ಜೀವನ ವಿಧಾನ | ಒನೈಡಾ ಆದಿವಾಸಿ ಸಮುದಾಯ ಮತ್ತು ಸದಾ ನಗುವ ಸ್ವಾಭಿಮಾನಿ ಮಹಿಳೆಯರು

Date:

ಒನೈಡಾ ಸಮುದಾಯದಲ್ಲಿ ಮಹಿಳೆಯರು ಆತ್ಮಗೌರವದಿಂದ ಬದುಕುತ್ತಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದಾರೆ. ಜೊತೆಗೆ, ತಮ್ಮ ಸುತ್ತಲ ಪರಿಸರದಲ್ಲಿ ಲವಲವಿಕೆ ಉಕ್ಕಿ ಹರಿಯುವಂತೆ ನಗುತ್ತಾರೆ. ಮಹಿಳೆಯರಿಗೆ ಆತ್ಮವಿಶ್ವಾಸವನ್ನು ನೀಡುವ ಸಮಾಜದಲ್ಲಿ ಉನ್ನತಿ ಸಹಜವಾಗಿ ಸಂಭವಿಸುತ್ತದೆ ಎಂಬುದಕ್ಕೆ ಒನೈಡಾ ಸಮುದಾಯವೇ ಸಾಕ್ಷಿ…

ಅಮೆರಿಕಾ ಸಂಯುಕ್ತ ಸಂಸ್ಥಾನದ ಹೃದಯ ಭಾಗದಲ್ಲಿರುವ ವಿಸ್ಕಾನ್ಸಿನ್ ರಾಜ್ಯವು ತನ್ನ ಡೈರಿ ಉತ್ಪನ್ನಗಳಿಗೆ ಪ್ರಸಿದ್ಧ. ಕಳೆದ ಇನ್ನೂರು ವರ್ಷಗಳಿಂದ ಈ ರಾಜ್ಯ ಪಶುಪಾಲಕರಿಗೆ ಅತ್ಯಂತ ಪ್ರಿಯವಾದದ್ದು. ಇಲ್ಲಿ ಹರಿಯುವ ವಿಸ್ಕಾನ್ಸಿನ್ ನದಿಯನ್ನು ನೋಡಿದ ಫ್ರೆಂಚ್ ನಾವಿಕ ಜಾಕ್ವೆಸ್ ಮಾರ್ಕ್ವೆಟ್ಟೆ ಈ ರಾಜ್ಯಕ್ಕೆ ವಿಸ್ಕಾನ್ಸಿನ್ ಎಂದು ಹೆಸರಿಟ್ಟ. ಈ ರಾಜ್ಯದಲ್ಲಿ ಹಲವು ಆದಿಮ ಸಮುದಾಯಗಳಿದ್ದರೂ ಅಮೆರಿಕಾದ ಫೆಡರಲ್ ಸರಕಾರ ಕೇವಲ 11 ಸಮುದಾಯಗಳನ್ನು ಮಾತ್ರ ಆದಿವಾಸಿಗಳೆಂದು ಪರಿಗಣಿಸಿದೆ. ಇಂತಹ ಪ್ರಮುಖ ಆದಿವಾಸಿ ಸಮುದಾಯಗಳಲ್ಲಿ ಒನಿಡಾ ನೇಷನ್ಸ್ (ಆದಿವಾಸಿ ಸಮುದಾಯ) ಸಹ ಒಂದು.

