ರಾಯಚೂರು ಜಿಲ್ಲೆಯ ಯಲಾಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನಿರಂತರ ಗೈರಾಗುತ್ತಿರುವುದರಿಂದ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಲಿಂಗಸಗೂರು ತಾಲೂಕು ಸಮಿತಿ ನೇತೃತ್ವದಲ್ಲಿ ಶಾಲೆ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ, “ಜಿಲ್ಲೆಯ ಲಿಂಗಸಗೂರು ತಾಲೂಕಿನ ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನಾಗನಗೌಡ ಅವರು ಎರಡು ವರ್ಷಗಳಿಂದ ಶಾಲೆಗೆ ನಿರಂತರವಾಗಿ ಅನಧಿಕೃತವಾಗಿ ಗೈರಾಗುತ್ತಿದ್ದು, ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಬಗ್ಗೆ ಅನೇಕ ಬಾರಿ ಎಸ್ಎಫ್ಐ, ಎಸ್‌ಡಿಎಂಸಿ ಹಾಗೂ ಅನೇಕ ಸಂಘಟನೆಗಳು ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಶಿಕ್ಷಣ ಇಲಾಖೆ ರಾಜಕೀಯ ಒತ್ತಡಕ್ಕೆ ಮಣಿದಿದ್ದು, ತಪ್ಪತಸ್ತ ಮುಖ್ಯಶಿಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ” ಎಂದು ಆರೋಪಿಸಿದರು.
“ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮುಖ್ಯ ಗುರುಗಳಾಗಿ ಬಂದ ದಿನದಿಂದಲೂ ಅವರು ನಿರಂತರ ಗೈರಾಗಿದ್ದಾರೆ. ಕೇವಲ ಧ್ವಜಾರೋಹಣ ಹಾಗೂ ಕೆಲವೊಂದು ಜಯಂತಿಗಳನ್ನು ಆಚರಿಸಲು ಮಾತ್ರ ಹಾಜರಿರುತ್ತಾರೆ. ಕೆಲ ಹೊತ್ತಿನಲ್ಲೇ ತರಾತುರಿಯಲ್ಲಿ ಜಾಗ ಖಾಲಿ ಮಾಡುತ್ತಾರೆ. ಇದರಿಂದ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 68 ವಿದ್ಯಾರ್ಥಿಗಳ ಪೈಕಿ 33 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದರಿಂದ ಗ್ರಾಮದ ಶಾಲೆ ಅಳಿವಿನ ಅಂಚಿಗೆ ಹೋಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಎಸ್ಎಫ್ಐ ತಾಲೂಕು ಕಾರ್ಯದರ್ಶಿ ಪವನ್ ಕಮದಾಳ ಮಾತನಾಡಿ, “ಈ ಹಿಂದೆ ಬಿಇಒ ಅವರಿಗೆ ದೂರು ನೀಡಿದಾಗ ಆತನಿಗೆ ನಾವು ಏನೂ ಮಾಡೋಕೆ ಆಗುವುದಿಲ್ಲ. ಆತ ರಾಜಕೀಯ ಒತ್ತಡ ತರುತ್ತಾನೆ. ಆತನ ಸಮಸ್ಯೆ ಬಿಟ್ಟು ಬೇರೆ ಏನು ಬೇಕಾದರೂ ಹೇಳಿ ಎಂದು ಉಡಾಫೆ ಉತ್ತರ ನೀಡಿದ್ದರು. ಇಂತಹ ಬೇಜವಾಬ್ದಾರಿ ಅಧಿಕಾರಿಯಿಂದ ನಮ್ಮ ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ಆದ್ದರಿಂದ ಈ ಕೂಡಲೇ ಮುಖ್ಯಶಿಕ್ಷಕ ನಾಗನಗೌಡ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.
“ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಅಗತ್ಯ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಶಾಲೆಗೆ ಬೇಕಾದ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ನೀಡಬೇಕು” ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಪರವಾಗಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದರ್ಶನ್ ಪ್ರಕರಣ | ಕಾನೂನು ಉಲ್ಲಂಘಿಸೋರು ಶ್ರೀಮಂತರು – ನರಳೋರು ಬಡವರು; ನಟಿ ರಮ್ಯ ಟ್ವೀಟ್
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಲಿಂಗಸಗೂರು ತಾಲೂಕು ಮುಖಂಡರಾದ ವಿನಯ್ ಕುಮಾರ, ಮಹಾಲಿಂಗ, ಬಸವರಾಜ, ಒಡಕೇಶ್, ಶ್ರೀನಿವಾಸ್, ಕರಿಯಪ್ಪ ವಾಡಿಗೇರಿ, ವಿನೋದ್ ರಾಜ್, ಕೆಪಿಆರ್‌ಎಸ್ ತಾಲೂಕು ಮುಖಂಡ ನಿಂಗಪ್ಪ ಎಂ, ವಿವಿಧ ಸಂಘಟನೆಗಳ ಮುಖಂಡರಾದ ಅಣ್ಣಯ್ಯ, ಶಿವಶಂಕರ, ರಾಜು ನಾಯಕ, ಅಮರೇಶ, ಗ್ರಾಮಸ್ಥರಾದ ವೆಂಕಣ್ಣ ಕೋಲ್ಕರ್, ಶಿವು ಪಿ ಜಿ ಸೇರಿದಂತೆ ಬಹುತೇಕರು ಇದ್ದರು.
