ಈ ದಿನ ಸಂಪಾದಕೀಯ | ಸಾಹಿತಿಗಳ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಂಸ್ಕೃತಿ ಸಚಿವರ ತಿಪ್ಪೆ ಸಾರಿಸುವಿಕೆ

Date:

ಎಲ್ಲ ಸಾಹಿತಿಗಳೂ ರಾಜಕಾರಣಿಗಳಲ್ಲ ಎನ್ನುವುದನ್ನು ಉಪ ಮುಖ್ಯಮಂತ್ರಿಗಳಿಗೆ ಅರ್ಥ ಮಾಡಿಸುವ ಅಗತ್ಯವಿದೆ. ಆ ಕೆಲಸವನ್ನು ಸಾಹಿತಿಗಳೇ ಮಾಡಬೇಕಿದೆ. ಅಂತಹ ನೈತಿಕ ವಿರೋಧದಿಂದ ಮಾತ್ರ ಪ್ರಜಾತಂತ್ರ ಉಳಿಯಲಿದೆ. ಇಲ್ಲದಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ದಾಳಿಗೆ ಸಾಹಿತಿಗಳೇ ಅವಕಾಶ ಮಾಡಿಕೊಟ್ಟಂತಾಗುತ್ತದೆ.

‘ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರನ್ನು ಉಪ ಮುಖ್ಯಮಂತ್ರಿಗಳು ಪಕ್ಷದ ಕಚೇರಿಗೆ ಕರೆದು ಕೆಲವೊಂದು ಸಲಹೆ ಕೊಟ್ಟಿದ್ದಾರೆ. ಅದರಲ್ಲಿ ತಪ್ಪು ಏಕೆ ಹುಡುಕಬೇಕು? ಅಷ್ಟಕ್ಕೂ ಪಕ್ಷ ವ್ಯವಸ್ಥೆ ಇಲ್ಲದೆ ಸರ್ಕಾರವಿಲ್ಲ, ಸರ್ಕಾರವಿಲ್ಲದೆ ಅಕಾಡೆಮಿ, ಪ್ರಾಧಿಕಾರಗಳಿಲ್ಲ’ ಎನ್ನುವ ಮೂಲಕ ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿಯವರು, ಕೆಲ ದಿನಗಳಿಂದ ನಡೆಯುತ್ತಿದ್ದ ಸಾಂಸ್ಕೃತಿಕ ಸ್ವಾಯತ್ತತೆ ವಿವಾದಕ್ಕೆ ತಿಪ್ಪೆ ಸಾರಿಸಿದ್ದಾರೆ.

ಶುಕ್ರವಾರ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ನಡೆದ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರ ಸಭೆಯಲ್ಲಿ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಕೆಪಿಸಿಸಿ ಕಚೇರಿಯಲ್ಲಿನ ಸಭೆ ಕುರಿತು ಸಾಹಿತಿಗಳ ಟೀಕೆಗಳ ಪ್ರಸ್ತಾಪ ಮಾಡಿದ್ದಾರೆ. ಆದರೆ ಸಚಿವರು, ‘ಎಲ್ಲ ಸಾಹಿತಿಗಳು ರಾಜಕಾರಣಿಗಳಲ್ಲ, ಆ ಬಗ್ಗೆ ಅನಗತ್ಯ ಚರ್ಚೆ ಬೇಡ’ ಎಂದು ಮೊಟಕುಗೊಳಿಸಿದ್ದಾರೆ. ಸಚಿವರು ಹೇಳಿದ ಮಾತಿಗೆ ವಿವಿಧ ಅಕಾಡೆಮಿ ಅಧ್ಯಕ್ಷರು, ಸದಸ್ಯರು ಮರು ಮಾತನಾಡದೆ, ಮೌನಕ್ಕೆ ಜಾರಿದ್ದಾರೆ.

