ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಸೀತಾನಗರಂನಲ್ಲಿ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಕಚೇರಿಗಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಮಂಗಳಗಿರಿ ತಾಡೆಪಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಟಿಎಂಸಿ) ಅಧಿಕಾರಿಗಳು ಶನಿವಾರ ಮುಂಜಾನೆ ಜೆಸಿಬಿಗಳ ಮೂಲಕ ಕಟ್ಟಡವನ್ನು ಉರುಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಕಟ್ಟಡವು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸದಿಂದ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಚೇರಿಗೆ ಹೋಗುವ ಮಾರ್ಗದ ಮಧ್ಯದಲ್ಲಿದೆ. ಕಟ್ಟಡದ ಧ್ವಂಸವನ್ನು ಜಗನ್ ರೆಡ್ಡಿ ಖಂಡಿಸಿದ್ದಾರೆ. ಇದು, ಆಡಳಿತಾರೂಢ ಟಿಡಿಪಿಯ ‘ವಿನಾಶಕಾರಿ’ ಸೇಡಿನ ರಾಜಕಾರಣ ಎಂದಿದ್ದಾರೆ.
ಶನಿವಾರ ಮುಂಜಾನೆ ಐದು ಗಂಟೆ ಸುಮಾರಿಗೆ ಪುರಸಭೆ ಅಧಿಕಾರಿಗಳು ಬುಲ್ಡೋಜರ್‌ಗಳ ಮೂಲಕ ಕಟ್ಟಡವನ್ನು ಕೆಡವಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಕೆಡವುವ ಕಾರ್ಯಾಚರಣೆ ಪೂರ್ಣಗೊಂಡಿದೆ. ಕಾರ್ಯಾಚರಣೆ ಸಮಯದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಬಾರದಂತೆ ತಡೆಯಲು ಗೇಟ್‌ಗಳನ್ನು ಹಾಕಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸದ್ಯ, ತಾಡೇಪಲ್ಲಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕಟ್ಟಡ ಕೆಡವುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಇತ್ತೀಚೆಗೆ ವೈಎಸ್‌ಆರ್ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಕಾನೂನನ್ನು ಮೀರದಂತೆ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ಸೂಚನೆಯನ್ನು ವೈಎಸ್‌ಆರ್ ಕಾಂಗ್ರೆಸ್ ಪರ ವಕೀಲರು, ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದರು.
ಇದೀಗ, ಕಟ್ಟಡವನ್ನು ಕೆಡವಲಾಗಿದ್ದು, ಪಾಲಿಕೆ ಅಧಿಕಾರಿಗಳು ಹೈಕೋರ್ಟ್ ನಿರ್ದೇಶನವನ್ನು ನಿರ್ಲಕ್ಷಿಸಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಆರೋಪಿಸಿದೆ. ಯಾವುದೇ ನೋಟಿಸ್‌ಗಳನ್ನು ನೀಡಿಲ್ಲ. ಈ ಕ್ರಮಗಳು ನ್ಯಾಯಾಂಗ ನಿಂದನೆಯಾಗಿದೆ ಎಂದು ಪಕ್ಷವು ಹೇಳಿದೆ. ಅಧಿಕಾರಿಗಳ ನಡೆಯನ್ನು ಕೋರ್ಟ್ ಗಮನಕ್ಕೆ ತರುವುದಾಗಿ ಹೇಳಿದೆ.
#WATCH | CORRECTION | Amaravati, Andhra Pradesh: YSRCP’s under-construction* central office in Tadepalli was demolished today early morning. As per YSRCP, “TDP is doing vendetta politics.
The demolition proceeded even though the YSRCP had approached the High Court the previous… pic.twitter.com/mwQN1bEXOr
— ANI (@ANI) June 22, 2024
ಆದಾಗ್ಯೂ, ಅಧಿಕಾರಿಗಳು ವಿಭಿನ್ನ ಕಾರಣ ನೀಡಿದ್ದಾರೆ. ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಪಕ್ಷದ ಕಚೇರಿ ನಿರ್ಮಾಣವಾಗುತ್ತಿದೆ. ಹಿಂದಿನ ಜಗನ್ ಸರ್ಕಾರವು ಬೋಟ್ ಯಾರ್ಡ್ ಆಗಿ ಬಳಸಲಾಗಿದ್ದ ಭೂಮಿಯನ್ನು ವೈಎಸ್‌ಆರ್ ಕಾಂಗ್ರೆಸ್‌ನ ಕಚೇರಿಗೆ ಕಡಿಮೆ ವೆಚ್ಚದಲ್ಲಿ ಗುತ್ತಿಗೆಗೆ ಮಂಜೂರು ಮಾಡಿತ್ತು. ಇದು ಅಕ್ರಮ ನಿರ್ಮಾಣವಾಗಿದ್ದು, ಪಾಲಿಕೆ ನೋಟಿಸ್ ಜಾರಿ ಮಾಡಿದೆ. ಬಳಿಕ, ಕಟ್ಟಡವನ್ನು ಕೆಡವಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.