ಒನೈಡಾ ಸಮುದಾಯವನ್ನೂ ಒಳಗೊಂಡಂತೆ ರೆಡ್ ಇಂಡಿಯನ್ ಸಮುದಾಯಗಳು ಮೂಲತಃ ಕೃಷಿಕರು. ಕ್ರಿಪೂ 1000 ವರ್ಷಗಳ ಹಿಂದೆಯೇ ಅಮೆರಿಕಾದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿತ್ತು ಎಂಬುದಕ್ಕೆ ಪ್ರಾಕ್ತನಶಾಸ್ತ್ರಜ್ಞರು ಪುರಾವೆಗಳನ್ನು ಒದಗಿಸುತ್ತಾರೆ. ಈ ಯುಗವನ್ನು ‘ವುಡ್ಲ್ಯಾಂಡ್ ಯುಗ’ (Woodland period) ಎಂದು ಕರೆಯುತ್ತಾರೆ. ಈ ಯುಗದಲ್ಲಿ ಕೃಷಿ ಮತ್ತು ಪಶುಪಾಲನೆಗಳೆರಡೂ ಇಲ್ಲಿನ ರೆಡ್ ಇಂಡಿಯನ್ ಆದಿಮ ಸಮುದಾಯಗಳ ಜೀವನ ವಿಧಾನಗಳನ್ನು ರೂಪಿಸುತ್ತಾ ಬಂದಿವೆ. ಪಶುಪಾಲನೆ ಮತ್ತು ಕೃಷಿ ಚಟುವಟಿಕೆಗಳು ವರ್ತಮಾನದಲ್ಲೂ ವಿಸ್ಕಾನ್ಸಿನ್ ರಾಜ್ಯದ ಆರ್ಥಿಕತೆಯನ್ನು ಪೊರೆಯುತ್ತಿವೆ. ಮುಖ್ಯವಾಗಿ ಇಲ್ಲಿನ ಆದಿವಾಸಿಗಳು ಪಶುಪಾಲನೆ ಮತ್ತು ಕೃಷಿ ಚಟುವಟಿಕೆಗಳನ್ನು ಪ್ರಧಾನವಾಗಿ ಆಶ್ರಯಿಸಿವೆ. ವಿಸ್ಕಾನ್ಸಿನ್ ರಾಜ್ಯದಲ್ಲಿನ ಇಂತಹ 11 ಆದಿವಾಸಿಗಳಲ್ಲಿ ಒನೈಡಾ ಸಮುದಾಯವೂ ಒಂದು.

ಒನೈಡಾ ಸಮುದಾಯ: ನಿಲುಗಂಬದ ಜನ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒನೈಡಾ ಸಮುದಾಯದವರನ್ನು ‘ನಿಲುಗಂಬದ ಜನ’ (People of the Standing Stone) ಎಂದು ಕರೆಯಲಾಗುತ್ತದೆ. ‘ನಿಲುಗಂಬದ ಜನ’ ಎಂಬ ಹೆಸರು ತಮಗೆ ಬರಲು ಕಾರಣವಾದ ಒಂದು ಘಟನೆಯನ್ನು ಇವರು ಕಥೆಯ ರೂಪದಲ್ಲಿ ಹೇಳುತ್ತಾರೆ. ‘ಹಿಂದೆ, ಒನೈಡಾ ಸಮುದಾಯದ ಜನರು ಶತ್ರು ಸಮುದಾಯವೊಂದರಿಂದ ನಿರಂತರ ಕಿರುಕುಳಕ್ಕೆ ಒಳಗಾಗುತ್ತಲೇ ಇದ್ದರು. ಈ ಸಮುದಾಯದ ಜನ ವಾಸಿಸುತ್ತಿದ್ದ ವುಡ್ಲ್ಯಾಂಡ್ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಅನ್ಯ ಸಮುದಾಯಗಳು ಜಗಳ ಮಾಡುತ್ತಲೇ ಇದ್ದವು. ಒಮ್ಮೆ ಒನೈಡಾ ಸಮುದಾಯವನ್ನು ಶತ್ರುಗಳು ಬೆನ್ನಟ್ಟಿ ಬಂದರು. ಕೈಗೆ ಸಿಕ್ಕ ಒನೈಡಾ ಸಮುದಾಯದ ಜನರನ್ನು ಒಂದೇ ಸ್ಥಳದಲ್ಲಿ ಕಾಲ ಮೇಲೆ ನಿಲ್ಲುವಂತೆ ಶತ್ರುಗಳು ಆಜ್ಞಾಪಿಸಿದರು. ಆದರೆ ಒನೈಡಾ ಜನ ಇದ್ದಕ್ಕಿದ್ದಂತೆ ಆ ಸ್ಥಳದಿಂದ ತಪ್ಪಿಸಿಕೊಂಡು ಕಣ್ಮರೆಯಾದರು. ಶತ್ರುಗಳು ಎಷ್ಟೇ ಹುಡುಕಿದರೂ ಒನೈಡಾ ಸಮುದಾಯದ ಜನ ಸಿಗಲಿಲ್ಲ. ಆದರೆ ಅವರು ನಿಂತಿದ್ದ ಸ್ಥಳದಲ್ಲಿ ಸೃಷ್ಟಿಯಾಗಿದ್ದ ನಿಲುಗಂಬಗಳಲ್ಲಿ ಅವರು ಲೀನವಾಗಿದ್ದಾರೆ ಎಂದು ಭಾವಿಸಿ ಒನೈಡಾ ಜನರನ್ನು ‘ನಿಲುಗಂಬದ ಜನ’ ಎಂದು ಕರೆಯಲಾಯಿತು.