ಅಂದರೆ, ಇಲ್ಲಿ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೀವು ಮಾಡಿದ್ದು ಸರಿ ಇಲ್ಲ ಎಂದು ಯಾರು ಹೇಳುವುದು. ಆ ತೊಂದರೆ ತೆಗೆದುಕೊಳ್ಳಲು, ಅದರಿಂದ ಎದುರಾಗಬಹುದಾದ ಅನಾಹುತಗಳನ್ನು ನಿಭಾಯಿಸಲು ಸಂಸ್ಕೃತಿ ಸಚಿವರು ಸಿದ್ಧರಿಲ್ಲ. ಅದರ ಬದಲಿಗೆ, ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರನ್ನು ಸಮಾಧಾನಪಡಿಸುವುದು ಸುಲಭ ಎಂದುಕೊಂಡಿದ್ದಾರೆ. ಅನಗತ್ಯ ಚರ್ಚೆ ಬೇಡ ಎಂದು ವಿನಂತಿಸಿಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕನ್ನಡ ಸಂಸ್ಕೃತಿ ಸಚಿವರ ವಿನಂತಿಯನ್ನು, ಸಂಕಟವನ್ನು ಅರ್ಥ ಮಾಡಿಕೊಳ್ಳಬಹುದು. ಶಿವರಾಜ್ ತಂಗಡಗಿ ವಯಸ್ಸಿನಲ್ಲಿ ಚಿಕ್ಕವರು, ಜಾತಿ-ಜನ ಬೆಂಬಲವಿಲ್ಲದವರು. ಚುನಾವಣೆಗೆ ಟಿಕೆಟ್ ಗಿಟ್ಟಿಸುವುದು, ಶಾಸಕರಾಗಿ ಗೆಲ್ಲುವುದು, ಮಂತ್ರಿ ಪದವಿ ಗಿಟ್ಟಿಸುವುದು ಎಷ್ಟು ಕಷ್ಟ ಎನ್ನುವುದು ಅವರಿಗಷ್ಟೇ ಗೊತ್ತಿರುವ ಸತ್ಯ. ಅದಕ್ಕಾಗಿ ಏನೇನೆಲ್ಲ ಸರ್ಕಸ್ ಮಾಡಬೇಕಾಗುತ್ತದೆ ಎನ್ನುವುದು, ಹುಲುಮಾನವರಾದ ನಮಗೆ ಅರ್ಥವಾಗುವುದಿಲ್ಲ. ಆದರೆ ಹಿರಿಯರೆನಿಸಿಕೊಂಡ ಮುಖ್ಯಮಂತ್ರಿಗಳು ಕರೆದು ಬುದ್ಧಿ ಹೇಳಬಹುದಿತ್ತು, ಹೇಳಿಲ್ಲ. ಅಥವಾ ಅವರಿಗೂ ಕೂಡ ಉಪ ಮುಖ್ಯಮಂತ್ರಿಗಳ ನಿಲುವು, ಧೋರಣೆ ಸರಿ ಎನಿಸಿರಬಹುದೇ, ಗೊತ್ತಿಲ್ಲ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಾಹಿತಿಗಳೂ ರಾಜಕಾರಣಿಗಳೇ ಎಂಬ ಬೀಸು ಹೇಳಿಕೆಯಲ್ಲಿ ದರ್ಪ, ದುರಹಂಕಾರವಿದೆ. ಅದು ಪ್ರಭುತ್ವದ ಅಧಿಕಾರದಿಂದ, ಆ ಅಧಿಕಾರದ ದೆಸೆಯಿಂದ ದಕ್ಕಿದ ಅಪಾರ ಸಂಪತ್ತಿನಿಂದ ಬಂದಿದೆ. ಅದಕ್ಕೆ ಜಾತಿಯೂ ಕುಮ್ಮಕ್ಕು ಕೊಟ್ಟಿದೆ. ಆ ಅಧಿಕಾರ ಮತ್ತು ಸಂಪತ್ತಿಗೆ ಸದ್ಯದ ಸಮಾಜ ತಲೆ ಬಾಗುತ್ತದೆ ಎಂದು ಭಾವಿಸಲಾಗಿದೆ. ಅವರು ಬೆಳೆದು ಬಂದಿರುವ ರೀತಿ ಅದೇ ಆಗಿರುವುದರಿಂದ, ಅದು ಅವರಿಗೆ ಸಹಜ ಅನ್ನಿಸಿದೆ.

ಆದರೆ, ಎಲ್ಲ ಸಾಹಿತಿಗಳೂ ರಾಜಕಾರಣಿಗಳಲ್ಲ ಎನ್ನುವುದನ್ನು ಉಪ ಮುಖ್ಯಮಂತ್ರಿಗಳಿಗೆ ಅರ್ಥ ಮಾಡಿಸುವ ಅಗತ್ಯವಿದೆ. ಆ ಕೆಲಸವನ್ನು ಸಾಹಿತಿಗಳೇ ಮಾಡಬೇಕಿದೆ. ಅಂತಹ ನೈತಿಕ ವಿರೋಧದಿಂದ ಮಾತ್ರ ಪ್ರಜಾತಂತ್ರ ಉಳಿಯಲಿದೆ. ಇಲ್ಲದಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ದಾಳಿಗೆ ಸಾಹಿತಿಗಳೇ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಬಿಜೆಪಿ ಸರ್ಕಾರ ಕುವೆಂಪು, ಬಸವಣ್ಣನವರ ಬಗೆಗಿನ ಪಠ್ಯವನ್ನು ವಕ್ರವಾಗಿ ತಿದ್ದಿ ತಿರುಚಿದಾಗ, ಟಿಪ್ಪು ಸುಲ್ತಾನ್‌ರನ್ನು ಮಕ್ಕಳು ಓದುವುದು ಬೇಡ ಎಂದು ತಿರಸ್ಕರಿಸಿದಾಗ, ಗಾಂಧಿ ಕೊಂದ ಗೋಡ್ಸೆ-ಸಾವರ್ಕರ್ ಅಂತಹವರನ್ನು ಪಠ್ಯದೊಳಗೆ ತಂದು ತುರುಕಿದಾಗ ತೀವ್ರ ವಿರೋಧ ವ್ಯಕ್ತಪಡಿಸಿದ ಕನ್ನಡ ಸಾಹಿತ್ಯ ವಲಯ, ಈಗ ಉಪ ಮುಖ್ಯಮಂತ್ರಿಗಳ ದರ್ಪಕ್ಕೆ ತಲೆಬಾಗಿದರೆ, ಸಾಹಿತಿಗಳು ಸರ್ಕಾರದ ಗುಲಾಮರಾದಂತೆಯೇ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಳಪೆ ಫಲಿತಾಂಶಕ್ಕೆ ಸಿ ಎಂ ಸಿಟ್ಟಾದರೆ ಸಾಲದು, ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಬೇಕು

