ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿನ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಇಬ್ಬರು ಶಿಕ್ಷಕರನ್ನು ವಿಚಾರಣೆ ಒಳಪಡಿಸಿದ್ದಾರೆ. ಬಿಹಾರ ಮಾತ್ರವಲ್ಲ ಮಹಾರಾಷ್ಟ್ರದಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಶಿಕ್ಷಕ ಸಂಜಯ್ ತುಕಾರಾಂ ಜಾಧವ್ ಮತ್ತು ಜಲೀಲ್ ಉಮಾರ್ಖಾನ್ ಪಠಾಣ್ ಅವರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿತ್ತು. ಅವರಿಬ್ಬರನ್ನೂ ನಾಂದೇಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿತ್ತು. ಅವರು ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಬೋಧಿಸುತ್ತಿದ್ದರು. ಜೊತೆಗೆ, ಲಾತೂರ್‌ನಲ್ಲಿ ಖಾಸಗಿ ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿದ್ದರು ಎಂದು ವರದಿಯಾಗಿದೆ.
ಹಲವಾರು ಗಂಟೆಗಳ ವಿಚಾರಣೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಅಗತ್ಯವಿದ್ದರೆ ಮತ್ತೆ ಕರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೀಟ್ ಮತ್ತು ನೆಟ್ ರಾಷ್ಟ್ರೀಯ ಪರೀಕ್ಷೆಗಳು ಮತ್ತು ಅವುಗಳಲ್ಲಿ ಅಕ್ರಮಗಳು ಭಾರತೀಯ ಶೈಕ್ಷಣಿಕ ಮತ್ತು ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿವೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
ನೀಟ್ ಪರೀಕ್ಷೆ ನಡೆದ ದಿನದ ಹಿಂದಿನ ರಾತ್ರಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದಾಗಿ ಒಪ್ಪಿಕೊಂಡ ನಾಲ್ವರನ್ನು ಬಿಹಾರ ಪೊಲೀಸರು ಈ ಹಿಂದೆ ಬಂಧಿಸಿದ್ದರು. ಸೋರಿಕೆಯಾದ ಪರೀಕ್ಷಾ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಮತ್ತು ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪ್ರಾಕ್ಸಿ ಅಭ್ಯರ್ಥಿಗಳನ್ನು ಒದಗಿಸುವಲ್ಲಿ ‘ಸಾಲ್ವರ್ ಗ್ಯಾಂಗ್’ಗಳ ಸಕ್ರಿಯವಾಗಿದ್ದವು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇ 5ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್ 4ರಂದು ಫಲಿತಾಂಶ ಪ್ರಕಟವಾಗಿತ್ತು. ಬಳಿಕ, ನೀಟ್ ಅಕ್ರಮದ ಬಗ್ಗೆ ಭಾರೀ ಆರೋಪಗಳು ಕೇಳಿಬಂದವು. ಪತ್ರಿಕೆ ಸೋರಿಕೆ ಮತ್ತು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗಿದೆ ಎಂಬ ಆರೋಪಗಳು ದೇಶದ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟನೆಗಳು ಭುಗಿಲೆದ್ದಿವೆ.
ಪ್ರತಿಭಟನೆ ಮತ್ತು ಸುಪ್ರೀಂ ಛಾಟಿಯ ಬಳಿಕ ಗ್ರೇಸ್ ಅಂಕ ಪಡೆದ 1,500 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ನೀಟ್ ಅಕ್ರಮದ ಬೆನ್ನಲ್ಲೇ ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ.