ಚಿತ್ರ ನಿರ್ಮಾಣಕಾರರು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿಗೆ ಸೂಚಿಸಿದ ನಂತರ ‘ಹಮಾರೆ ಬಾರಹ್’ ಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಸಿನಿಮಾವು ಜೂನ್ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇಸ್ಲಾಂ ಮತ್ತು ಮುಸ್ಲಿಂ ಸಮುದಾಯದವರ ಬಗ್ಗೆ ನಕಾರಾತ್ಮಕವಾಗಿ ತೋರಿಸಲಾಗಿದೆ ಹಾಗೂ ಕುರಾನ್‌ಅನ್ನು ವಿಕೃತಗೊಳಿಸಲಾಗಿರುವ ಆಧಾರದ ಮೇಲೆ ‘ಹಾಮಾರೆ ಬಾರಹ್’ ಚಿತ್ರವನ್ನು ನಿಷೇಧಿಸಬೇಕೆಂದು ಕೋರಲಾಗಿದ್ದ ಮನವಿಯ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಆದೇಶ ಹೊರಡಿಸಿದೆ.
ಬಿ ಪಿ ಕೊಲಾಬಾವಲ್ಲ ಹಾಗೂ ಫಿರ್‌ದೋಶ್ ಪೋನಿವಲ್ಲಾ ನೇತೃತ್ವದ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ಎರಡೂ ಕಡೆಯ ಪಕ್ಷದವರು ಕೋರ್ಟ್ ನೀಡಿದ ಆಕ್ಷೇಪಾರ್ಹವಾದ ಸಂಭಾಷಣೆಗಳನ್ನು ತೆರವುಗೊಳಿಸುವುದು ಸೇರಿ ಪರ್ಯಾಯ ಸಲಹೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹೆಚ್ಚುವರಿಯಾಗಿ 12 ಸೆಕೆಂಡ್‌ಗಳ ಕಾಲ ಹಕ್ಕು ನಿರಾಕರಣೆಯನ್ನು ಸಿನಿಮಾದಲ್ಲಿ ತೋರಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?
ಚಿತ್ರ ನಿರ್ಮಾಣಕಾರರು ಅರ್ಜಿದಾರರು ಆಯ್ಕೆ ಮಾಡಿದ ಚಾರಿಟಿ ಸಂಸ್ಥೆಗೆ 5 ಲಕ್ಷ ರೂ. ಕಾನೂನು ವೆಚ್ಚವನ್ನು ಒದಗಿಸಬೇಕೆಂದು ತಿಳಿಸಲಾಗಿದೆ. ಕೇಂದ್ರೀಯ ಸಿನಿಮಾ ಪ್ರಮಾಣ ಪತ್ರ ಮಂಡಳಿಗೆ(ಸಿಬಿಎಫ್‌ಸಿ) ಜೂನ್ 20ರೊಳಗೆ ಮಾರ್ಪಾಡುಗಳೊಂದಿಗೆ ಮರು ಪ್ರಮಾಣಿಕರಿಸಬೇಕೆಂದು ಕೋರ್ಟ್ ಸೂಚಿಸಿದೆ.
ಸಿನಿಮಾ ಬಿಡುಗಡೆಗೆ ಈ ಮೊದಲು ತಡೆ ನೀಡಿದ್ದ ಸುಪ್ರೀಂ ಕೋರ್ಟ್, ಬಾಂಬೆ ಹೈಕೋರ್ಟ್‌ಗೆ ಅರ್ಜಿ ವಿಲೇವಾರಿಯ ಹೊಣೆ ವಹಿಸಿತ್ತು.