ಏಕೆಂದರೆ, ಮನುಷ್ಯವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕನ್ನಡ ಸಾಂಸ್ಕೃತಿಕ ಲೋಕ ಸಾಕಷ್ಟು ‘ಶ್ರಮ’ ಹಾಕಿದೆ. ಅವರಂದುಕೊಂಡ ಜನಪರ ಸರ್ಕಾರ ರಚನೆಯಾದಾಗ, ಶ್ರಮ ಹಾಕಿದ ಕೆಲವರು ಅಧಿಕಾರದ ಸ್ಥಾನ-ಮಾನಕ್ಕೇರಬೇಕೆಂದು ಆಸೆ ಪಡುವುದು, ಅದಕ್ಕೆ ಬೇಕಾದ ಅಡ್ಡಹಾದಿಗಳ ಮೂಲಕ ಪ್ರಯತ್ನಿಸಿರುವುದೂ ಇದೆ. ಹಾಗಂತ ಎಲ್ಲರೂ ಲಾಬಿ ಮಾಡಿಯೇ ಹುದ್ದೆ ಗಿಟ್ಟಿಸಿದ್ದಾರೆಂದು ಭಾವಿಸಬೇಕಾಗಿಲ್ಲ. ಪ್ರತಿಭಾವಂತರು, ಅರ್ಹರು, ಯೋಗ್ಯರು ಹಲವರಿದ್ದಾರೆ. ಅಂತಹವರು ಪ್ರಭುತ್ವದ ಕಿವಿ ಹಿಂಡುವ ಕೆಲಸ ಮಾಡಬೇಕು. ಆಗದಿದ್ದರೆ ಹುದ್ದೆ ತ್ಯಜಿಸಿ ಹೊರಬರಬೇಕು.

ಇಲ್ಲದಿದ್ದರೆ, ಸೂಕ್ಷ್ಮ, ಸೃಜನಶೀಲ, ಕ್ರಿಯಾತ್ಮಕ ಮನಸ್ಥಿತಿಯ ಸಾಹಿತಿಗಳು ಸ್ವಾಭಿಮಾನದಿಂದ ಬದುಕಲು, ಬರೆಯಲು ಆಗದಂತಹ ವಾತಾವರಣ ನಿರ್ಮಾಣವಾಗುತ್ತದೆ. ಸಮಾಜಕ್ಕೆ ಆದರ್ಶ ಪ್ರಾಯವಾಗಿ ಬದುಕಬೇಕಾದ ಸಾಹಿತಿಗಳು ಅಧಿಕಾರ, ಟಿಎಡಿಎ, ಪ್ರಶಸ್ತಿ, ಪ್ರಚಾರದ ಆಸೆಗಾಗಿ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ಮುಂದಿನ ಪೀಳಿಗೆಯನ್ನು ದಾರಿ ತಪ್ಪಿಸಿದಂತಾಗುತ್ತದೆ.

ಹಾಗೆಯೇ ‘ಜನರ ಬದುಕು ಮುಖ್ಯವೋ, ಜನಕ್ಕೆ ಸಾಹಿತ್ಯ ಒದಗಿಸುವುದು ಮುಖ್ಯವೋ, ಇಡೀ ಒಂದು ಜನಾಂಗ ದುಷ್ಟ ರಾಜಕಾರಣಿಗಳು, ಕೊಳೆತ ಅಧಿಕಾರಶಾಹಿಯಿಂದ ನಾಶವಾಗುತ್ತಿದ್ದರೆ ಅದಕ್ಕೆ ಮದ್ದು ಬಲ್ಲವರು ಸುಮ್ಮನಿರಬೇಕೇ? ಇವತ್ತು ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಸಾಹಿತಿಯಾದವನಿಗೂ ತಗುಲದೆ ಇರುತ್ತದೆಯೇ? ನಾನು ಒಪ್ಪಿಕೊಂಡ ಸರ್ಕಾರದ ದುಷ್ಟತನಕ್ಕೆ ನಾನೂ ಹೊಣೆಯಲ್ಲವೇ?’ ಎಂಬ ಪಿ. ಲಂಕೇಶರ ಮಾತುಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುವ ಅಗತ್ಯವಿದೆ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಪುರುಷೋತ್ತಮ ಬಿಳಿಮಲೆ ಹಾಗೂ ಮುಕುಂದ ರಾಜ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಇವರಿಬ್ಬರಿಗೂ ಅಧಿಕಾರ ಬೇಕೆ ಬೇಕು ಎನ್ನುವ ಮನಸ್ಥಿತಿ ಇಲ್ಲ ಎಂದು ನನ್ನ ಭಾವನೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ...

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...