ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?

Date:

ಇವರೆಲ್ಲರೂ ರಾಜಕಾರಣಿಗಳು. ಈಗ ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದಾರೆ. ಸಂಡೂರಿನ ಅರಣ್ಯದ ಅಂತರಂಗದಲ್ಲಿ ಕಬ್ಬಿಣ, ಮ್ಯಾಂಗನೀಸ್ ಖನಿಜ ಸಂಪತ್ತಿದೆ, ಅದರಿಂದ ಸಾವಿರಾರು ಕೋಟಿ ರೂಪಾಯಿಗಳ ಕೈ ಬದಲಾಗಲಿದೆ. ಇವರ ಅನುಕೂಲಕ್ಕಾಗಿ 2006ರ ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆಯಿದೆ. ಅದನ್ನೇ ಗುರಾಣಿಯಂತೆ ಬಳಸಿಕೊಂಡು ಬಚಾವಾಗಲು, ಜನರಿಗೆ ಮಂಕುಬೂದಿ ಎರಚಲು ಸಿದ್ಧರಾಗಿದ್ದಾರೆ.

‘ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ತೆಗೆಯಲು ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಡತಕ್ಕೆ ಸಹಿ ಹಾಕಿರುವೆ. ರಾಜ್ಯ ಸರಕಾರ 430 ಎಕರೆಗೆ ಅನುಮತಿ ನೀಡಿದೆ. ಮುಂದಿನ 50 ವರ್ಷ ಅಲ್ಲಿ ಅದಿರು ಗಣಿಗಾರಿಕೆ ನಡೆಯುತ್ತದೆ. ಅಲ್ಲಿ ಮರಗಳನ್ನು ಬೆಳೆಸಲು, ಅರಣ್ಯ ಕಾಯ್ದುಕೊಳ್ಳಲು ಗುತ್ತಿಗೆ ಪಡೆದಿರುವ ಕಂಪನಿ ರಾಜ್ಯ ಸರಕಾರಕ್ಕೆ 123 ಕೋಟಿ ರೂ. ನೀಡಿದೆ. 2 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿ ಇಟ್ಟಿದ್ದಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 2,000 ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಆದರೆ, ಇದೇ ಕುಮಾರಸ್ವಾಮಿಯವರು 2018ರಲ್ಲಿ ಅಧಿಕಾರದಲ್ಲಿ ಇಲ್ಲದಿದ್ದಾಗ, ‘ದೇವದಾರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಎಂದಿಗೂ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿಷೇಧಿಸುತ್ತೇವೆ’ ಎಂದು ಹೋರಾಟಗಾರ ಎಸ್‌.ಆರ್‌. ಹಿರೇಮಠ್ ನೇತೃತ್ವದ ಜನಸಂಗ್ರಾಮ ಪರಿಷತ್ ಕಾರ್ಯಕರ್ತರಿಗೆ ಭರವಸೆ ನೀಡಿದ್ದರು.

ಈಗ ಕೇಂದ್ರ ಸಚಿವರಾಗುತ್ತಿದ್ದಂತೆಯೇ, ಇದೇ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸಮ್ಮತಿಸಿ ಕಡತಕ್ಕೆ ಮೊದಲ ಸಹಿ ಹಾಕಿದ್ದಾರೆ. ತಮ್ಮ ಮಾತನ್ನು ತಾವೇ ಮರೆತಿದ್ದಾರೆ. ಅಲ್ಲದೆ, ಈ ಕಡತಕ್ಕೆ ಸಹಿ ಹಾಕಿರುವುದು ತಮಗೆ ಸಂತಸ ತಂದಿದೆ ಎಂದೂ ಹೇಳಿಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, 2019ರ ಆಗಸ್ಟ್‌ನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುಣತಿ ಶ್ರೀದರ್ ಅವರು, ‘ಸಂಡೂರು ಅರಣ್ಯ ಪ್ರದೇಶದಲ್ಲಿ ಕುದುರೆಮುಖ ಐರನ್‌ ಓರ್‌ ಕಂಪನಿ (ಕೆಐಒಸಿಎಲ್‌) ಕೈಗೊಳ್ಳುವ ಗಣಿಗಾರಿಕೆ, ರಸ್ತೆ ನಿರ್ಮಾಣ ಮತ್ತು ಪೂರಕ ಚಟುವಟಿಕೆಗಳಿಂದ ಅರಣ್ಯ, ಜೀವವೈವಿಧ್ಯ, ಪರಿಸರ ಹಾಗೂ ಜನಜೀವನಕ್ಕೆ ಹಾನಿಯಾಗಲಿದೆ’ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಸಂಡೂರಿನ ಅರಣ್ಯ, ವನ್ಯಜೀವಿ, ಜಲ ಭದ್ರತೆ ಮತ್ತು ಮಣ್ಣಿನ ಆರೋಗ್ಯದ ‌ಹಿತದೃಷ್ಟಿಯಿಂದ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಆರಂಭದಿಂದಲೂ ಅರಣ್ಯ ಇಲಾಖೆ ವಿರೋಧ ಮಾಡುತ್ತಲೇ ಬಂದಿದೆ. ಸ್ಥಳೀಯರ ಪ್ರತಿಭಟನೆ, ಆಕ್ರೋಶದ ಜೊತೆಗೆ ಗಣಿಗಾರಿಕೆ ನಿರ್ಬಂಧಿಸಬೇಕೆಂದು ಹೈಕೋರ್ಟ್‌ನಲ್ಲಿ ಪ್ರಕರಣ ಕೂಡ ಬಾಕಿ ಇದೆ.

