ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಸೆನ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿತ್ತು. ನಿನ್ನೆ ಭಾನುವಾರ ಆಗಿರುವ ಕಾರಣ ಪೊಲಿಸರು ಸೂರಜ್ ರೇವಣ್ಣ ಅವರನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಶಿವಕುಮಾರ್ ಅವರ ಮನೆಗೆ ಹಾಜರುಪಡಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.
ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದರಿಂದ ಅವರನ್ನು ಹಾಸನದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ವೈದ್ಯಕೀಯ ಪರೀಕ್ಷೆ ಮಾಡಿಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಹಿತಿಗಳ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಂಸ್ಕೃತಿ ಸಚಿವರ ತಿಪ್ಪೆ ಸಾರಿಸುವಿಕೆ
ತನ್ನ ವಿರುದ್ಧ ದಾಖಲಾಗಿದ್ದ ದೂರಿನ ಬಗ್ಗೆ ಹಾಸನದ ಸೆನ್ ಠಾಣೆಯಲ್ಲಿ ವಿಚಾರಣೆಗಾಗಿ ಸೂರಜ್ ರೇವಣ್ಣ ಹೋಗಿದ್ದರು. ಶನಿವಾರ ರಾತ್ರಿ ಸೂರಜ್ ರೇವಣ್ಣರನ್ನು ಪೊಲೀಸರು ವಿಚಾರಣೆ ಮಾಡಿದ್ದರು. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಕಾರ್ಯಕರ್ತ ಸೂರಜ್ ಮೇಲೆ ದೂರು ಕೊಟ್ಟಿದ್ದರು.
ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದ್ದ ಸಂತ್ರಸ್ತನ ವಿರುದ್ಧ ಶಿವಕುಮಾರ್ ದೂರು ಕೊಟ್ಟಿದ್ದರು. 5 ಕೋಟಿ ರೂಪಾಯಿ ನೀಡುವಂತೆ ಸಂತ್ರಸ್ತ ಸೂರಜ್ ರೇವಣ್ಣ ಅವರಿಗೆ ಬೆದರಿಕೆ ಹಾಕಿದ್ದ, ಅವರು ಹಣ ಕೊಡದ ಕಾರಣ ಮರ್ಯಾದೆ ತೆಗೆಯಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಸಂತ್ರಸ್ತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಜಾಮೀನು ಅರ್ಜಿ ಇಂದು
ಬಂಧಿತ ಸೂರಜ್ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಬೆಂಗಳೂರಿನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗುವುದು ಎಂದು ಅವರ ವಕೀಲ ಪೂರ್ಣಚಂದ್ರ ಅವರು ತಿಳಿಸಿದ್ದಾರೆ.
‘ಸೂರಜ್ ಅವರನ್ನು ಬಂಧಿಸಿರುವುದರಿಂದ ಅವರ ಭೇಟಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಕೋರ್ಟ್ ಅನುಮತಿ ಪಡೆಯಬೇಕು’ ಎಂದು ಹೇಳಿದರು. ಪೂರ್ಣಚಂದ್ರ ಅವರು ಭಾನುವಾರ ಮಧ್ಯಾಹ್ನ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖಾಧಿಕಾರಿ ಜೊತೆ ಚರ್ಚಿಸಿದರು.
ಪೊಲೀಸರು ಸೂರಜ್ ಅವರನ್ನು ಹಾಸನದ ಹಿಮ್ಸ್‌ಗೆ ಕರೆದೊಯ್ದು ಆರೋಗ್ಯ ತಪಾಸಣೆಗೆ ಒಳಪಡಿಸಿದರು. ಅಲ್ಲಿಂದ ಮತ್ತೆ ನಗರ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು.
ಸೂರಜ್ ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ಕಾನೂನು ತಜ್ಞರ ಸಲಹೆ ಪಡೆದ ಪೊಲೀಸ್ ಅಧಿಕಾರಿಗಳು, ಕೋರ್ಟ್‌ಗೆ ಹಾಜರುಪಡಿಸಲು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಸೂರಜ್‌ರನ್ನು ಬಂಧಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿ ದ್ದಂತೆಯೇ ಇಲ್ಲಿನ ಸೆನ್ ಠಾಣೆಯ ಎದುರು ಬಿಗಿ ಭದ್ರತೆ ಮಾಡಲಾಗಿತ್ತು. ಕೆಎಸ್‌ಆರ್‌ಪಿ ತುಕಡಿ ಒಳಗೊಂಡಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅವರನ್ನು ಬೆಂಗಳೂರಿಗೆ ಕರೆದೊಯ್ಯುವಾಗ ರಸ್ತೆಬದಿಯಲ್ಲಿ ನಿಂತಿದ್ದ ಅವರ ಬೆಂಬಲಿಗರು ಜೈಕಾರ ಕೂಗಿದರು.