ಇದನ್ನು ಓದಿದ್ದೀರಾ?: ನೆನಪು । ರಾಜೀವ್ ತಾರಾನಾಥ್ ಕುರಿತು ರಹಮತ್ ತರೀಕೆರೆ ಬರೆಹ

18ನೇ ಶತಮಾನದಲ್ಲಿ ನ್ಯೂಯಾರ್ಕ್ ರಾಜ್ಯದ ತಮ್ಮ ಪ್ರದೇಶದಲ್ಲಿ ಕೃಷಿಕರಾಗಿ ಬದುಕಿದ್ದ ಒನೈಡಾ ಸಮುದಾಯವನ್ನು ಈಗಿನ ವಿಸ್ಕಾನ್ಸಿನ್ ರಾಜ್ಯದ ಗ್ರೀನ್ ಬೇ ಪ್ರದೇಶಕ್ಕೆ ಒಕ್ಕಲೆಬ್ಬಿಸಲಾಯಿತು. ಅಮೆರಿಕಾದ ಸರಕಾರ ಮತ್ತು ಒನೈಡಾ ಸಮುದಾಯದ ನಡುವೆ 1838ರಲ್ಲಿ ಒಪ್ಪಂದವೇರ್ಪಟ್ಟ ಪ್ರಕಾರ 65,000 ಎಕರೆ ಪ್ರದೇಶದ ಜೊತೆಗೆ ಡಕ್ ಹೊಳೆಯನ್ನು ನೀಡಿ ಒನೈಡಾ ಅನುಸೂಚಿತ ಪ್ರದೇಶವನ್ನು ನಿರ್ಮಿಸಲಾಗುತ್ತದೆ. ಒನೈಡಾ ಅನುಸೂಚಿತ ಪ್ರದೇಶದಲ್ಲಿ ಸ್ವಯಂ ಆಡಳಿತವಿದೆ. ಒನೈಡಾ ಸಮುದಾಯದ ಜನ 1936ರಲ್ಲಿ ತಮ್ಮದೇ ಸಂವಿಧಾನವನ್ನು ರಚಿಸಿಕೊಂಡು ಅದಕ್ಕೆ ಅನುಗುಣವಾಗಿ ಬದುಕುತ್ತಿದ್ದಾರೆ. ತಮ್ಮದೇ ಚುನಾಯಿತ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಹೊಂದಿರುವ ಒನೈಡಾ ಜನ ಸ್ವಾಯತ್ತ ಬದುಕನ್ನು ನಡೆಸುತ್ತಿದ್ದಾರೆ.

ಒನೈಡಾ ಸಮುದಾಯದಲ್ಲಿ ಪಾರಂಪರಿಕವಾಗಿ ಮಹಿಳೆಯರಿಗೆ ಹೆಚ್ಚು ಮಾನ್ಯತೆ ಇದೆ. ಸಂತಾನವು ತಾಯಿಯ ಮೂಲಕ ತನ್ನನ್ನು ಗುರುತಿಸಿಕೊಳ್ಳುತ್ತದೆ. ವಿಸ್ತೃತ ಕುಟುಂಬಗಳಿರುವ ಈ ಸಮುದಾಯದಲ್ಲಿ ಮಹಿಳೆಗೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಿದೆ. ನಾವು ಭೇಟಿ ಕೊಟ್ಟ ಒನೈಡಾ ಸಮುದಾಯದ ಹಳ್ಳಿಗಳಲ್ಲಿ ಸ್ತ್ರೀಯರು ಆತ್ಮವಿಶ್ವಾಸದಿಂದ ತಮ್ಮ ಆರ್ಥಿಕ ಅವಲಂಬನೆಗಳ ಕುರಿತು ವಿವರಿಸಿದರು. ತಾವು ಕೈಗೊಂಡ ವೃತ್ತಿಗಳಲ್ಲಿ ಅವರು ಮಾಡಿದ ಸಾಧನೆಗಳನ್ನು ಹೆಮ್ಮೆಯಿಂದ ತೋರಿಸಿದರು. 3000 ಸಾವಿರ ಆದಿಮ ತಳಿಗಳ ಬೀಜಗಳನ್ನು ರಕ್ಷಿಸಿರುವ ರೆಬೆಕ್ಕಾ ಮೂರ್ನಾಲ್ಕು ತಾಸು ತನ್ನ ಉಪಯುಕ್ತ ಕೆಲಸವನ್ನು ಆತ್ಮವಿಶ್ವಾಸದಿಂದ ವಿವರಿಸಿದಳು. ಮನೆಯ ತಾರಸಿ ಅಲ್ಲಾಡುವಂತೆ ನಗುತ್ತಿದ್ದ ಆಕೆಗೆ ಗಂಡ ಸಹಾಯಕನಂತೆ ನಿಂತಿದ್ದ.

