯುಷ್ಯ ಕಳೆದಿರುವ ಗೋಡೆಗಳ ನಿರ್ಮಾಣ. ನಿರ್ವಹಣೆ ದುರಸ್ತಿ ಮಾತ್ರ ದೂರವಾದ ಮಾತಾಗಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
“ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಬಡವರು ಮತ್ತು ಹಿಂದುಳಿದವರ ಮಕ್ಕಳು ಎಂಬ ಚಿಹ್ನೆಯಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳೆಂದರೆ ಯಾರೊಬ್ಬರಿಗೂ ಕಾಳಜಿ ಇಲ್ಲದಂತಾಗಿ ಕೇಳುವವರೇ ಇಲ್ಲದಂತಾಗಿದೆ. ಇದರಿಂದ ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀಳುತ್ತಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಬಡವರು, ಕೂಲಿಕಾರ್ಮಿಕರು, ಕೃಷಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು, ಹಳ್ಳಿಗಳಲ್ಲಿ ಸಣ್ಣ ಹಿಡುವಳಿ ರೈತರ ಮಕ್ಕಳಷ್ಟೇ ಕಲಿಯುತ್ತಿದ್ದಾರೆ. ಈ ಮಕ್ಕಳ ಪೋಷಕರಿಗೂ ಪ್ರಶ್ನಿಸುವ ಧ್ವನಿ ಇಲ್ಲದ ಕಾರಣ ಸರ್ಕಾರಿ ಶಾಲೆಗಳು ನಿರ್ಲಕ್ಷಕ್ಕೊಳಗಾಗಿದೆ. ಅಲ್ಲದೆ ಸರ್ಕಾರಗಳು, ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ತಾತ್ಸಾರ ಮಾಡುತ್ತಿವೆ ಎಂಬ ಅನುಮಾನ ಮೂಡಿಸುತ್ತಿದೆ. ಈಗಲಾದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಚಿವರು, ಸೇರಿದಂತೆ ಸಂಬಂಧಿಸಿದ ಶಾಸಕರು ಇತ್ತಕಡೆ ಗಮನ ಹರಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧೀಕರಣಗೊಳಿಸಬೇಕು” ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬೊಮ್ಮನಕಟ್ಟೆ ವಾರ್ಡ್ ಸಮಸ್ಯೆಗಳ ಆಗರ; ಜನಪ್ರತಿನಿಧಿ, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ
“ಮಕ್ಕಳಿಲ್ಲವೆಂದು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತದೆ. ಈ ರೀತಿಯ ಶಾಲಾ ಕಟ್ಟಡಗಳಿದ್ದರೆ ಯಾವ ಪೋಷಕರು ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಲಿಯಲು ಕಳಿಸುತ್ತಾರೆ. ಶಿಕ್ಷಕರಾದರೂ ಹೇಗೆ ಕಲಿಸುತ್ತಾರೆ. ಅನಾವಶ್ಯಕ ಯೋಜನೆಗಳಿಗೆ ಹಣ ವ್ಯಯಿಸುವ ಸರ್ಕಾರ ಮೂಲಭೂತ ಹಕ್ಕಾದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಶಾಲೆಗಳನ್ನು ಸುಸ್ಥಿತಿಯಲ್ಲಿಟ್ಟು ಮಕ್ಕಳನ್ನು ಶಾಲೆಗೆ ಕರೆತರಬೇಕಾದ ಕಾರ್ಯ ಮಾಡಬೇಕಾಗಿದೆ” ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಸ್ವಾಮಿ ಮಾತನಾಡಿ, “ಈ ಬಗ್ಗೆ ನಮಗೆ ಮನವಿ ಬಂದಿದ್ದು, ದುರಸ್ತಿ ಕಾರ್ಯ, ರಿಪೇರಿ ಮತ್ತು ಹೊಸಕಟ್ಟಡ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಲಾಗಿದೆ. ಇನ್ನೂ ಅನುಮೋದನೆ ಹಂತದಲ್ಲಿದೆ. ಅನುಮೋದನೆಯಾದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಸಾಧ್ಯವಿರುವ ಕಡೆ ಕೊಠಡಿಗಳ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಉಳಿದ ಕಡೆ ವ್ಯವಸ್ಥೆ ಮಾಡಬೇಕಾಗಿದೆ” ಎಂದು ಈ ದಿನ.ಕಾಮ್‌ಗೆ ತಿಳಿಸಿದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು