10 ವರ್ಷಗಳ ಬಿಆರ್‌ಎಸ್ ಆಡಳಿತದಲ್ಲಿ ಪತ್ರಕರ್ತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆ 10 ವರ್ಷಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ. ನಮ್ಮ ಸರ್ಕಾರ ಪತ್ರಕರ್ತರಿಗೆ ಬೆಂಬಲ ನೀಡುತ್ತದೆ ಎಂದು ತೆಲಂಗಾಣ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಕಂದಾಯ ಹಾಗೂ ವಸತಿ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ಖಮ್ಮಂನಲ್ಲಿ ನಡೆದ ಟಿಯುಡಬ್ಲ್ಯೂಜೆ (ಐಜೆಯು) ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. “ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪತ್ರಕರ್ತರನ್ನು ಕಡೆಗಣಿಸಿದ್ದರು. ನಾವು ಪತ್ರಕರ್ತರ ಬೆಂಬಲಕ್ಕಿದ್ದೇವೆ. ಪತ್ರಕರ್ತರ ಮೇಲಿನ ದಾಳಿ ತಡೆಗೆ ವಿಶೇಷ ಕಾನೂನು ತರಲಾಗುವುದು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಮನೆ ನೀಡಲು ಶೀಘ್ರವೇ ನೀತಿ ರೂಪಿಸಿ, ಜಾರಿಗೊಳಿಸಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.
“ತೆಲಂಗಾಣ ಚಳವಳಿಯಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಬಿಆರ್‌ಎಸ್ ಆಳ್ವಿಕೆಯಲ್ಲಿ ಕೆಸಿಆರ್ ಅವರು ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದರು. ಅವರ ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿದ್ದವು. ಅವರ ಆಡಳಿತದಲ್ಲಿ ಒಂದೇ ಒಂದು ಸಮಸ್ಯೆಯೂ ಬಗೆಹರಿದಿಲ್ಲ” ಎಂದು ಆರೋಪಿಸಿದರು.
“ಒಂದು ವರ್ಷದ ಹಿಂದೆ ಪ್ರಕರಣ ತೆರವಾದರೂ ಹಿಂದಿನ ಆಡಳಿತದಲ್ಲಿ ಪತ್ರಕರ್ತರಿಗೆ ಮನೆ ನಿವೇಶನ ಮಂಜೂರು ಮಾಡಿಲ್ಲ. ನಮ್ಮ ಸರ್ಕಾರ, ಹೈದರಾಬಾದ್ ಜರ್ನಲಿಸ್ಟ್ಸ್ ಹೌಸಿಂಗ್ ಸೊಸೈಟಿಯ ಸದಸ್ಯರಿಗೆ ಶೀಘ್ರದಲ್ಲೇ ಸೈಟ್‌ಗಳನ್ನು ಹಸ್ತಾಂತರಿಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಘೋಷಿಸಿದ್ದಾರೆ. ಒಂದು ವಾರ ಅಥವಾ 10 ದಿನಗಳಲ್ಲಿ ಜಿಒ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೈದರಾಬಾದ್‌ನಲ್ಲಿರುವ ಅರ್ಹ ಪತ್ರಕರ್ತರು ಹಾಗೂ ಜಿಲ್ಲೆಗಳು ಮತ್ತು ಮಂಡಲಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪತ್ರಕರ್ತರಿಗೆ ಮನೆ ನಿವೇಶನ ನೀಡಲು ನಾವು ನೀತಿಯನ್ನು ರೂಪಿಸುತ್ತಿದ್ದೇವೆ” ಎಂದು ಶ್ರೀನಿವಾಸ ರೆಡ್ಡಿ ಹೇಳಿದರು.
“ಆರೋಗ್ಯ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ನೀತಿಗಳನ್ನು ಅಧ್ಯಯನ ಮಾಡಿ ಅದರಂತೆ ಪತ್ರಕರ್ತರಿಗೆ ಆರೋಗ್ಯ ರಕ್ಷಣೆಯನ್ನು ವಿಸ್ತರಿಸಲಾಗುವುದು. ಪತ್ರಕರ್ತರ ಕಲ್ಯಾಣ ಮತ್ತು ರಕ್ಷಣೆಗಾಗಿ ಎಲ್ಲ ರೀತಿಯ ಸಮಿತಿಗಳನ್ನು ಶೀಘ್ರವೇ ಮರುಸ್ಥಾಪಿಸಲಾಗುವುದು” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೆಸ್ ಅಕಾಡೆಮಿ ಅಧ್ಯಕ್ಷ ಕೆ ಶ್ರೀನಿವಾಸ್ ರೆಡ್ಡಿ, ಐಜೆಯು ಮಾಜಿ ಅಧ್ಯಕ್ಷ ದೇವುಲಪಲ್ಲಿ ಅಮರ್, ಟಿಯುಡಬ್ಲ್ಯೂಜೆ (ಐಜೆಯು) ರಾಜ್ಯಾಧ್ಯಕ್ಷ ನಗುನೂರಿ ಶೇಖರ್, ಪ್ರಧಾನ ಕಾರ್ಯದರ್ಶಿ ವಿರ್ಹತ್ ಅಲಿ, ಟಿಯುಡಬ್ಲ್ಯುಜೆ ರಾಜ್ಯ ಉಪಾಧ್ಯಕ್ಷ ಕೆ ರಾಮನಾರಾಯಣ, ಐಜೆಯು ಪ್ರತಿನಿಧಿಗಳಾದ ನರೇಂದ್ರ ರೆಡ್ಡಿ, ಕೆ ಸತ್ಯನಾರಾಯಣ, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಂಡಳಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.