ಆದಿವಾಸಿಗಳ ಡಿಎನ್ಎ ಪರೀಕ್ಷೆ ಮಾಡಿಸುವ ಬಗ್ಗೆ ರಾಜಸ್ಥಾನ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್, ಭಾರತೀಯ ಆದಿವಾಸಿ ಪಕ್ಷ (ಬಿಎಪಿ) ಮತ್ತು ರಾಜಸ್ಥಾನದ ಹಲವಾರು ಬುಡಕಟ್ಟು ಸಂಘಟನೆಗಳು ಖಂಡಿಸಿವೆ.
ಕೋಟಾದ ರಾಮ್‌ಗಂಜ್ ಮಂಡಿಯ ಬಿಜೆಪಿ ಶಾಸಕ ದಿಲಾವರ್ ಅವರು ಬುಡಕಟ್ಟು ಜನಾಂಗದವರು ಹಿಂದೂಗಳಲ್ಲ ಎಂಬ ಬಿಎಪಿ ಸದಸ್ಯರ ಹೇಳಿಕೆಗಳಿಗೆ ಈ ವಿವಾದಾದ್ಮಕ ಹೇಳಿಕೆ ನೀಡಿದ್ದಾರೆ.
“ಅವರು (ಬುಡಕಟ್ಟು ಜನರು) ಹಿಂದೂಗಳೇ ಅಥವಾ ಇಲ್ಲವೇ ಎಂಬುದನ್ನು ಅವರ ಪೂರ್ವಜರಿಂದ ಕೇಳಲಾಗುತ್ತದೆ. ನಾವು ವಂಶಾವಳಿಯನ್ನು ದಾಖಲಿಸುವವರನ್ನು ಸಂಪರ್ಕಿಸುತ್ತೇವೆ. ಒಂದು ವೇಳೆ ಅವರು ಹಿಂದೂಗಳಲ್ಲದಿದ್ದರೆ, ಅವರು ತಮ್ಮ ತಂದೆಗೆ ಹುಟ್ಟಿದ ಮಕ್ಕಳೆ ಎಂದು ನಿರ್ಧರಿಸಲು ನಾವು ಅವರ ಡಿಎನ್‌ಎ ಪರೀಕ್ಷೆ ಮಾಡಿಸುತ್ತೇವೆ” ಎಂದು ಸಚಿವ ಮದನ್ ದಿಲಾವರ್ ಹೇಳಿದ್ದಾರೆ.
ದಿಲಾವರ್ ಹೇಳಿಕೆಯು ತೀವ್ರ ಖಂಡನೆಗೆ ಒಳಗಾಗಿದೆ. ಬನ್ಸ್ವಾರಾದ ಲೋಕಸಭಾ ಸಂಸದರಾದ ರಾಜ್‌ಕುಮಾರ್ ರೋಟ್ ಅವರು ಆದಿವಾಸಿಗಳು ತಮ್ಮ ರಕ್ತದ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗಾಗಿ ದಿಲಾವರ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರಿಗೆ ಕಳುಹಿಸುವ ಭಿಯಾನವನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಜೀವನ ವಿಧಾನ | ಒನೈಡಾ ಆದಿವಾಸಿ ಸಮುದಾಯ ಮತ್ತು ಸದಾ ನಗುವ ಸ್ವಾಭಿಮಾನಿ ಮಹಿಳೆಯರು
ದಿಲಾವರ್ ಬುಡಕಟ್ಟು ಸಮುದಾಯವನ್ನು ಅವಮಾನಿಸಿದ್ದಾರೆ, ಅವರು ಕ್ಷಮೆಯಾಚಿಸಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ರಾಜ್‌ಕುಮಾರ್ ರೋಟ್ ಆಗ್ರಹಿಸಿದ್ದಾರೆ.
