2023ರ ನ.1ರಂದು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷ ತುಂಬಿವೆ. ಹಾಗಾಗಿ, ಇಡೀ ವರ್ಷ ‘ಕರ್ನಾಟಕ ಸಂಭ್ರಮ’ ಎಂಬ ಹೆಸರಿನಡಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯವನ್ನಿಟ್ಟು ಕಾರ್ಯಕ್ರಮ ನಡೆಸಲಾಗಿದೆ. ಕಳೆದ ನ.1ರಂದು ಹಂಪಿಯಿಂದ ಕಾರ್ಯಕ್ರಮ ಪ್ರಾರಂಭವಾಗಿತ್ತು.
ಈಗ ಇದರ ಮುಂದುವರಿದ ಭಾಗವಾಗಿ ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ 25 ಅಡಿ ಎತ್ತರದ ಕನ್ನಡ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲೆಂದು ವಿಧಾನಸೌಧದ ಪಶ್ಚಿಮದ್ವಾರದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಪೂಜೆ ನೆರವೇರಿಸಿದ್ದಾರೆ. ಇದಕ್ಕೆ ತಗಲುವ ವೆಚ್ಚ ಎಷ್ಟು ಅಂದರೆ ₹21.28 ಕೋಟಿ ರೂ.!
ರಾಜ್ಯ ಬರ, ಆರ್ಥಿಕ ಸಂಕಷ್ಟದಲ್ಲಿರುವ ಸಮಯದಲ್ಲಿ ಸರ್ಕಾರವು ಇಷ್ಟೊಂದು ಮೊತ್ತದ ಹಣ ಖರ್ಚು ಮಾಡುವ ಅನಿವಾರ್ಯ ಏನಿತ್ತು? ಎಂದು ಸಾಹಿತಿಗಳು, ಚಿಂತಕರು, ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಹಿರಿಯ ಸಾಹಿತಿ ಬಂಜಗೆರೆ ಪ್ರಕಾಶ್, “ರಚನಾತ್ಮಕವಾಗಿ ಕನ್ನಡ ಭಾಷೆ ಬೆಳೆಸುವ ಕೆಲಸವನ್ನು ನಾವು ಹೆಚ್ಚೆಚ್ಚು ಮಾಡಬೇಕಾಗಿದೆ. ಆದರೆ ಭಾವನಾತ್ಮಕವಾಗಿ ಭುವನೇಶ್ವರಿ ದೇವಿ ಪ್ರತಿಮೆ ಕೂರಿಸುವುದರಿಂದ ಹೆಚ್ಚೇನೂ ಉಪಯೋಗವಾಗುವುದಿಲ್ಲ. ಅದರಿಂದ ಸಮಾಜಕ್ಕೆ ತಪ್ಪು ಸಂದೇಶ ಕೊಟ್ಟಂತಾಗುತ್ತದೆ” ಎಂದು ಅಭಿಪ್ರಾಯಿಸಿದ್ದಾರೆ.
“ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ಅಂತ ಹೆಸರಿಟ್ಟು 50 ವರ್ಷ ಕಳೆದಿದೆ ಎಂದು ಪ್ರಗತಿಪರ ಚಿಂತಕರನ್ನು ಸಭೆಗೆ ಕರೆದಿತ್ತು. ಆ ಸಭೆಯಲ್ಲಿ ಬಲಪಂಥೀಯರು ಕೂಡ ಆಗಮಿಸಿದ್ದರು. ಆಗ ಅಲ್ಲಿ ಒಂದು ವರ್ಗ ಭುವನೇಶ್ವರಿಯ ಪ್ರತಿಮೆ ಮಾಡಬೇಕೆಂಬ ಪ್ರಸ್ತಾಪ ಮಾಡಿತ್ತು. ನಾನೂ ಸೇರಿದಂತೆ ಅನೇಕರು ಪ್ರತಿಮೆ ಸಂಸ್ಕೃತಿ ಸೂಕ್ತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದೆವು. ಕನ್ನಡವನ್ನ ಬೆಳೆಸುವುದಕ್ಕೆ ಹಲವು ಯೋಜನೆಗಳನ್ನ ರೂಪಿಸಿ, ಕಮ್ಮಟಗಳನ್ನ ಮಾಡಿ, ಕನ್ನಡದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಿ, ಕನ್ನಡಿಗರಿಗೆ ಕೆಲಸ ಕೊಡಿ, ಅನೇಕ ಕನ್ನಡ ಭವನಗಳನ್ನು ಕಟ್ಟಿ, ಅಲ್ಲಿ ನಿರಂತರ ಚಟುವಟಿಕೆ ಮಾಡಿ ಎಂದು ಸೂಚಿಸಿದ್ದೆವು” ಎಂದು ಬಂಜಗೆರೆ ತಿಳಿಸಿದ್ದಾರೆ.