ಒನೈಡಾ ಸಮುದಾಯ ನೃತ್ಯ
ಒನೈಡಾ ಸಮುದಾಯ ನೃತ್ಯ

ಪಾರಂಪರಿಕ ಕೃಷಿಕರಾಗಿದ್ದ ಓನಿಡಾ ಸಮುದಾಯದ ಜನ ಈಗ ಕೇವಲ ವ್ಯವಸಾಯವನ್ನೇ ಅವಲಂಬಿಸಿಲ್ಲ. ಕೃಷಿಯ ಜೊತೆಗೆ ಅನೇಕ ವಾಣಿಜ್ಯ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಅನುಸೂಚಿತ ಪ್ರದೇಶದಲ್ಲಿನ ಸಂಪನ್ಮೂಲಗಳನ್ನೇ ಬಳಸಿಕೊಂಡು ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ, ಕ್ಯಾಸಿನೋಗಳನ್ನು ನಡೆಸುತ್ತಿದ್ದಾರೆ. ಪಶುಪಾಲನೆ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಒನೈ ಡಾಜನ ಸ್ವಾವಲಂಬಿಗಳಾಗಿದ್ದಾರೆ. ಇದೆಲ್ಲದರ ಜೊತೆಗೆ ಈ ಸಮುದಾಯದಲ್ಲಿ ಮಹಿಳೆಯರು ಆತ್ಮಗೌರವದಿಂದ ಬದುಕುತ್ತಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದಾರೆ. ಜೊತೆಗೆ, ತಮ್ಮ ಸುತ್ತಲ ಪರಿಸರದಲ್ಲಿ ಲವಲವಿಕೆ ಉಕ್ಕಿ ಹರಿಯುವಂತೆ ನಗುತ್ತಾರೆ. ಮಹಿಳೆಯರಿಗೆ ಆತ್ಮವಿಶ್ವಾಸವನ್ನು ನೀಡುವ ಸಮಾಜದಲ್ಲಿ ಉನ್ನತಿ ಸಹಜವಾಗಿ ಸಂಭವಿಸುತ್ತದೆ ಎಂಬುದಕ್ಕೆ ಒನೈಡಾ ಸಮುದಾಯವೇ ಸಾಕ್ಷಿ.

-ಎ.ಎಸ್. ಪ್ರಭಾಕರ, ಗ್ರೀನ್ ಬೇ, ವಿಸ್ಕಾನ್ಸಿನ್, ಅಮೆರಿಕಾ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ರಷ್ಯಾ ಭೇಟಿ: ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮಾಸ್ಕೋ ಭೇಟಿಯ ಸಮಯದಲ್ಲಿ ಉಭಯ...

ಪ್ರಧಾನಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ: ಮೋದಿ ಮಾಡಿದ ಘನಕಾರ್ಯವಾದರೂ ಏನು?

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅವರಿಗೆ...

ಶಾಲಾ ಮಿನಿಬಸ್ ಅಪಘಾತ; 12 ಮಕ್ಕಳು ದಾರುಣ ಸಾವು

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಅಪಘಾತಕ್ಕೀಡಾಗಿದ್ದು, 12 ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ...