ಯುಜಿಸಿ ನೆಟ್ (UGC-NET) ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆಯನ್ನು ರದ್ದು ಮಾಡಿದ ಬಳಿಕ ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಯುವಕರ ಮತ್ತು ವಿದ್ಯಾರ್ಥಿಗಳ ನಷ್ಟಕ್ಕೆ ನೈತಿಕ ಹೊಣೆ ಹೊತ್ತಿದ್ದಾರೆ. ಇದೀಗ “ನೈತಿಕ ಹೊಣೆ ಹೊತ್ತ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು” ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆಗ್ರಹಿಸಿದ್ದಾರೆ.
ನೀಟ್ ಸಮಸ್ಯೆ ಮತ್ತು ಯುಜಿಸಿ ನೆಟ್ ಪರೀಕ್ಷೆ ರದ್ದತಿ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸೀತಾರಾಮ್ ಯೆಚೂರಿ, “ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆಗಾರಿಕೆ ಹೊತ್ತಿದ್ದಾರೆ. ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ನಾವು ರಾಜಕೀಯದಲ್ಲಿ ಕೇಳಿದ್ದೇವೆ. ಆದರೆ ಅವರು ಯಾವ ನಿರ್ಧಾರವೂ ಕೈಗೊಂಡಿಲ್ಲ” ಎಂದು ಹೇಳಿದರು.
“ಈ ಸರ್ಕಾರವೇ ಈ ಎಲ್ಲ ಪ್ರಕರಣಗಳಿಗೆ ಜವಾಬ್ದಾರಿಯಾಗಿದೆ” ಎಂದು ಆರೋಪಿಸಿದ ಸೀತಾರಾಮ್ ಯೆಚೂರಿ ಅವರು, “ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದುಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
#WATCH | On NEET issue & UGC-NET exam cancellation, CPI(M) General Secretary Sitaram Yechury says, “If he (Union education minister Dharmendra Pradhan) is taking moral responsibility, we have heard in politics that people who take moral responsibility resign from their posts. But… pic.twitter.com/MjqnB5v19G
— ANI (@ANI) June 21, 2024
ಇದನ್ನು ಓದಿದ್ದೀರಾ? ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ ಸಿಬಿಐ
ಯುಜಿಸಿ ನೆಟ್ (UGC-NET) ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಇದಾದ ಒಂದು ದಿನದ ನಂತರ ಸಿಬಿಐ ತನಿಖೆಯನ್ನು ಆರಂಭಿಸಿದೆ. ಜೂನ್ 18ರಂದು ಪರೀಕ್ಷೆ ನಡೆದಿತ್ತು.
ಇದಾದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, “ಮೇ 5ರಂದು ನಡೆದ ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಈಗಾಗಲೇ ತೀವ್ರ ಟೀಕೆಯನ್ನು ಎದುರಿಸುತ್ತಿದ್ದೇವೆ. ಈಗ ಯುಜಿಸಿ ನೆಟ್ 2024 ಪ್ರಶ್ನೆ ಪತ್ರಿಕೆ ಡಾರ್ಕ್‌ನೆಟ್‌ನಲ್ಲಿ ಸೋರಿಕೆಯಾಗಿದೆ” ಎಂದು ಹೇಳಿದ್ದರು.
“ಡಾರ್ಕ್‌ನೆಟ್‌ನಲ್ಲಿನ ಯುಜಿಸಿ ನೆಟ್ ಪ್ರಶ್ನೆಪತ್ರಿಕೆಯು ಯುಜಿಸಿ ನೆಟ್‌ನ ಮೂಲ ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗುತ್ತದೆ ಎಂಬುದು ಸ್ಪಷ್ಟವಾದ ನಂತರ ನಾವು ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ” ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದರು. ಹಾಗೆಯೇ ನೈತಿಕ ಹೊಣೆಯನ್ನು ತಾನು ಹೊರುವುದಾಗಿ ತಿಳಿಸಿದ್ದರು.
ಇದನ್ನು ಓದಿದ್ದೀರಾ? ತುಮಕೂರು | ಸಂಶೋಧನಾರ್ಥಿಗಳ ಮೇಲೆ ವಿವಿ ಆಡಳಿತಾತ್ಮಕ ದಬ್ಬಾಳಿಕೆ; ಯುಜಿಸಿ ನಿಯಮ ಉಲ್ಲಂಘನೆಯ ಆರೋಪ
ಇದಾದ ಬಳಿಕ ಎಕ್ಸ್ ಪೋಸ್ಟ್ ಮಾಡಿದ್ದ ಸೀತಾರಾಮ್ ಯೆಚೂರಿ, “ಎನ್‌ಟಿಎ ವ್ಯವಸ್ಥೆ ರದ್ದುಗೊಳಿಸಬೇಕು. ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ನೆಟ್, ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದರು.
ಹಾಗೆಯೇ, “ಪಿಎಚ್‌ಡಿ ನೇಮಕಾತಿಗೆ ನೆಟ್ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಆದೇಶವನ್ನು ಹಿಂಪಡೆಯಬೇಕು. ಪ್ರಸ್ತುವ ಪ್ರವೇಶ ಪರೀಕ್ಷೆಯನ್ನು ಕೇಂದ್ರೀಕೃತ ಪ್ರವೇಶ ಪರೀಕ್ಷೆಯಾಗಿ ಬದಲಾಯಿಸುವ ಪ್ರಸ್ತಾಪವನ್ನು ಹಿಂಪಡೆಯಬೇಕು” ಎಂದೂ ಒತ್ತಾಯಿಸಿದ್ದಾರೆ.