“ಪ್ರತಿಮೆ ಮಾಡಲೇ ಬೇಕಂತಿದ್ದರೆ ಕರ್ನಾಟಕದ ಭೂಪಟವನ್ನೇ ಸ್ಥಾಪಿಸಿ ಎಂದು ಕೂಡ ಹೇಳಿದ್ದೆವು. ಆದರೆ ಯಾವುದನ್ನು ಅಂತಿಮ ಮಾಡಿದ್ದರೊ ಇಲ್ಲವೊ ಗೊತ್ತಿಲ್ಲ. ಆದರೆ ಭುವನೇಶ್ವರಿ ಪ್ರತಿಮೆಯನ್ನು ಮಾತ್ರ ಈಗ ಮಾಡುತ್ತಿದ್ದಾರೆ. ಪ್ರತಿಮೆಯ ವಿಷಯ ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ. ಬದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಯೋಜನೆಯಡಿಯಲ್ಲಿ ಬರುತ್ತದೆ” ಎಂದು ಹಿರಿಯ ಸಾಹಿತಿ ಬಂಜಗೆರೆ ಪ್ರಕಾಶ್ ತಿಳಿಸಿದರು.
ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ನಾಮಕರಣಗೊಂಡ ಸುವರ್ಣ ಮಹೋತ್ಸವ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ @siddaramaiah ಅವರು ನಾಡದೇವಿ ಭುವನೇಶ್ವರಿ ತಾಯಿಯ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. pic.twitter.com/bAVjycZeWD
— CM of Karnataka (@CMofKarnataka) June 20, 2024
“ಅನೇಕ ಕನ್ನಡ ಶಾಲೆಗಳಲ್ಲಿ ಕುಡಿಯೋಕೆ ನೀರಿಲ್ಲ, ಇತ್ತೀಚಿನ ವರದಿ ಹೇಳುವ ಪ್ರಕಾರ ತುಮಕೂರು ಜಿಲ್ಲೆಯ ಅನೇಕ ಶಾಲೆಗಳ ಸುಮಾರು 2000 ಕೊಠಡಿಗಳು ಇರುವ ಕಟ್ಟಡಗಳು, ಮಳೆಗಾಲದ ಈ ಹೊತ್ತಲ್ಲಿ ಯಾವಾಗ ಬೇಕಾದರು ಬೀಳಬಹುದಾದ ಸ್ಥಿತಿಯಲ್ಲಿವೆ. ಮಕ್ಕಳ ಜೀವದ ಪ್ರಶ್ನೆ ಇದು. ಈ ಕಟ್ಟಡಗಳನ್ನು ದುರಸ್ತಿ ಮಾಡಲು 21 ಕೋಟಿ ಮೊತ್ತದ ಹಣವನ್ನ ಬಳಸಿಕೊಳ್ಳಬಹುದಿತ್ತು. ಹಾಗೆಯೇ, ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮಗಳಲ್ಲಿ ಓದಿ, ಗರಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕೊಡಲು ಕೂಡ ಈ ಹಣವನ್ನ ಉಪಯೋಗಿಸಬಹುದಿತ್ತು. ಕನ್ನಡದ ಕೆಲಸಕ್ಕೆ ಅನೇಕ ಸಂಸ್ಥೆಗಳನ್ನು ನಾವು ಹುಟ್ಟು ಹಾಕಿದ್ದೇವೆ. ಆದರೆ ಅವುಗಳಿಗೆಲ್ಲ ಸಿಗುತ್ತಿರುವ ಅನುದಾನ ಬಹಳ ಕಡಿಮೆ ಇದೆ. ಇದರಿಂದ ಹೆಚ್ಚು ಚಟುವಟಿಕೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ” ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಈ ದಿನ.ಕಾಮ್ ಜೊತೆಗೆ ಮಾತನಾಡುತ್ತಾ ಹೇಳಿದರು.
