ಮುಂಬೈಗೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ತಮಿಳುನಾಡಿನ ತಂಜಾವೂರು ಜಿಲ್ಲೆಯ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಆರೋಪಿಯನ್ನು ತಿರುವೈಯಾರು ಮೂಲದ ವಿ ಪ್ರಸನ್ನ ಎಂದು ಗುರುತಿಸಲಾಗಿದ್ದು, ಕೇಂದ್ರ ಅಪರಾಧ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ತಂಡ ಬಂಧಿಸಿದೆ.
ಜೂನ್ 18ರಂದು ಚೆನ್ನೈ-ಮುಂಬೈ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಪ್ರಸನ್ನ ಚಾಟ್ ಮೂಲಕ ಏರ್‌ಲೈನ್ಸ್ ಗ್ರಾಹಕ ಸೇವಾ ಕೇಂದ್ರಕ್ಕೆ ಬೆದರಿಕೆ ಹಾಕಿದ್ದರು.
ಇದನ್ನು ಓದಿದ್ದೀರಾ? ಚೆನ್ನೈ-ಮುಂಬೈ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ಪ್ರಯಾಣಿಕರು ಸುರಕ್ಷಿತ
ಜೂನ್ 18ರಂದು, ಭಾರತದಾದ್ಯಂತ 41 ವಿಮಾನ ನಿಲ್ದಾಣಗಳಿಗೆ ಇಮೇಲ್ ಮೂಲಕ ಇದೇ ರೀತಿಯ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದವು. ಇದರಿಂದಾಗಿ ಭದ್ರತೆ ಹೆಚ್ಚಿಸಲಾಗಿತ್ತು, ತಪಾಸಣೆ ಮಾಡಲಾಗಿತ್ತು. ಯಾವುದೇ ಸ್ಪೋಟಕ ಕಂಡು ಬಂದಿರಲಿಲ್ಲ. ಆದರೆ ಈ ಸುಳ್ಳು ಬಾಂಬ್ ಬೆದರಿಕೆಯಿಂದಾಗಿ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾಗಿತ್ತು.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿಯು ಸುಳ್ಳು ಬಾಂಬ್ ಬೆದರಿಕೆಗಳನ್ನು ಮಾಡುವ ತಪ್ಪಿತಸ್ಥರಿಗೆ ಐದು ವರ್ಷಗಳ ಕಾಲ ಹಾರಾಟವನ್ನು ನಿಷೇಧ ಮಾಡುತ್ತದೆ.
ಈ ಪ್ರಕರಣದಲ್ಲಿ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಾಗಿದ್ದು, ಪ್ರಸನ್ನನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.