2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಅವರ ಸರ್ಕಾರ ಅರಣ್ಯ ಇಲಾಖೆಯ ಆಕ್ಷೇಪಗಳನ್ನು ತಳ್ಳಿಹಾಕಿ ಯೋಜನೆಗೆ ಶಿಫಾರಸು ಮಾಡಿತು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2022ರಲ್ಲಿ ಅಂತಿಮ ಅನುಮೋದನೆ ನೀಡಿತು. 992 ಎಕರೆ ದಟ್ಟ ಅರಣ್ಯವನ್ನು ಗಣಿಗಾರಿಕೆಗಾಗಿ ಅನುಮತಿ ನೀಡಲಾಯಿತು. ಇದರಿಂದ 300 ವಿಧದ ಔಷಧೀಯ ಸಸ್ಯಗಳೂ ಸೇರಿದಂತೆ 99 ಸಾವಿರ ಮರಗಳ ಮಾರಣಹೋಮ ನಡೆಯಲಿದೆ. ಆ ಮರಗಳನ್ನು ಆಶ್ರಯಿಸಿದ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳ ಜೀವಸಂಕುಲ ಸರ್ವನಾಶವಾಗಲಿದೆ.

ದೇವದಾರಿ ಗಣಿಪ್ರದೇಶವು ಒಟ್ಟು 4,605 ಹೆಕ್ಟೇರ್ ಸಂಪದ್ಭರಿತ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಭೂ ಪ್ರದೇಶವನ್ನು ಹೊಂದಿದೆ. ಇದರಲ್ಲಿ 3,203 ಹೆಕ್ಟೇರ್ ಭೂಮಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. 1,220 ಹೆಕ್ಟೇರ್ ಭೂಮಿ ರೆವಿನ್ಯೂ ಇಲಾಖೆಗೆ ಒಳಪಟ್ಟಿದೆ. ಉಳಿದಂತೆ 67 ಹೆಕ್ಟೇರ್ ಭೂ ಪ್ರದೇಶವು ಸರಕಾರಕ್ಕೆ ಸೇರಿದ್ದೆಂದು ಹಾಗೂ ಸುಮಾರು 115 ಹೆಕ್ಟೇರ್‌ ಪ್ರದೇಶವು ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿಮಿಟೆಡ್ ಸೇರಿದ್ದೆಂದು ಹೇಳಲಾಗಿದೆ. ಈಗಾಗಲೇ ಇಲ್ಲಿ ಹದಿನಾಲ್ಕು ಮೈನಿಂಗ್ ಕಂಪೆನಿಗಳು ಭೂಮಿಯ ಒಡಲನ್ನು ಬಗೆಯುತ್ತಿವೆ. ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಲೂ ಇದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ

2019ರಲ್ಲಿ ಅನುಮತಿ ನೀಡಿದ್ದು ರಾಜ್ಯ ಬಿಜೆಪಿ ಸರ್ಕಾರದ ಯಡಿಯೂರಪ್ಪನವರು, 2024ರಲ್ಲಿ ಗಣಿಗಾರಿಕೆಗೆ ಸಹಿ ಮಾಡಿರುವುದು ಎನ್‌ಡಿಎ ಸರ್ಕಾರದ ಕುಮಾರಸ್ವಾಮಿಯವರು. ಆದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವೇಕೆ ಸುಮ್ಮನಿದೆ? ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು, ಹಿಂದೆ ಬಳ್ಳಾರಿ ರೆಡ್ಡಿಗಳ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದವರಲ್ಲವೇ?

ಇವರೆಲ್ಲರೂ ರಾಜಕಾರಣಿಗಳು. ಈಗ ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದಾರೆ. ಸಂಡೂರಿನ ಅರಣ್ಯದ ಅಂತರಂಗದಲ್ಲಿ ಕಬ್ಬಿಣ, ಮ್ಯಾಂಗನೀಸ್ ಖನಿಜ ಸಂಪತ್ತಿದೆ, ಅದರಿಂದ ಸಾವಿರಾರು ಕೋಟಿ ರೂಪಾಯಿಗಳ ಕೈ ಬದಲಾಗಲಿದೆ. ಇವರ ಅನುಕೂಲಕ್ಕಾಗಿ 2006ರ ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆಯಿದೆ. ಅದನ್ನೇ ಗುರಾಣಿಯಂತೆ ಬಳಸಿಕೊಂಡು ಬಚಾವಾಗಲು, ಜನರಿಗೆ ಮಂಕುಬೂದಿ ಎರಚಲು ಸಿದ್ಧರಾಗಿದ್ದಾರೆ.

ಇವರಾರೂ ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ದೇವದಾರಿಯಂತಹ ದಟ್ಟ ಅರಣ್ಯನಾಶ ಮನುಕುಲದ ನಾಶ ಅನಿಸುತ್ತಿಲ್ಲ. ಜನರ ಭವಿಷ್ಯದ ಬದುಕಿನ ಬಗ್ಗೆ ಚಿಂತಿಸುತ್ತಿಲ್ಲ. ಎಲ್ಲರಿಗೂ ಅರ್ಜೆಂಟಾಗಿ ಅಭಿವೃದ್ಧಿ ಆಗಬೇಕಾಗಿದೆ, ಕಾಮಗಾರಿ ನಡೆಯುತ್ತಲೇ ಇರಬೇಕಾಗಿದೆ.

ಯಾರು ಬಂದರೂ ರಾಗಿ ಬೀಸೋದು ತಪ್ಪಲ್ಲ ಎನ್ನುವುದು ಸಾರ್ವಕಾಲಿಕ ಸತ್ಯವಾಗುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ...

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...