“ಇಷ್ಟೊಂದು ದೊಡ್ಡ ಮೊತ್ತದ ಹಣ ಖರ್ಚು ಮಾಡುವುದು ಖಂಡಿತ ಅಗತ್ಯವಿರಲಿಲ್ಲ. ಸಾಂಕೇತಿಕವಾಗಿ ಒಂದು 10-20 ಲಕ್ಷದ ಸಣ್ಣ ಪ್ರತಿಮೆಯನ್ನು ಮಾಡಬಹುದಿತ್ತು. ಕನ್ನಡದ ಸಾಹಿತ್ಯದ ಕೆಲಸಕ್ಕೆ ಮಹತ್ವ ಕೊಟ್ಟಿದ್ದಿದ್ದರೆ ಉತ್ತಮವಿತ್ತು” ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿ, ಕನ್ನಡ ಸಾಹಿತ್ಯಾಸಕ್ತರೂ ಆದ ಗಿರಿಧರ ಕಾರ್ಕಳ ಅಭಿಪ್ರಾಯಪಟ್ಟರು.
“ಸರ್ಕಾರ ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಹೆಚ್ಚಿಸುವ ಯೋಜನೆ ಮಾಡಿದ್ದಿದ್ದರೆ ಇವತ್ತಿಗೆ ಅದು ಹೆಚ್ಚು ಉಪಯುಕ್ತವಾಗುತ್ತಿತ್ತು. ಒಂದು ಕಡೆ ಅಂಬೇಡ್ಕರ್ ಫೋಟೋವನ್ನ ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕಂತ ಆದೇಶ ಹೊರಡಿಸುವ ಸರ್ಕಾರ, ಇನ್ನೊಂದು ಕಡೆ ಮೂರ್ತಿ ಸ್ಥಾಪಿಸಲು ಹೊರಟಿರುವುದು ಸರ್ಕಾರದ ವೈರುಧ್ಯ ನಿಲುವುಗಳನ್ನ ತೆರೆದಿಡುತ್ತದೆ. ಏಕೀಕರಣದ ಸಮಯದಲ್ಲಿ ಕನ್ನಡಿಗರನ್ನ ಭಾವನಾತ್ಮಕವಾಗಿ ಒಂದಾಗಿಸಲು, ಕನ್ನಡ ಚಳವಳಿ ಮಾಡಲು ಜನರಲ್ಲಿದ್ದ ದೈವ ಭಾವನೆಯನ್ನ ಭುವನೇಶ್ವರಿ ದೇವಿಯ ರೂಪಕ್ಕೆ ಪರಿವರ್ತಿಸಿ, ಅದರ ಮೂಲಕ ಕನ್ನಡಿಗರಲ್ಲಿ ಕನ್ನಡದ ಅಭಿಮಾನ ಹೆಚ್ಚಿಸಬೇಕೆಂದು ಆಲೂರು ವೆಂಕಟರಾಯರು ಮಾಡಿದ್ದು ಅಂದಿನ ಅಗತ್ಯವಾಗಿತ್ತು. ಆದರೆ ಇವತ್ತು ಅದರ ಅನಿವಾರ್ಯತೆ ಇಲ್ಲ. ಹಾಗಂತ ಅದನ್ನ ನಿರಾಕರಿಸುವುದು ಬೇಡ. ಹಾಗೇ ಮತ್ತೆ ಪುನರುತ್ಥಾನ ಮಾಡೋದು ಬೇಡ” ಎಂದು ಯುವ ಸಾಹಿತಿ ಅರುಣ್ ಜೋಳದ ಹೇಳಿದರು.