“ರಾಜಸ್ಥಾನದ ಶಿಕ್ಷಣ ಸಚಿವರು ಬಳಸಿದ ಭಾಷೆ ಬುಡಕಟ್ಟು ಸಮುದಾಯವನ್ನು ಅವಮಾನಿಸುತ್ತದೆ. ಆದಿವಾಸಿ ಪಕ್ಷದ ಸದಸ್ಯರು ತಮ್ಮ ವಂಶಾವಳಿಯನ್ನು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂಬ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಈ ಆಧಾರರಹಿತ ಹೇಳಿಕೆಯು ದೇಶಾದ್ಯಂತದ ಬುಡಕಟ್ಟು ಜನಾಂಗದವರಿಗೆ ಸವಾಲಾಗಿದೆ ಮತ್ತು ಬಿಜೆಪಿಗೆ ದುಬಾರಿಯಾಗಿದೆ” ಎಂದು ರೋಟ್ ಅಭಿಪ್ರಾಯಿಸಿದ್ದಾರೆ.
“ದಿಲಾವರ್ ಕ್ಷಮೆಯಾಚಿಸದಿದ್ದರೆ ಅಥವಾ ರಾಜೀನಾಮೆ ನೀಡದಿದ್ದರೆ, ನಾವು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುತ್ತೇವೆ. ಪ್ರತಿ ಬುಡಕಟ್ಟು ಮನೆಯಿಂದ ರಕ್ತ, ಕೂದಲು ಮತ್ತು ಉಗುರಿನ ಮಾದರಿಗಳನ್ನು ಅವರಿಗೆ ಕಳುಹಿಸುತ್ತೇವೆ” ಎಂದು ರಾಜ್‌ಕುಮಾರ್ ರೋಟ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಧ್ವನಿ ಬದಲಾಯಿಸುವ ಆ್ಯಪ್ ಬಳಸಿ 7 ಆದಿವಾಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ
ಕಾಂಗ್ರೆಸ್ ಕೂಡ ದಿಲಾವರ್ ಅವರ ಹೇಳಿಕೆಯನ್ನು ಖಂಡಿಸಿದೆ. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಅವರು ದಿಲಾವರ್ ಅವರನ್ನು ‘ಮಾನಸಿಕ ಅಸ್ವಸ್ಥ’ ಎಂದು ಕರೆದಿದ್ದಾರೆ. “ಬುಡಕಟ್ಟು ಸಮುದಾಯದ ಡಿಎನ್‌ಎ ಪರೀಕ್ಷೆಯ ಕುರಿತು ಅವರ ಕಾಮೆಂಟ್‌ಗಳು ಅತ್ಯಂತ ಖಂಡನೀಯ. ಅವರ ಹೇಳಿಕೆಯು ಅವರ ಬೌದ್ಧಿಕ ಅಸಾಮರ್ಥ್ಯದ ಪ್ರತಿಬಿಂಬವಾಗಿದೆ” ಎಂದು ಹೇಳಿದ್ದಾರೆ.
ಬಿಎಪಿಯ ರಾಜ್ಯಾಧ್ಯಕ್ಷ ಮೋಹನ್ ಲಾಲ್ ರೋಟ್ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ಬುಡಕಟ್ಟು ಜನಾಂಗದವರು ಹಿಂದೂಗಳಲ್ಲ ಎಂದು ಹೇಳಿದ್ದಾರೆ. “ಬುಡಕಟ್ಟು ಜನಾಂಗದವರ ಆಚಾರ-ವಿಚಾರಗಳು, ನಂಬಿಕೆಗಳೂ, ಆರಾಧನಾ ವಿಧಾನಗಳು ಎಲ್ಲವೂ ವಿಭಿನ್ನವಾಗಿವೆ. ಹಿಂದೂ ವಿವಾಹ ಕಾಯ್ದೆ ಕೂಡ ಆದಿವಾಸಿಗಳಿಗೆ ಅನ್ವಯಿಸುವುದಿಲ್ಲ. ಆದಿವಾಸಿಗಳು ಕೇವಲ ಆದಿವಾಸಿಗಳು, ಹಿಂದೂಗಳಲ್ಲ” ಎಂದು ಹೇಳಿದ್ದಾರೆ.