“ನನಗೆ ವೈಯುಕ್ತಿಕವಾಗಿ ಪ್ರತಿಮೆ ಸ್ಥಾಪಿಸುವುದರ ಬಗ್ಗೆಯೇ ಒಲವಿಲ್ಲ. ಸರ್ಕಾರ ಕನ್ನಡ ಪರ ಕೆಲಸಗಳನ್ನ ಮಾಡುತ್ತಿದ್ದಾರೆ ಅಂತ ಗೊತ್ತಾದಾಗ ಸಂತೋಷವಾಗುತ್ತದೆ. ಆದರೆ, ಇದಕ್ಕೆ ಕೋಟಿ ರೂಪಾಯಿ ಖರ್ಚಾಗುತ್ತದೆ ಅಂತ ತಿಳಿದಾಗ ತುಸು ಆತಂಕವಾಗುತ್ತದೆ. ಸಮಾಜವಾದಿ ನಿಲುವನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆದ್ಯತೆಗಳಿರಬೇಕಾಗಿತ್ತು. ಇವತ್ತು ಸರ್ಕಾರದಲ್ಲಿ ಹಣಕಾಸಿನ ಅಭಾವ ಇದ್ದಾಗ, ದುಡ್ಡು ಸಂಗ್ರಹಿಸುವುದಕ್ಕೆ ನಾನಾ ಮಾರ್ಗಗಳನ್ನ ಹುಡುಕಿ ಜನರ ಮೇಲೆ ತೆರಿಗೆ ಹಾಕುತ್ತಿರುವಾಗ, 21 ಕೋಟಿ ಖರ್ಚು ಮಾಡಿ ಪ್ರತಿಮೆ ಸ್ಥಾಪಿಸುವ ಅನಿವಾರ್ಯವೇನಿತ್ತು?” ಎಂದು ಹಿರಿಯ ಪತ್ರಕರ್ತೆ ಡಾ. ವಿಜಯಮ್ಮ ಕೇಳಿದರು.
“ಈ ಹೊತ್ತಿನಲ್ಲಿ ಪ್ರತಿಮೆಗೆ ಆದ್ಯತೆ ಕೊಡಬೇಕಾ ಅಥವಾ ಜನರ ಸಂಕಷ್ಟಕ್ಕೆ ನೆರವು ನೀಡಬೇಕಾ ಅಂತ ಮುಖ್ಯಮಂತ್ರಿಗಳು ಸ್ವಲ್ಪ ಯೋಚನೆ ಮಾಡಬೇಕಿತ್ತು. ಸರ್ಕಾರವು ಕನ್ನಡದ ಕೆಲಸ ಮಾಡುವುದರ ಬಗ್ಗೆ ನಮಗೆ ಖಂಡಿತ ಪ್ರೀತಿಯಿದೆ. ಒಂದು ಸಣ್ಣ ಪ್ರತಿಮೆ ಮಾಡಿಸಿದ್ದರೂ ಕೂಡ ತೊಂದರೆ ಇರುತ್ತಿರಲಿಲ್ಲ” ಎಂದು ಈ ದಿನ.ಕಾಮ್ ಜೊತೆಗೆ ಮಾತನಾಡುತ್ತಾ ಡಾ. ವಿಜಯಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“21 ಕೋಟಿ ರೂ. ಹಣದಲ್ಲಿ ಅನೇಕ ಕನ್ನಡ ಸರ್ಕಾರಿ ಶಾಲೆಗಳನ್ನ ನಿರ್ಮಿಸಬಹುದಿತ್ತು. ಅಥವಾ ಈಗಾಗಲೇ ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಬಹುದಿತ್ತು. ಕನ್ನಡದ ಮೇಲೆ ನಿಜವಾದ ಪ್ರೀತಿ ಇದ್ದಲ್ಲಿ ಈ ತರ ದುಂದು ವೆಚ್ಚ ಮಾಡುವ ಬದಲು, ಕನ್ನಡ ಜನತೆಗೆ ಉಪಯೋಗವಾಗುವಂತ ಕೆಲಸಗಳಿಗೆ ಇಷ್ಟು ಮೊತ್ತದ ಹಣ ಬಳಸಬಹುದಿತ್ತು. ಎಷ್ಟೋ ಸರ್ಕಾರಿ ಶಾಲೆಗಳ ಗೋಡೆಗಳಲ್ಲಿ ಬಣ್ಣವಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ. ಈ ಎಲ್ಲದರ ಕಡೆ ಗಮನಹರಿಸಬೇಕಿದ್ದ ಸರ್ಕಾರ, ಕೇವಲ ಆಡಂಬರದ ತೋರಿಕೆಗೆ ಪ್ರತಿಮೆ ಸ್ಥಾಪಿಸುತ್ತಿರುವುದಲ್ಲಿ ಏನೂ ಪ್ರಯೋಜನವಿಲ್ಲ” ಎಂದು ಸಾಮಾಜಿಕ ಚಿಂತಕ ಆದರ್ಶ್ ಅಯ್ಯರ್ ಹೇಳಿದರು.

ಚರಣ್ ಗೌಡ ಬಿ ಕೆ
ಬಿ ಎ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ನೀತಿ, ಎರಡನೆ ವರ್ಷ, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಬೆಂಗಳೂರು